ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಪಾಂಡ್ಯ ಈಗ ‘ಫಿನಿಷರ್‌’

Last Updated 8 ಡಿಸೆಂಬರ್ 2020, 0:30 IST
ಅಕ್ಷರ ಗಾತ್ರ
ADVERTISEMENT
""
""
""

ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿಯ ನಂತರ ಭಾರತದ ಕ್ರಿಕೆಟ್‌ ಪ್ರೇಮಿಗಳನ್ನು ಕಾಡುತ್ತಿದ್ದ ಬಹುದೊಡ್ಡ ಕೊರಗೊಂದು ದೂರವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಧೋನಿ, ವಿಶ್ವಶ್ರೇಷ್ಠ ನಾಯಕ, ಅತ್ಯುತ್ತಮ ವಿಕೆಟ್‌ ಕೀಪರ್‌, ಜೊತೆಗೆ ‘ಗ್ರೇಟ್‌ ಫಿನಿಷರ್‌’ ಎಂಬ ಹಣೆಪಟ್ಟಿಯನ್ನೂ ಹೊಂದಿದ್ದವರು. ಅಂತಿಮ ಓವರ್‌ಗಳಲ್ಲಿ ಅಬ್ಬರದ ಆಟ ಆಡಿ ಭಾರತಕ್ಕೆ ಗೆಲುವಿನ ಸಿಹಿ ಉಣಬಡಿಸುತ್ತಿದ್ದವರು. ರಾಂಚಿಯ ಈ ದಿಗ್ಗಜ ಆಟಗಾರ ವರ್ಷದ ಹಿಂದೆ ಕ್ರಿಕೆಟ್‌ಗೆ ‘ಗುಡ್‌ ಬೈ’ ಹೇಳಿದಾಗ ಅದೊಂದು ಪ್ರಶ್ನೆ ಅಭಿಮಾನಿಗಳನ್ನು ಬಹುವಾಗಿ ಕಾಡಿತ್ತು. ‘ಫಿನಿಷರ್‌’ ಆಗಿ ಧೋನಿಯ ಜಾಗ ತುಂಬುವವರು ಯಾರು ಅನ್ನೋದೇ ಆ ಪ್ರಶ್ನೆ.

ಧೋನಿಯ ವಾರಸುದಾರನನ್ನು ಹುಡುಕುವುದು ತಂಡದ ಆಡಳಿತಕ್ಕೂ ದೊಡ್ಡ ತಲೆಬಿಸಿಯಾಗಿತ್ತು. ಕೆ.ಎಲ್.ರಾಹುಲ್‌, ದಿನೇಶ್‌ ಕಾರ್ತಿಕ್‌, ಕೇದಾರ್‌ ಜಾಧವ್‌ ಅವರಂತಹ ಅನುಭವಿಗಳು, ರಿಷಭ್‌ ಪಂತ್‌, ವಿಜಯ್‌ ಶಂಕರ್‌, ವಾಷಿಂಗ್ಟನ್‌ ಸುಂದರ್‌, ಶಿವಂ ದುಬೆ ಅವರಂತಹ ಯುವಕರನ್ನು ತಂದು ಆ ಜಾಗಕ್ಕೆ ಕೂರಿಸಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಕೊನೆಗೆ ತಂಡದ ಆಡಳಿತದ ಕಣ್ಣು ಹೊರಳಿದ್ದು ಹಾರ್ದಿಕ್‌ ಪಾಂಡ್ಯ ಅವರತ್ತ.

ಬರೋಡಾದ ಈ ಪ್ರತಿಭೆ ಶ್ರೇಷ್ಠ ಆಲ್‌ರೌಂಡರ್‌ ಆಗಿ ಗುರ್ತಿಸಿಕೊಂಡವರು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮೋಡಿ ಮಾಡುತ್ತಿದ್ದ ದಿನಗಳಲ್ಲಿ ಅವರನ್ನು ಕಪಿಲ್‌ ದೇವ್‌ ಅವರ ಪಡಿಯಚ್ಚು ಎಂದೇ ಬಣ್ಣಿಸಿದ್ದು ಉಂಟು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅವರನ್ನು ಬೆನ್ನು ನೋವು (2018ರ ಏಷ್ಯಾಕಪ್‌ ವೇಳೆ) ಬಾಧಿಸಿತ್ತು. ಹೀಗಾಗಿ ಕೆಲ ತಿಂಗಳು ಕ್ರಿಕೆಟ್‌ ಅಂಗಳದಿಂದ ದೂರ ಉಳಿದಿದ್ದರು. ಇದರಿಂದ ಗುಣಮುಖರಾದ ನಂತರ ಅವರು ಕಣಕ್ಕಿಳಿದಿದ್ದು 2019ರ ಐಪಿಎಲ್‌ನಲ್ಲಿ. ಆ ಲೀಗ್‌ನಲ್ಲಿ ಮಿಂಚಿದ್ದ ಅವರಿಗೆ ಅದೇ ವರ್ಷ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಲಭಿಸಿತ್ತು. ವಿಶ್ವಕಪ್‌ನಲ್ಲಿ ಒಂಬತ್ತು ಪಂದ್ಯಗಳಿಂದ 226 ರನ್‌ ಕಲೆಹಾಕಿದ್ದ ಹಾರ್ದಿಕ್‌, 10 ವಿಕೆಟ್‌ಗಳನ್ನೂ ಬುಟ್ಟಿಗೆ ಹಾಕಿಕೊಂಡಿದ್ದರು.

ನಂತರ ಬೆನ್ನು ನೋವು ಮತ್ತೆ ಉಲ್ಬಣಿಸಿತ್ತು. ಹೀಗಾಗಿ ಅಕ್ಟೋಬರ್‌ನಲ್ಲಿ ಲಂಡನ್‌ಗೆ ಪ್ರಯಾಣ ಕೈಗೊಂಡಿದ್ದ ಅವರು ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ಅವರು ‘ಮ್ಯಾಚ್‌ ಫಿಟ್‌ನೆಸ್‌’ ಪಡೆದುಕೊಳ್ಳಲು ಸಾಕಷ್ಟು ಶ್ರಮಿಸಿದ್ದರು. ಕೊರೊನಾ ವೈರಾಣುವಿನ ಸೋಂಕು ಪಸರಿಸದಂತೆ ತಡೆಯುವ ಸಲುವಾಗಿ ಸರ್ಕಾರ ಜಾರಿಗೊಳಿಸಿದ್ದ ಲಾಕ್‌ಡೌನ್‌ ಅವಧಿಯಲ್ಲಿ ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡಿದ್ದರು.

ಅರಬ್ಬರ ನಾಡಿನಲ್ಲಿ ನಡೆದಿದ್ದ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಕಣಕ್ಕಿಳಿದಿದ್ದ ಹಾರ್ದಿಕ್‌, ಬೌಲಿಂಗ್‌ ಬಿಟ್ಟು ಬ್ಯಾಟಿಂಗ್‌ನತ್ತಲೇ ಚಿತ್ತ ಹರಿಸಿದ್ದರು.

ವಿಶ್ವಕಪ್‌ ಕಲಿಸಿದ ಪಾಠ..

ಹೋದ ವರ್ಷ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್‌ ವಿರುದ್ಧ ಪರಾಭವಗೊಂಡಿದ್ದನ್ನು ಯಾರೂ ಮರೆತಿರಲಿಕ್ಕಿಲ್ಲ. ಅದು ಅರಗಿಸಿಕೊಳ್ಳಲಾಗದ ಸೋಲು.

240 ರನ್‌ಗಳ ಗುರಿ ಬೆನ್ನಟ್ಟಿದ್ದ ವಿರಾಟ್‌ ಕೊಹ್ಲಿ ಬಳಗವು 71ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಪಾಂಡ್ಯ ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಧೋನಿ ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಹಾಗಾಗಲಿಲ್ಲ.

62 ಎಸೆತಗಳಲ್ಲಿ 32 ರನ್‌ ಗಳಿಸಿದ್ದ ಹಾರ್ದಿಕ್‌, 31ನೇ ಓವರ್‌ನಲ್ಲೇ ಪೆವಿಲಿಯನ್‌ ಸೇರಿ ಬಿಟ್ಟಿದ್ದರು. ಅದಕ್ಕಾಗಿ ಸಾಕಷ್ಟು ಟೀಕೆಗಳನ್ನೂ ಎದುರಿಸಿದ್ದರು. ಆ ಟೀಕೆಗಳಿಂದ ಅವರೀಗ ಪಾಠ ಕಲಿತಿದ್ದಾರೆ. ‘ಫಿನಿಷರ್‌’ಗೆ ಬೇಕಿರುವ ಸಂಯಮವನ್ನು ಮೈಗೂಡಿಸಿಕೊಂಡಿದ್ದಾರೆ. ಅವರ ಆಟದಲ್ಲಿ ಪ್ರಬುದ್ಧತೆಯೂ ಎದ್ದು ಕಾಣುತ್ತಿದೆ. ಕಾಂಗರೂ ನಾಡಿನಲ್ಲಿ ನಡೆಯುತ್ತಿರುವ ಕ್ರಿಕೆಟ್‌ ಸರಣಿಗಳಲ್ಲಿ ಅವರಾಡಿದ ರೀತಿ ಇದನ್ನು ನಿರೂಪಿಸುವಂತಿದೆ.

ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅವರು ಮೊದಲ ಏಕದಿನ ಹಣಾಹಣಿಯಲ್ಲಿ 76 ಎಸೆತಗಳಲ್ಲಿ 90 ರನ್‌ ಬಾರಿಸಿದ್ದರು. ಎರಡನೇ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ ಸಿಡಿದದ್ದು 28ರನ್‌. ಅವರು ‘ಬೆಸ್ಟ್‌ ಫಿನಿಷರ್‌’ ಆಗಿ ರೂಪುಗೊಳ್ಳುತ್ತಿರುವುದಕ್ಕೆ ಉದಾಹರಣೆಯಂತಿದ್ದದ್ದು ಮೂರನೇ ಏಕದಿನ ಪಂದ್ಯ.

ಆ ಹೋರಾಟದ 26ನೇ ಓವರ್‌ನ ಮೂರನೇ ಎಸೆತದಲ್ಲಿ ಕೆ.ಎಲ್‌.ರಾಹುಲ್‌ ಔಟಾಗಿದ್ದರು. ಆಗ ಕ್ರೀಸ್‌ಗೆ ಬಂದಿದ್ದ ಪಾಂಡ್ಯ, ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡಿದ್ದರು. 50ನೇ ಓವರ್‌ವರೆಗೂ ಬ್ಯಾಟಿಂಗ್‌ ಮಾಡಿದ್ದ ಅವರು ಕೊಹ್ಲಿ ಹಾಗೂ ರವೀಂದ್ರ ಜಡೇಜ ಅವರೊಂದಿಗೆ ಅಮೋಘ ಇನಿಂಗ್ಸ್‌ ಕಟ್ಟಿದ್ದರು. 76 ಎಸೆತಗಳಲ್ಲಿ ಅಜೇಯ 92 ರನ್‌ ಬಾರಿಸಿದ್ದ ಅವರಿಗೆ ‘ಪಂದ್ಯಶ್ರೇಷ್ಠ’ ಗೌರವವೂ ಒಲಿದಿತ್ತು.

ಆಸ್ಟ್ರೇಲಿಯಾ ಎದುರಿನ ಎರಡನೇ ಟ್ವೆಂಟಿ–20 ಪಂದ್ಯದಲ್ಲೂ ಪಾಂಡ್ಯ ಪರಾಕ್ರಮ ಮೆರೆದಿದ್ದರು. ಆತಿಥೇಯ ಆಟಗಾರರ ‘ಸ್ಲೆಡ್ಜಿಂಗ್‌’ನಿಂದ ಅವರು ವಿಚಲಿತರಾಗಲಿಲ್ಲ. ವೇಗಿಗಳ ಬೌನ್ಸರ್‌ ಹಾಗೂ ಯಾರ್ಕರ್‌ಗಳಿಗೂ ಬಗ್ಗಲಿಲ್ಲ. ಪ್ರತಿ ಎಸೆತವನ್ನೂ ಜಾಗರೂಕತೆಯಿಂದಲೇ ಎದುರಿಸಿದ ಅವರು ಕೊಹ್ಲಿ ಪಡೆಗೆ ಸ್ಮರಣೀಯ ಗೆಲುವು ತಂದುಕೊಟ್ಟರು. ಈ ಪಂದ್ಯದಲ್ಲಿ ಪಾಂಡ್ಯ ಆಟ ನೋಡಿದವರೆಲ್ಲಾ ಅವರನ್ನು ‘ಫಿನಿಷರ್‌’ ಎಂದು ಬಣ್ಣಿಸುತ್ತಿದ್ದಾರೆ. ಈ ಖುಷಿಯಲ್ಲಿ ಅವರು ಮೈಮರೆಯದೆ ಮುಂದಿನ ಪಂದ್ಯಗಳಲ್ಲೂ ದಿಟ್ಟ ಆಟ ಆಡಿ ಅಭಿಮಾನಿಗಳು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಅವರು 2021 ಮತ್ತು 2022ರ ಟ್ವೆಂಟಿ–20 ವಿಶ್ವಕಪ್‌ಗಳಲ್ಲಿ ಭಾರತದ ಪಾಲಿನ ‘ಟ್ರಂಪ್‌ ಕಾರ್ಡ್‌’ ಆಗಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT