ಭಾನುವಾರ, ಸೆಪ್ಟೆಂಬರ್ 19, 2021
23 °C
ಇಂಗ್ಲೆಂಡ್‌ ವಿರುದ್ಧದ ಸರಣಿ ಸಮಬಲ

ಹಫೀಜ್‌ ಸಾಹಸ: ಮೂರನೇ ಟ್ವೆಂಟಿ–20 ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಜಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಚೆಸ್ಟರ್‌ : ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್‌ ಪ್ರವಾಸದಲ್ಲಿ ಕೊನೆಗೂ ಜಯ ಒಲಿಯಿತು. ಅನುಭವಿ ಆಲ್‌ರೌಂಡರ್‌‌ ಮೊಹಮ್ಮದ್‌ ಹಫೀಜ್‌ (ಔಟಾಗದೆ 86, 52 ಎಸೆತ, 4 ಬೌಂಡರಿ, 6 ಸಿಕ್ಸರ್‌) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಪಾಕ್‌ ತಂಡವು ಆತಿಥೇಯರ ವಿರುದ್ಧದ ಮೂರನೇ ಟ್ವೆಂಟಿ–20 ಪಂದ್ಯದಲ್ಲಿ ಐದು ರನ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿ 1–1ರಿಂದ ಸಮವಾಯಿತು.

39 ವರ್ಷದ ಹಫೀಜ್‌, ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಸ್ಕೋರ್‌ (86) ಸರಿಗಟ್ಟಿದರು. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ತಂಡ ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿತು. ಹಫೀಜ್‌ ಹಾಗೂ ಪದಾರ್ಪಣೆ ಪಂದ್ಯದಲ್ಲಿ ಆಡಿದ 19 ವರ್ಷದ ಹೈದರ್‌ ಅಲಿ (54, 33 ಎಸೆತ 5 ಬೌಂಡರಿ, 2 ಸಿಕ್ಸರ್‌) ಮೂರನೇ ವಿಕೆಟ್‌ ಜೊತೆಯಾಟದಲ್ಲಿ 100 ರನ್‌ ಸೇರಿಸಿ ತಂಡವು ಉತ್ತಮ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಂಗ್ಲೆಂಡ್‌ ಇನಿಂಗ್ಸ್‌ನಲ್ಲಿ ಮೊಯಿನ್ ಅಲಿ (61, 33 ಎಸೆತ, 4 ಬೌಂಡರಿ, 4 ಸಿಕ್ಸರ್‌) ಮಿಂಚಿದರು. 19ನೇ ಓವರ್ ಎಸೆದ ವಹಾಬ್‌ ರಿಯಾಜ್ (26ಕ್ಕೆ 2)‌ ಇಂಗ್ಲೆಂಡ್‌ ತಂಡದ ಎರಡು ವಿಕೆಟ್‌ ಗಳಿಸಿ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು.

ಇಂಗ್ಲೆಂಡ್‌ ಗೆಲುವಿಗೆ ಅಂತಿಮ ಓವರ್‌ನ ಎರಡು ಎಸೆತಗಳಲ್ಲಿ 12 ರನ್‌ ಬೇಕಿದ್ದವು. ಕ್ರೀಸ್‌ನಲ್ಲಿದ್ದ ಟಾಮ್‌ ಕರನ್ ಐದನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ಬೌಲರ್‌ ಹ್ಯಾರಿಸ್‌ ರವೂಫ್‌ ಅವರು‌ ಕೊನೆಯ ಎಸೆತದಲ್ಲಿ ಯಾವುದೇ ರನ್‌ ನೀಡಲಿಲ್ಲ.

ಸರಣಿಯ ಮೊದಲ ಪಂದ್ಯ ಮಳೆಯ ಕಾರಣ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ ಐದು ವಿಕೆಟ್‌ಗಳಿಂದ ಜಯ ಸಾಧಿಸಿತ್ತು.

ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ತಂಡ 1–0ಯಿಂದ ಗೆದ್ದುಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 190 (ಹೈದರ್‌ ಅಲಿ 54, ಮೊಹಮ್ಮದ್ ಹಫೀಜ್‌ ಔಟಾಗದೆ 86, ಬಾಬರ್ ಆಜಂ 21; ಕ್ರಿಸ್‌ ಜೋರ್ಡಾನ್‌ 29ಕ್ಕೆ 2, ಮೊಯಿನ್‌ ಅಲಿ 10ಕ್ಕೆ 1, ಟಾಮ್‌ ಕರನ್‌ 32ಕ್ಕೆ 1). ಇಂಗ್ಲೆಂಡ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 185 (ಮೊಯಿನ್‌ ಅಲಿ 61, ಸ್ಯಾಮ್‌ ಬಿಲಿಂಗ್ಸ್ 26, ಲೂಯಿಸ್‌ ಗ್ರೆಗರಿ 12; ಶಾಹೀನ್‌ ಶಾ ಆಫ್ರಿದಿ 28ಕ್ಕೆ 2, ವಹಾಬ್‌ ರಿಯಾಜ್‌ 26ಕ್ಕೆ 2, ಇಮದ್‌ ವಾಸೀಂ 35ಕ್ಕೆ 1). ಫಲಿತಾಂಶ: ಪಾಕಿಸ್ತಾನ ತಂಡಕ್ಕೆ ಐದು ರನ್‌ಗಳ ಜಯ, ಸರಣಿ 1–1ರಿಂದ ಸಮ. ಪಂದ್ಯ ಹಾಗೂ ಸರಣಿ ಶ್ರೇಷ್ಠ: ಮೊಹಮ್ಮದ್‌ ಹಫೀಜ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು