ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಹರಾಜು: ಆಸೀಸ್–ವಿಂಡೀಸ್‌ ಆಟಗಾರರಿಗೆ ಸಿಂಹಪಾಲು: ಪ್ಯಾಟ್‌ಗೆ ಜಾಕ್‌ಪಾಟ್

ಯುವ ಪ್ರತಿಭೆಗಳಿಗೆ ಅವಕಾಶ: ಆರ್‌ಸಿಬಿಗೆ ಪವನ್, ರಾಜಸ್ಥಾನ್‌ಗೆ ಅನಿರುದ್ಧ
Last Updated 20 ಡಿಸೆಂಬರ್ 2019, 5:55 IST
ಅಕ್ಷರ ಗಾತ್ರ

ಕೋಲ್ಕತ್ತ: ಆಸ್ಟ್ರೇಲಿಯಾದ ಆಲ್‌ರೌಂಡರ್‌ ಪ್ಯಾಟ್ ಕಮಿನ್ಸ್‌ ಅವರಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ‘ಜಾಕ್‌ಪಾಟ್’ ಹೊಡೆಯಿತು.

ಗುರುವಾರ ಇಲ್ಲಿ ನಡೆದ 13ನೇ ಆವೃತ್ತಿಯ ಲೀಗ್‌ನ ಹರಾಜು ಪ್ರಕ್ರಿಯೆಯಲ್ಲಿ ₹ 15.50 ಕೋಟಿಗೆ ಕಮಿನ್ಸ್‌ ಅವರು ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಪಾಲಾದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಆಟಗಾರರಲ್ಲಿ ಲೆಗ್‌ಸ್ಪಿನ್ನರ್ ಪಿಯೂಷ್ ಚಾವ್ಲಾ (₹6.75ಕೋಟಿ) ಬಂಪರ್ ಮೌಲ್ಯ ಗಳಿಸಿದರು. ಉತ್ತರಪ್ರದೇಶದ ಆಟಗಾರ ಈ ಬಾರಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ಕಿಂಗ್ಸ್‌ ಪಾಲಾದರು.

ಪ್ಯಾಟ್‌ ಅವರನ್ನು ಖರೀದಿಸಲು ಫ್ರಾಂಚೈಸ್‌ಗಳಲ್ಲಿಯೇ ಅಪಾರ ಪೈಪೋಟಿ ಏರ್ಪಟ್ಟಿತ್ತು. 2017ರಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಪ್ಯಾಟ್ ಆಡಿದ್ದರು. ಹೋದ ಎರಡು ವರ್ಷಗಳ ಟೂರ್ನಿಗಳಲ್ಲಿ ಅವರು ಆಡಿರಲಿಲ್ಲ.

ಅವರ ದೇಶದವರೇ ಆದ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೂ ಉತ್ತಮ ಬೇಡಿಕೆ ವ್ಯಕ್ತವಾಯಿತು. ಮಾನಸಿಕ ಒತ್ತಡದಿಂದ ಕ್ರಿಕೆಟ್‌ನಿಂದ ಕೆಲ ಕಾಲ ವಿಶ್ರಾಂತಿ ಪಡೆದಿರುವ ಅವರು ಶೀಘ್ರದಲ್ಲಿಯೇ ಕಣಕ್ಕೆ ಮರಳಲಿದ್ದಾರೆ. ಆಲ್‌ರೌಂಡರ್ ಗ್ಲೆನ್‌ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ₹ 10.75 ಕೋಟಿಗೆ ಖರೀದಿಸಿತು. ವಿಂಡೀಸ್‌ನ ವೇಗಿ ಶೆಲ್ಡನ್ ಕಾಟ್ರೆಲ್ ಕೂಡ ಪಂಜಾಬ್ ಪಾಲಾದರು.

ತಂಡವನ್ನು ಬಲಿಷ್ಠಗೊಳಿಸುವತ್ತ ಚಿತ್ತ ನೆಟ್ಟಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್ ಅವರನ್ನು ₹ 10 ಕೋಟಿ ನೀಡಿ ಖರೀದಿಸಿತು. ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮೆಯರ್ (₹ 7.75ಕೋಟಿ)ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತನ್ನದಾಗಿಸಿ ಕೊಂಡಿತು. ಚೆನ್ನೈನಲ್ಲಿ ನಡೆದಿದ್ದ ಭಾರತ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಅವರು ಶತಕ ಹೊಡೆದಿದ್ದರು. ಹೋದ ಬಾರಿಯ ಐಪಿಎಲ್‌ನಲ್ಲಿ ಹೆಟ್ಮೆಯರ್ ಆರ್‌ಸಿಬಿಯಲ್ಲಿ ಆಡಿದ್ದರು.

ಯುವ ಆಟಗಾರರಿಗೆ ಅವಕಾಶ: 19 ವರ್ಷದೊಳಗಿನವರ ಭಾರತ ತಂಡದ ನಾಯಕ ಪ್ರಿಯಂ ಗರ್ಗ್ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಖರೀದಿಸಿತು. ₹ 50 ಲಕ್ಷ ಮೂಲಬೆಲೆ ಹೊಂದಿದ್ದ ಅವರಿಗೆ ₹ 1.90 ಕೋಟಿ ಲಭಿಸಿತು. ಮುಂಬೈ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್‌ ತಂಡವು ಸೇರ್ಪಡೆ ಮಾಡಿಕೊಂಡಿತು. ಕಾರ್ತಿಕ್ ತ್ಯಾಗಿ, ವಿರಾಟ್ ಸಿಂಗ್ ಮತ್ತು ಅಬ್ದುಲ್ ಸಮದ್ ಅವರಿಗೂ ಅವಕಾಶ ಲಭಿಸಿದೆ.

ಸ್ಪರ್ಧೆಯಲ್ಲಿದ್ದ 332 ಆಟಗಾರರು: ಒಟ್ಟು 332 ಆಟಗಾರರಲ್ಲಿ 72 ಆಟಗಾರರನ್ನು ಖರೀದಿಸಲು ಬಿಡ್‌ ನಡೆಯಿತು. ರಾತ್ರಿ 9.30ರವರೆಗೂ ನಡೆದ ಪ್ರಕ್ರಿಯೆಯಲ್ಲಿ 62 ಆಟಗಾರರ ಖರೀದಿ ಸಂಪೂರ್ಣಗೊಂಡಿತು. ಅದರಲ್ಲಿ 29 ಮಂದಿ
ವಿದೇಶದವರಿದ್ದಾರೆ.

ಪಾನಿಪುರಿ ಹುಡುಗ ಕೋಟ್ಯಾಧಿಪತಿ!

ಮುಂಬೈನ ರಸ್ತೆಬದಿಯಲ್ಲಿ ಪಾನಿಪುರಿ ಮಾರಾಟ ಮಾಡಿ ಕ್ರಿಕೆಟ್‌ ಕಿಟ್‌ಗೆ ಹಣ ಹೊಂದಿಸಿಕೊಳ್ಳುತ್ತಿದ್ದ ಯಶಸ್ವಿ ಜೈಸ್ವಾಲ್ ಈಗ ಕೋಟ್ಯಾಧಿಪತಿಯಾಗಿದ್ದಾರೆ.

ಈಚೆಗೆ ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದ ಯಶಸ್ವಿ ಗಮನ ಸೆಳೆದಿದ್ದರು. 17ರ ಹರೆಯದ ಯಶಸ್ವಿ ಈಗ 19 ವರ್ಷದೊಳಗಿನವರ ಭಾರತ ತಂಡದಲ್ಲಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಅವರಿಗೆ ರಾಜಸ್ಥಾನ್ ರಾಯಲ್ಸ್‌ ತಂಡವು ₹ 2.40 ಕೋಟಿ ನೀಡಿ ಖರೀದಿಸಿತು.

ರಾಬಿನ್‌ಗೆ ₹ 3 ಕೋಟಿ

ಕೊಡಗಿನ ರಾಬಿನ್ ಉತ್ತಪ್ಪ ಅವರು ಈ ಬಾರಿ ಮೂರು ಕೋಟಿ ರೂಪಾಯಿ ಗಳಿಸಿದರು. ₹1.50 ಕೋಟಿ ಮೂಲಬೆಲೆ ಹೊಂದಿದ್ದ ಅವರನ್ನು ರಾಜಸ್ಥಾನ್ ರಾಯಲ್ಸ್‌ ತಂಡವು ಖರೀದಿಸಿತು. ಅವರೊಂದಿಗೆ ಗದುಗಿನ ಅನಿರುದ್ಧ ಅಶೋಕ್ ಜೋಶಿ (₹ 20 ಲಕ್ಷ) ಕೂಡ ತಂಡದಲ್ಲಿದ್ದಾರೆ.

ಧಾರವಾಡದ ಪವನ್ ದೇಶಪಾಂಡೆ ಅವರು ಆರ್‌ಸಿಬಿ ತಂಡದ ಪಾಲಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT