ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಫೈನಲ್: ಅರ್ಪಿತ್ ಶತಕದ ಸೊಬಗು, ಪೂಜಾರ ತಾಳ್ಮೆಯ ಆಟ

Last Updated 10 ಮಾರ್ಚ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ರಾಜ್‌ಕೋಟ್: ಈ ಸಲದ ರಣಜಿ ಋತುವಿನಲ್ಲಿ ತಮ್ಮ ನಾಲ್ಕನೇ ಶತಕ ದಾಖಲಿಸಿದ ಎಡಗೈ ಬ್ಯಾಟ್ಸ್‌ಮನ್ ಅರ್ಪಿತ್ ವಾಸ್ವಡ ಸೌರಾಷ್ಟ್ರ ತಂಡಕ್ಕೆ ಮತ್ತೊಮ್ಮೆ ಆಸರೆಯಾದರು.

ಅವರ ಆಕರ್ಷಕ ಬ್ಯಾಟಿಂಗ್‌ನಿಂದಾಗಿ ಸೌರಾಷ್ಟ್ರ ತಂಡವು ಇಲ್ಲಿ ನಡೆಯುತ್ತಿರುವ ಬಂಗಾಳ ವಿರುದ್ಧದ ರಣಜಿ ಟ್ರೋಫಿ ಫೈನಲ್‌ ಪಂದ್ಯದ ಎರಡನೇ ದಿನದಾಟದ ಕೊನೆಗೆ 160 ಓವರ್‌ಗಳಲ್ಲಿ 8ಕ್ಕೆ 384 ರನ್‌ ಗಳಿಸಿತು. ಚಿರಾಗ್ ಜಾನಿ (ಔಟಾಗದೆ 13) ಮತ್ತು ಧರ್ಮೇಂದ್ರಸಿಂಹ ಜಡೇಜ (ಔಟಾಗದೆ 13) ಕ್ರೀಸ್‌ನಲ್ಲಿದ್ದಾರೆ.

ಸೆಮಿಫೈನಲ್‌ನಲ್ಲಿ ಗುಜರಾತ್ ವಿರುದ್ಧ ಶತಕ ಹೊಡೆದಿದ್ದ ಅರ್ಪಿತ್ ಇಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಮಿಂಚಿದರು. ಮೊದಲ ದಿನ ಜ್ವರದಿಂದ ಬಳಲಿದ್ದ ಟೆಸ್ಟ್ ಪರಿಣತ ಚೇತೇಶ್ವರ್ ಪೂಜಾರ ಮಂಗಳವಾರ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದರು. ಅರ್ಪಿತ್‌ (106; 287ಎಸೆತ, 11ಬೌಂಡರಿ) ಮತ್ತು ಪೂಜಾರ (66; 237ಎ, 5ಬೌಂ) ಅವರ ಅಪಾರ ತಾಳ್ಮೆಯ ಜೊತೆಯಾಟಕ್ಕೆ ಬಂಗಾಳ ಬೌಲರ್‌ಗಳ ತಂತ್ರಗಳೆಲ್ಲವೂ ತಲೆಕೆಳಗಾದವು.

ಮೊದಲ ದಿನವಾದ ಸೋಮವಾರ ಸೌರಾಷ್ಟ್ರ 80.5 ಓವರ್‌ಗಳಲ್ಲಿ 5ಕ್ಕೆ206 ರನ್‌ ಗಳಿಸಿತ್ತು. ಆ ಮೊತ್ತಕ್ಕೆ ಅರ್ಪಿತ್ ಮತ್ತು ಪೂಜಾರ ಜೊತೆಯಾಟದಿಂದಾಗಿ 142 ರನ್‌ಗಳು ಸೇರಿದವು. ಇಬ್ಬರೂ ರನ್‌ಗಳಿಕೆಗೆ ಅವಸರ ಮಾಡಲಿಲ್ಲ. ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡುವತ್ತ ಗಮನ ನೀಡಿದರು. ಅದರಿಂದಾಗಿಯೇ ತಂಡಕ್ಕೆ ನಾಳೆಯೂ ಬ್ಯಾಟಿಂಗ್ ಉಳಿಸಿಕೊಳ್ಳಲು ಸಾಧ್ಯವಾಯಿತು. ಮಂಗಳವಾರದ ಆಟದಲ್ಲಿ 79.1 ಓವರ್‌ಗಳಲ್ಲಿ 178 ರನ್‌ಗಳನ್ನು ಗಳಿಸಿದ್ದು ಸೌರಾಷ್ಟ್ರ ಬ್ಯಾಟ್ಸ್‌ಮನ್‌ಗಳ ತಾಳ್ಮೆಯನ್ನು ಎತ್ತಿ ತೋರಿಸುತ್ತದೆ.

ಇನಿಂಗ್ಸ್‌ನ 144ನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಶಾಬಾಜ್ ನಿಧಾನಗತಿಯ ಎಸೆತದಲ್ಲಿ ಬೀಟ್ ಆದ ಅರ್ಪಿತ್ ಅವರನ್ನು ಸ್ಟಂಪಿಂಗ್ ಮಾಡಿದ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಸಂಭ್ರಮಿಸಿದರು. ಇದರೊಂದಿಗೆ ಜೊತೆಯಾಟ ಮುರಿದುಬಿತ್ತು.

ಚಹಾ ವಿರಾಮದ ನಂತರ ಬಂಗಾಳದ ಮಧ್ಯಮವೇಗಿ ಮುಕೇಶ್ ಕುಮಾರ್ ಅವರ ಪರಿಣಾಮಕಾರಿ ಬೌಲಿಂಗ್‌ ಗಮನ ಸೆಳೆಯಿತು. ತಮ್ಮ ಎರಡು ಓವರ್‌ಗಳಲ್ಲಿ ಕ್ರಮವಾಗಿ ಪೂಜಾರ ಮತ್ತು ಪ್ರೇರಕ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಅದರ ನಂತರ ಸೌರಾಷ್ಟ್ರದ ಇನಿಂಗ್ಸ್‌ಗೆ ತೆರೆ ಎಳೆಯುವ ಬೌಲರ್‌ಗಳ ಪ್ರಯತ್ನಕ್ಕೆ ಚಿರಾಗ್ ಮತ್ತು ಧರ್ಮೇಂದ್ರಸಿಂಹ ಜಡೇಜ
ಅಡ್ಡಿಯಾದರು.

ಈ ಋತುವಿನಲ್ಲಿ ಚಿರಾಗ್ ಎರಡು ಅರ್ಧಶತಕ ಮತ್ತು ಎರಡು ಶತಕ ಗಳಿಸಿದ್ದಾರೆ.

ಅಂಪೈರ್‌ ಶಂಸುದ್ದೀನ್‌ಗೆ ಚೆಂಡೇಟು: ವಿಶ್ರಾಂತಿ
ರಾಜ್‌ಕೋಟ್ (ಪಿಟಿಐ): ರಣಜಿ ಫೈನಲ್‌ ಪಂದ್ಯದ ಮೊದಲ ದಿನವಾದ ಸೋಮವಾರ ಹೊಟ್ಟೆಗೆ ಚೆಂಡು ಬಡಿದು ನೋವು ಅನುಭವಿಸಿದ್ದ ಅಂಪೈರ್ ಸಿ. ಶಂಸುದ್ದೀನ್ ಅವರು ಎರಡನೇ ದಿನ ಕಾರ್ಯನಿರ್ವಹಿಸಲಿಲ್ಲ. ಅವರ ಬದಲಿಗೆ ಯಶವಂತ್ ಬರ್ಡೆ ಅವರನ್ನು ನಿಯೋಜಿಸಲಾಗಿದ್ದು ಬುಧವಾರದಿಂದ ಕಾರ್ಯನಿರ್ವಹಿಸುವರು.

ಎರಡನೇ ದಿನವಾದ ಮಂಗಳವಾರ ಬೆಳಿಗ್ಗೆ ಶಂಸುದ್ದೀನ್ ಅವರು ಹೊಟ್ಟೆನೋವು ಉಲ್ಬಣಿಸಿದ್ದರಿಂದ ಸ್ಥಳಿಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮರಳಿದರು. ಆಮೇಲೆ ಅವರು ಟಿವಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದರು. ಮೂರನೇ ಅಂಪೈರ್ ಎಸ್‌. ರವಿ ಇದ್ದರು. ಆನ್‌ಫೀಲ್ಡ್‌ ಅಂಪೈರ್ ಅನಂತ ಪದ್ಮನಾಭನ್ ಅವರು ಅಂಪೈರಿಂಗ್ ಮಾಡಿದರು. ಊಟದ ವಿರಾಮಕ್ಕೂ ಮುನ್ನದ ಅವಧಿಯಲ್ಲಿ ಸ್ಥಳೀಯ ಅಂಪೈರ್ ಪಿಯೂಷ್ ಕುಮಾರ್ ಸ್ಕ್ವೇರ್ ಲೆಗ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದರು. ವಿರಾಮದ ನಂತರ ಪದ್ಮನಾಭನ್ ಜೊತೆಗೆ ಎಸ್. ರವಿ ಕಣಕ್ಕಿಳಿದರು.

‘ಕೆಳಹೊಟ್ಟೆಗೆ ಚೆಂಡು ಬಡಿದಿತ್ತು. ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಸಂಪೂರ್ಣ ತಪಾಸಣೆ ಮಾಡಲಾಯಿತು. ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ’ ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್‌ಸಿಎ) ತಿಳಿಸಿದೆ.

‘ಪಿಚ್‌ ಸರಿಯಿಲ್ಲ’
ರಾಜ್‌ಕೋಟ್:
‘ಇಲ್ಲಿಯ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದ ಪಿಚ್‌ನಲ್ಲಿ ಮೊದಲ ದಿನವೇ ದೂಳು ಹಾರುತ್ತಿದೆ. ಚೆಂಡು ಸರಿಯಾಗಿ ಪುಟಿಯುತ್ತಿಲ್ಲ. ರಣಜಿ ಫೈನಲ್‌ ಪಂದ್ಯಕ್ಕೆ ಆಡುವ ಸ್ಥಿತಿಯಿಲ್ಲ ಎಂದು ಬಂಗಾಳ ಕ್ರಿಕೆಟ್ ತಂಡದ ಕೋಚ್ ಅರುಣ್ ಲಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೌರಾಷ್ಟ್ರ ಎದುರು ನಡೆಯುತ್ತಿರುವ ಫೈನಲ್‌ನಲ್ಲಿ ಮೊದಲ ದಿನ ಚೆಂಡು ನಿಧಾನವಾಗಿ ಪುಟಿಯುತ್ತಿದ್ದರಿಂದ ಬೌಲರ್‌ಗಳು ಕಷ್ಟಪಟ್ಟರು. ಓವರ್‌ಗಳು ಕೂಡ ನಿಗದಿಗಿಂತ ಕಡಿಮೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT