ಬುಧವಾರ, ಆಗಸ್ಟ್ 17, 2022
27 °C

PV Web Exclusive | ಆಟದ ಮನೆ: ಏರಿಳಿತದ ಸಖ ಸ್ಮಿತ್

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ವೈಯಾಕರಣಿಗಳು ಒಪ್ಪಲಾಗದ ಶೈಲಿ ಸ್ಟೀವ್ ಸ್ಮಿತ್ ಅವರದ್ದು. ವೃತ್ತಿಬದುಕಿನ ಪ್ರಾರಂಭದಲ್ಲಿ ಆ ಶೈಲಿಯ ಕಾರಣಕ್ಕೇ ಟೀಕೆಗೆ ಒಳಗಾಗಿದ್ದ ಅವರು ಕಳೆದ ಕೆಲವು ವರ್ಷಗಳಲ್ಲಿ ಎದುರಾಳಿ ಬೌಲರ್‌ಗಳನ್ನು ಚಿಂದಿ ಮಾಡಿರುವುದೂ ಅದೇ ಆಟದಿಂದ. ಏರಿಳಿತವನ್ನೇ ತಮ್ಮ ಪಾಲಿನ ಸುಖವನ್ನಾಗಿ ಬದಲಿಸಿಕೊಂಡ ದಿಗ್ಗಜ, ಕೋಪಿಷ್ಟ ಆಟಗಾರನ ಯಶೋಪಯಣ ಮಜವಾಗಿದೆ.

***

ಕ್ರಿಕೆಟ್ ಬ್ಯಾಟ್ಸ್‌ಮನ್‌ಷಿಪ್ ಕುರಿತು ಮಾತನಾಡುವಾಗ ಮುಂಬೈ ಕಡೆಗೆ ಗಮನ ಹರಿಸಲೇಬೇಕಾಗುತ್ತದೆ. ಯಾಕೆಂದರೆ, ಅದು ಬ್ಯಾಟಿಂಗ್ ತಾರೆಗಳ ಆಡುಂಬೊಲ. ಸುನೀಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್, ಸಂಜಯ್ ಮಂಜ್ರೇಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ಈಗ ಶ್ರೇಯಸ್ ಅಯ್ಯರ್... ಹೀಗೆ ಭಾರತದ ಬ್ಯಾಟಿಂಗ್‌ನ ಜಂಘಾಬಲ ಅಲ್ಲಿ ಕಾಣಸಿಗುತ್ತದೆ. ಇಂತಹ ‘ಮುಂಬೈ ಸ್ಕೂಲ್ ಆಫ್ ಬ್ಯಾಟಿಂಗ್‌’’ನ ಅತಿಮುಖ್ಯ ವ್ಯಕ್ತಿ ಸಚಿನ್ ತೆಂಡೂಲ್ಕರ್ ಮೊನ್ನೆ ಮೊನ್ನೆ ಎಚ್ಚರಿಕೆಯ ಮಾತನ್ನಾಡಿದ್ದರು: ‘ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಬಹಳ ಅಪಾಯಕಾರಿ. ಫೋರ್ಥ್ ಸ್ಟಂಪ್‌ಗೆ ಗುರಿಯಾಗಿಸಿ ಬೌಲ್ ಮಾಡುವ ವೇಗದ ಬೌಲರ್‌ಗಳೆಲ್ಲ ಅವರಿಗೆ ಎಲ್ಲಿಗೆ ಬೌಲ್ ಮಾಡಬೆಕು ಎಂದು ತಡಕಾಡಬೇಕಾಗುತ್ತದೆ, ಯಾಕೆಂದರೆ, ಸ್ಮಿತ್ ಕ್ರೀಸ್‌ನಲ್ಲಿ ಸರಕ್ಕನೆ ಆಫ್‌ಸ್ಟಂಪಿನ ಆಚೆಗೆ ಕಾಲಿಟ್ಟು, ಇಷ್ಟಬಂದ ಕಡೆಗೆ ಚೆಂಡನ್ನು ಹೊಡೆಯುವಂತಹ ಅವಕಾಶ ಸೃಷ್ಟಿಸಿಕೊಳ್ಳುತ್ತಾರೆ. ಮಾಗಿದ ಬೌಲರ್‌ಗಳನ್ನೂ ಕಕ್ಕಾಬಿಕ್ಕಿಯಾಗಿಸುವ ತಂತ್ರ ಇದು.’

ಸ್ಮಿತ್ ಹಾಗೆಯೇ ಮಾಡಿದರು. ಭಾರತದ ವಿರುದ್ಧ ನಡೆದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸತತವಾಗಿ ಶತಕಗಳನ್ನು ಗಳಿಸಿದರು; ಅದೂ ತಲಾ 62 ಎಸೆತಗಳಲ್ಲಿ! ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ತರಹದ ಅನುಭವಿ ಬೌಲರ್‌ಗಳಿಗೂ ಸ್ಮಿತ್‌ ವರಸೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಐಪಿಎಲ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಟ್ರೆಂಟ್‌ ವುಡ್‌ಹಿಲ್ ಕಳೆದ ವರ್ಷ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಶೈಲಿಯ ಕುರಿತು ವಿಶ್ಲೇಷಣೆ ಮಾಡಿದ್ದರು. ‘ಒಂದು ವೇಳೆ ಸ್ಮಿತ್ ಭಾರತದ ಪರವಾಗಿ ಆಡಿದ್ದರೆ ಅವನ ಬ್ಯಾಟಿಂಗ್ ಶೈಲಿಯ ಬಗೆಗೆ ಆಸ್ಟ್ರೇಲಿಯಾದ ಕಾಪಿಬುಕ್ ಕ್ರಿಕೆಟ್‌ ಪಂಡಿತರು ಟೀಕೆಗಳನ್ನೇ ಮಾಡುತ್ತಿರಲಿಲ್ಲ. ಈಗ ನೋಡಿ. ಪಾಪ, ಅವನು ಆಸ್ಟ್ರೇಲಿಯಾದ ಕ್ರಿಕೆಟ್‌ ವೈಯಾಕರಣಿಗಳ ಕೈಗೆ ಸಿಲುಕಿ ನಲುಗಿಯೂ ಮೇಲೆದ್ದಿದ್ದಾನೆ’ ಎನ್ನುವ ಅವರ ಆ ವಿಶ್ಲೇಷಣೆಯಲ್ಲಿ ಸಾಕಷ್ಟು ಗೂಢಾರ್ಥ ಕೂಡ ಇದೆ.

ಹೋದ ವರ್ಷ ಆ್ಯಷಸ್ ಕ್ರಿಕೆಟ್ ಸರಣಿ ಮುಗಿದ ಮೇಲೆ ಸ್ಮಿತ್ ಹಾಗೂ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಇಬ್ಬರೂ ಬ್ಯಾಟ್ಸ್‌ಮನ್‌ಗಳ ವೈಖರಿಯ ವಿಶ್ಲೇಷಣೆ ನಡೆದಿತ್ತು, ಆಗ ಬರೀ 4 ಟೆಸ್ಟ್‌ಗಳಲ್ಲಿ ಸ್ಮಿತ್ 774 ರನ್‌ಗಳನ್ನು ಕಲೆಹಾಕಿದ್ದರು; ಅದೂ 110.57ರ ಸರಾಸರಿಯಲ್ಲಿ. ಕ್ರಿಕೆಟ್ ಪರಿಭಾಷೆಯಲ್ಲಿ ಇದನ್ನು ‘ಬ್ರಾಡ್‌ಮನಿಸ್ಕ್ ಆ್ಯವರೇಜ್’ (ಡಾನ್ ಬ್ರಾಡ್ಮನ್ ಸ್ವರೂಪದ ಸರಾಸರಿ) ಎಂದೇ ಕರೆಯುತ್ತಾರೆ. ಈ ಶತಮಾನದಲ್ಲಿ ಟೆಸ್ಟ್‌ ಸರಣಿಯೊಂದರಲ್ಲಿ ಯಾವ ಬ್ಯಾಟ್ಸ್‌ಮನ್‌ ಕೂಡ ಇಷ್ಟು ಕಡಿಮೆ ಪಂದ್ಯಗಳಲ್ಲಿ ಈ ರೀತಿ ರನ್‌ಗಳನ್ನು ಕಲಹಾಕಿರಲಿಲ್ಲ.

ಸ್ಟೀವ್ ಸ್ಮಿತ್ ಕ್ರಿಕೆಟ್ ಬದುಕು ಅನಿರೀಕ್ಷಿತಗಳ ಸರಮಾಲೆ. ‘ಬಾಲ್ ಟ್ಯಾಂಪರಿಂಗ್’ ಆರೋಪದ ಕಾರಣಕ್ಕೆ 2018ರಲ್ಲಿ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದ ಅವರು ಮಗುವಿನಂತೆ ಕಣ್ಣೀರು ಹಾಕಿದ್ದರು. ಹೋದವರ್ಷದ ವಿಶ್ವಕಪ್‌ ಕ್ರಿಕೆಟ್‌ನಲ್ಲೂ ಫಾರ್ಮ್‌ ಕಂಡುಕೊಳ್ಳಲು ತಡಕಾಡಿದ್ದರು. ಆದರೂ ಇಂಗ್ಲೆಂಡ್ ಎದುರು ನಡೆದಿದ್ದ ಸೆಮಿಫೈನಲ್ಸ್‌ನಲ್ಲಿ ತಾಳ್ಮೆಯ 85 ರನ್ ಸೇರಿಸಿ, ಪರೇಡ್‌ ಮಾಡುತ್ತಿದ್ದ ಬ್ಯಾಟ್ಸ್‌ಮನ್‌ಗಳ ತಂಡಕ್ಕೆ ಆಸರೆಯಂತೆ ಕಂಡಿದ್ದರು. 2015ರ ವಿಶ್ವಕಪ್‌ನಲ್ಲಿ ಅವರು ಸವ್ಯಸಾಚಿ ಆಗಿದ್ದವರು. 7 ಪಂದ್ಯಗಳಲ್ಲಿ ಆ ಟೂರ್ನಿಯಲ್ಲಿ 402 ರನ್‌ಗಳನ್ನು ಅವರು ಗಳಿಸಿದ್ದೇ ಅಲ್ಲದೆ ಆ ವರ್ಷ ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿ ಗ್ಯಾರಿ ಸೋಬರ್ಸ್ ಟ್ರೋಫಿ ಎತ್ತಿಹಿಡಿದಿದ್ದರು. ಆಗ ವಿಶ್ವಕಪ್ ಸೆಮಿಫೈನಲ್‌ನಲ್ಲೂ ಭಾರತದ ವಿರುದ್ಧವೇ ಶತಕವನ್ನೂ ಅವರು ದಾಖಲಿಸಿದ್ದು ಸ್ಮೃತಿಪಟಲದಲ್ಲಿ ಹಾಗೆಯೇ ಉಳಿದಿದೆ. ಆ ಇನಿಂಗ್ಸ್‌ನಲ್ಲಿ 90 ರನ್‌ ಗಳಿಸಿದ್ದಾಗ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿ ಶತಕದ ಗಡಿ ದಾಟಿದ್ದನ್ನಂತೂ ಮರೆಯಲಾಗದು.

ಸ್ಮಿತ್ ಅಪ್ಪ ಆಸ್ಟ್ರೇಲಿಯನ್, ಅಮ್ಮ ಇಂಗ್ಲಿಷ್ ನೆಲದವರು. ಕ್ರಿಕೆಟ್‌ ಆಡಬೇಕೆಂಬ ಹೆಬ್ಬಯಕೆಯಿಂದ ಶಾಲೆಯನ್ನು ತೊರೆದರು. ಶಿಸ್ತಿನ ವಾತಾವರಣದಲ್ಲಿ ಬೆಳೆದ ಅವರಿಗೆ ಚಿಕ್ಕಂದಿನಿಂದಲೂ ಮುಂಗೋಪ. ಅವರ ಈ ಕೋಪವನ್ನು ಕ್ರಿಕೆಟ್ ಕ್ಷೇತ್ರದಲ್ಲೂ ಅನೇಕರು ಟೀಕಿಸಿದ್ದಿದೆ. ಕೌಂಟಿ ಕ್ರಿಕೆಟ್ ಆಡುವಾಗ ಸ್ಟುವರ್ಟ್ ಮ್ಯಾಕ್‌ಗಿಲ್ ಅವರನ್ನು ಫೈನ್‌–ಲೆಗ್‌ನಲ್ಲಿ ಫೀಲ್ಡ್‌ ಮಾಡುವಂತೆ ಒಮ್ಮೆ ಸೂಚಿಸಿದರು. ಮೆಕ್‌ಗಿಲ್‌ ಅದನ್ನು ಒಪ್ಪದೇ ಇದ್ದಾಗ, ‘ನಾನು ಕ್ಯಾಪ್ಟನ್. ಹೇಳಿದ್ದನ್ನು ನೀನು ಕೇಳಬೇಕು. ಇಲ್ಲವಾದರೆ...’ ಎಂದು ವಾಚಾಮಗೋಚರವಾಗಿ ಮೈದಾನದಲ್ಲೇ ಬಯ್ದು ಸುದ್ದಿಯಾಗಿದ್ದರು. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಕೆರ್ರಿ ಒಕೀಫ್ ಕೂಡ ಹಿಂದೊಮ್ಮೆ ಸ್ಮಿತ್ ಕೋಪಾವೇಶವನ್ನು ಟೀಕಿಸಿದ್ದರು. ‘ನಾಯಕನಿಗೆ ಇರಬೇಕಾದ ಸಂಯಮ ಅವರಿಗಿಲ್ಲ. ಪದೇ ಪದೇ ತಾಳ್ಮೆ ಕಳೆದುಕೊಂಡು ಬಡಬಡಿಸುತ್ತಾರೆ’ ಎಂದಿದ್ದರು.

ಹನ್ನೊಂದು ವರ್ಷಗಳ ಹಿಂದೆ ಸ್ಮಿತ್‌ ಆಸ್ಟ್ರೇಲಿಯಾ ಟೆಸ್ಟ್‌ ತಂಡಕ್ಕೆ ಕಾಲಿಟ್ಟದ್ದು ಲೆಗ್‌ ಸ್ಪಿನ್ನರ್‌ ಆಗಿ. ಪಾಕಿಸ್ತಾನದ ವಿರುದ್ಧ 2010ರಲ್ಲಿ ಆಡಿದ ಮೊದಲ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅವರು ಮೂರು ವಿಕೆಟ್‌ ಕಿತ್ತಿದ್ದರು. ಶೇನ್‌ ವಾರ್ನ್ ಸ್ಪಿನ್ ಪಾಠ ಕೇಳಿ ಬೆಳೆದಿದ್ದ ಇಪ್ಪತ್ತರ ಚಿನಕುರುಳಿ ಹುಡುಗ ಮುಂದೆ ದೊಡ್ಡ ಲೆಗ್ ಸ್ಪಿನ್ನರ್ ಆಗುತ್ತಾನೆ ಎಂದೇ ಅನೇಕರು ಭಾವಿಸಿದ್ದರು. ಆದರೆ ನಡೆದದ್ದೇ ಬೇರೆ. ಸ್ಮಿತ್ ಬ್ಯಾಟ್ಸ್‌ಮನ್‌ ಆಲ್‌ರೌಂಡರ್‌ ಆಗಿಬಿಟ್ಟರು. ಇಂತಹ ಸ್ಥಿತ್ಯಂತರ ಅಪರೂಪ.

ಸ್ಮಿತ್‌ಗೆ ಬೇಸ್‌ಬಾಲ್‌ ಇಷ್ಟ. ಕುದುರೆ ರೇಸ್‌ ಮೆಚ್ಚು. ಅವರು ಮೂರು ಕುದುರೆಗಳ ಷೇರುದಾರರೂ ಹೌದು. ಜನಪ್ರಿಯತೆಯನ್ನು ತೂಗಿಸಿಕೊಂಡು ಹೋಗುವಲ್ಲಿ ಮೊದಲು ಎಡವಿದ್ದ ಅವರು, ಆಮೇಲಾಮೇಲೆ ಬ್ಯಾಟಿಂಗ್‌ ಶೈಲಿಯಲ್ಲಿ ಮಾಡಿಕೊಂಡಿರುವ ಸೋಜಿಗ ಹುಟ್ಟಿಸುವ ಪರಿವರ್ತನೆ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ತರಹದ ಸ್ಟ್ರೈಕ್ ಬೌಲರ್‌ ಅನ್ನೂ ಕಾಡತೊಡಗಿತು.

ಸ್ಮಿತ್ ಕೆಳಗಿನ ಕ್ರಮಾಂಕದಲ್ಲಿ ಮೊದ ಮೊದಲು ಬ್ಯಾಟಿಂಗ್ ಆಡುತ್ತಿದ್ದುದು. ಆಗ ಒಂದು ಇನಿಂಗ್ಸ್‌ನಲ್ಲಿ ಅರ್ಧಶತಕ ಹೊಡೆದ ಮೇಲೆ ಅವರೊಳಗಿನ ಬ್ಯಾಟ್ಸ್‌ಮನ್ ಮೊದಲು ಅನಾವರಣಗೊಂಡದ್ದು. ಆಗ ನಾಯಕರಾಗಿದ್ದ ರಿಕಿ ಪಾಂಟಿಂಗ್ ಈ ಚುರುಕು ಹುಡುಗನ ಬ್ಯಾಟಿಂಗ್‌ಗೆ ಅಗತ್ಯ ಬೆಂಬಲ ಕೊಟ್ಟರು. ಏಕದಿನ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್ ಆಗಿ ಗುರುತಾದ ಮೇಲೆಯೂ ಸ್ಮಿತ್ ತಡಕಾಡಿದರು. ಅವರ ಫುಟ್‌ವರ್ಕ್ ಟೀಕೆಗೆ ಗುರಿಯಾಯಿತು. ಮೊದಲ 22 ಇನಿಂಗ್ಸ್‌ಗಳಲ್ಲಿ ಬರೀ 20ರ ಸರಾಸರಿಯಲ್ಲಿ 380 ರನ್‌ಗಳನ್ನಷ್ಟೇ ಗಳಿಸಿದ್ದು. ಫಾರ್ಮ್ ಕಳೆದುಕೊಂಡಿದ್ದೇ ತಮ್ಮ ದೇಶದ ತಂಡದಿಂದ ಹೊರಗುಳಿಯಬೇಕಾಯಿತು. ಇದೇ ಸ್ಮಿತ್ ಅಹಮ್ಮಿಗೆ ಕೊಡಲಿ ಪೆಟ್ಟು ನೀಡಿತು. ಬ್ಯಾಟಿಂಗ್‌ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೆಣಗಾಡಿದರು. ನೆಟ್ಸ್‌ನಲ್ಲಿ ಬೆವರಿಳಿಸಿದರು.

ಚುಟುಕು ಕ್ರಿಕೆಟ್‌ಗಿಂತ ಟೆಸ್ಟ್‌ನಲ್ಲಿ ಸ್ಮಿತ್ ಹೆಚ್ಚು ಪ್ರಭಾವಿ. 7000 ರನ್‌ಗಳನ್ನು ಅವರಷ್ಟು ವೇಗವಾಗಿ ಬೇರೆ ಯಾವ ಬ್ಯಾಟ್ಸ್‌ಮನ್‌ ಕೂಡ ಸೇರಿಸಿಲ್ಲ. ಇದುವರೆಗೆ 73 ಟೆಸ್ಟ್‌ಗಳಿಂದ 7,227 ರನ್‌ಗಳನ್ನು ಜಮೆಮಾಡಿದ್ದಾರೆ. ಸರಾಸರಿ 62.84. ಏಕದಿನ ಪಂದ್ಯಗಳಲ್ಲಿ ಆ ವೇಗ ಇಲ್ಲದೇಹೋದರೂ 127 ಪಂದ್ಯಗಳಿಂದ 4,371 ರನ್‌ಗಳನ್ನು (ಭಾರತದ ಎದುರಿನ ಮೊದಲ ಎರಡು ಏಕದಿನ ಪಂದ್ಯಗಳೂ ಸೇರಿ) ಕಲೆಹಾಕಿದ್ದಾರೆ. 43.71ರ ಸರಾಸರಿ ಕಳಪೆಯೇನಲ್ಲ. ಟೆಸ್ಟ್‌ನಲ್ಲಿ ಅವರ ಬ್ಯಾಟ್‌ನಿಂದ ಹೊಮ್ಮಿರುವ 26 ಶತಕಗಳು ಕ್ಲಾಸ್‌ಗೆ ಉದಾಹರಣೆ. ಏಕದಿನ ಪಂದ್ಯಗಳ 11 ಶತಕಗಳ ಪೈಕಿ ಅರ್ಧದಷ್ಟು ಭಾರತದ ವಿರುದ್ಧವೇ ಬಂದಿದೆ ಎನ್ನುವುದು ವಿಶೇಷ.

2013–17ರ ಅವಧಿ ಏಕದಿನ ಕ್ರಿಕೆಟ್‌ನಲ್ಲಿ ಸ್ಮಿತ್ ರನ್ ಬರ ನೀಗಿಕೊಂಡ ಪರ್ವ. ಆ ಅವಧಿಯಲ್ಲಿ 8 ಶತಕಗಳೂ ಸೇರಿ 2949 ರನ್‌ಗಳು 50ರ ಸರಾಸರಿಯಲ್ಲಿ ಹರಿದುಬಂದವು. 2018ರಲ್ಲಿ 12 ತಿಂಗಳು ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾದ ನಂತರ ಕೋಪಿಷ್ಟ ಸ್ಮಿತ್ ಬದುಕಿನಲ್ಲಿ ಇನ್ನೊಂದು ಪಾಠ ಶುರುವಾಯಿತು. ಮ್ಯಾಕ್ವೈರ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ ಡೇನಿಯಲ್ ಅವರಿಗೆ ಬದುಕಿನ ಪಾಠ ಮಾಡಿದರು. 2011ರಲ್ಲಿ ಸ್ಮಿತ್ ಹಾಗೂ ಡೇನಿಯೆಲ್ ಡೇಟಿಂಗ್ ಮಾಡುತ್ತಿದ್ದಾರೆ. ಕ್ರಿಕೆಟ್ ಹಾಕುವ ಒತ್ತಡವನ್ನು ಭೌತಿಕವಾಗಿ ಸ್ಮಿತ್ ವ್ಯಕ್ತಪಡಿಸಿದಾಗಲೆಲ್ಲ ಡೇನಿಯಲ್ ಅವರನ್ನು ಸಂತೈಸಿದ್ದಾರೆ. ಬ್ಯಾಟನ್ನು ಎಸೆದಾಗ, ಎತ್ತಿಕೊಂಡು ಮತ್ತೆ ಕೈಗಿತ್ತಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಸ್ಮಿತ್ ಅಭ್ಯಾಸಕ್ಕೆ ಪ್ಯಾಡ್‌ ಕಟ್ಟಿ ನಿಂತಾಗ ಎಷ್ಟೋ ಸಲ ಬೌಲಿಂಗ್ ಮಷೀನ್‌ಗೆ ಡೇನಿಯಲ್ ಖುದ್ದು ಚೆಂಡುಗಳನ್ನು ಹಾಕಿ, ಮನೋಬಲ ತುಂಬಿದ್ದಾರೆ. ‘ನೀನು ಪ್ರತಿಭಾವಂತ. ಚೆನ್ನಾಗಿ ಆಡು’ ಎಂಬ ಅವರ ಮಾತೇ ಎಷ್ಟೋ ಸಲ ಟಾನಿಕ್ ಆಗಿ ಒದಗಿಬಂದಿರುವುದೂ ನಿಜ. ಸ್ಮಿತ್ ಶಾಲೆ ಬಿಟ್ಟವರು. ಡೇನಿಯಲ್ ದೊಡ್ಡ ಆಕಾರದ ಪುಸ್ತಕಗಳನ್ನು ಓದಿದವರು. ಇಬ್ಬರೂ ಸೇರಿ ಕ್ರಿಕೆಟ್ ಮೂಲಕ ಸುದ್ದಿಯಾಗುವುದು ಕೂಡ ಸೋಜಿಗವೇ.

ನೆನಪಿರಲಿ, ಸ್ಮಿತ್ ಈ ಸಲ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) 14 ಪಂದ್ಯಗಳಲ್ಲಿ ಬರೀ 311 ರನ್ ಗಳಿಸಿದ್ದರು. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅವರು ಹೆಚ್ಚೇನೂ ಮಿಂಚಿರಲಿಲ್ಲ. ‘ಚೆಂಡನ್ನು ಅಲ್ಲಿ ಹಾರ್ಡ್ ಆಗಿ ಹೊಡೆಯಲು ಯತ್ನಿಸಿ ಸೋತೆ. ಅದರಿಂದ ಈಗ ತಿದ್ದಿಕೊಂಡಿರುವೆ’ ಎಂದು ಸ್ಮಿತ್ ಭಾರತದ ವಿರುದ್ಧ ಆಡಿದ ಮೇಲೆ ಮೊನ್ನೆ ಹೇಳಿದರು. ಒಬ್ಬ ಆಟಗಾರ ತನ್ನನ್ನು ತಾನು ತಿದ್ದಿಕೊಳ್ಳಬೇಕಿರುವುದು ಹೀಗೆಯೇ ಅಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು