ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WI vs ENG: ಫಿಲ್ ಸಾಲ್ಟ್ ಸತತ 2ನೇ ಶತಕ; ವಿಂಡೀಸ್ ವಿರುದ್ಧ ಇಂಗ್ಲೆಂಡ್‌ಗೆ ಜಯ

Published 20 ಡಿಸೆಂಬರ್ 2023, 2:22 IST
Last Updated 20 ಡಿಸೆಂಬರ್ 2023, 2:22 IST
ಅಕ್ಷರ ಗಾತ್ರ

ಟ್ರಿನಿಡಾಡ್: ಫಿಲ್ ಸಾಲ್ಟ್ ಗಳಿಸಿದ ಸತತ ಎರಡನೇ ಶತಕದ (119) ನೆರವಿನೊಂದಿಗೆ ಪ್ರವಾಸಿ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ನಡೆದ ನಾಲ್ಕನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ 75 ರನ್ ಅಂತರದ ಗೆಲುವು ದಾಖಲಿಸಿದೆ.

ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-2ರ ಅಂತರದ ಸಮಬಲ ಸಾಧಿಸಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಆಂಗ್ಲರ ಪಡೆ, ಬಳಿಕದ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿತು. ಈಗ ಡಿಸೆಂಬರ್ 21ರಂದು ನಡೆಯಲಿರುವ ಅಂತಿಮ ಪಂದ್ಯದಲ್ಲಿ ಸರಣಿ ವಿಜೇತರ ನಿರ್ಣಯವಾಗಲಿದೆ.

ಸಾಲ್ಟ್ ಸತತ 2ನೇ ಶತಕ, ಬೃಹತ್ ಮೊತ್ತ ಗಳಿಸಿದ ಇಂಗ್ಲೆಂಡ್...

ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಫಿಲ್ ಸಾಲ್ಟ್ ಗಳಿಸಿದ ಸತತ ಎರಡನೇ ಶತಕದ ಬೆಂಬಲದೊಂದಿಗೆ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿತು.

ಇದು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಗಳಿಸಿದ ಬೃಹತ್ ಮೊತ್ತ. ಒಟ್ಟಾರೆಯಾಗಿ ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ದಾಖಲಾದ ಐದನೇ ಗರಿಷ್ಠ ಮೊತ್ತ ಆಗಿದೆ.

ಮಂಗೋಲಿಯಾ ವಿರುದ್ಧ ನೇಪಾಳ 314 ರನ್ ಗಳಿಸಿರುವುದು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಮೊತ್ತವಾಗಿದೆ.

ಅಲ್ಲದೆ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಎರಡು ಶತಕ ಗಳಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಫಿಲ್ ಸಾಲ್ಟ್ ಭಾಜನರಾದರು.

57 ಎಸೆತಗಳನ್ನು ಎದುರಿಸಿದ ಸಾಲ್ಟ್, 10 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 119 ರನ್ ಗಳಿಸಿದರು. ಅಲ್ಲದೆ ನಾಯಕ ಜೋಸ್ ಬಟ್ಲರ್ ಅವರೊಂದಿಗೆ ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 117 ರನ್‌‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಜೋಸ್ ಬಟ್ಲರ್ (55) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (54*) ಬಿರುಸಿನ ಅರ್ಧಶತಕ ಗಳಿಸಿದರು. ಈ ಪೈಕಿ 21 ಎಸೆತಗಳನ್ನು ಎದುರಿಸಿದ ಲಿವಿಂಗ್‌ಸ್ಟೋನ್ ಇನಿಂಗ್ಸ್‌ನಲ್ಲಿ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್‌ಗಳು ಸೇರಿದ್ದವು.

ಈ ಗುರಿ ಬೆನ್ನಟ್ಟಿದ ವಿಂಡೀಸ್, 15.3 ಓವರ್‌ಗಳಲ್ಲಿ 192 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆ್ಯಂಡ್ರೆ ರಸೆಲ್ ಗರಿಷ್ಠ 51 ರನ್ (25 ಎಸೆತ, 5 ಸಿಕ್ಸರ್, 3 ಬೌಂಡರಿ) ಗಳಿಸಿದರು. ಇಂಗ್ಲೆಂಡ್ ಪರ ರೀಸ್ ಟಾಪ್ಲಿ ಮೂರು ಮತ್ತು ಸ್ಯಾಮ್ ಕರ್ರನ್ ಹಾಗೂ ರೆಹಾನ್ ಅಹ್ಮದ್ ತಲಾ ಎರಡು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT