ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೀಷ್‌ಗೆ ಮೂರನೇ ಕ್ರಮಾಂಕ ಉತ್ತಮ: ನಬಿ

Last Updated 3 ಮೇ 2019, 20:00 IST
ಅಕ್ಷರ ಗಾತ್ರ

ಮುಂಬೈ: ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್ ಮತ್ತು ಜಾನಿ ಬೇಸ್ಟೊ ಅವರ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲು ಮನೀಷ್ ಪಾಂಡೆ ಉತ್ತಮ ಆಯ್ಕೆ ಎಂದು ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆಟಗಾರ ಮೊಹಮ್ಮದ್ ನಬಿ ಅಭಿಪ್ರಾಯಪಟ್ಟರು.

ಗುರುವಾರ ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಮನೀಷ್ ಪಾಂಡೆ 47 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸಿದ್ದರು. ಎರಡು ಸಿಕ್ಸರ್ ಮತ್ತು ಎಂಟು ಬೌಂಡರಿಗಳನ್ನು ಸಿಡಿಸಿದ್ದರು.

163 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ತಂಡ ಮನೀಷ್ ಅವರ ಕೆಚ್ಚೆದೆಯ ಆಟದಿಂದ ಟೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಅಂತಿಮ ಪಂದ್ಯದಲ್ಲಿ ಗೆಲ್ಲಲು ಏಳು ರನ್ ಬೇಕಾಗಿದ್ದಾಗ ಮನೀಷ್ ಸಿಕ್ಸರ್ ಸಿಡಿಸಿದ್ದರು. ಸೂಪರ್‌ ಓವರ್‌ನಲ್ಲಿ ಗೆದ್ದ ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ಗೆ ಪ್ರವೇಶಿಸಿತ್ತು.

ಮನೀಷ್ ಜೊತೆ ಆರನೇ ವಿಕೆಟ್‌ಗೆ 49 ರನ್‌ಗಳನ್ನು ಸೇರಿಸಿದ್ದ ನಬಿ ಪಂದ್ಯದ ನಂತರ ಮಾತನಾಡಿ ‘ಇತ್ತೀಚಿನ ಪಂದ್ಯಗಳಲ್ಲಿ ಮನೀಷ್ ಉತ್ತಮ ಸಾಧನೆ ಮಾಡಿದ್ದಾರೆ. ವಾರ್ನರ್ ಮತ್ತು ಬೇಸ್ಟೊ ತವರಿಗೆ ವಾಪಸಾಗಿದ್ದು ಅವರ ಸ್ಥಾನವನ್ನು ಮನೀಷ್ ತುಂಬುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣ’ ಎಂದರು.

‘ಜಸ್‌ಪ್ರೀತ್ ಬೂಮ್ರಾ ಮತ್ತು ಲಸಿತ್ ಮಾಲಿಂಗ ಅವರು ಎದುರಾಳಿ ಪಾಳಯದಲ್ಲಿ ಇದ್ದಾಗ ರನ್ ಗಳಿಸುವುದು ಕಷ್ಟ ಸಾಧ್ಯ. ಅವರ ಯಾರ್ಕರ್ ಎಸೆತಗಳನ್ನು ಎದುರಿಸಿ ಕ್ರೀಸ್‌ನಲ್ಲಿ ಉಳಿಯಲು ವಿಶೇಷ ಸಾಮರ್ಥ್ಯ ಬೇಕು. ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಸೋಲಲು ಅವರ ಬೌಲಿಂಗ್ ದಾಳಿಯೇ ಕಾರಣ’ ಎಂದು ನಬಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT