ಬುಧವಾರ, ಏಪ್ರಿಲ್ 21, 2021
25 °C

ನನ್ನ ನಾಯಕತ್ವದ ಅತ್ಯಂತ ಕಹಿನೆನಪು ಮಂಕಿಗೇಟ್: ಪಾಂಟಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ತಮ್ಮ ನಾಯಕತ್ವದ ಅವಧಿಯಲ್ಲಿ ಎದುರಿಸಿದ  ಅತ್ಯಂತ ಕೆಟ್ಟ ಪ್ರಕರಣವೆಂದರೆ ಮಂಕಿಗೇಟ್ ವಿವಾದ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೇಳಿದ್ದಾರೆ.

2008ರಲ್ಲಿ ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯದಲ್ಲಿ ಈ ವಿವಾದ ನಡೆದಿತ್ತು. ಭಾರತದ ಸ್ಪಿನ್ನರ್ ಹರಭಜನ್ ಸಿಂಗ್ ಅವರು ಆಸ್ಟ್ರೇಲಿಯಾದ ಆಲ್‌ರೌಂಡರ್ ಆ್ಯಂಡ್ರ್ಯೂ ಸೈಮಂಡ್ಸ್‌ ಅವರನ್ನು ನಿಂದಿಸಿದರೆನ್ನಲಾದ ಪ್ರಕರಣವು ದೊಡ್ಡಮಟ್ಟದಲ್ಲಿ ಚರ್ಚೆಯಾಗಿತ್ತು. 

‘2005ರಲ್ಲಿ ಆ್ಯಷಸ್ ಸರಣಿಯನ್ನು ಸೋತಿದ್ದು ಕಹಿ ಘಟನೆಯಾಗಿತ್ತು. ಅದನ್ನು ಮರೆಯುವುದು ಬಹಳ ಕಠಿಣವಾಗಿತ್ತು. ಅದರ ನಂತರವೂ ಲಯಕ್ಕೆ ಮರಳಿದ್ದು ಸಾಧನೆ. ಆದರೆ, ಮಂಕಿಗೇಟ್ ಪ್ರಕರಣವು ನನ್ನ ನಾಯಕತ್ವದಲ್ಲಿ ಆದ ಕರಾಳ ಅನುಭವ’ ಎಂದು ಸ್ಕೈಸ್ಪೋರ್ಟ್ಸ್‌ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

ರಿಕಿ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು 77 ಟೆಸ್ಟ್‌ಗಳನ್ನು ಆಡಿ 48ರಲ್ಲಿ ಜಯಿಸಿತ್ತು. 228 ಏಕದಿನ ಪಂದ್ಯಗಳಲ್ಲಿ 164 ವಿಜಯಗಳನ್ನು ಸಾಧಿಸಿತ್ತು. 

‘ಆ ಪ್ರಕರಣದ ವಿಚಾರಣೆಯು ಬಹಳ ಸುದೀರ್ಘ ಸಮಯ ನಡೆಯಿತು. ಸಿಡ್ನಿಯ ನಂತರದ ಅಡಿಲೆಡ್‌ ಟೆಸ್ಟ್‌ ನಡೆದ ಸಂದರ್ಭದಲ್ಲಿ ಮೈದಾನದಿಂದ ಹೊರಬಂದು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿಗಳಿಗೆ ವಿವರಣೆ ನೀಡಿದ್ದು ಈಗಲೂ ನೆನಪಿದೆ. ಆ ಪ್ರಕರಣದ ನಂತರ ತಂಡದವರ ಆತ್ಮಬಲವು ಸಮತೋಲನವಾಗಿರಲಿಲ್ಲ. ಪರ್ತ್‌ ಟೆಸ್ಟ್‌ನಲ್ಲಿ ನಮ್ಮ ನಿರೀಕ್ಷೆಗೆ ತಕ್ಕ ಆಟ ಹೊರಹೊಮ್ಮಲಿಲ್ಲ. ಬಹಳಷ್ಟು ನಿರಾಶೆ ಅನುಭವಿಸಬೇಕಾಯಿತು’ ಎಂದು ನೆನಪಿಸಿಕೊಂಡಿದ್ದಾರೆ.

ಪ್ರಕರಣದಿಂದಾಗಿ ಉಭಯ ತಂಡಗಳ ನಡುವಿನ ಸಂಬಂಧವು ಹದಗೆಟ್ಟಿತ್ತು. ಅದರಿಂದಾಗಿ ಭಾರತ ತಂಡವು ಸರಣಿಯಿಂದ ಹಿಂದೆ ಸರಿಯುವುದಾಗಿಯೂ ಎಚ್ಚರಿಸಿತ್ತು. ಆದರೆ ಐಸಿಸಿಯ ಮಧ್ಯಸ್ಥಿಕೆಯಿಂದ ಸರಣಿ ಮುಂದುವರಿದಿತ್ತು.

ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು 2005, 2009 ಮತ್ತು 2010–11ರಲ್ಲಿ ಆ್ಯಷಸ್ ಸರಣಿಗಳಲ್ಲಿ ಸೋತಿತ್ತು. ಈ ಪ್ರಕರಣದಲ್ಲಿ ಕೊನೆಗೆ ಹರಭಜನ್ ಅವರಿಗೆ ಕ್ಲೀನ್‌ಚಿಟ್ ನೀಡಲಾಗಿತ್ತು. ಆದರೆ ಸೈಮಂಡ್ಸ್‌ ವೃತ್ತಿ ಜೀವನವು ಮಂಕಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು