ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕಳೆದುಕೊಳ್ಳಲು ಏನೂ ಇಲ್ಲ ಎಂಬಂತೆ ಆಡುವ ಸುಖವು...

ಆಟದಮನೆ
Last Updated 31 ಮಾರ್ಚ್ 2021, 9:22 IST
ಅಕ್ಷರ ಗಾತ್ರ

ವಿಕೆಟ್‌ಗಳನ್ನು ಕಿತ್ತು ಆತ್ಮವಿಶ್ವಾಸದ ಅಲೆಯಲ್ಲೇ ಬೌಲ್ ಮಾಡುವವರಿಗೂ ಬಿಸಿ ಮುಟ್ಟಿಸುವ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಸ್ಯಾಮ್ ಕರನ್ ಅವರನ್ನು ನೋಡಿದಾಗ ಇಯಾನ್ ಬಾಥಮ್ ಹಾಗೂ ಸನತ್ ಜಯಸೂರ್ಯ ಕಟ್ಟಿಕೊಟ್ಟ ಹಳೆದ ಸೊಗಸಾದ ಆಟಗಳು ನೆನಪಿಗೆ ಬರುತ್ತಿವೆ.

***

ಭಾರತದ ಎದುರು ಪುಣೆಯಲ್ಲಿ ನಡೆದ ಕೊನೆಯ ಹಾಗೂ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಯಾಮ್ ಕರನ್ ಒಂಟಿ ಸಲಗದ ರೀತಿ ಆತಿಥೇಯರ ಕಣ್ಣಿಗೆ ಭಾಸವಾದರು. ಕೊನೆಯ ಓವರ್‌ನಲ್ಲಿ ನಟರಾಜನ್ ಸಲೀಸಾಗಿ ಬ್ಯಾಟ್ ಬೀಸಲು ಅವರಿಗೆ ಸಾಧ್ಯವಾಗದಂತೆ ಬೌಲ್ ಮಾಡಿದ್ದರಿಂದ ಭಾರತ ಸರಣಿ ಗೆದ್ದು ಬೀಗಿತಷ್ಟೆ. ಒಂದು ಕಡೆ ವಿಕೆಟ್‌ಗಳು ಬೀಳುತ್ತಿದ್ದರೂ ಇನ್ನೊಂದೆಡೆ ತಾನು ಕಳೆದುಕೊಳ್ಳುವುದು ಏನೂ ಇಲ್ಲ ಎನ್ನುವಂತೆ ಹೀಗೆ ಬ್ಯಾಟಿಂಗ್ ಮಾಡುವವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ಭಾರತದ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಇಬ್ಬರೂ ತಂಡದ ಕೆಳಗಿನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಕಸುವನ್ನು ಹೆಚ್ಚಿಸಿರುವುದು ಇಂತಹ ಧೋರಣೆಯಿಂದಲೇ.

ಕರನ್ ಆಡಿದ ರೀತಿ ನೋಡಿದಾಗ ಇಂಗ್ಲೆಂಡ್‌ನ ಹಳೆಯ ಕುದಿರಕ್ತದ ಇನಿಂಗ್ಸ್ ಒಂದು ನೆನಪಾಗುತ್ತದೆ. 1981ರಲ್ಲಿ ನಡೆದ ಆ್ಯಷಸ್ ಸರಣಿ ಅದು. ಆಸ್ಟ್ರೇಲಿಯನ್ನರನ್ನು ಮಣಿಸಲೇಬೇಕು ಎನ್ನುವುದು ಆಗ ಇಂಗ್ಲೆಂಡ್‌ ಆಟಗಾರರ ಮಹತ್ವಾಕಾಂಕ್ಷೆ. ಅದರಲ್ಲೂ ಆ್ಯಷಸ್ ಸರಣಿ ಅವರಿಗೆ ಪ್ರತಿಷ್ಠೆ. ಇಯಾನ್ ಬಾಥಮ್‌ಗೆ ನಾಯಕನಾಗಿ ಲಿಟ್ಮಸ್ ಟೆಸ್ಟ್.

ಆಸ್ಟ್ರೇಲಿಯಾದ ನಾಯಕ ಕಿಮ್ ಹ್ಯೂಸ್ ಒಳ್ಳೆಯ ಫಲಿತಾಂಶ ನೀಡುವಂತಹ ತಂತ್ರಗಳನ್ನು ಹೆಣೆದಿದ್ದರು. ಆರು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಮೊದಲನೆಯದನ್ನು ಸೋತು, ಎರಡನೆಯದನ್ನು ಡ್ರಾ ಮಾಡಿಕೊಂಡು ಇಂಗ್ಲೆಂಡ್‌ನ ಬಾಥಮ್ ಟೀಕಾಪ್ರಹಾರ ಎದುರಿಸಿದರು. ಅವರಿಂದ ನಾಯಕತ್ವವನ್ನು ಕಿತ್ತು, ಮೈಕ್ ಬ್ರೇರ್ಲಿಗೆ ಜವಾಬ್ದಾರಿ ವಹಿಸಿದ್ದು ಗಾಯದ ಮೇಲೆ ಉಪ್ಪು ಸವರಿದಂತಾಗಿತ್ತು. ಬಾಥಮ್ ರಕ್ತ ಕುದಿಯಲು ಇಷ್ಟು ಸಾಕಲ್ಲವೇ?

ಸ್ಯಾಮ್ ಕರನ್
ಸ್ಯಾಮ್ ಕರನ್

ಹೆಡಿಂಗ್ಲೆಯಲ್ಲಿ ಮೂರನೇ ಟೆಸ್ಟ್‌. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 401 ರನ್ ಗಳಿಸಿತು. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಬಾಥಮ್ ಅರ್ಧಶತಕದ ಹೊರತಾಗಿಯೂ 174ಕ್ಕೆ ಕುಸಿಯಿತು. ಕಿಮ್ ಫಾಲೋಆನ್ ಹೇರಿದರು. ಎರಡನೇ ಇನಿಂಗ್ಸ್‌ನಲ್ಲಿಯೂ ಇಂಗ್ಲೆಂಡ್‌ನ ಪ್ರಮುಖ ಬ್ಯಾಟ್ಸ್‌ಮನ್‌ಗಳು ಪೆರೇಡ್ ಮಾಡುತ್ತಿದ್ದರೆ, ಇನ್ನೊಂದು ತುದಿಯಲ್ಲಿ ಬಾಥಮ್ ಬಿಸಿಯುಸಿರು ಹೆಚ್ಚು ಮಾಡಿಕೊಂಡು ನಿಂತಿದ್ದರು. 135ಕ್ಕೆ 7 ವಿಕೆಟ್ ಎಂದು ಸ್ಕೋರ್ ಬೋರ್ಡ್ ತೋರಿಸಿದಾಗ ಇಂಗ್ಲೆಂಡ್‌ನ ಅಭಿಮಾನಿಗಳ ಮುಖದಲ್ಲಿ ಬೇಸರದ ನಿರಿಗೆ. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 97 ರನ್ ಬೇಕಿತ್ತು. ಆದದ್ದಾಗಲಿ ಎಂದು ಬಾಥಮ್ ಆಗ ಗಾರ್ಡ್ ತೆಗೆದುಕೊಂಡು, ಬ್ಯಾಟ್ ಬೀಸತೊಡಗಿದರು. ಬೌಂಡರಿಗಳು ಹರಿಯತೊಡಗಿದವು. ಗ್ರಹಾಂ ಡಿಲ್ಲೆ ಇನ್ನೊಂದು ತುದಿಯಲ್ಲಿ ಸ್ಫೂರ್ತಿ ಪಡೆದವರಂತೆ ಲಂಗರು ಹಾಕಿ ಆಡಿದರು. 8ನೇ ವಿಕೆಟ್ ಜತೆಯಾಟದಲ್ಲಿ 117 ರನ್‌ಗಳು ಬಂದವು. ಡಿಲ್ಲೆ ಕೂಡ 56 ರನ್‌ಗಳ ಕಾಣಿಕೆ ಸಲ್ಲಿಸಿದರು. ಒಂಬತ್ತನೇ ವಿಕೆಟ್‌ಗೆ ಕ್ರಿಸ್ ಓಲ್ಡ್ ಜತೆಗೂಡಿ ಬಾಥಮ್ 67 ರನ್ ಸೇರಿಸಿದ್ದೇ ಆಸ್ಟ್ರೇಲಿಯಾ ನಾಯಕ ಕಿಮ್ ತಲೆ ಕೆರೆದುಕೊಳ್ಳತೊಡಗಿದರು. ಕೊನೆಯ ವಿಕೆಟ್‌ಗೂ 37 ರನ್‌ಗಳ ಜತೆಯಾಟ ಮೂಡಿಬಂತು. 148 ಎಸೆತಗಳಲ್ಲಿ 149 ರನ್ ಸಿಡಿಸಿದ ಬಾಥಮ್ ಔಟಾಗದೆ ಉಳಿದರು. ಆಸ್ಟ್ರೇಲಿಯಾಗೆ ಗೆಲ್ಲಲು 130 ರನ್‌ಗಳು ಸಾಕಿತ್ತು.

ಬಾಬ್ ವಿಲ್ಲಿಸ್ ಕೊನೆಯ ವಿಕೆಟ್ ಜತೆಯಾಟದಲ್ಲಿ 2 ರನ್‌ಗಳನ್ನಷ್ಟೇ ಹೊಡೆದಿದ್ದರೂ ಬಾಥಮ್ ರಣೋತ್ಸಾಹವನ್ನು ಕಣ್ತುಂಬಿಕೊಂಡಿದ್ದರು. ಬೌಲಿಂಗ್‌ನಲ್ಲಿ ವಿಲ್ಲಿಸ್ ತಮ್ಮ ಮೊನಚನ್ನು ತೋರಲು ಅದೇ ಕಾರಣವಾಯಿತು. ಆಸ್ಟ್ರೇಲಿಯಾ 18 ರನ್‌ಗಳಿಂದ ಆ ಪಂದ್ಯ ಸೋತಿತು. ವಿಲ್ಲಿಸ್ 43 ರನ್‌ ನೀಡಿ 8 ವಿಕೆಟ್‌ಗಳನ್ನು ಕೊನೆಯ ಇನಿಂಗ್ಸ್‌ನಲ್ಲಿ ಪಡೆದದ್ದು ಇನ್ನೊಂದು ವಿಕ್ರಮ. 27 ಬೌಂಡರಿ, 1 ಸಿಕ್ಸರ್ ಗಳಿಸಿ ಬಾಥಮ್ ಎದುರಾಳಿಯನ್ನು ಆ ಪಂದ್ಯದಲ್ಲಿ ಚಿಂದಿ ಮಾಡಿದ್ದಷ್ಟೇ ಅಲ್ಲದೆ, ಮುಂದೆ ಇಂಗ್ಲೆಂಡ್ ಆ ಆ್ಯಷಸ್ ಸರಣಿ ಗೆಲ್ಲಲು ಕಾರಣರಾದರು. ಸರಣಿ ಶುರುವಾದಾಗ ಯಾವ ನಾಯಕನನ್ನು ಅನೇಕರು ಟೀಕಿಸಿದ್ದರೋ ಮುಗಿಯುವ ಹೊತ್ತಿಗೆ ಅವರನ್ನು ಕೊಂಡಾಡದೆ ವಿಧಿ ಇರಲಿಲ್ಲ. ಆ ಸರಣಿಯಲ್ಲಿ ಬಾಥಮ್ 399 ರನ್‌ಗಳನ್ನು ಗಳಿಸಿದ್ದೇ ಅಲ್ಲದೆ 34 ವಿಕೆಟ್‌ಗಳನ್ನೂ ಕಿತ್ತರು. ಟೀಕೆಗಳಿಗೆ ಉತ್ತರವನ್ನು ಹೀಗೆಯೇ ಕೊಡಬೇಕು.

ಇಯಾನ್ ಬಾಥಮ್
ಇಯಾನ್ ಬಾಥಮ್

ಭಾರತದ ರಿಷಭ್ ಪಂತ್ ಮಾಡಿದ್ದೂ ಅದನ್ನೇ. ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಮೇಲೆ ಶುರುವಾದ ಅವರ ಉತ್ಸಾಹದ ಸೆಲೆ ಇನ್ನೂ ಬತ್ತಿಲ್ಲ. ಇಂಗ್ಲೆಂಡ್ ಎದುರಿನ ಏಕದಿನದ ಪಂದ್ಯಗಳಲ್ಲಿ ಅವರು ಆಡಿದ ನಿರ್ಭಿಡೆಯ ಆಟವನ್ನು ನೋಡಿ ವೀರೇಂದ್ರ ಸೆಹ್ವಾಗ್‌ ಅವರಿಗೆ ತಮ್ಮ ವೃತ್ತಿಬದುಕಿನ ಮೊದಲ ದಿನಗಳು ನೆನಪಾಗಿವೆ. ’ಎಪ್ಪತ್ತು ಚಿಲ್ಲರೆ ರನ್‌ಗಳನ್ನು ಹೊಡೆದ ನಂತರ ಕೊನೆಯವರೆಗೆ ಬ್ಯಾಟಿಂಗ್ ಮಾಡುವ ಕೌಶಲವನ್ನು ಪಂತ್ ರೂಢಿಸಿಕೊಂಡರೆ ಯಾವುದೇ ತಂಡಕ್ಕೂ ನಡುಕ ಹುಟ್ಟಿಸಬಲ್ಲ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಬಲ್ಲರು’ ಎಂದು ಸೆಹ್ವಾಗ್ ನೀಡಿರುವ ಸಲಹೆ ಸಹ ಅರ್ಥಪೂರ್ಣ.

ಭಾರತದ ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ– ಅದರಲ್ಲೂ ಏಕದಿನದ ಪಂದ್ಯಗಳಲ್ಲಿ– 2011ರ ವಿಶ್ವಕಪ್ ನಂತರದಿಂದ ಗಮನಾರ್ಹ ಬದಲಾವಣೆ ಆಗಿದೆ. ಮೊದಲ ಹತ್ತು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ತವರು ನೆಲದಲ್ಲಿ ಒಮ್ಮೆ ಮಾತ್ರ 65 ರನ್ ಗಳಿಸಿದ್ದು ಅದರ ವೇಗದ ಆಟ ಮುಕ್ಕಾಗಿರುವುದಕ್ಕೆ ಸಾಕ್ಷಿ. 2013ರ ಚಾಂಪಿಯನ್ಸ್ ಟ್ರೋಫಿಯ ನಂತರ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಇಬ್ಬರೂ ಭಾರತದ ಆರಂಭಿಕ ಆಟಗಾರರಾಗಿ ತಂತ್ರಗಾರಿಕೆಯನ್ನು ಬದಲಿಸಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರರ ಬ್ಯಾಟಿಂಗ್ ಶಕ್ತಿ ಅಷ್ಟಾಗಿ ಇಲ್ಲದೇ ಇದ್ದರಿಂದ ಈ ಇಬ್ಬರ ಮೇಲೆ ಹೆಚ್ಚು ಅವಲಂಬನೆ ಇತ್ತು. ವಿಶ್ವದ ಬೇರೆ ಬೇರೆ ತಂಡಗಳ 12 ಆರಂಭಿಕ ಜೋಡಿಗಳು ಈ ಅವಧಿಯಲ್ಲಿ 1000ಕ್ಕಿಂತ ಹೆಚ್ಚು ರನ್‌ಗಳನ್ನು ಒಟ್ಟಾಗಿ ಕಲೆಹಾಕಿವೆ. ಆ ಪೈಕಿ ಸ್ಕಾಟ್ಲೆಂಡ್‌ನ ಜೋಡಿಯನ್ನು ಹೊರತುಪಡಿಸಿದರೆ, ಭಾರತದ ರೋಹಿತ್ ಹಾಗೂ ಧವನ್ ಇಬ್ಬರೇ ನಿಧಾನ ಗತಿಯಲ್ಲಿ ರನ್ ಸೇರಿಸಿರುವುದು. ಒತ್ತಡದ ಭಾರ ಅವರಿಬ್ಬರ ಮೇಲೆ ಎಷ್ಟಿದೆ ಎನ್ನುವುದನ್ನು ಈ ಅಂಕಿಅಂಶ ಪುಷ್ಟೀಕರಿಸುತ್ತದೆ.

ಕೆಲವೇ ವರ್ಷಗಳ ಹಿಂದೆ ಪಟಪಟನೆ ವಿಕೆಟ್ ಬಿದ್ದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರಕ್ಷಣಾತ್ಮಕ ಆಟಕ್ಕೆ ಮೊರೆಹೋಗುತ್ತಿದ್ದರು. ವಿಕೆಟ್ ಉಳಿಸಿಕೊಳ್ಳುವುದನ್ನೇ ಉದ್ದೇಶ ಮಾಡಿಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಹಾಗಿಲ್ಲ. ರಿಷಭ್ ಪಂತ್ ಪುಣೆಯ ಕೊನೆಯ ಏಕದಿನ ಪಂದ್ಯದಲ್ಲಿ ಆಡಲು ಬಂದ ಗಳಿಗೆ ಗಮನಿಸಿ. 17ನೇ ಓವರ್‌ನಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 117 ರನ್ ಸೇರಿಸಿದ್ದ ಸಂದರ್ಭ ಅದು. ಆಮೇಲೆ ವಿರಾಟ್ ಕೊಹ್ಲಿ ಬೇಗ ಔಟಾದರು. ಕೆ.ಎಲ್. ರಾಹುಲ್ ಕೂಡ ವಿಕೆಟ್ ಒಪ್ಪಿಸಿದರು. ಇನ್ನೊಂದು ತುದಿಯಲ್ಲಿದ್ದ ಪಂತ್ ಇದರಿಂದ ತುಸುವೂ ತಣ್ಣಗಾಗಲಿಲ್ಲ. ಲಿಯಾಮ್ ಲಿವಿಂಗ್‌ಸ್ಟೋನ್ ಎಸೆತವನ್ನು ನಿರ್ಭಿಡೆಯಿಂದ ಸಿಕ್ಸರ್‌ಗೆ ಎತ್ತಿ ತಮ್ಮತನದ ರುಜು ಹಾಕಿದರು. ಆಮೇಲೆ ಅವರನ್ನು ಸೇರಿಕೊಂಡ ಹಾರ್ದಿಕ್ ‍ಪಾಂಡ್ಯ, ವೈವಿಧ್ಯಮಯ ಎಸೆತಗಳಿಂದ ಆಗೀಗ ಕಂಗಾಲು ಮಾಡಬಲ್ಲ ಮೊಯಿನ್ ಅಲಿ ಅವರನ್ನೇ ಗುರಿಯಾಗಿಸಿಕೊಂಡು ಸಿಕ್ಸರ್‌ಗಳನ್ನು ಎತ್ತಿದರು. 4 ಸಿಕ್ಸರ್‌ ಹಾಗೂ 5 ಬೌಂಡರಿಗಳು ಪಂತ್ ಅವರ 78 ರನ್‌ಗಳ ಇನಿಂಗ್ಸ್‌ನಲ್ಲಿ ಇದ್ದರೆ, ಅಷ್ಟೇ ಬೌಂಡರಿ ಹಾಗೂ ಸಿಕ್ಸರ್‌ಗಳು ಹಾರ್ದಿಕ್ ಗಳಿಸಿದ 64 ರನ್‌ಗಳ (44 ಎಸೆತ) ಆಟದಲ್ಲೂ ಇದ್ದವು. ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಕೂಡ 3 ಸಿಕ್ಸರ್‌ಗಳನ್ನು ಸಿಡಿಸಿ, ಕೆಳ ಮಧ್ಯಮ ಕ್ರಮಾಂಕದಿಂದ ಬಾಲಂಗೋಚಿಯೂ ಹೇಗೆ ಸಕಾರಾತ್ಮಕ ಸ್ಫೂರ್ತಿ ಪಡೆಯಬಹುದು ಎಂದು ಸಾರಿದರು.

ಒಂದೆಡೆ ವಿಕೆಟ್‌ಗಳು ಬೀಳುತ್ತಿದ್ದರೂ ಇನ್ನೊಂದು ಕಡೆ ತಮ್ಮದೇ ಆಟದ ವೈಖರಿ ತೋರುವ ಧೋರಣೆಯನ್ನು ಗಮನಿಸಿದಾಗಲೆಲ್ಲ 2008ರ ಏಷ್ಯಾ ಕಪ್‌ ಫೈನಲ್‌ನಲ್ಲಿ ಸನತ್ ಜಯಸೂರ್ಯ ಆಡಿದ ರೀತಿ ನೆನಪಾಗುತ್ತದೆ. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಒಂದು ಕಡೆ ಬೇಗ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 66 ರನ್ ಗಳಿಸುವಷ್ಟರಲ್ಲಿ ನಾಲ್ವರು ಔಟಾಗಿದ್ದರು. ಆರ್‌.ಪಿ.ಸಿಂಗ್, ಇಶಾಂತ್ ಶರ್ಮ ಹಾಗೂ ಇರ್ಫಾನ್ ಪಠಾಣ್ ಬೌಲಿಂಗ್‌ನ ವೇಗ ವೈವಿಧ್ಯ ಅನೇಕರನ್ನು ಕಂಗಡಿಸಿತ್ತು. ಆದರೆ, ಜಯಸೂರ್ಯ ಮಾತ್ರ ತಣ್ಣಗಾಗಲೇ ಇಲ್ಲ. ನಾಲ್ಕು ವಿಕೆಟ್‌ಗಳು ಬಿದ್ದ ನಂತರವೂ 21 ಎಸೆತಗಳಲ್ಲಿ ಅವರು 45 ರನ್‌ಗಳನ್ನು ಜಮೆ ಮಾಡಿ, ಭಾರತದ ಬೌಲರ್‌ಗಳಿಗೆ ಪ್ರತಿದಾಳಿ ಮಾಡಿದರು. 114 ಎಸೆತಗಳಲ್ಲಿ ಆ ದಿನ ಅವರು 5 ಸಿಕ್ಸರ್ ಹಾಗೂ 9 ಬೌಂಡರಿಗಳಿದ್ದ 125 ರನ್‌ಗಳ ದೊಡ್ಡ ಮೊತ್ತದ ಕಾಣ್ಕೆ ನೀಡಿದ್ದೇ ಭಾರತ 100 ರನ್‌ಗಳಿಂದ ಪಂದ್ಯ ಸೋಲಲು ಕಾರಣವಾಯಿತು.

ಸನತ್ ಜಯಸೂರ್ಯ
ಸನತ್ ಜಯಸೂರ್ಯ

ಈಗ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಧೋರಣೆಯನ್ನು ಗಮನಿಸಿದರೆ ಹಳೆಯ ಜಯಸೂರ್ಯ, ಸೆಹ್ವಾಗ್, ಕಲುವಿತರಣ ನೆನಪಾಗುತ್ತಾರೆ. ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೂಡ ಎಂದಿನ ಲಯಕ್ಕೆ ಮರಳಿದರೆ, ಏಕದಿನದ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದಾಗ 350 ರನ್‌ಗಳ ಮೊತ್ತವನ್ನು ಗುರಿಯಾಗಿಟ್ಟುಕೊಳ್ಳುವುದು ಸಹಜ ಎನ್ನುವಂತೆ ಆದೀತು.

ನಗುಮುಖದ ಪಂತ್ ಬಿಸಿಯಾದ ಆಟಕ್ಕೀಗ ದೊಡ್ಡ ಫಲ. ಇಂಡಿಯನ್ ಪ್ರೀಮಿಯರ್‌ ಲೀಗ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ಹೊಣೆಗಾರಿಕೆ ಅವರಿಗೆ ಸಂದಿದೆ. ಜನಪ್ರಿಯತೆ, ಹಣ, ಜವಾಬ್ದಾರಿ ಇವೆಲ್ಲವನ್ನೂ ಇನ್ನು ಮುಂದೆ ಅವರು ಹೇಗೆ ನಿಭಾಯಿಸುತ್ತಾರೆನ್ನುವುದನ್ನು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT