ಮಂಗಳವಾರ, ಮಾರ್ಚ್ 28, 2023
29 °C
ಅಹಮದಾಬಾದ್‌ನಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣ

ಗುಜರಾತ್‌: ನರೇಂದ್ರ ಮೋದಿ‌ ಸ್ಟೇಡಿಯಂ ಉದ್ಘಾಟಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್ : ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎಂಬ ಶ್ರೇಯ ಹೊಂದಿರುವ ಇಲ್ಲಿಯ ನವೀಕೃತ ಸರ್ದಾರ್ ಪಟೇಲ್‌ ಕ್ರೀಡಾಂಗಣವನ್ನು ಬುಧವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉದ್ಘಾಟಿಸಿದರು. ಇನ್ನು ಮುಂದೆ ಈ ಕ್ರೀಡಾಂಗಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಿಂದ ಕರೆಯಲಾಗುತ್ತದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಈ ಕ್ರೀಡಾಂಗಣವು 1.32 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ್ದಾಗಿದೆ.

‘ಇದು ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾಗಿತ್ತು. ಕ್ರೀಡಾಂಗಣವನ್ನು ಇನ್ನು ಅವರ ಹೆಸರಿನಿಂದಲೇ ಕರೆಯಲು ನಿರ್ಧರಿಸಲಾಗಿದೆ‘ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.

ಫುಟ್‌ಬಾಲ್‌, ಹಾಕಿ, ಬ್ಯಾಸ್ಕೆಟ್‌ಬಾಲ್, ಕಬಡ್ಡಿ, ಬಾಕ್ಸಿಂಗ್, ಲಾನ್ ಟೆನಿಸ್ ಮುಂತಾದ ವಿಭಾಗಗಳುಳ್ಳ ಸರ್ದಾರ್ ಪಟೇಲ್ ಹೆಸರಿನ ಕ್ರೀಡಾ ಸಂಕೀರ್ಣವನ್ನು ಇದೇ ವೇಳೆ ಕೋವಿಂದ್‌ ಲೋಕಾರ್ಪಣೆ ಮಾಡಿದರು.

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯ ಇಲ್ಲಿ ನಡೆಯುತ್ತಿದೆ. ಮಾರ್ಚ್‌ 4ರಿಂದ ನಡೆಯುವ ನಾಲ್ಕನೇ ಪಂದ್ಯಕ್ಕೂ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

63 ಎಕರೆ ವಿಸ್ತಾರವುಳ್ಳ ಈ ಕ್ರೀಡಾಂಗಣವನ್ನು ಅಂದಾಜು ₹ 800 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಅಂಗಣದ ಆಸನ ಸಾಮರ್ಥ್ಯ 90 ಸಾವಿರ ಆದರೆ ಈ ಕ್ರೀಡಾಂಗಣದ್ದು 1.32 ಲಕ್ಷ.

‘ಕ್ರೀಡಾಂಗಣದ ಒಟ್ಟು ವಿಸ್ತಾರವು 32 ಒಲಿಂಪಿಕ್‌ ಗಾತ್ರದ ಫುಟ್‌ಬಾಲ್ ಅಂಗಣಗಳಿಗೆ ಸಮನಾಗಿದೆ‘ ಎಂದು ಮಾಧ್ಯಮ ಮಾಹಿತಿ ವಿಭಾಗ ತಿಳಿಸಿದೆ.

ಮೆಲ್ಬರ್ನ್ ಕ್ರಿಕೆಟ್ ಅಂಗಣ ವಿನ್ಯಾಸಗೊಳಿಸಿರುವ ಆಸ್ಟ್ರೇಲಿಯಾದ ವಾಸ್ತುಶಿಲ್ಪಿ ಫರ್ಮ್ ಪಾಪ್ಯುಲಸ್ ಅವರ ಕೈಚಳಕವೇ ಅಹಮದಾಬಾದ್‌ನ ಈ  ಕ್ರೀಡಾಂಗಣದ ನವೀಕರಣದಲ್ಲಿ ಅಡಗಿದೆ.

ಕೆಂಪು ಮತ್ತು ಕಪ್ಪು ಎರಡೂ ಮಣ್ಣಿನಿಂದ ಸಿದ್ಧಪಡಿಸಲಾಗಿರುವ 11 ಪಿಚ್‌ಗಳು ಈ ಅಂಗಣದಲ್ಲಿರುವುದು ವಿಶೇಷ.

ಕ್ರೀಡಾಂಗಣದ ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತಿತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು