ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC: ಪಾಕ್‌ಗೆ ಬೇಕಿದೆ 'ಮೇಜರ್ ಸರ್ಜರಿ': ಅಭಿಮಾನಿಗಳು, ಮಾಜಿಗಳ ಆಕ್ರೋಶ

Published 15 ಜೂನ್ 2024, 12:57 IST
Last Updated 15 ಜೂನ್ 2024, 12:57 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ.

ಮೊದಲ ಸುತ್ತಿನಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿರುವ ಪಾಕ್ ತಂಡದ ವಿರುದ್ಧ ಮಾಜಿ ಸ್ಟಾರ್ ಆಟಗಾರರು ಹರಿಹಾಯ್ದಿದ್ದಾರೆ. ತಂಡದಲ್ಲಿ ಒಡಕು, ಪಕ್ಷಪಾತ ಈ ಹಿನ್ನಡೆಗೆ ಕಾರಣ ಎಂದಿದ್ದಾರೆ.

ಇಷ್ಟು ಕಳಪೆ ಮಟ್ಟದ ಪ್ರದರ್ಶನ ನೀಡಿದ ತಂಡಕ್ಕೆ 'ಮೇಜರ್ ಸರ್ಜರಿ' ಅಗತ್ಯವಿದೆ ಎಂದು ಮಾಜಿಗಳು ಅಭಿಪ್ರಾಯಪಟ್ಟಿದ್ದಾರೆ. ಅಭಿಮಾನಿಗಳೂ ಪಾಕಿಸ್ತಾನ ಆಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಎ' ಗುಂಪಿನಲ್ಲಿ ಭಾರತ ಹಾಗೂ ಅಮೆರಿಕ ತಂಡಗಳು ಸೂಪರ್ 8 ಹಂತಕ್ಕೆ ತೇರ್ಗಡೆ ಪಡೆದಿವೆ. ಈ ಪೈಕಿ ಅಮೆರಿಕ ಇತಿಹಾಸ ರಚಿಸಿದೆ.

ಇದೇ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಪಾಕಿಸ್ತಾನ, ಅಮೆರಿಕ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿತ್ತು. ಬಳಿಕ ಭಾರತ ವಿರುದ್ಧವೂ ಪರಾಭವಗೊಂಡಿತ್ತು. ಇದಾದ ಬಳಿಕ ಕೆನಡಾ ವಿರುದ್ಧ ಸಮಾಧಾನಕರ ಜಯ ಸಾಧಿಸಿತ್ತು.

ಆದರೆ ಅಮೆರಿಕ ಹಾಗೂ ಐರ್ಲೆಂಡ್ ನಡುವಣ ಪಂದ್ಯ ಮಳೆಯಿಂದಾಗಿ ರದ್ದುಗೊಳ್ಳುವುದರೊಂದಿಗೆ ಪಾಕಿಸ್ತಾನದ ಕನಸು ಭಗ್ನಗೊಂಡಿದೆ. ಬಾಬರ್ ಆಜಂ ಬಳಗ ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ಸವಾಲನ್ನು ಎದುರಿಸಲಿದೆ.

'ಉತ್ತಮ ಪ್ರದರ್ಶನ ನೀಡದಿದ್ದರೆ ತರಬೇತುದಾರರನ್ನು ಮಾತ್ರ ವಜಾಗೊಳಿಸಲಾಗುತ್ತದೆ. ತಮಗೇನು ಆಗುವುದಿಲ್ಲ ಎಂಬ ಮನೋಭಾವನೆ ಪಾಕಿಸ್ತಾನದ ಆಟಗಾರರಲ್ಲಿ ಇದೆ' ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸೀಂ ಅಕ್ರಮ್ ಆರೋಪಿಸಿದ್ದಾರೆ. 'ಅಲ್ಲದೆ, ಈ ಕೂಡಲೇ ಕೋಚ್ ಹಾಗೂ ತಂಡದ ಎಲ್ಲಾ ಆಟಗಾರರನ್ನು ಬದಲಿಸಬೇಕಿದೆ' ಎಂದು ಹೇಳಿದ್ದಾರೆ.

ಟೂರ್ನಿ ಆರಂಭಕ್ಕೂ ಮೊದಲೇ ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಆರೋಪ ಕೇಳಿಬಂದಿತ್ತು. ತಂಡದಲ್ಲಿ ಗುಂಪುಗಾರಿಕೆ ಇದ್ದು, ಆಟಗಾರರ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಎಲ್ಲ ಆರೋಪಗಳನ್ನು ನಾಯಕ ಬಾಬರ್ ಆಜಂ ತಳ್ಳಿ ಹಾಕಿದ್ದರು.

'ಪಾಕಿಸ್ತಾನದ ವಿಶ್ವಕಪ್ ಪಯಣ ಅಂತ್ಯಗೊಂಡಿತು' ಎಂದು ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ.

'ಬಾಬರ್ ಆಜಂ ಅವರಿಗೆ ಆಪ್ತರಾಗಿರುವ ಕಾರಣ ಶದಾಬ್ ಖಾನ್ ಅವರನ್ನು ತಂಡದಲ್ಲಿ ಉಳಿಸಲಾಯಿತು. ಹೀಗಾಗಿ ಪಾಕಿಸ್ತಾನ್ ಸೂಪರ್ ಲೀಗ್‌ನ ಅತ್ಯಧಿಕ ವಿಕೆಟ್‌ ಗಳಿಕೆದಾರ ಉಸ್ಮಾನ್ ಮಿರ್ ಅವರನ್ನು ಕೈಬಿಡಬೇಕಾಯಿತು’ ಎಂದು ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಿತ್ರನೆಂಬ ಕಾರಣ ತನಗೆ ಬೇಕಾದ ಆಟಗಾರರನ್ನು ಆಡಿಸಿದರೆ ಇಂಥ ಫಲಿತಾಂಶ ಬರುತ್ತದೆ. ಮಿರ್‌ ತಂಡದಲ್ಲಿರಬೇಕಿತ್ತು. ಇದು ದೊಡ್ಡ  ಅನ್ಯಾಯ’ ಎಂದು ಅವರು ಎಎಫ್‌ಪಿಗೆ ತಿಳಿಸಿದ್ದಾರೆ. ‘ನನಗ ಜಿಗುಪ್ಸೆ ಮೂಡಿದೆ. ವಿಶ್ವಕಪ್‌ನ ಯಾವುದೇ ಪಂದ್ಯಗಳನ್ನು ಇನ್ನು ನೋಡಲ್ಲ’ ಎಂದು ಪಾಕ್ ಅಭಿಮಾನಿ ಮೊಹಮ್ಮದ್ ಆಸಿಂ ಹೇಳಿದ್ದಾರೆ.

‘ಬದಲಾವಣೆಗಳು ಅನಿವಾರ್ಯ. ಪಾಕಿಸ್ತಾನ ತಂಡಕ್ಕೆ ಮೇಜರ್‌ ಸರ್ಜರಿ ಅತ್ಯವಿದೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಕ್ವಿ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಆಡಳಿತದ ಕೆಟ್ಟ ನಿರ್ಣಯದಿಂದಾಗಿ ತಂಡವು ಹೀನಾಯ ಸೋಲು ಕಂಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ತಂಡದಲ್ಲಿ ಆಂತರಿಕ ಕಲಹ ಇರುವ ಮಾತುಗಳೂ ಕೇಳಿಬಂದಿದ್ದವು. ಅರ್ಹತೆಗಿಂತ, ಸ್ವಜನಪಕ್ಷಪಾತದ ಕಾರಣ ಕೆಲವು ಆಟಗಾರರು ತಂಡದಲ್ಲಿ ಸ್ಥಾನ ಪಡೆಯುತ್ತಿದ್ದರೆಂಬ ದೂರುಗಳಿದ್ದವು. ಸರಿಯಾದ ಆಟಗಾರರನ್ನು ತಂಡ ಆಯ್ಕೆ ಮಾಡಲಿಲ್ಲ ಎಂದು ಅಭಿಮಾನಿಗಳು, ವಿಶ್ಲೇಷಕರು ದೂರಿದ್ದಾರೆ.

2009ರ ಚಾಂಪಿಯನ್ ಪಾಕಿಸ್ತಾನ, 2022ರಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತ್ತು.

ಗುತ್ತಿಗೆ ಮರುಪರಿಶೀಲನೆ?

ಲಾಹೋರ್‌: ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿರುವ ಕಾರಣ ಪಾಕಿಸ್ತಾನ ತಂಡದ ಕ್ರಿಕೆಟಿಗರ ಕೇಂದ್ರಿಯ ಗುತ್ತಿಗೆ ಮರುಪರಿಶೀಲಿಸಿ, ವೇತನ ಕಡಿತಗೊಳಿಸಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಚಿಂತನೆ ನಡೆಸುತ್ತಿದೆ.

ಝಕಾ ಅಶ್ರಫ್‌ ಅವಧಿಯಲ್ಲಿ ಆಟಗಾರರಿಗೆ ನೀಡಿರುವ ಕೇಂದ್ರೀಯ ಗುತ್ತಿಗೆಯನ್ನು ಮರುವಿಮರ್ಶೆಗೆ ಒಳಪಡಿಸಬೇಕು ಎಂದು ಕೆಲವು ಅಧಿಕಾರಿಗಳು ಹಾಗೂ ಮಾಜಿ ಆಟಗಾರರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಕ್ವಿ ಅವರಿಗೆ ಸಲಹೆ ಮಾಡಿದ್ದಾರೆ ಎಂದು ಮಂಡಳಿಯ ವಿಶ್ವಸನೀಯ ಮೂಲ ತಿಳಿಸಿದೆ.

ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಸಾಧನೆ:

  • 2007: ರನ್ನರ್-ಅಪ್

  • 2009: ಚಾಂಪಿಯನ್

  • 2010: ಸೆಮಿಫೈನಲ್

  • 2012: ಸೆಮಿಫೈನಲ್

  • 2014: ಸೂಪರ್ 10

  • 2016: ಸೂಪರ್ 10

  • 2021: ಸೆಮಿಫೈನಲ್

  • 2022: ರನ್ನರ್-ಅಪ್

  • 2024: ಗುಂಪು ಹಂತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT