ಮಂಗಳವಾರ, ಜೂನ್ 2, 2020
27 °C

ಐಪಿಎಲ್ | ಈ ಆಟಗಾರ ಆರ್‌ಸಿಬಿ ತಂಡದಲ್ಲಿರಬೇಕು ಎಂದು ಕೊಹ್ಲಿಗೆ ಹೇಳಿದ್ದ ಪಾರ್ಥಿವ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಟೀಂ ಇಂಡಿಯಾದ ಪ್ರಮುಖ ವೇಗಿ ಎನಿಸಿರುವ ಹಾಗೂ ಐಪಿಎಲ್‌ನಲ್ಲಿ ಯಶಸ್ವಿ ಬೌಲರ್‌ ಆಗಿರುವ ಜಸ್‌ಪ್ರೀತ್‌ ಬೂಮ್ರಾ ಅವರನ್ನು ಆರ್‌ಸಿಬಿ ಖರೀದಿಸಬೇಕು ಎಂದು ನಾಯಕ ವಿರಾಟ್‌ ಕೊಹ್ಲಿಗೆ ಪಾರ್ಥಿವ್‌ ಪಟೇಲ್‌ ಹೇಳಿದ್ದರಂತೆ. ಈ ಬಗ್ಗೆ ಪಾರ್ಥಿವ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಬೂಮ್ರಾ ಆಗಿನಿಂದಲೂ ಮುಂಬೈ ಇಂಡಿಯನ್ಸ್‌ ತಂಡದಲ್ಲೇ ಆಡುತ್ತಿದ್ದಾರೆ. ಇದುವರೆಗೆ ಒಟ್ಟು 77 ಪಂದ್ಯಗಳನ್ನು ಆಡಿರುವ ಅವರು 7.55ರ ಸರಾಸರಿಯಲ್ಲಿ 82 ವಿಕೆಟ್‌ ಉರುಳಿಸಿದ್ದಾರೆ.

fancode.comನ ‘ಲಾಕ್‌ಡೌನ್‌ ಬಟ್‌ ನಾಟ್‌ಔಟ್’ ಕಾರ್ಯಕ್ರಮದಲ್ಲಿ ಮಾತುಕತೆ ವೇಳೆ ಪಾರ್ಥಿವ್‌ ಅವರಿಗೆ ಬೂಮ್ರಾ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಪಾರ್ಥಿವ್‌, ‘ಆತ ಗುಜರಾತ್ ತಂಡದ ಪರ ವಿದರ್ಭ ವಿರುದ್ಧ ಪದಾರ್ಪಣೆ ಪಂದ್ಯವಾಡಿದ್ದು ನನಗೆ ಈಗಲೂ ನೆನಪಿದೆ. ಬೂಮ್ರಾ ಅವರನ್ನು ಮುಂಬೈ ಇಂಡಿಯನ್ಸ್‌ ಖರೀದಿಸುವ ಮೊದಲು, ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದೆ. ನಾನಾಗ ಆರ್‌ಸಿಬಿಯಲ್ಲಿದ್ದೆ. ಆತನನ್ನು ಆರ್‌ಸಿಬಿ ಖರೀಸಿಸಬೇಕು ಎಂದು ಹೇಳಿದ್ದೆ’ ಎಂದಿದ್ದಾರೆ.

‘ಆದರೆ, ನಿಸ್ಸಂಶಯವಾಗಿ ಮುಂಬೈ ಇಂಡಿಯನ್ಸ್ ಆರ್‌ಸಿಬಿಯನ್ನು ಮೀರಿ ಬೂಮ್ರಾ ಅವರನ್ನು ಖರೀದಿಸಿತು. ಬೂಮ್ರಾ ಅವರಲ್ಲೇನೋ ವಿಶೇಷತೆ ಇದೆ ಎಂದು ಆಗ ಮುಂಬೈ ತಂಡದ ಕೋಚ್‌ ಆಗಿದ್ದ ಜಾನ್‌ ರೈಟ್‌ ಅವರಿಗೆ ಹೇಳಿದ್ದೆ’ ಎಂದು ನೆನಪಿಸಿಕೊಂಡಿದ್ದಾರೆ.

ಬೂಮ್ರಾ ಸದ್ಯ ಏಕದಿನ ಕ್ರಿಕೆಟ್‌ ಬೌಲರ್‌ಗಳ ರ‍್ಯಾಂಕಿಂಗ್‌‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ 14 ಟೆಸ್ಟ್‌ ಪಂದ್ಯಗಳಲ್ಲಿ ಆಡಿರುವ ಬೂಮ್ರಾ, 68 ವಿಕೆಟ್‌ ಪಡೆದಿದ್ದಾರೆ. 64 ಏಕದಿನ ಪಂದ್ಯಗಳಿಂದ 104 ವಿಕೆಟ್‌ ಉರುಳಿಸಿದ್ದಾರೆ. 49 ಟಿ20 ಪಂದ್ಯಗಳಿಂದ 59 ವಿಕೆಟ್‌ ಉರುಳಿಸಿದ್ದಾರೆ.

ಬೂಮ್ರಾ ಆಡುತ್ತಿರುವ ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ನಲ್ಲಿ ನಾಲ್ಕು ಸಲ ಚಾಂಪಿಯನ್‌ ಆಗಿದೆ.

2013–14ರ ರಣಜಿ ಟೂರ್ನಿಯಲ್ಲಿ ಬೂಮ್ರಾ ಗುಜರಾತ್‌ ಪರ ಪದಾರ್ಪಣೆ ಮಾಡಿದ್ದಾಗ, ಪಾರ್ಥಿವ್‌ ಆ ತಂಡದ ನಾಯಕರಾಗಿದ್ದರು. ಆ ಪಂದ್ಯದಲ್ಲಿ ಬೂಮ್ರಾ 7 ವಿಕೆಟ್‌ ಉರುಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು