ಸೋಮವಾರ, ಏಪ್ರಿಲ್ 19, 2021
23 °C
ಆಟದಮನೆ

PV Web Exclusive: ನಿರ್ಲಿಪ್ತ ಫಖರ್ ಆಟದ ಪ್ರಭಾವಳಿ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ದಾಖಲೆ ನಿರ್ಮಿಸಿದ ಫಖರ್ ಜಮಾನ್, ಆಮೇಲೆ ಲಯ ತಪ್ಪಿದ್ದರು. ದಕ್ಷಿಣ ಆಫ್ರಿಕಾ ಎದುರು ಅವರು ಎರಡನೇ ಏಕದಿನದ ಪಂದ್ಯದಲ್ಲಿ ಗಳಿಸಿದ 192 ಈ ಹೊತ್ತಿನ ಅತ್ಯಂತ ಪ್ರಬಲವಾದ ಆಟ. ಬೆರಗು, ಆತ್ಮವಿಶ್ವಾಸ, ಬ್ಯಾಕ್‌ಹ್ಯಾಂಡ್‌ನ ಮೋಹಕ ಲಿಫ್ಟ್‌ಗಳ ಅವರ ಆಟದ ಹಿಂದೆ ಹಲವರ ಕಾಣ್ಕೆಗಳು ಅಡಗಿವೆ.

 ***

ಸಚಿನ್ ರಮೇಶ್ ತೆಂಡೂಲ್ಕರ್ 1994ರ ಸೆಪ್ಟೆಂಬರ್ 9ನೇ ತಾರೀಖನ್ನು ಮರೆಯಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್ ಆಡತೊಡಗಿ ಐದು ವಸಂತಗಳು ಸರಿದಿದ್ದ ಸಂದರ್ಭ ಅದು. 78ನೇ ಏಕದಿನ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯನ್ನರ ವಿರುದ್ಧ 130 ಎಸೆತಗಳನ್ನು ಆಡಿ ಆ ದಿನ ಶತಕ ಗಳಿಸಿದರು. ಅದು ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅವರ ಮೊದಲ ಶತಕ. ಆಮೇಲೆ, ನಾವು ಅವರು ನೆಟ್ಟುಹೋದ ದಾಖಲೆಯ ಮೈಲುಗಲ್ಲುಗಳ ಮೇಲೆ ಅಭಿಮಾನಿಗಳು ಕುಳಿತಿದ್ದಾಗಿದೆ. ಟೆಸ್ಟ್‌, ಏಕದಿನ, ಟ್ವೆಂಟಿ20 ಎಲ್ಲ ಮಾದರಿಗಳಲ್ಲಿ ಆಡಿ ಅವರು 27 ಶತಕಗಳನ್ನು ತಪ್ಪಿಸಿಕೊಂಡಿದ್ದಾರೆ ಅರ್ಥಾತ್ 90 ಚಿಲ್ಲರೆ ಗಳಿಸಿದ್ದಾಗ ಅಷ್ಟು ಸಂದರ್ಭಗಳಲ್ಲಿ ಔಟಾಗಿದ್ದಾರೆ. ಅವೆಲ್ಲ ಶತಕಗಳಾಗಿದ್ದಿದ್ದರೆ ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಮೊನ್ನೆ ಪಾಕಿಸ್ತಾನದ ಫಖರ್ ಜಮಾನ್ 192 ರನ್‌ ಗಳಿಸಿದ ಇನಿಂಗ್ಸ್‌ ಒಂದನ್ನು ಕಂಡಾಗ ಸಚಿನ್‌ಗೆ ಇದ್ದ ತೊಂಬತ್ತು ಚಿಲ್ಲರೆಯ ಅಳುಕು ಮೂವತ್ತರ ಈ ಹುಡುಗನಲ್ಲಿ ಕಿಂಚಿತ್ತೂ ಇಲ್ಲವೆನ್ನುವುದು ಸ್ಪಷ್ಟವಾಯಿತು.

ಪಾಕಿಸ್ತಾನದವರಿಗೆ ಈಗ ಮೊದಲಿನಷ್ಟು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಸಿಗುತ್ತಿಲ್ಲ. ಅದರಲ್ಲೂ ಕ್ರಿಕೆಟ್ ಶಕ್ತಿಗಳೆನಿಸಿಕೊಂಡ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಭಾರತದಂತಹ ತಂಡಗಳಿಗೆ ಮುಖಾಮುಖಿಯಾಗುವುದೇ ಅದೃಷ್ಟ ಎನ್ನುವ ಸ್ಥಿತಿ ಇದೆ. ಇಂತಹ ದುರಿತ ಕಾಲದಲ್ಲಿ ದಕ್ಷಿಣ ಆಫ್ರಿಕಾ ಎದುರು ಪಾಕಿಸ್ತಾನದವರು ಆಡುತ್ತಿರುವ ರೀತಿ ನೋಡಿದರೆ ರೋಮಾಂಚನವಾಗದೇ ಇರದು. ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ್ದ ತಂಡ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದವರ ಆತ್ಮವಿಶ್ವಾಸದ ಓಘಕ್ಕೆ ಪೆಟ್ಟು ಕೊಟ್ಟಿದ್ದು ಕಣ್ಣಿಗೆ ಕಟ್ಟಿತು. ಆ ಪಂದ್ಯದ ಬಹುತೇಕ ರೋಮಾಂಚನಗಳ ರೂವಾರಿ ಫಖರ್ ಜಮಾನ್. 192 ರನ್ ಗಳಿಸಿ, ಅವರು ಕ್ವಿಂಟನ್ ಡಿಕಾಕ್ ಮಾಡಿದ ಕು‘ತಂತ್ರ’ದಿಂದ (ಕ್ರಿಕೆಟ್‌ನಲ್ಲಿ ಈ ರೀತಿ ದಿಕ್ಕು ತಪ್ಪಿಸಿ, ಔಟ್‌ ಮಾಡುವುದು ಕೂಡ ಈಗ ಕಾರ್ಯತಂತ್ರವಾಗಿಬಿಟ್ಟಿದೆ. ಇನ್ನೊಬ್ಬ ಬ್ಯಾಟ್ಸ್‌ಮನ್ ಓಡುತ್ತಿದ್ದ ತುದಿಯತ್ತ ಚೆಂಡು ಎಸೆಯುವಂತೆ ಕೂಗಿಹೇಳಿ, ಇಶಾರೆಯ ಮೂಲಕ ತನ್ನತ್ತಲೇ ಥ್ರೋ ಬರುವಂತೆ ಮಾಡಿಕೊಂಡು ಅವರು ರನ್‌ಔಟ್ ಮಾಡಿದರು.) ಔಟ್ ಆದರು. ಅವರು ಔಟ್ ಆದ ಬಗೆ ಚರ್ಚೆಗೆ ತೆರೆದುಕೊಂಡಿತಾದರೂ, ಈ ಸಜ್ಜನ ಕ್ರಿಕೆಟಿಗ ತುಟಿ ಪಿಟಿಕ್ಕೆನ್ನಲಿಲ್ಲ.


ಜಮಾನ್ ಹೊಡೆತದ ವೈಖರಿ

ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದ ಒಂದು ವರ್ಷದ ನಂತರ ಹುಟ್ಟಿದ್ದು ಫಖರ್ ಜಮಾನ್. ಚಿಕ್ಕಂದಿನಿಂದಲೇ ಕ್ರಿಕೆಟ್ ಹುಚ್ಚು ಇತ್ತು. ಅದನ್ನು ಕಂಡ ಅವರಪ್ಪ ಮಗ ಬರೀ ಆಡಿಕೊಂಡು ಹಾಳಾಗಬಾರದು ಎಂದು ಬಹುತೇಕ ತಂದೆಯರಂತೆ ಓದುವುದಕ್ಕೇ ಆದ್ಯತೆ ನೀಡಲು ತಾಕೀತು ಮಾಡಿದರು. ಯೂನಿಸ್ ಖಾನ್ ತವರೂರಾದ ಮರ್ದಾನ್‌ನಲ್ಲಿ ಹುಟ್ಟಿದ ಫಖರ್, ಆಮೇಲೆ ಕರಾಚಿಗೆ ಮೆಟ್ರಿಕ್ ಕಲಿಯಲು ಹೋದದ್ದೂ ಅಪ್ಪನ ಬಯಕೆ ಈಡೇರಿಸಲೆಂದೇ. ಕ್ರಿಕೆಟ್ ಮಹತ್ವಾಕಾಂಕ್ಷೆಯನ್ನು ಒಡಲಲ್ಲಿ ಇಟ್ಟುಕೊಂಡೇ ಅವರು ನೌಕಾಪಡೆಗೆ ಸೇರಿದರು. ಅಲ್ಲಿ ಆಜಮ್ ಖಾನ್ ಎಂಬ ಕ್ರಿಕೆಟ್ ತರಬೇತುದಾರರಿಗೆ ಈ ಹುಡುಗನೊಳಗಿನ ಹಸಿವು ಕಾಣಿಸಿತು. ಬ್ಯಾಕ್‌ಹ್ಯಾಂಡ್ ಲಿಫ್ಟ್ ಹೊಡೆತಗಳಲ್ಲಿ ಹಾಗೂ ಚೆಂಡಿನ ಟೈಮಿಂಗ್‌ನಲ್ಲಿ ಫಖರ್ ಅಪ್ರತಿಮ ಎನಿಸಿಕೊಂಡಿದ್ದರು. ಆ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ಆಜಮ್ ಖಾನ್. ಬಹಾದುರ್‌ ಎಂಬ ಸ್ಥಳದಲ್ಲಿ ಪಾಕಿಸ್ತಾನ್ ನೇವಿ ಕಾಲೇಜಿನ ವಿದ್ಯಾರ್ಥಿಯಾಗಿ ಅಪ್ಪನ ಬಯಕೆಯನ್ನು ತೋರಿಸುತ್ತಲೇ ತನ್ನೊಳಗಿನ ಕ್ರಿಕೆಟಿಗನನ್ನು ಜೀವಂತವಾಗಿ ಇಟ್ಟ ಹುಡುಗ 2012ರಲ್ಲಿ ‘ಇಂಟರ್‌ನ್ಯಾಷನಲ್ ಡಿಫೆನ್ಸ್‌ ಕ್ರಿಕೆಟ್ ಚಾಲೆಂಜ್‌ ಕಪ್‌’ನಲ್ಲಿ ಆಡುವ ಅವಕಾಶ ಪಡೆದರು. ಆಸ್ಟ್ರೇಲಿಯಾದಲ್ಲಿ ನಡೆದ ಆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ನೌಕಾಪಡೆಯಲ್ಲಿದ್ದುಕೊಂಡು ಆಡುವುದಕ್ಕೂ, ವೃತ್ತಿಪರ ಕ್ರಿಕೆಟಿಗನಾಗುವುದಕ್ಕೂ ಇರುವ ವ್ಯತ್ಯಾಸವನ್ನು ಆಜಮ್ ಖಾನ್ ಮನದಟ್ಟು ಮಾಡಿಸಿದರು. ಅದರಿಂದ ಆಲೋಚನೆ ಮಾಡಿ, ದೀರ್ಘಾವಧಿ ಹೊಯ್ದಾಟಕ್ಕೆ ಬಿದ್ದ ನಂತರ ಫಖರ್ ಜಮಾನ್ ನೌಕಾಪಡೆಯನ್ನು ಬಿಟ್ಟು ವೃತ್ತಿಪರ ಕ್ರಿಕೆಟಿಗನಾಗಲು ನಿರ್ಧರಿಸಿದರು. ಅವರೇ ಹೇಳಿಕೊಂಡಂತೆ, ಇದು ಬದುಕಿನಲ್ಲಿ ತೆಗೆದುಕೊಂಡ ಬಹಳ ಕಠಿಣ ನಿರ್ಧಾರ.

ಕರಾಚಿಯ ಸ್ಥಳೀಯ ತಂಡಗಳ ಪರವಾಗಿ ಆಡುತ್ತಾ 2016ರ ಪಾಕಿಸ್ತಾನ್ ಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದಾಗ ಆಯ್ಕೆದಾರರ ಕಣ್ಣು ಈ ಪ್ರತಿಭೆಯತ್ತ ಹೊರಳಿತು. 2016–17ನೇ ಸಾಲಿನ ಖೈದ್–ಎ–ಆಜಮ್ ಟ್ರೋಫಿಯಲ್ಲಿ ಆಡಿದ ರೀತಿ ಕಂಡು ‘ಲಾಹೋರ್ ಕ್ವಾಲ್ಯಾಂಡರ್ಸ್’ ತಂಡ ಅವರನ್ನು ಆಯ್ಕೆ ಮಾಡಿಕೊಂಡಿತು. 2017ರಲ್ಲಿ ಪಾಕಿಸ್ತಾನ್ ಸೂಪರ್‌ಲೀಗ್‌ನಲ್ಲಿ ಆಡುವ ಅವಕಾಶ ಸಿಕ್ಕಾಗ ನ್ಯೂಜಿಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದ ಬ್ರೆಂಡನ್ ಮೆಕ್ಲಮ್ ಕೆಲವು ಸಲಹೆಗಳನ್ನು ನೀಡಿದರು. ಅವರ ಪಾಠ ಕಣ್ಣಿಗೊತ್ತಿಕೊಂಡು ಆಡಿದ ಫಖರ್ ಆಟವನ್ನು ಪಾಕಿಸ್ತಾನ ತಂಡದ ಕೋಚ್ ಆಗಿದ್ದ ಮಿಕ್ಕಿ ಆರ್ಥರ್ ಕೂಡ ಗಮನಿಸಿದರು. ತರಬೇತಿ ಶಿಬಿರದಲ್ಲಿ ಬ್ಯಾಂಕ್‌ಹ್ಯಾಂಡ್ ಲಿಫ್ಟ್‌ಗಳು ಹಾಗೂ ಟೈಮಿಂಗ್ ಕಂಡೇ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವಂತೆ ಶಿಫಾರಸು ಮಾಡಿದರು.

ವೆಸ್ಟ್‌ಇಂಡೀಸ್ ವಿರುದ್ಧ 2017ರಲ್ಲಿ ಏಕದಿನ ಪಂದ್ಯಗಳ ಸರಣಿಗೆ ಫಖರ್ ಆಯ್ಕೆಯಾದಾಗ ಅವರ ವಯಸ್ಸು 26 ದಾಟಿತ್ತು. ಐದು ವರ್ಷ ಅವರು ದೇಸಿ ಕ್ರಿಕೆಟ್ ಆಡುತ್ತಾ ತಮ್ಮ ಪಾಡಿಗೆ ತಾವು ಇದ್ದಿದ್ದನ್ನು ಅಲ್ಲಿ ಯಾರೂ ಗಮನಿಸಿಯೇ ಇರಲಿಲ್ಲ. ಭಾರತದಲ್ಲಾಗಿದ್ದರೆ, ಅಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡುವವನನ್ನು ಹಿಡಿದು ತಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಕ್ಕಾದರೂ ಸೇರಿಸಿಕೊಳ್ಳುತ್ತಿದ್ದರು.

2017ರ ಜೂನ್‌ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳನ್ನು ನೆನಪಿಟ್ಟುಕೊಳ್ಳಬೇಕು. ಭಾರತದ ವಿರುದ್ಧ ಫೈನಲ್‌ನಲ್ಲಿ ಪಾಕಿಸ್ತಾನ. ಬರೀ 3 ರನ್ ಗಳಿಸಿದ್ದಾಗ ಫಖರ್ ಜಮಾನ್ ಬ್ಯಾಟ್‌ನ ಅಂಚಿಗೆ ತಾಗಿದ್ದ ಚೆಂಡು ಕ್ಯಾಚ್ ಆಗಿತ್ತು. ಆದರೆ, ನೋಬಾಲ್ ಆಗಿದ್ದರಿಂದ ಅವರಿಗೆ ಜೀವದಾನ. ಆ ಪಂದ್ಯದಲ್ಲಿ ಮುಂದೆ ಶತಕ ಗಳಿಸಿದ ಫಖರ್, ತಮ್ಮ ತಂಡ 180 ರನ್‌ಗಳಿಂದ ಪಂದ್ಯ ಗೆಲ್ಲಲು ಕಾರಣರಾದರು. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಯಾವುದೇ ಟೂರ್ನಿಯ ಫೈನಲ್‌ನಲ್ಲಿ ಅದುವರೆಗೆ ಪಾಕಿಸ್ತಾನದ ಯಾವ ಬ್ಯಾಟ್ಸ್‌ಮನ್‌ ಕೂಡ ಶತಕ ಹೊಡೆದಿರಲಿಲ್ಲ.

ಏಕದಿನ ಪಂದ್ಯಗಳ ಬರೀ 18 ಇನಿಂಗ್ಸ್‌ಗಳಲ್ಲಿ 1000 ರನ್‌ಗಳನ್ನು ದಾಖಲಿಸಿ, ವಿಶ್ವದಲ್ಲೇ ಅತಿ ವೇಗವಾಗಿ ಈ ಗುರಿ ತಲುಪಿದ ಆಟಗಾರ ಎನಿಸಿಕೊಂಡವರು ಫಖರ್ ಜಮಾನ್. ಅವರದ್ದೇ ದೇಶದ ಇಮಾಮ್ ಉಲ್ ಹಕ್ ಇನ್ನೊಂದು ಹೆಚ್ಚು ಇನಿಂಗ್ಸ್ ಆಡಿ ಈ ಗುರಿಯನ್ನು ಮಟ್ಟಿದ್ದರು. ಪಾಕಿಸ್ತಾನದ ಯುವ ಕ್ರಿಕೆಟಿಗರ ರನ್‌ಗಳ ಹಸಿವು ಹೇಗಿದೆ ಎನ್ನುವುದಕ್ಕೆ ಈ ದಾಖಲೆಗಳು ಉದಾಹರಣೆಗಳಂತೆ ಕಾಣುತ್ತವೆ. ವಿಂಡೀಸ್‌ನ ದಿಗ್ಗಜ ವಿವಿಯನ್ ರಿಚರ್ಡ್ಸ್‌ ಆ ಕಾಲದಲ್ಲಿ 22 ಏಕದಿನ ಪಂದ್ಯಗಳಿಂದ 1000 ರನ್‌ಗಳನ್ನು ವೇಗವಾಗಿ ಗಳಿಸಿದ್ದೇ 1980ರಿಂದ 2018ರ ವರೆಗೆ ದಾಖಲೆಯಾಗಿ ಉಳಿದಿತ್ತು. ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಹೊಡೆದ ದಾಖಲೆ ಇರುವುದು ಯಾರ ಹೆಸರಲ್ಲಿ ಗೊತ್ತೆ? ರೋಹಿತ್ ಶರ್ಮ ಶ್ರೀಲಂಕಾ ವಿರುದ್ಧ ಕೋಲ್ಕತ್ತದಲ್ಲಿ 264 ರನ್ ಗಳಿಸಿದ್ದರಲ್ಲ,ಆ ಆಟದಲ್ಲಿ 33 ಬೌಂಡರಿಗಳನ್ನು ಹೊಡೆದಿದ್ದರು. ಆ ನಂತರ ಬೇರೆ ಬೇರೆ ಪಂದ್ಯಗಳಲ್ಲಿ ಸಚಿನ್ ಹಾಗೂ ಸೆಹ್ವಾಗ್ ತಲಾ 25 ಬೌಂಡರಿಗಳನ್ನು ಹೊಡೆದದ್ದೇ ಎರಡನೇ ದಾಖಲೆ. ಫಖರ್ ಜಮಾನ್ ಜಿಂಬಾಬ್ವೆ ವಿರುದ್ಧ ಔಟಾಗದೆ 210 ರನ್ ಹೊಡೆದಾಗ 24 ಬೌಂಡರಿಗಳನ್ನು ಗಳಿಸಿದರು. ಡೇವಿಡ್ ವಾರ್ನರ್‌ ಹೊಡೆದಿದ್ದ ಬೌಂಡರಿಗಳ ಸಂಖ್ಯೆಗೆ ಇದು ಸರಿಸಮನಾದದ್ದು.


ಕ್ಷಿಂಟನ್‌ ಡಿ ಕಾಕ್ ಅವರಿಂದ ರನ್‌ಔಟ್ ಆದ ರೀತಿ

ದಕ್ಷಿಣ ಆಫ್ರಿಕಾ ಎದುರು ಎರಡನೇ ಏಕದಿನ ಪಂದ್ಯದಲ್ಲಿ ನೋಕಿಯೆ ತರಹದ ಬೌಲರ್‌ನ ಪರಮ ವೇಗದ ಎಸೆತಗಳಿಗೂ ಕಂಗಾಲಾಗದೆ, ಗಟ್ಟಿಯಾಗಿ ನಿಂತು ಒಟ್ಟು 10 ಸಿಕ್ಸರ್‌ಗಳನ್ನು ಫಖರ್ ಸಿಡಿಸಿದರು. ಪಾಕಿಸ್ತಾನದ ಶಾಹಿದ್ ಆಫ್ರಿದಿ ಮಾತ್ರ ಒಂದು ಪಂದ್ಯದಲ್ಲಿ 11 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಅವರ ನಂತರದ ದಾಳಿಕೋರ ಆಟ ಬಂದಿದ್ದೇ ಈಗ. ಗೆಲ್ಲಲು ಇನ್ನೂ ನೂರೈವತ್ತಕ್ಕೂ ಹೆಚ್ಚು ರನ್‌ಗಳು ಬೇಕಿರುವಾಗ, ಬಾಲಂಗೋಚಿಯ ಮೂವರು ಬ್ಯಾಟ್ಸ್‌ಮನ್‌ಗಳಷ್ಟೇ ಜತೆಗಿರುವಾಗ ಅಂಥದೊಂದು ಆತ್ಮವಿಶ್ವಾಸದ ಆಟ ತೋರುವುದು ಸವಾಲು. ಅದಕ್ಕೆ ಫಖರ್ ಎದೆಗೊಟ್ಟು, 200 ರನ್‌ಗಳ ವೈಯಕ್ತಿಕ ಮೊತ್ತಕ್ಕೆ 8 ರನ್‌ ಹಿಂದೆ ಇರುವಾಗಲಷ್ಟೇ ರನ್‌ಔಟ್ ಆದರು. ತಮ್ಮ ತಂಡ 17 ರನ್‌ಗಳಿಂದ ಪಂದ್ಯ ಸೋತಿತಾದರೂ ಎದುರಾಳಿಗಳಲ್ಲೂ ಒಂದು ಮೌನ ಆವರಿಸುವಂತೆ ಅವರು ಮಾಡಿಹೋದರು.

ಫಖರ್ ಜಮಾನ್ ಇದುವರೆಗೆ ಆಡಲು ಸಾಧ್ಯವಾಗಿರುವುದು ಬರೀ ಮೂರು ಟೆಸ್ಟ್‌ ಪಂದ್ಯಗಳನ್ನು. ಅವುಗಳಲ್ಲೇ 94 ರನ್ ಅವರ ಗರಿಷ್ಠ ಮೊತ್ತ. 49 ಏಕದಿನ ಪಂದ್ಯಗಳಲ್ಲಿ 48.02ರ ಸರಾಸರಿಯಲ್ಲಿ 2161 ರನ್‌ಗಳನ್ನು ಕಲೆಹಾಕಿದ್ದಾರೆ. ಅಂತರರಾಷ್ಟ್ರೀಯ ಟ್ವೆಂಟಿ20 ಪಂದ್ಯಗಳಲ್ಲೂ 22.05ರ ಸರಾಸರಿಯಲ್ಲಿ ರನ್ ಗಳಿಸಿರುವ ಅವರ ಬ್ಯಾಟ್ಸ್‌ಮನ್‌ಷಿಪ್ ಆಗೀಗ ನಿಕಷಕ್ಕೆ ಒಳಗಾಗಿದೆ. 1000 ರನ್‌ಗಳನ್ನು ಪಟಪಟನೆ ಗಳಿಸಿದ ನಂತರ ಅವರು ಪದೇ ಪದೇ ‘ಇನ್‌ಸೈಡ್ ಎಡ್ಜ್’ ಮಾಡಿಕೊಂಡು ಔಟಾಗಿ, ಫಾರ್ಮ್ ಕಳೆದುಕೊಂಡಿದ್ದರು. ಈಗ ಅದನ್ನು ಕಂಡುಕೊಂಡಿರುವುದನ್ನು ನೋಡಿದರೆ, ಸಚಿನ್ ತೆಂಡೂಲ್ಕರ್ ಕೂಡ ಶ್ಲಾಘಿಸಬೇಕು. ಯಾಕೆಂದರೆ, ಬಾಲ್ಯದಲ್ಲಿ ಸಚಿನ್ ಆಟ ಮೆಚ್ಚಿಕೊಂಡೇ ಫಖರ್ ಕೂಡ ಬೆಳೆದರು. ‘ಫಖರ್’ ಎಂದರೆ ಅಭಿಮಾನ ಎಂದರ್ಥ. ಈ ಪ್ರತಿಭೆಯ ಕ್ರಿಕೆಟ್ ಆತ್ಮಾಭಿಮಾನದಿಂದ ಅದಕ್ಕೆ ಅರ್ಥವೂ ಸಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು