ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್: ಬಾಬರ್ ಬಳಗಕ್ಕೆ ಕಿವೀಸ್ ಸವಾಲು, ಸೆಮಿಫೈನಲ್ ಹಣಾಹಣಿ ಇಂದು

Last Updated 8 ನವೆಂಬರ್ 2022, 17:20 IST
ಅಕ್ಷರ ಗಾತ್ರ

ಸಿಡ್ನಿ: ಎಲ್ಲ ವಿಭಾಗಗಳಲ್ಲಿಯೂ ಸಮತೋಲನ ಕಾಯ್ದುಕೊಂಡಿರುವ ನ್ಯೂಜಿಲೆಂಡ್ ತಂಡವು ಬುಧವಾರ ನಡೆಯಲಿರುವ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

ಮೊದಲ ಗುಂಪಿನಲ್ಲಿ ಏಳು ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದ ಕಿವೀಸ್ ಬಳಗವು ನಾಲ್ಕರ ಘಟ್ಟ ಪ್ರವೇಶಿಸಿದೆ. ಎರಡನೇ ಗುಂಪಿನಲ್ಲಿ ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಪುಟಿದೆದ್ದ ಪಾಕಿಸ್ತಾನ ತಂಡಕ್ಕೆ ಅದೃಷ್ಟವೂ ಜೊತೆ ನೀಡಿತ್ತು.

ದಕ್ಷಿಣ ಆಫ್ರಿಕಾ ತಂಡವನ್ನು ನೆದರ್ಲೆಂಡ್ಸ್ ತಂಡವು ಮಣಿಸಿದ್ದರಿಂದ ಸೃಷ್ಟಿಯಾದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಪಂದ್ಯವು ಉಭಯ ತಂಡಗಳ ವೇಗಿಗಳ ನಡುವಣ ಪೈಪೋಟಿಯಾಗುವ ನಿರೀಕ್ಷೆ ಇದೆ.

ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಮತ್ತು ಲಾಕಿ ಫರ್ಗ್ಯುಸನ್ ಕಿವೀಸ್ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ. ಪಾಕ್ ತಂಡದಲ್ಲಿರುವ ಶಹೀನ್ ಶಾ ಆಫ್ರಿದಿ, ಹ್ಯಾರಿಸ್ ರವೂಫ್ ಹಾಗೂ ನಸೀಮ್ ಶಹಾ ಕೂಡ ಕಿವೀಸ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ನಡುಗಿಸುವ ಸಮರ್ಥರಾಗಿದ್ದಾರೆ.

ಜೇಮ್ಸ್ ನಿಶಾಮ್, ಗ್ಲೆನ್ ಫಿಲಿಪ್ಸ್‌ ಅವರು ಅಮೋಘ ಲಯದಲ್ಲಿದ್ದು ಪಾಕ್ ಬೌಲಿಂಗ್ ಪಡೆಗೆ ಕಠಿಣ ಸವಾಲೊಡ್ಡಬಲ್ಲರು. ನಾಯಕ ಬಾಬರ್ ಆಜಂ ಲಯ ಕಂಡುಕೊಳ್ಳುವಲ್ಲಿ ಸಫಲರಾಗಿಲ್ಲ. ರಿಜ್ವಾನ್ ಕೂಡ ಅಸ್ಥಿರ ಪ್ರದರ್ಶನ ತೋರಿದ್ದಾರೆ. ಶಾದಾಬ್ ಖಾನ್, ಶಾನ್ ಮಸೂದ್ ಮತ್ತು ಇಫ್ತಿಕಾರ್ ಅಹಮದ್ ಅವರ ಆಟವೇ ಪಾಕ್ ಪಾಲಿಗೆ ಮಹತ್ವದ್ದಾಗಲಿದೆ.

ನ್ಯೂಜಿಲೆಂಡ್ ಎದುರು ಈ ಹಿಂದಿನ ಮುಖಾಮುಖಿಗಳಲ್ಲಿ ಪಾಕ್‌ ಸಿಹಿ ಉಂಡಿದ್ದೇ ಹೆಚ್ಚು. 1992ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪಾಕ್ ಎದುರು ಕಿವೀಸ್ ಶರಣಾಗಿತ್ತು. ಆ ವರ್ಷ ಪಾಕ್ ಚಾಂಪಿಯನ್ ಆಗಿತ್ತು. 1992, 1999ರಲ್ಲಿ ಮುಖಾಮುಖಿಯಾದಾಗಲೂ ಪಾಕ್ ಬಳಗವು ಮೇಲುಗೈ ಸಾಧಿಸಿತ್ತು. 2007ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕೂಡ ಕಿವೀಸ್ ಎದುರು ಪಾಕ್ ಗೆಲುವು ಸಾಧಿಸಿತ್ತು. ಇದೇ ಸಾಧನೆಯನ್ನು ಮುಂದುವರಿಸುವ ವಿಶ್ವಾಸದಲ್ಲಿ ಪಾಕಿಸ್ತಾನವಿದೆ.

ಪಿಚ್ ಹೇಗಿದೆ: ಮೊದಲು ಬ್ಯಾಟಿಂಗ್ ಮಾಡುವವರಿಗೆ ಹೆಚ್ಚು ರನ್‌ಗಳನ್ನು ಗಳಿಸುವ ಅವಕಾಶವನ್ನು ಪಿಚ್ ನೀಡಲಿದೆ. ಈ ಟೂರ್ನಿಯ ಮೊದಲ ಪಂದ್ಯವು ಇಲ್ಲಿಯೇ ನಡೆದಿತ್ತು. ಅದರಲ್ಲಿ ಕಿವೀಸ್ ಬಳಗವು ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಬೌಲ್ಟ್ ಹಾಗೂ ಸೌಥಿ ಮಿಂಚಿದ್ದರು.

ತಂಡಗಳು: ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಫಿನ್ ಅಲೆನ್ (ವಿಕೆಟ್‌ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪಮನ್, ಮಿಚೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟನರ್, ಆ್ಯಡಂ ಮಿಲ್ನೆ, ಈಶ್ ಸೋಧಿ, ಲಾಕಿ ಫರ್ಗ್ಯುಸನ್, ಟಿಮ್ ಸೌಥಿ, ಡೆವೊನ್ ಕಾನ್ವೆ, ಡೆರಿಲ್ ಮಿಚೆಲ್, ಜೇಮ್ಸ್‌ ನಿಶಾಮ್, ಟ್ರೆಂಟ್ ಬೌಲ್ಟ್.

ಪಾಕಿಸ್ತಾನ: ಬಾಬರ್ ಆಜಂ (ನಾಯಕ), ಆಸಿಫ್ ಅಲಿ, ಹೈದರ್ ಅಲಿ, ಖುಷ್‌ದಿಲ್ ಶಹಾ, ಶಾನ್ ಮಸೂದ್, ಮೊಹಮ್ಮದ್ ಹ್ಯಾರಿಸ್, ಇಫ್ತಿಕಾರ್ ಅಹಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸೀಂ ಜೂನಿಯರ್, ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್), ಹ್ಯಾರಿಸ್ ರವೂಫ್, ಮೊಹಮ್ಮದ್ ಹಸನೈನ್, ನಸೀಮ್ ಶಹಾ, ಶಾಹೀನ್ ಆಫ್ರಿದಿ.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್, ಹಾಟ್‌ಸ್ಟಾರ್‌ ಆ್ಯಪ್

–‌

ಟಿ20 ಕ್ರಿಕೆಟ್‌ನಲ್ಲಿ ಬಲಾಬಲ

ಪಂದ್ಯ: 28

ನ್ಯೂಜಿಲೆಂಡ್ ಜಯ: 11

ಪಾಕಿಸ್ತಾನ ಜಯ: 17

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT