ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಡ್ಯೂಕ್ಸ್‌ ಬಾಲ್ ಲೀಲೆ

ಆಟದಮನೆ
Last Updated 23 ಜೂನ್ 2021, 19:30 IST
ಅಕ್ಷರ ಗಾತ್ರ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಡ್ಯೂಕ್ಸ್‌ ಚೆಂಡಿನ ಮೇಲೆ ವೇಗಿಗಳಿಗೆ ಮೋಹ ಮೂಡತೊಡಗಿದೆ. ಅದರಲ್ಲಿ ಸಾಧ್ಯವಿರುವ ಸ್ವಿಂಗ್‌ ಬೌಲರ್‌ಗಳಿಗೆ ಆಪ್ಯಾಯಮಾನ. ದೇಸಿ ಎಸ್‌ಜಿ ಚೆಂಡಿನ ಗುಣಮಟ್ಟ ಮೊದಲಿನಂತೆ ಇಲ್ಲ ಎನ್ನುವ ಅಪಸ್ವರವೂ ಕೇಳಿಬರುತ್ತಿದೆ. ಟೆಸ್ಟ್‌ ಕ್ರಿಕೆಟ್‌ ಚೆಂಡುಗಳ ನಡುವಿನ ವ್ಯತ್ಯಾಸವಾದರೂ ಏನು? ಇಲ್ಲಿ ಓದಿ...

‘ಎಸ್‌ಜಿ ಕಂಪನಿಯ ಬಾಲ್‌ನ ಸೀಮ್ 60 ಓವರ್‌ಗಳಾಗುವಷ್ಟರಲ್ಲೇ ಪೂರ್ತಿ ಹಾಳಾಗಿತ್ತು’– ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ ಇದೇ ವರ್ಷ ಫೆಬ್ರುವರಿಯಲ್ಲಿ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆದಾಗ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೀಗೆ ಪ್ರತಿಕ್ರಿಯಿಸಿದ್ದರು. ಪಂದ್ಯದಲ್ಲಿ ಭಾರತ 227 ರನ್‌ಗಳಿಂದ ಸೋಲುಂಡಿತು.

ಸ್ಯಾನ್ಸ್‌ಪರೇಲಿ ಗ್ರೀನ್‌ಲ್ಯಾಂಡ್ಸ್‌ ಎಂಬ ಕಂಪನಿಯ ಸಂಕ್ಷಿಪ್ತ ರೂಪ ಎಸ್‌ಜಿ. ಕೇದಾರನಾಥ್, ದ್ವಾರಕಾನಾಥ್‌ ಆನಂದ್ ಎಂಬ ಸಹೋದರರು 1931ರಲ್ಲಿ ಸ್ಥಾಪಿಸಿದ ಕಂಪನಿ ಇದು. ಆಗ ಸ್ಯಾನ್ಸ್‌ಪರೇಲಿ ಎಂಬ ಹೆಸರಷ್ಟೆ ಇತ್ತು. 1940ರಲ್ಲಿ ರಫ್ತು ಮಾಡುವ ಉದ್ದೇಶದಿಂದ ಗ್ರೀನ್‌ಲ್ಯಾಂಡ್ಸ್‌ ಎಂಬ ಹೆಸರಿನ ಅಂಗಸಂಸ್ಥೆ ತೇಲಿತು. ಮೀರತ್‌ನಲ್ಲಿರುವ ಈ ಕಂಪನಿ 1950ರಿಂದ ಕ್ರಿಕೆಟ್‌ ಚೆಂಡುಗಳನ್ನು ತಯಾರಿಸುತ್ತಿದೆ. 1994ರಿಂದ ಭಾರತ ತನ್ನ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡಲು ಈ ಚೆಂಡುಗಳನ್ನು ಬಳಸುತ್ತಾ ಬಂದಿದೆ. ಕೈಯಿಂದ ಹೊಲಿಗೆ ಹಾಕಿದ, ಆರು ಸ್ತರಗಳಿರುವ ಈ ಚೆಂಡಿನ ದೇಸಿ ಪರಂಪರೆ ದೊಡ್ಡದು. ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಗಳಲ್ಲಿಯೂ ಎಸ್‌ಜಿ ಚೆಂಡುಗಳನ್ನೇ ಬಳಸುವುದು.

ಭಾರತದ ಪಿಚ್‌ಗಳಲ್ಲಿ ಟೆಸ್ಟ್‌ ಕ್ರಿಕೆಟ್ ಪಂದ್ಯ ನಡೆಯುವಾಗ ಮೂರನೇ ದಿನದಾಟದ ಹೊತ್ತಿಗೆ ಪಿಚ್‌ನಲ್ಲಿ ಹೆಚ್ಚು ಬಿರುಕುಗಳು ಕಾಣಿಸಿಕೊಳ್ಳುವುದು ಸಹಜ. ಅಂತಹ ಸ್ಥಳಕ್ಕೆ ಚೆಂಡನ್ನು ಸ್ಪಿನ್ನರ್ ಹಾಕಿದರೆ ಅದು ತಿರುವು ಪಡೆದು, ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸವಾಲುಗಳನ್ನೊಡ್ಡುತ್ತದೆ. ಈ ದೃಷ್ಟಿಯಲ್ಲಿ ಎಸ್‌ಜಿ ಚೆಂಡಿಗೂ ಭಾರತದ ನೆಲಕ್ಕೂ ಅವಿನಾಭಾವ ನಂಟು.

ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ, ಜಿಂಬಾಬ್ವೆ ಈ ಎಲ್ಲ ತಂಡಗಳು ತಮ್ಮ ತಮ್ಮ ದೇಶದಲ್ಲಿ ಟೆಸ್ಟ್‌ ಕ್ರಿಕೆಟ್ ಆಡಲು ಬಳಸುವುದು ಕೂಕಬುರಾ ಕಂಪನಿಯ ಚೆಂಡನ್ನು. ಆಸ್ಟ್ರೇಲಿಯಾದ ಕ್ರೀಡಾ ಪರಿಕರಗಳನ್ನು ತಯಾರಿಸುವ ಕಂಪನಿಯ ಹೆಸರು ಕೂಕಬುರಾ. ಈ ಚೆಂಡಿನ ಒಳಗಿನ ಎರಡು ಪದರಗಳನ್ನು ಮಾತ್ರ ಕೈಯಲ್ಲೇ ಹೊಲಿಯುತ್ತಾರೆ. ಹೊರ ಆವರಣಗಳಲ್ಲಿ ಕಾಣುವ ಸೀಮ್‌ಗಳೆಲ್ಲ ಯಂತ್ರದಿಂದ ಸಿದ್ಧಪಡಿಸಿದಂಥವು. ಇದಕ್ಕಿಂತ ಪೂರ್ಣವಾಗಿ ಕೈಯಲ್ಲೇ ಹೊಲಿದ ಚೆಂಡು ಸುದೀರ್ಘ ಕಾಲ ಆಡಲು ಯೋಗ್ಯ ಎನ್ನುವುದು ಅನೇಕ ಕ್ರಿಕೆಟಿಗರ ಅನುಭವದ ನುಡಿ.

ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ನಡೆದ ಡಬ್ಲ್ಯುಟಿಸಿ–ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಬಳಕೆಯಾದದ್ದು ಡ್ಯೂಕ್ಸ್‌‌ ಚೆಂಡು. ಇದರ ಬಣ್ಣ ಚೆರ‍್ರಿ ಹಣ್ಣಿನ ಕೆಂಪು. ಇಂಗ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ನ ವೇಗದ ಬೌಲರ್‌ಗಳಿಗೆ ಈ ಚೆಂಡು ಚೆರ‍್ರಿ ಹಣ್ಣಿನಂತೆಯೇ ಸವಿ. ಯಾಕೆಂದರೆ, ಸ್ವಿಂಗ್‌ ಮಾಡುವ ಬೌಲರ್‌ಗಳಿಗೆ ಇದರ ಹೊಳಪು ಹಾಗೂ ಗಟ್ಟಿತನ ಚಳಕ ತೋರಲು ಒದಗಿಬರುತ್ತದೆ. ಡ್ಯೂಕ್ಸ್‌ ಹೆಸರಿನ ಮನೆತನದವರು 1760ರಲ್ಲಿ ಕಟ್ಟಿದ ಕಂಪನಿಯು ತಯಾರಿಸುವ ಚೆಂಡು ಇದು. ಭಾರತದ ಉದ್ಯಮಿ ದಿಲೀಪ್ ಜಜೋಡಿಯಾ ಎನ್ನುವವರು 1987ರಲ್ಲಿ ಈ ಕಂಪನಿಯನ್ನು ಖರೀದಿಸಿದರು. ಇಂಗ್ಲೆಂಡ್‌, ವಿಂಡೀಸ್ ನೆಲದಲ್ಲಿ ನಡೆಯುವ ಟೆಸ್ಟ್‌ ಕ್ರಿಕೆಟ್‌ ಪಂದ್ಯಗಳಲ್ಲಿ ಅಷ್ಟೇ ಅಲ್ಲದೆ ಐರ್ಲೆಂಡ್‌ನಲ್ಲೂ ಇದನ್ನು ಬಳಸುತ್ತಾರೆ. ಜೇಮ್ಸ್‌ ಆ್ಯಂಡರ್‌ಸನ್ ತಮ್ಮ ಲೇಟ್‌ ಸ್ವಿಂಗ್‌ನಿಂದ ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ನ ನೆಲದಲ್ಲಿ ಮೊದಲು ಟೆಸ್ಟ್ ಆಡಿದ್ದಾಗ ಕಾಡಿದ್ದನ್ನು ನೆನಪಿಸಿಕೊಂಡರೆ, ಈ ಚೆಂಡಿನ ಗಮ್ಮತ್ತು ಎಂಥದೆನ್ನುವುದು ಸ್ಪಷ್ಟವಾಗುತ್ತದೆ.

ಕೂಕಬುರಾ ಚೆಂಡಿಗೆ ಹೋಲಿಸಿದರೆ ಎಸ್‌ಜಿ ಚೆಂಡಿನ ಹೊಲಿಗೆಗೆ ಬಳಸುವ ದಾರ ದಪ್ಪವಾಗಿರುತ್ತದೆ. ಹೊಲಿಗೆಗಳ ನಡುವಿನ ಅಂತರ ಎಸ್‌ಜಿ ಚೆಂಡಿನಲ್ಲಿ ಕಡಿಮೆ ಇರುತ್ತದೆ. ಹೀಗಾಗಿ ಫೀಲ್ಡರ್‌ಗಳು ಸಮರ್ಪಕವಾಗಿ ಹೊಳಪನ್ನು ಕಾಯ್ದಿಟ್ಟುಕೊಂಡು ಬಳಸಿದರೆ ಸುದೀರ್ಘಾವಧಿ ಈ ಚೆಂಡು ಬೌಲರ್‌ಸ್ನೇಹಿ ಆಗಬಲ್ಲದು. ಕೂಕಬುರಾ ಚೆಂಡಿನ ಸೀಮ್‌ ಭಾಗದ ಗ್ರಿಪ್ ಚೆನ್ನಾಗಿರುವುದರಿಂದ ಬೌಲರ್‌ಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಭದ್ರವಾಗಿ ಹಿಡಿಯಬಹುದೆಂಬ ನಂಬಿಕೆ ಇದೆ.

ಚೆಂಡಿನ ಹೊಲಿಗೆಗಳಿರುವ ಸೀಮ್ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಡ್ಯೂಕ್ಸ್‌‌ ಚೆಂಡಿನಲ್ಲಿ ಒಂದು ಭಾಗದಲ್ಲಿ ಹೊಲಿಗೆ ಇರುವ ದಿಕ್ಕಿನ ವಿರುದ್ಧಕ್ಕೆ ಇನ್ನೊಂದು ಭಾಗದಲ್ಲಿ ಹೊಲಿಗೆ ಹಾಕಿರುತ್ತಾರೆ. ಇದರಿಂದ ಸೀಮ್‌ ಭಾಗದ ಹೊಳಪು, ಬಿಗುವು ದೀರ್ಘಾವಧಿ ಇರುತ್ತದೆನ್ನುವುದು ಇಂಗ್ಲೆಂಡ್, ವಿಂಡೀಸ್‌ ಆಟಗಾರರ ಅನುಭವದ ನುಡಿ.

ಇಂಗ್ಲೆಂಡ್‌ನಲ್ಲಿ ಹವಾಮಾನ ದಿಢೀರನೆ ಬದಲಾಗುತ್ತದೆ. ಅಲ್ಲಿನ ಪಿಚ್‌ಗಳ ಮೇಲೆ ಹಸಿರು ಪದರ ಇರುವುದೇ ಹೆಚ್ಚು. ಅಲ್ಲಿ ಡ್ಯೂಕ್ಸ್‌‌ ಚೆಂಡು ಟೆಸ್ಟ್‌ ಕ್ರಿಕೆಟ್‌ಗೆ ಹೊಂದುತ್ತದೆ. ಕೂಕಬುರಾ ಚೆಂಡು ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ಪುಟಿಯುವ ಪಿಚ್‌ಗಳಲ್ಲಿ ಹೆಚ್ಚು ಉಪಯೋಗಿಸಲು ಕೂಡ ಕಾರಣವಿದೆ. ಚೆಂಡು ಹೊಳಪು ಕಳೆದುಕೊಂಡ ನಂತರವೂ ಎತ್ತರಕ್ಕೆ ಪುಟಿಯಬಲ್ಲದು. ಹೀಗಾಗಿ ವೇಗ ಹಾಗೂ ಮಧ್ಯಮ ವೇಗದ ಬೌಲರ್‌ಗಳು ಬೌನ್ಸ್‌ ಮೂಲಕವೇ ಬ್ಯಾಟ್ಸ್‌ಮನ್‌ಗಳನ್ನು ಕೆಣಕಲು ಸಾಧ್ಯವಿದೆ. ನ್ಯೂಜಿಲೆಂಡ್‌ ನೆಲದಲ್ಲಿ ರನ್‌ ಗಳಿಸುವುದು ಎಷ್ಟು ಕಷ್ಟವೆನ್ನುವುದಕ್ಕೆ ಈ ಚೆಂಡಿನ ಮರ್ಮವೇ ಸಾಕ್ಷಿ.

2017ರಲ್ಲೇ ನ್ಯೂಜಿಲೆಂಡ್‌ನ ಟಿಮ್‌ ಸೌಥಿ ಹಾಗೂ ಟ್ರೆಂಟ್‌ ಬೌಲ್ಟ್‌ ಹೆಚ್ಚು ಸ್ವಿಂಗ್‌ ಅಭ್ಯಾಸ ಮಾಡಬೇಕೆಂದು ಡ್ಯೂಕ್ಸ್‌‌ ಚೆಂಡಿನಲ್ಲಿ ಅಭ್ಯಾಸ ನಡೆಸಿದ್ದರು. ಭಾರತದ ಜಸ್‌ಪ್ರೀತ್‌ ಬೂಮ್ರಾ ಹಾಗೂ ವಿರಾಟ್‌ ಕೊಹ್ಲಿ ಕೂಡ ಟೆಸ್ಟ್‌ ಕ್ರಿಕೆಟ್‌ಗೆ ಈ ಚೆಂಡೇ ಅತ್ಯುತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರರ್ಥ, ಭಾರತದ ಎಸ್‌ಜಿ ಚೆಂಡಿನ ಬಗೆಗೆ ದಿಗ್ಗಜ ಆಟಗಾರರಲ್ಲಿಯೇ ಬೇಸರ ಮೂಡತೊಡಗಿದೆ. ರವಿಚಂದ್ರನ್ ಅಶ್ವಿನ್ ತರಹದ ಕೇರಂ ಬಾಲ್‌ ಸ್ಪಿನ್ನರ್‌ಗೆ ಕೂಕಬುರಾ ಚೆಂಡಿನಲ್ಲಿ ಬೌಲ್‌ ಮಾಡುವುದು ಇಷ್ಟ.

ನ್ಯೂಜಿಲೆಂಡ್‌ನ ಅನುಭವಿ ಸ್ವಿಂಗ್ ಬೌಲರ್ ಟಿಮ್ ಸೌಥಿ ಹಾಗೂ ಹೊಸ ಪ್ರತಿಭೆ ಕೈಲ್ ಜೆಮಿಸನ್ ಡ್ಯೂಕ್ಸ್‌‌ ಚೆಂಡಿನಲ್ಲಿ ಎಂಥ ಕಣ್ಣುಕೋರೈಸುವ ಸ್ವಿಂಗ್ ಮಾಡಿದರೆನ್ನುವುದನ್ನು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಕಂಡೆವು. ಭಾರತದ ಮೊಹಮ್ಮದ್ ಶಮಿ ಯಶಸ್ವಿಯಾದದ್ದರಲ್ಲೂ ಇದೇ ಚೆಂಡಿನ ಮರ್ಮವಿದೆ. ಮುಂದಿನ ದಿನಗಳಲ್ಲಿ ಮೊಹಮ್ಮದ್ ಸಿರಾಜ್ ತರಹದ ಸಹಜ ಸ್ವಿಂಗ್ ಬೌಲರ್ ಕೂಡ ಇದೇ ಚೆಂಡನ್ನು ನೆಚ್ಚಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT