ಶನಿವಾರ, ಅಕ್ಟೋಬರ್ 31, 2020
27 °C

PV Web Exclusive | ಮಹಿಳಾ ಕ್ರಿಕೆಟ್‌: ಅಲಿಸಾ ಎಂಬ ವಂಡರ್‌ ಹುಡುಗಿ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

2020 ಬಹುತೇಕರಿಗೆ ಕೆಟ್ಟ ವರ್ಷ. ಆದರೆ, ಅಲಿಸಾ ಹೀಲಿ ಪಾಲಿಗೆ ಹರ್ಷದ ವರ್ಷ. ಭಾರತದ ಬಹುತೇಕ ಕ್ರಿಕೆಟ್‌ಪ್ರೇಮಿಗಳು ಇಂಡಿಯನ್ ಪ್ರೀಮಿಯರ್ ಲೀಗ್ ಗುಂಗಲ್ಲಿ ಮುಳುಗಿಹೋಗಿರುವಾಗಲೇ ಅಲಿಸಾ, ನ್ಯೂಜಿಲೆಂಡ್‌ ಎದುರಿನ ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಇದೇ 27ರಂದು ಅಪರೂಪದ ದಾಖಲೆಯೊಂದನ್ನು ಬರೆದರು. ಅದನ್ನು ವರದಿ ಮಾಡಿದ ಭಾರತದ ಮಾಧ್ಯಮಗಳು ಕಡಿಮೆಯೇ. ವಿಕೆಟ್‌ಕೀಪರ್ ಆಗಿ ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಔಟ್‌ಗೆ ಕಾರಣರಾದ ವಿಶ್ವದ ವಿಕೆಟ್‌ಕೀಪರ್ ಎಂಬ ಸಾಧನೆ ಅದು. ಅವರು ಮುರಿದದ್ದು ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು, ನ್ಯೂಜಿಲೆಂಡ್‌ನ ಲಾರೆನ್ ಡೌನ್ ಅವರ ಕ್ಯಾಚ್ ಪಡೆಯುವ ಮೂಲಕ.

ಅದೇ ಪಂದ್ಯದಲ್ಲಿ ಬರೀ 17 ಎಸೆತಗಳಲ್ಲಿ 33 ರನ್ ಗಳಿಸಿ ತಂಡದ ಗೆಲುವಿಗೆ ಕಾಣ್ಕೆ ನೀಡಿದ ಅವರಿಗೆ ವೀಕ್ಷಕ ವಿವರಣೆಗಾರ ವೆಲ್‌ ಜೋನ್ಸ್‌ ಹೇಳುವವರೆಗೆ ತಮ್ಮ ದಾಖಲೆಯ ಅರಿವೇ ಇರಲಿಲ್ಲ. ಅವರೇಕೆ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಅಲೆಸಾ ತಲೆಕೆಡಿಸಿಕೊಂಡಿದ್ದರು. ಆಮೇಲೆ ಅಸಲಿ ವಿಷಯ ಗೊತ್ತಾಗಿ, ‘ಇದು ಖುಷಿಪಡುವ ಸಂಗತಿಯೇ ಹೌದು’ ಎನ್ನುತ್ತಾ ಮುಖ ಮೊರದಗಲ ಮಾಡಿಕೊಂಡರು.

ಧೋನಿ ಅವರಿಗಿಂತ ವಯಸ್ಸಿನಲ್ಲಿ ಒಂಬತ್ತು ವರ್ಷ ಚಿಕ್ಕವರು ಅಲಿಸಾ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಕ್ರಿಕೆಟ್ ತಂಡದವರಿಗೆ ಪರಿಚಿತ ಹೆಸರಾಗಿದ್ದ ಗ್ರೆಗ್ ಹೀಲಿ ಅವರ ಮಗಳು. ಚಿಕ್ಕಪ್ಪ ಇಯಾನ್ ಹೀಲಿ ಆಸ್ಟ್ರೇಲಿಯಾ ಅಂತರರಾಷ್ಟ್ರೀಯ ತಂಡದ ವಿಕೆಟ್‌ಕೀಪರ್‌ ಆಗಿದ್ದವರು (ತಮ್ಮ ತಂಡದ ಪರ ಟೆಸ್ಟ್‌ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಔಟ್‌ಮಾಡಿದ ವಿಕೆಟ್‌ಕೀಪರ್ ಎಂಬ ಗೌರವಕ್ಕೆ ಪಕ್ಕಾಗಿದ್ದವರು ಅವರು). ಗಂಡ ಮಿಚೆಲ್ ಸ್ಟಾರ್ಕ್‌ ವೇಗದ ಬೌಲಿಂಗ್‌ ಅನ್ನು ಕ್ರಿಕೆಟ್‌ಪ್ರೇಮಿಗಳು ಈಗಲೂ ಕಣ್ತುಂಬಿಕೊಳ್ಳುತ್ತಿದ್ದಾರೆ. ಕ್ರಿಕೆಟ್‌ ಕುಟುಂಬದ ಇನ್ನೊಂದು ರತ್ನ ಈಕೆ ಎನ್ನಲು ಇವಿಷ್ಟೂ ಸಾಕ್ಷ್ಯಗಳು.

ಅಲಿಸಾ ಹೀಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಲಾರಂಭಿಸಿ ಹತ್ತು ವರ್ಷಗಳೇ ಸರಿದಿವೆ. ಈಗ ಅವರಿಗೆ 30 ವರ್ಷ ವಯಸ್ಸು. 2010ರಲ್ಲಿ ಪದಾರ್ಪಣೆ ಮಾಡಿದ ವರ್ಷ ಅವರು ಸ್ವಲ್ಪ ತಡಕಾಡಿದ್ದರು. ಆಮೇಲೆ ತಂಡದಿಂದಲೇ ಅವರನ್ನು ಹೊರಗಿಟ್ಟರು. ಆದರೆ, ಇಂತಹ ಏರಿಳಿತಗಳಿಂದ ಅವರು ದೀರ್ಘಾವಧಿ ಕಂಗಾಲಾಗಲಿಲ್ಲ. 2018ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ–20 ವಿಶ್ವಕಪ್‌ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿ (225 ರನ್ ) ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಐಸಿಸಿ ಪ್ರಕಟಿಸಿದ ವರ್ಷದ ಶ್ರೇಷ್ಠ ಟ್ವೆಂಟಿ–20 ಮಹಿಳಾ ಕ್ರಿಕೆಟ್‌ ಪಟು ಎಂಬ ಗರಿಮೆ ಅವರದ್ದಾಯಿತು.

ಕ್ವೀನ್ಸ್‌ಲ್ಯಾಂಡ್‌ನ ಗೋಲ್ಡ್‌ಕೋಸ್ಟ್‌ನಲ್ಲಿ ಬೆಳೆದ ಅಲಿಸಾಗೆ ಬಾಲ್ಯದಲ್ಲಿ ಕ್ರಿಕೆಟ್‌ ಕುರಿತು ಆಸಕ್ತಿಯೇನೂ ಇರಲಿಲ್ಲ. ಕುಟುಂಬವು ಸಿಡ್ನಿಗೆ ಸ್ಥಳಾಂತರಗೊಂಡ ಮೇಲೆ ಆ ಆಟದ ಬಗೆಗೆ ಒಲವು ಮೂಡಿದ್ದು. ಆಗಿನ್ನೂ ಅಲಿಸಾಗೆ ಏಳು ವರ್ಷ. ಸ್ನೇಹಿತೆಯೊಬ್ಬಳು ಪುಸಲಾಯಿಸಿದ್ದರಿಂದ ಕ್ರಿಕೆಟ್‌ ಬ್ಯಾಟ್‌ ಹಿಡಿದದ್ದೇ ಅಲ್ಲದೆ ಗ್ಲೌಸ್ ಹಾಕಿಕೊಂಡು ವಿಕೆಟ್‌ಕೀಪಿಂಗ್‌ ಕೂಡ ಮಾಡತೊಡಗಿದ್ದು ಅಲಿಸಾ ಬದುಕಿನ ತಿರುವು. ಆಟಕ್ಕೆ ಪುಸಲಾಯಿಸಿದ ಆ ಗೆಳತಿ ಆಡುವುದನ್ನು ಬಿಟ್ಟರೂ ಈಕೆ ಬಿಡಲಿಲ್ಲ.

2006ರಲ್ಲಿ ಬಾರ್ಕರ್‌ ಕಾಲೇಜ್‌ನ ತಂಡಕ್ಕೆ ಆಯ್ಕೆಯಾದ 16 ಮಂದಿಯಲ್ಲಿ ಅಲಿಸಾ ಹೆಸರು ಸೇರಿತ್ತು. ಹುಡುಗರು ಹಾಗೂ ಹುಡುಗಿಯರನ್ನು ಒಳಗೊಂಡ ಅಪರೂಪದ ತಂಡ ಅದು. ಆಗೆಲ್ಲ ಹುಡುಗಿಯರದೇ ಪ್ರತ್ಯೇಕ ತಂಡ ಇರುತ್ತಿರಲಿಲ್ಲ. ಶಾಲೆಗಳಲ್ಲಿ ತಂಡ ರೂಪಿಸುವಷ್ಟು ಆಟಗಾರ್ತಿಯರೂ ಆಡಲು ಮುಂದೆ ಬರುತ್ತಿರಲಿಲ್ಲವೆನ್ನಿ. ಹೀಗಾಗಿ ಹುಡುಗರ ಜತೆಗೆ ಆಡುವುದು ಅನಿವಾರ್ಯವಾಗಿತ್ತು. ಆಗ ಬಾರ್ಕರ್ ಕಾಲೇಜು ಕ್ರಿಕೆಟ್ ತಂಡದ ಆಯ್ಕೆಯನ್ನು ಪ್ರಶ್ನಿಸಿ ಹಳೆಯ ವಿದ್ಯಾರ್ಥಿಯೊಬ್ಬ ಅನಾಮಧೇಯ ಇ–ಮೇಲ್‌ಮಾಡಿದ್ದ. ‘ಬಾರ್ಕರ್‌ತಂಡವನ್ನು ದೇವರೇ ಕಾಪಾಡಬೇಕು’ ಎಂದು ವ್ಯಂಗ್ಯವಾಗಿ ಬರೆದಿದ್ದ ಅವನು, ಅಲಿಸಾ ಹೀಲಿ ಆಯ್ಕೆಯನ್ನು ಅಡಿಗೆರೆ ಎಳೆದು ಪ್ರಶ್ನಿಸಿದ್ದ. ಆದರೆ, ಆಯ್ಕೆದಾರರು ಅನಾಮಧೇಯ ಪತ್ರವನ್ನು ಗಂಭೀರವಾಗಿ ಪರಿಗಣಿಸಲೇಬಾರದು ಎಂದು ಅದನ್ನು ಉಪೇಕ್ಷಿಸಿದರು. ತನ್ನ ಆಯ್ಕೆ ಸರಿ ಎನ್ನುವುದನ್ನು ಆಟದ ಮೂಲಕವೇ ಅಲಿಸಾ ಸಾಬೀತುಪಡಿಸಿದರು.

ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ಅಲಿಸಾ ಅವರನ್ನು ಹಾಕಿ ತಂಡಕ್ಕೆ ಸೇರಿಕೊಳ್ಳುವಂತೆ ದೈಹಿಕ ಶಿಕ್ಷಣ ಶಿಕ್ಷಕ ಪ್ರೇರೇಪಿಸಿದ್ದರು. ಆಗ ಮನೆಯಲ್ಲಿ ಯಾರು ಕೇಳಿದರೂ ಮುಂದೆ ದೇಶದ ಹಾಕಿ ತಂಡಕ್ಕೆ ಆಡಬೇಕು ಎಂದು ಅಲಿಸಾ ಹೇಳುತ್ತಿದ್ದರು. ಆದರೆ, ಸಿಡ್ನಿಯ ಕ್ರಿಕೆಟ್ ಮೈದಾನ ಅವರಿಗೆ ಹಿಡಿಸಿಬಿಟ್ಟಿತು.

ಅಲಿಸಾ ಅಕ್ಕ ಕರೀನ್ ಕೂಡ ಕ್ರೀಡಾಪ್ರೇಮಿ. ಹದಿನೈದನೇ ಹುಟ್ಟುಹಬ್ಬ ಆಚರಿಸಿಕೊಂಡ ಮರುದಿನ ಅವರು ಶಾಲೆ ಮುಗಿದ ಮೇಲೆ ತಂಗಿಯನ್ನು ಕರೆದುಕೊಂಡು ರಗ್ಬಿ ಆಡಲೆಂದು ಸ್ನೇಹಿತರಲ್ಲಿಗೆ ಹೋದರು. ಅಲ್ಲಿ ದಿಢೀರನೆ ಕುಸಿದರು. ಅಷ್ಟು ಚಿಕ್ಕಪ್ರಾಯದಲ್ಲೇ ಅವರಿಗೆ ಹೃದಯಸ್ತಂಭನವಾಗಿತ್ತು. ಆ ಕ್ಷಣ ಹೋದ ಪ್ರಜ್ಞೆ ಕೆಲವು ದಿನಗಳಾದರೂ ಮರಳಲಿಲ್ಲ. ಜೀವರಕ್ಷಕ ಸೌಕರ್ಯದಿಂದ ಉಸಿರಾಡುತ್ತಿದ್ದರಷ್ಟೆ. ಅದನ್ನು ತೆಗೆದರೆ ಪ್ರಾಣ ಹೋಗುತ್ತದೆ. ಯಾವಾಗ ತೆಗೆಯಬೇಕು ಎಂಬ ನಿರ್ಧಾರವನ್ನು ಕರೀನ್ ಅಪ್ಪ–ಅಮ್ಮನೇ ತೆಗೆದುಕೊಳ್ಳಬೇಕು. ಚೇತರಿಸಿಕೊಳ್ಳುವ ಯಾವುದೇ ಲಕ್ಷಣವಿಲ್ಲ ಎಂದು ವೈದ್ಯರು ಕೈಚೆಲ್ಲಿದರು. ಮನಸ್ಸನ್ನು ಕಲ್ಲು ಮಾಡಿಕೊಂಡೇ ಆ ಅಪ್ಪ–ಅಮ್ಮ ಮಗಳ ಸಾವನ್ನು ಎದುರುಗೊಂಡರು. ಪುಟ್ಟ ಅಲಿಸಾಗೆ ಅಕ್ಕನಿಲ್ಲದ ಬದುಕನ್ನು ಆಗ ಕಲ್ಪಿಸಿಕೊಳ್ಳಲೂ ಆಗಿರಲಿಲ್ಲ.

ಮಗಳ ಸಾವಿನ ನೋವನ್ನು ಮರೆಯಲೆಂದೇ ಅಪ್ಪ ಗ್ರೆಗ್ ಸಿಂಗಪೂರ್‌ನಲ್ಲಿ ಕೆಲಸ ಹಿಡಿದು ಹೋದರು. ಆಗ ಹೈಸ್ಕೂಲ್ ಕೊನೆಯ ವರ್ಷದಲ್ಲಿ ಕಲಿಯುತ್ತಿದ್ದ ಅಲಿಸಾಗೆ ಅಮ್ಮ ಸ್ಯಾಂಡಿ ಬೆಂಬಲಕ್ಕೆ ನಿಂತರು. ಮಗಳ ಹೈಸ್ಕೂಲ್ ಮುಗಿದದ್ದೇ ಅವರೂ ಸಿಂಗಪೂರ್‌ಗೆ ಹೊರಟುಬಿಟ್ಟರು. ಅಲಿಸಾ ಚಿಕ್ಕ ವಯಸ್ಸಿಗೇ ಸ್ವಯಂಬಲದಿಂದ ನೆಲೆಗೊಳ್ಳತೊಡಗಿದ್ದೇ ಆಗಿನಿಂದ. ತಾನಾಯಿತು, ತನ್ನ ಮುದ್ದಿನ ನಾಯಿಯಾಯಿತು. ಅಡುಗೆ ಮಾಡಿಕೊಟ್ಟು, ಮನೆವಾರ್ತೆ ಮಾಡಲು ಕೆಲಸದವರಿದ್ದರು. ಇಂತಹ ಹೊತ್ತಲ್ಲಿ ಅವರ ಕೈಹಿಡಿದದ್ದು ಕ್ರಿಕೆಟ್‌. ನ್ಯೂ ಸೌತ್‌ವೇಲ್ಸ್‌ ತಂಡಕ್ಕೆ ವಿಕೆಟ್‌ಕೀಪರ್ ಬ್ಯಾಟ್ಸ್‌ವುಮನ್ ಆಗಿ ಅವರು ಆಯ್ಕೆಯಾದರು. ಲಿಯೊನಿ ಕೋಲ್‌ಮನ್ ಆಗ ಆ ತಂಡದ ವಿಕೆಟ್‌ಕೀಪರ್ ಆಗಿ ಹೆಸರಾಗಿದ್ದರು. ಹೀಗಾಗಿ ಬ್ಯಾಟ್ಸ್‌ವುಮನ್ ಆಗಿಯಷ್ಟೇ ಆಡುವ ಅವಕಾಶ ಸಿಕ್ಕಿತು. ಹೊಡಿ–ಬಡಿ ಎನ್ನುವಂತೆ ಬ್ಯಾಟ್‌ಮಾಡುತ್ತಿದ್ದ ಅಲಿಸಾಗೆ ಬ್ಯಾಟಿಂಗ್ ಕ್ರಮಾಂಕದಲ್ಲೂ ಬೇಗ ಬಡ್ತಿ ಸಿಕ್ಕಿತು. ಹಾಗೆ ಆದದ್ದೇ ತಮ್ಮ ವೃತ್ತಿಬದುಕಿಗೆ ಮಾರಕವಾಯಿತು ಎಂದು ಆಮೇಲೆ ಅವರು ಹೇಳಿಕೊಂಡರು. ‘ಹದಿನಾರು ಹದಿನೇಳರ ಪ್ರಾಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೆ ತಲೆ ನಿಲ್ಲುವುದಿಲ್ಲ’ ಎಂದು ಅವರು ಆಮೇಲೆ ನೀತಿಪಾಠ ಹೇಳುವಂತೆ ಮಾತನಾಡಿದ್ದರು. 2009ರಲ್ಲಿ ಕೋಲ್‌ಮನ್ ನಿವೃತ್ತರಾದರು. ಅಲ್ಲಿಂದ ವಿಕೆಟ್‌ಕೀಪಿಂಗ್ ಹೊಣೆಗಾರಿಕೆ ಅಲಿಸಾ ಹೆಗಲಿಗೆ ಬಿತ್ತು. ಆಸ್ಟ್ರೇಲಿಯಾ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದ ಆಗಿನ ನಾಯಕಿ ಜೋಡಿ ಫೀಲ್ಡ್ಸ್‌ಅವರ ಮೀನಖಂಡದಲ್ಲಿ ಸ್ನಾಯುಸೆಳೆತ ಉಂಟಾಯಿತು. ಖುದ್ದು ವಿಕೆಟ್‌ಕೀಪರ್‌ ಕೂಡ ಆಗಿದ್ದ ಅವರಿಗೆ 2010ರ ಟ್ವೆಂಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಡಲು ಆಗಲಿಲ್ಲ. ಆಗ ಅಲಿಸಾಗೆ ಅಂತರರಾಷ್ಟ್ರೀಯ ಪಂದ್ಯಕ್ಕೆ ಕಾಲಿಡುವ ಅವಕಾಶ ಸಿಕ್ಕಿತು.

2010ರ ಟ್ವೆಂಟಿ20 ವಿಶ್ವಕಪ್‌ನ ಮಹತ್ವದ ಪಂದ್ಯದಲ್ಲಿ ಭಾರತದ ಜೂಲನ್ ಗೋಸ್ವಾಮಿ ಎಸೆತಗಳನ್ನು ಎದುರಿಸಲಾಗದೆ ಅಲಿಸಾ ತಡಕಾಡಿದರು. ಮಿಡ್‌ಆನ್‌ಗೆ ಕ್ಯಾಚ್ ನೀಡಿ ಅವರು ನಿರ್ಗಮಿಸಿದ ಮೇಲೆ ಆಸ್ಟ್ರೇಲಿಯಾದ ವಿಶ್ವಕಪ್ ಕನಸೂ ಮುದುಡಿತು.

ಆ ಸೋಲಿನ ನಂತರ ತರಬೇತುದಾರ ಮ್ಯಾಥ್ಯೂ ಮೋಟ್ ಈ ಹುಡುಗಿಯನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು. ‘ನಿನಗೆ ಇನ್ನೂ ಇಪ್ಪತ್ತು ವರ್ಷ. ಆ್ಯಷಸ್ ಸರಣಿ ಬರುತ್ತಿದೆ. ಅದರಲ್ಲಿ ನೀನು ಇನಿಂಗ್ಸ್‌ ಆರಂಭಿಸಬೇಕು’ ಎಂದರು. ಅಲಿಸಾಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ತಾಂತ್ರಿಕವಾಗಿ ತಾನು ಇನ್ನೂ ಪಳಗಬೇಕು ಎನ್ನುವುದಷ್ಟೆ ಗೊತ್ತಿತ್ತು. ಅಲಿಸಾಗೆ ಸ್ವೀಪ್‌ಶಾಟ್‌ ಹೊಡೆಯುವುದರಲ್ಲಿ ನಿಸ್ಸೀಮಳಾಗಬೇಕೆಂಬ ತುಡಿತ ಮೂಡಿದ್ದೇ ಆಗ. ಆ್ಯಷ್‌ ಸ್ಕ್ವೇರ್‌ ಎಂಬ ಸ್ನೇಹಿತ ಸಿಡ್ನಿಯಲ್ಲಿ ಕ್ರಿಕೆಟ್‌ ಕೂಡ ಹೇಳಿಕೊಡುತ್ತಿದ್ದರು. ಅವರ ಸಲಹೆಗಳನ್ನು ಪಡೆದಮೇಲೆ ಅಲಿಸಾ ವೃತ್ತಿಬದುಕು ಬದಲಾಯಿತು.

2017ರ ವಿಶ್ವಕಪ್‌ವರೆಗೆ ಏಕದಿನದ ಪಂದ್ಯಗಳಲ್ಲಿ ಅಲಿಸಾ ರನ್‌ ಗಳಿಕೆಯ ಸರಾಸರಿ ಕೇವಲ 15.96 ಇತ್ತು. ಸ್ಟ್ರೈಕ್‌ರೇಟ್‌ 92. ಆಮೇಲೆ ಸರಾಸರಿ 57.15ರಷ್ಟು ಏರಿಕೆಯಾದದ್ದೇ ಅಲ್ಲದೆ ಸ್ಟ್ರೈಕ್‌ರೇಟ್‌108.85ಕ್ಕೆ ಹಿಗ್ಗಿತು. ಟ್ವೆಂಟಿ20 ಪಂದ್ಯಗಳಲ್ಲೂ ಅದುವರೆಗೆ 17.63ರಲ್ಲಿ ಇದ್ದ ಸರಾಸರಿ 35.68ಕ್ಕೆ ಏರಿತು. ಸ್ಟ್ರೈಕ್‌ರೇಟ್ 150.3!

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಚುಟುಕು ಕ್ರಿಕೆಟ್ ಸರಣಿಯಲ್ಲಿ ತಮ್ಮ ವೃತ್ತಿಬದುಕಿನ ನೂರನೇ ಟ್ವೆಂಟಿ–20 ಪಂದ್ಯ ಆಡಿದ ಅನುಭವಿ ಅಲಿಸಾ. ಅದೇ ಸರಣಿಯಲ್ಲಿ ಔಟಾಗದೆ 148 ರನ್‌ ದಾಖಲಿಸಿದ್ದೂ ಸದ್ದಾಗಿತ್ತು. ಅದು ಮಹಿಳಾ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ದಾಖಲಾದ ವೈಯಕ್ತಿಕ ಗರಿಷ್ಠ ಸ್ಕೋರ್ ಅದು. ಆ ಇನಿಂಗ್ಸ್‌ನಲ್ಲಿ 46 ಎಸೆತಗಳಲ್ಲಿ ಅವರು ಶತಕದ ಗಡಿ ದಾಟಿದ್ದರು.

ಕೊರೊನಾ ಕಾರಣಕ್ಕೆ ಲಾಕ್‌ಡೌನ್‌ಆಗುವ ಮೊದಲು ತವರಿನಲ್ಲೇ ಮುಕ್ತಾಯಗೊಂಡ ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಕಪ್‌ ಎತ್ತಿಹಿಡಿದ ತಂಡದಲ್ಲಿ ಹೀಲಿ ತಮ್ಮ ರುಜು ಹಾಕಿದ್ದರು. ಭಾರತದ ವಿರುದ್ಧ ನಡೆದ ಫೈನಲ್‌ನಲ್ಲಿ ಅವರು 39 ಎಸೆತಗಳಲ್ಲಿ 75 ರನ್‌ ದಾಖಲಿಸಿದ ನೆನಪಿನ್ನೂ ಮಾಸಿಲ್ಲ. ಚುಟುಕು ಕ್ರಿಕೆಟ್‌ನ ವಿಶ್ವಕಪ್‌ ಫೈನಲ್‌ನಲ್ಲಿ ಇನ್ನಾವುದೇ ಪುರುಷರಾಗಲೀ ಮಹಿಳೆಯರಾಗಲೀ ಇಷ್ಟು ವೇಗವಾಗಿ ಅರ್ಧಶತಕ ದಾಖಲಿಸಿರಲಿಲ್ಲ. ಐದು ಸಿಕ್ಸರ್‌ಗಳನ್ನು ಒಳಗೊಂಡಿದ್ದ ಭರ್ತಿ ಆತ್ಮವಿಶ್ವಾಸದ ಇನಿಂಗ್ಸ್‌ಅನ್ನು ಸುಮಾರು 87 ಸಾವಿರ ಪ್ರೇಕ್ಷಕರು ಆ ದಿನ ಕಣ್ತುಂಬಿಕೊಂಡರೆ, ಭಾರತದ ಮಹಿಳಾ ಬೌಲರ್‌ಗಳು ಕಕ್ಕಾಬಿಕ್ಕಿಯಾಗಿದ್ದರು. ಟೂರ್ನಿಯಲ್ಲಿ ಒಟ್ಟು 236 ರನ್‌ ಕಲೆಹಾಕಿ, ಅತಿ ಹೆಚ್ಚು ರನ್‌ಗಳಿಸಿದವರ ಯಾದಿಯಲ್ಲಿ ಅವರು ಎರಡನೇ ಸ್ಥಾನದಲ್ಲಿ ನಿಂತರು.

ಮೈದಾನದಲ್ಲಿ ಇರುವಷ್ಟೂ ಹೊತ್ತು ಅಲಿಸಾ ಮುಖದ ತುಂಬಾ ನಗು ತುಳುಕಿಸುತ್ತಲೇ ಇರುತ್ತಾರೆ. ಆಟದ ನಡುವೆಯೇ ಚಟಾಕಿ ಹಾರಿಸುವುದು ಅವರ ವ್ಯಕ್ತಿತ್ವ. ಕೆಲವರು ಅದನ್ನು ‘ಸ್ಲೆಡ್ಜಿಂಗ್’ ಎಂದಾಗ, ‘ನಗು ನಗುತ್ತಲೇ ಎದುರಾಳಿ ಬ್ಯಾಟ್ಸ್‌ವುಮನ್ ಔಟಾದರೆ ಅದೂ ನಮಗೆ ಒಳ್ಳೆಯದೇ ಅಲ್ಲವೇ’ ಎನ್ನುತ್ತಾ ನಗುವುದನ್ನು ಮುಂದುವರಿಸಿದ ಚಿನಕುರುಳಿ ಅವರು. ಸ್ಟಂಪ್‌ಗಳ ಹಿಂದೆ ಅವರ ಚುರುಕುತನ ಕಂಡವರಿಗೆ ಅಲಿಸಾ ಮಾಡಿರುವ ದಾಖಲೆಯ ತೂಕ ಎಂಥದೆನ್ನವುದು ಗೊತ್ತಿದೆ.

ಒಂಬತ್ತನೇ ವಯಸ್ಸಿನಿಂದಲೂ ಜತೆಯಾಗಿ ಆಡುತ್ತಾ ಬಂದ ಸ್ಟಾರ್ಕ್ ಈಗ ಅವರ ಪತಿ. ಮದುವೆಯಾಗಿ ಮೂರು ವಸಂತಗಳನ್ನು ಕಂಡ ಅವರ ಕ್ರಿಕೆಟ್‌ ಬದುಕಿನ ಸುಗ್ಗಿಯ ಅವಧಿಯೂ ಸುದೀರ್ಘವಾಗುತ್ತಿರುವುದು ವಿಶೇಷ.

ಧೋನಿ ಈ ಸಲದ ಐಪಿಎಲ್‌ನಲ್ಲಿ ತಡಕಾಡುತ್ತಿರುವ ಹೊತ್ತಿನಲ್ಲೇ ಅವರ ದಾಖಲೆಯೊಂದನ್ನು ಹುಡುಗಿಯೊಬ್ಬಳು ಅಳಿಸಿಹಾಕಿರುವುದು ಮರೆಯಲಾಗದ ವಿದ್ಯಮಾನವೇ ಹೌದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು