ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಿದ್ಧ ಕೃಷ್ಣ, ಸೀಫರ್ಟ್‌ಗೆ ಕೋವಿಡ್ ದೃಢ

ಕರ್ನಾಟಕದ ವೇಗಿಗೆ ಬೆಂಗಳೂರಿನಲ್ಲಿ ಕ್ವಾರಂಟೈನ್‌; ನ್ಯೂಜಿಲೆಂಡ್ ವಿಕೆಟ್ ಕೀಪರ್‌ಗೆ ಚೆನ್ನೈನಲ್ಲಿ ಚಿಕಿತ್ಸೆ
Last Updated 8 ಮೇ 2021, 11:49 IST
ಅಕ್ಷರ ಗಾತ್ರ

ಬೆಂಗಳೂರು/ಕ್ರೈಸ್ಟ್‌ ಚರ್ಚ್‌: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪ್ರಸಿದ್ಧ ಕೃಷ್ಣ ಮತ್ತು ಟಿಮ್ ಸೀಫರ್ಟ್‌ ಅವರಿಗೆ ಕೋವಿಡ್ –19 ಸೋಂಕು ಇರುವುದು ದೃಢಪಟ್ಟಿದೆ.

ಪ್ರಸಿದ್ಧ ಕೃಷ್ಣ ಅವರು ಬೆಂಗಳೂರಿನಲ್ಲಿರುವ ತಮ್ಮ ಮನೆಯಲ್ಲಿ ಪ್ರತ್ಯೇಕವಾಸದಲ್ಲಿದ್ದು ನ್ಯೂಜಿಲೆಂಡ್‌ನ ಸೀಫರ್ಟ್‌ ಸದ್ಯ ಅಹಮದಾಬಾದ್‌ನಲ್ಲಿದ್ದಾರೆ. ಅಲ್ಲಿ ಕ್ವಾರಂಟೈನ್ ಮುಗಿಸಿ ಚೆನ್ನೈಗೆ ಪಯಣಿಸಲಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ.

ಮಧ್ಯಮ ವೇಗಿ, 25 ವರ್ಷದ ಪ್ರಸಿದ್ಧ ಕೃಷ್ಣ ಅವರು ಇಂಗ್ಲೆಂಡ್ ಪ್ರವಾಸಕ್ಕಾಗಿ ಶುಕ್ರವಾರ ಪ್ರಕಟಿಸಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಕೋಲ್ಕತ್ತ ನೈಟ್‌ ರೈಡರ್ಸ್‌ನ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಮೊದಲು ಕೋವಿಡ್ ಸೋಂಕು ತಗುಲಿತ್ತು.

‘ಪ್ರಸಿದ್ಧ ಮತ್ತು ಸಂದೀಪ್‌ಗೆ ವರುಣ್ ಅವರಿಂದ ಸೋಂಕು ಆಗಿರಬೇಕು. ಎರಡು ಬಾರಿ ನೆಗೆಟಿವ್ ವರದಿ ಬಂದ ನಂತರ ಮೇ ಮೂರರಂದು ಪ್ರಸಿದ್ಧ ಬಯೋಬಬಲ್‌ ತೊರೆದಿದ್ದರು. ಆದರೆ ಬೆಂಗಳೂರಿನಲ್ಲಿ ನಡೆದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಇಂಗ್ಲೆಂಡ್‌ಗೆ ಪಯಣಿಸಲಿರುವ ಭಾರತ ತಂಡದ ಆಟಗಾರರು ಇದೇ ತಿಂಗಳ 25ರಂದು ಬಯೊಬಬಲ್ ಪ್ರವೇಶಿಸಲಿದ್ದಾರೆ. ಅದಕ್ಕೂ ಮೊದಲು ಪ್ರಸಿದ್ಧ ಗುಣಮುಖರಾಗುವ ನಿರೀಕ್ಷೆ ಇದೆ’ ಎಂದು ಮೂಲಗಳು ಹೇಳಿವೆ.

ಸೀಫರ್ಟ್‌ಗೆ ಚೆನ್ನೈಯಲ್ಲಿ ಚಿಕಿತ್ಸೆ

ತವರಿಗೆ ವಾಪಸಾಗುವ ಮುನ್ನ ನಡೆಸಿದ ಎರಡು ಆರ್‌ಟಿ–ಪಿಸಿಆರ್‌ ಪರೀಕ್ಷೆಗಳಲ್ಲೂ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಟಿಮ್ ಸೀಫರ್ಟ್‌ಗೆ ಕೋವಿಡ್ ಇರುವುದು ಖಚಿತವಾಗಿದೆ. ಅವರಲ್ಲಿ ಸೋಂಕಿನ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಸದ್ಯ ಅಹಮದಾಬಾದ್‌ನಲ್ಲಿದ್ದು ಚಿಕಿತ್ಸೆಗಾಗಿ ಚೆನ್ನೈಗೆ ತೆರಳಲಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ (ಎನ್‌ಝಡ್‌ಸಿ) ತಿಳಿಸಿದೆ.

ಕೋವಿಡ್ ಇರುವುದರಿಂದ ಸೀಫರ್ಟ್ ಅವರಿಗೆ ಸದ್ಯ ನ್ಯೂಜಿಲೆಂಡ್‌ಗೆ ತೆರಳಲು ಸಾಧ್ಯವಾಗದು. ನ್ಯೂಜಿಲೆಂಡ್‌ ಆಟಗಾರರು ತೆರಳುವುದಕ್ಕಾಗಿ ಎರಡು ವಿಶೇಷ ವಿಮಾನಗಳನ್ನು ಸಿದ್ಧಗೊಳಿಸಲಾಗಿದೆ. ಆ ಪೈಕಿ ಒಂದು ಈಗಾಗಲೇ ಅಲ್ಲಿಗೆ ಹಾರಿದೆ.

ಮಾಲ್ಡಿವ್ಸ್‌ಗೆ ಕೇನ್ ‘ಬಳಗ’

ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಪಾಲ್ಗೊಳ್ಳುವ ನ್ಯೂಜಿಲೆಂಡ್ ಆಟಗಾರರ ಪ್ರವಾಸದಲ್ಲೂ ಬದಲಾವಣೆ ಮಾಡಲಾಗಿದೆ. ಭಾರತದಲ್ಲಿರುವ ಆಟಗಾರರು ಇಲ್ಲೇ ಕ್ವಾರಂಟೈನ್ ಮುಗಿಸುವುದಾಗಿ ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಈಗ ಮಾಲ್ಡಿವ್ಸ್‌ನಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ.

ಕೇನ್ ವಿಲಿಯಮ್ಸನ್‌, ಮಿಚೆಲ್ ಸ್ಯಾಂಟ್ನರ್‌, ಕೈಲ್ ಜೆಮೀಸನ್‌ ಮತ್ತು ಫಿಸಿಯೊ ಟಾಮಿ ಸಿಮ್ಸೆಕ್‌ ಅವರು ಮಾಲ್ಡಿವ್ಸ್‌ಗೆ ತೆರಳುವರು.

ಟ್ರೇನರ್ ಕ್ರಿಸ್‌ ಡೊನಾಲ್ಡ್‌ಸನ್‌ ವಿಶೇಷ ವಿಮಾನದಲ್ಲಿ ಇಂಗ್ಲೆಂಡ್‌ಗೆ ತೆರಳಲು ಸಜ್ಜಾಗಿದ್ದರು. ಆದರೆ ಇದೀಗ ಮಾಲ್ಡಿವ್ಸ್‌ಗೆ ಹೋಗಲು ನಿರ್ಧರಿಸಿದ್ದಾರೆ. ಭಾರತದಲ್ಲಿರುವ ನ್ಯೂಜಿಲೆಂಡ್ ಆಟಗಾರರು ಮೇ 11ರಂದು ಇಂಗ್ಲೆಂಡ್‌ಗೆ ತಲುಪುವ ಯೋಜನೆ ಇತ್ತು. ಇದು ಒಂದು ವಾರ ತಡವಾಗುವ ಸಾಧ್ಯತೆಗಳು ಕಂಡುಬಂದ ಕಾರಣ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT