ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web exclusive: ರಣಜಿ ಟೂರ್ನಿಯ ದಾಟಿದವರೇ, ಇಲ್ಲಿ ಓದಿ

Last Updated 3 ಫೆಬ್ರುವರಿ 2021, 16:22 IST
ಅಕ್ಷರ ಗಾತ್ರ

ಆಟದ ಮನೆ

ಈ ಸಲ ರಣಜಿ ಋತುವಿಲ್ಲ. ಐಪಿಎಲ್ ಋತು ಮಾತ್ರ ಮುಕ್ಕಾಗುವುದಿಲ್ಲ. ಬಿಳಿ ಚೆಂಡಿನಾಟದ ಸುಖ, ಕಾಂಚಾಣದ ಲೆಕ್ಕಾಚಾರಗಳ ನಡುವೆಯೂ ಹಟಕ್ಕೆ ಬಿದ್ದು ನಡೆಸಬಹುದಾಗಿದ್ದ ಇಂತಹ ಟೂರ್ನಿಯೇ ಬೇಡ ಎಂದಿರುವುದು ಪ್ರಶ್ನೆಗಳನ್ನು ಎಸೆದಿದೆ. ರಣಜಿ ಯಾರಿಗೆಲ್ಲ ಅಗತ್ಯ ಗೊತ್ತೆ?

ಹದಿನಾರು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಹಷೀಮ್ ಆಮ್ಲಾ 12ನೇ ಆಟಗಾರನಾಗಿದ್ದಾಗ ಸಂದರ್ಶನಕ್ಕೆ ಸಿಕ್ಕಿದ್ದರು. ಆಗಲೇ ನೀಳ ಗಡ್ಡ ಬಿಟ್ಟಿದ್ದ ಅವರ ಫಳಫಳ ಹೊಳೆಯುವ ಕಣ್ಣುಗಳಲ್ಲಿ ಮಡಿಸಿಟ್ಟ ಸಂಯಮ. ಭಾರತದ ಬ್ಯಾಟ್ಸ್‌ಮನ್‌ಷಿಪ್‌ ಬಗೆಗೆ ಅವರು ಆಗ ಮುಕ್ತವಾಗಿ ಮಾತನಾಡಿದ್ದರು. ಟೆಸ್ಟ್‌ನಲ್ಲಿ ನೆಲೆ ನಿಂತು ಆಡಬಲ್ಲ ತಾಳ್ಮೆಯನ್ನು ದೇಸಿ ಕ್ರಿಕೆಟ್‌ ಇಲ್ಲಿ ಚೆನ್ನಾಗಿ ಕಲಿಸುತ್ತದೆ ಎಂದಿದ್ದರು. ಅದರಲ್ಲೂ ರಣಜಿ ಟ್ರೋಫಿ ಪಂದ್ಯಗಳ ಫಾರ್ಮ್ಯಾಟನ್ನು ಬಾಯಿತುಂಬಾ ಹೊಗಳಿದ್ದರು. ದೇಸಿ ಕ್ರಿಕೆಟ್‌ನಲ್ಲಿ ದ್ವಿಶತಕ, ತ್ರಿಶತಕ ಹೊಡೆಯುವ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್‌ ಪಂದ್ಯಗಳು ನಡೆದಾಗ ಎದೆಸೆಟೆದು ನಿಲ್ಲುತ್ತಾರೆ. ಕ್ರಿಕೆಟ್‌ ಅಂದರೆ ಬರೀ ಹೊಡಿ–ಬಡಿಯುವುದಲ್ಲ. ಅದರಲ್ಲಿನ ಕಲೆಯನ್ನು ಹೊರಹಾಕುವುದು ಟೆಸ್ಟ್‌ ಕ್ರಿಕೆಟ್‌. ‘ಮೈಂಡ್ ಗೇಮ್‌’ಗೆ ಅಲ್ಲಿ ಸಾಕಷ್ಟು ಅವಕಾಶ. ಅದನ್ನು ಹಣ್ಣಾಗಿಸಿಕೊಂಡವರಿಂದಲೇ ಭಾರತದ ಬ್ಯಾಟ್ಸ್‌ಮನ್‌ಷಿಪ್‌ ಇಷ್ಟರಮಟ್ಟಿಗೆ ಬೆಳೆದಿರುವುದು ಎಂಬ ಅವರ ವಿಶ್ಲೇಷಣೆಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.

ಇಂತಹ ಪರಂಪರೆ ಇರುವ ರಣಜಿ ಕ್ರಿಕೆಟ್ ಟೂರ್ನಿ 87 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿಲ್ಲ. ಕೋವಿಡ್ ಕಾರಣಕ್ಕೆ ‘ಬಯೋ ಬಬಲ್‌’ನಲ್ಲಿ ಇರಿಸಿ, ಇಂತಹದೊಂದು ಟೂರ್ನಿ ನಡೆಸುವುದು ಬಲು ಕಷ್ಟ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ತೀರ್ಮಾನಕ್ಕೆ ಬಂದಿರುವುದರಲ್ಲಿ ತರ್ಕವೇನೋ ಇದೆ. ರಣಜಿ ಹುರಿಯಾಳು ಕ್ರಿಕೆಟಿಗರಿಗೆ ಆರ್ಥಿಕ ನಷ್ಟ ಆಗದಂತೆ ‘ನೋಡಿಕೊಳ್ಳುವ’ ಭರವಸೆಯನ್ನೂ ನೀಡಿದ್ದಾರೆ. ವಿಷಯ ಇಷ್ಟು ಸರಳವಲ್ಲ. ಒಂದು ವರ್ಷ ರಣಜಿ ಟೂರ್ನಿ ನಡೆಯದೇ ಇರುವುದರಿಂದ ಆಟಗಾರರಿಗೆ ಆಗುವ ಮಾನಸಿಕ ನಷ್ಟಕ್ಕೆ ಬೆಲೆ ಕಟ್ಟಲಾಗದು. ಟೆಸ್ಟ್ ಕ್ರಿಕೆಟ್ ಈ ವರ್ಷ ನಡೆಯುವುದೇ ಇಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಫರ್ಮಾನು ಹೊರಡಿಸಿದರೆ ಚೇತೇಶ್ವರ ಪೂಜಾರ ತರಹದ ಕ್ರಿಕೆಟಿಗರ ಮಾನಸಿಕ ಸ್ಥಿತಿ ಹೇಗಾದೀತು ಎನ್ನುವುದನ್ನು ನಾವು ಊಹಿಸಲೂ ಅಸಾಧ್ಯ.

ಚುಟುಕು ಕ್ರಿಕೆಟ್‌ ಬಂದಾಗ ಬಿ.ಎಸ್. ಚಂದ್ರಶೇಖರ್ ವ್ಯಕ್ತಪಡಿಸಿದ್ದ ಆತಂಕಕ್ಕೂ ಈಗಿನ ಈ ಬೆಳವಣಿಗೆಗೂ ಸಾವಯವ ಸಂಬಂಧವಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತರಹದ ಹಣದ ಥೈಲಿ ಒಳಗೊಳ್ಳುವ ಟೂರ್ನಿಯನ್ನು ಹಟ ಹಿಡಿದಾದರೂ ನಡೆಸುವ ಮನಸ್ಸುಗಳಿಗೆ ರಣಜಿ ಟೂರ್ನಿ ರದ್ದುಪಡಿಸುವುದು ಸುಲಭ ಯಾಕಾಗುತ್ತದೆ ಎಂದರೆ, ಅಲ್ಲಿ ಆದಾಯವಿಲ್ಲ. ಅದು ಪ್ರಸಾದವಿಲ್ಲದ ಪೂಜೆಯಂತೆ. ಅದೂ ದೀರ್ಘಕಾಲಿಕ ಪೂಜೆ.

ಗಂಗೂಲಿ ಹಾಗೂ ಜಯ್ ಶಾ ರಣಜಿ ಟ್ರೋಫಿ ಬದಲಿಗೆ ವಿಜಯ್ ಹಜಾರೆ ಟ್ರೋಫಿ ಮೂಲಕ ಏಕದಿನ ಪಂದ್ಯಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಹೆಣ್ಣುಮಕ್ಕಳಿಗೂ ಏಕದಿನ ಪಂದ್ಯಗಳನ್ನು ಆಯೋಜಿಸುವ ಇನ್ನೊಂದು ಯೋಚನೆಯನ್ನು ತೇಲಿಬಿಟ್ಟಿದ್ದಾರೆ. ಆದಾಯ ಮೂಲಗಳನ್ನು ಹೆಚ್ಚುಮಾಡಿಕೊಳ್ಳುವ ಅರ್ಥಚಿಂತನೆಯಾಗಿಯೇ ಈ ನಡೆ ಕಾಣುತ್ತಿದೆ.

ರಣಜಿ ಕ್ರಿಕೆಟ್‌ನಲ್ಲಿ ಇದುವರೆಗೆ ಅತಿ ಹೆಚ್ಚು ಶತಕ ಗಳಿಸಿರುವವರು ಯಾರು? ಉತ್ತರ ಕೇಳಿ ನೋಡಿ. ಎಷ್ಟೋ ಜನರಿಗೆ ಗೊತ್ತೇ ಇರಲಾರದು. ಮುಂಬೈನವರೇ ಆದ ವಾಸಿಂ ಜಾಫರ್ 40 ಶತಕಗಳನ್ನು ಹೊಡೆದಿದ್ದಾರೆ. 67 ಚಿಲ್ಲರೆ ಸರಾಸರಿಯಲ್ಲಿ 12,038 ರನ್‌ಗಳನ್ನು ಅವರು ಕಲೆಹಾಕಿದ್ದಾರೆ. ಅಮೋಲ್ ಮಜುಂದಾರ್ ರಣಜಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ (9205) ಕಲೆಹಾಕಿದ ಎರಡನೇ ಬ್ಯಾಟ್ಸ್‌ಮನ್. ಅವರೂ ಮುಂಬೈನವರೇ. ಮಧ್ಯಪ್ರದೇಶದ ದೇವೇಂದ್ರ ಬುಂದೇಲ, ಮಜುಂದಾರ್ ಅವರಿಗಿಂತ ನಾಲ್ಕೇ ರನ್ ಕಡಿಮೆ ದಾಖಲಿಸಿದ್ದೇ ಅಲ್ಲದೆ 40ನೇ ವಯಸ್ಸಿನವರೆಗೆ ಆಡಿದರು. ಜಾಫರ್ ಆಡಿರುವುದು ಬರೀ 31 ಟೆಸ್ಟ್‌ಗಳನ್ನು. ಮಜುಂದಾರ್ ಆಗಲೀ, ಬುಂದೇಲ ಆಗಲೀ ಟೆಸ್ಟ್‌ ಪಂದ್ಯ ಆಡಿದವರಲ್ಲ. 8,700 ರನ್‌ಗಳನ್ನು ಜಮೆ ಮಾಡಿರುವ ಯಶ್‌ಪಾಲ್‌ ಸಿಂಗ್ ಸಿಕ್ಕಿಂ ಹಾಗೂ ಸರ್ವಿಸಸ್ ತಂಡಗಳನ್ನು ಪ್ರತಿನಿಧಿಸಿದವರು. ಐಪಿಎಲ್‌ನಲ್ಲಿ ಕೊಚ್ಚಿ ಟಸ್ಕರ್ಸ್ ತಂಡಕ್ಕೂ ಅವರು 2011ರಲ್ಲಿ ಆಯ್ಕೆಯಾಗಿದ್ದರು. ಸಿಕ್ಸರ್‌ಗಳನ್ನು ಹೊಡೆಯಬಲ್ಲರು ಎನ್ನುವುದು ಅವರ ಆಯ್ಕೆಗೆ ಕಾರಣವಾಗಿತ್ತು. ದೆಹಲಿ, ಜಮ್ಮು ಮತ್ತು ಕಾಶ್ಮೀರ ಪ್ರತಿನಿಧಿಸಿದ ಮಿಥುನ್ ಮನ್ಹಾಸ್‌ ಕೂಡ ಎಂಟೂವರೆ ಸಾವಿರಕ್ಕೂ ಹೆಚ್ಚು ರಣಜಿ ರನ್‌ ಗಳಿಸಿಯೂ ಟೆಸ್ಟ್‌ ಆಡುವ ಅವಕಾಶ ಪಡೆಯಲು ಆಗಲಿಲ್ಲ.

ದೇಸಿ ಕ್ರಿಕೆಟ್‌ನಲ್ಲಿ 2004ರಲ್ಲೇ ಸೊಗಸಾಗಿ ಆಡಿ ಅತಿ ಹೆಚ್ಚು ರನ್ ಗಳಿಸಿದ್ದ ಶಿಖರ್ ಧವನ್‌ ಕೂಡ ಅಂತರರಾಷ್ಟ್ರೀಯ ತಂಡ ಸೇರುವ ಅವಕಾಶ ತಪ್ಪಿಸಿಕೊಂಡಿದ್ದರು. ಯಾಕೆಂದರೆ, ದೆಹಲಿಯವರೇ ಆದ ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಸ್ಥಾನ ಆಗ ಭದ್ರವಾಗಿತ್ತು. ಪ್ರಾದೇಶಿಕ ಸಮತೋಲನದ ವಿಷಯ ಬಂದಾಗ ಹೀಗೆ ಅವಕಾಶಕ್ಕಾಗಿ ವರ್ಷಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ.

ಪೂಜಾರ, ಉನದ್ಕತ್
ಪೂಜಾರ, ಉನದ್ಕತ್

1948–49ರಲ್ಲೇ ರಣಜಿ ಪಂದ್ಯವೊಂದರ ಇನಿಂಗ್ಸ್‌ನಲ್ಲಿ ಮಹಾರಾಷ್ಟ್ರದ ಬಿ.ಬಿ. ನಿಂಬಾಳ್ಕರ್ 443 ರನ್ ಕಲೆಹಾಕಿ ಔಟಾಗದೆ ಉಳಿದಿದ್ದರು. ಇದುವರೆಗಿನ ಅತಿ ಗರಿಷ್ಠ ರಣಜಿ ಸ್ಕೋರ್ ಅದು. 37 ಟೆಸ್ಟ್‌ಗಳನ್ನು ಮಾತ್ರ ಆಡಿದ ಸಂಜಯ್ ಮಾಂಜ್ರೇಕರ್ 377 ರನ್‌ಗಳ ಇನಿಂಗ್ಸ್‌ ಕೊಟ್ಟವರು. ಒಂದು ಇನಿಂಗ್ಸ್‌ನಲ್ಲಿ 366 ರನ್‌ ಗಳಿಸಿ ರಣಜಿ ಪಂದ್ಯಗಳಲ್ಲಿ ಛಾಪು ಮೂಡಿಸಿದ್ದ ಹೈದರಾಬಾದ್‌ನ ಎಂ.ವಿ. ಶ್ರೀಧರ್ ಕೂಡ ಒಂದೂ ಟೆಸ್ಟ್‌ ಪಂದ್ಯ ಆಡಲಿಲ್ಲ. 353 ರನ್‌ಗಳ ಒಂದು ಮರೆಯಲಾಗದ ಇನಿಂಗ್ಸ್‌ ಕಟ್ಟಿದ್ದ ವಿವಿಎಸ್‌ ಲಕ್ಷ್ಮಣ್ ಮಾತ್ರ 137 ಟೆಸ್ಟ್‌ ಪಂದ್ಯಗಳಲ್ಲಿ ಮೆರೆದರು. ರಣಜಿ ಪಂದ್ಯದ ಇನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿನ ಹತ್ತು ಮಂದಿಯ ಹೆಸರುಗಳನ್ನು ನೋಡಿದರೆ, ಪೂಜಾರ ಮಾತ್ರ ಈಗ ಆಡುತ್ತಿದ್ದಾರೆ.

ಮೇಲಿನ ಉದಾಹರಣೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ರಣಜಿ ಟೂರ್ನಿ ಎಂತೆಂಥವರಿಗೆ ಮುಖ್ಯ ಎನ್ನುವುದು ಅರಿವಾಗುತ್ತದೆ. ಕರ್ನಾಟಕದ ಸಮರ್ಥ್ ತರಹದ ತಣ್ಣನೆಯ ಹುಡುಗ, ಕೆ.ಗೌತಮ್ ರೀತಿಯ ಬಿಸಿರಕ್ತದ ಆಲ್‌ರೌಂಡರ್, ಲಯ ಕಳೆದುಕೊಂಡರೂ ದಿಢೀರನೆ ಕಾಡುವಂಥ ಸ್ಪೆಲ್ ಮಾಡಬಲ್ಲ ಸ್ಪಿನ್ನರ್ ಶ್ರೇಯಸ್ ಗೋಪಾಲ್, ಕಳೆದ ರಣಜಿ ಋತುವಿನಲ್ಲಿ 1340 ರನ್‌ ಸೇರಿಸಿದ್ದ ಸಂಯಮಮೂರ್ತಿ ರಾಹುಲ್ ದಲಾಲ್ (ಅರುಣಾಚಲ ಪ್ರದೇಶದವರು), ಅದೇ ಋತುವಿನಲ್ಲಿ ಔಟಾಗದೆ ತ್ರಿಶತಕ ಹೊಡೆದ, ಮಿಜೋರಾಂನ ತರುವರ್‌ ಕೊಹ್ಲಿ, ಹೋದ ಋತುವಿನಲ್ಲೇ 67 ವಿಕೆಟ್‌ ಪಡೆದಿದ್ದ ಸೌರಾಷ್ಟ್ರದ ಜಯದೇವ್ ಉನದ್ಕತ್, ಕರ್ನಾಟಕದ ದಾವಣಗೆರೆ ಎಕ್ಸ್‌ಪ್ರೆಸ್‌ ವಿನಯಕುಮಾರ್, ಅಭಿಮನ್ಯು ಮಿಥುನ್... ಇಂಥವರಿಗೆಲ್ಲ ರಣಜಿ ಟೂರ್ನಿ ಬೇಕಾಗುತ್ತದೆ.

ಮುಂಬೈ, ದೆಹಲಿ, ಕರ್ನಾಟಕದಂತಹ ತಂಡಗಳು ಅಂತರರಾಷ್ಟ್ರೀಯ ಆಟಗಾರರನ್ನು ನೀಡುತ್ತಿವೆ. ಆದರೆ, ಸೌರಾಷ್ಟ್ರ, ಮಿಜೋರಾಂ ರೀತಿಯ ಜನಪ್ರಿಯವಲ್ಲದ ತಂಡಗಳಲ್ಲೂ ಕನಸುಗಳ ಗೂಡುಗಳನ್ನು ಕಟ್ಟಿಕೊಂಡ ಹುಡುಗರು ದೊಡ್ಡದೊಂದು ಅವಕಾಶಕ್ಕಾಗಿ ಚಾತಕಪಕ್ಷಿಗಳಾಗಿರುತ್ತಾರೆ. ರಣಜಿ ಟೂರ್ನಿಯೇ ಅಂಥವರ ಪಾಲಿಗೆ ಓಯಸಿಸ್. ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮಾಡುವಾಗ ಸಣ್ಣ ತಂಡಗಳ ಆಟಗಾರರನ್ನು ಉಪೇಕ್ಷೆ ಮಾಡಲಾಗುತ್ತಿದೆ ಎಂದು ಸೌರಾಷ್ಟ್ರದ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್ 2019ರ ಸೆಪ್ಟೆಂಬರ್‌ನಲ್ಲಿ ತಮ್ಮ ಸಿಟ್ಟನ್ನು ಸರಣಿ ಟ್ವೀಟ್‌ಗಳ ಮೂಲಕ ತೋಡಿಕೊಂಡಿದ್ದರು.

ಇತ್ತೀಚಿನದಷ್ಟೇ ಅಲ್ಲ, ದೇಸಿ ಕ್ರಿಕೆಟ್‌ನ ಇತಿಹಾಸದ ರೋಚಕ ಪುಟಗಳನ್ನು ತಡಕಾಡಿದಾಗಲೆಲ್ಲ ರಣಜಿ ಟೂರ್ನಿಯ ಮಹತ್ವ ಅರಿವಿಗೆ ಬರುತ್ತದೆ. ಮೆಲ್ಲಗೆ ‘ಅರ್ಥಶಾಸ್ತ್ರ’ದ ಚುಚ್ಚುಮದ್ದು ಕೊಡುತ್ತಾ, ತಾಳ್ಮೆಯಾಟದ ಪರಂಪರೆಯ ಕತ್ತುಹಿಸುಕಿದರೆ ಏನಾಗುತ್ತದೆ? ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನ ಒಂದು ಇನಿಂಗ್ಸ್‌ನಲ್ಲಿ 36ಕ್ಕೆ ಆಲ್‌ಔಟ್ ಆದಹಾಗೆ ಆಗುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT