ಗುರುವಾರ , ಅಕ್ಟೋಬರ್ 6, 2022
26 °C

PV Web Exclusive: ಆಫ್‌ಸ್ಟಂಪಿನಾಚೆಯ ಹಳ್ಳದಲ್ಲಿ ಕೊಹ್ಲಿ!

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಆಟದ ಮನೆ

***

ವಿರಾಟ್ ಕೊಹ್ಲಿ ದಾಳಿಕೋರ ಬ್ಯಾಟ್ಸ್‌ಮನ್. ಅವರ ಕವರ್‌ಡ್ರೈವ್‌ನ ಶಬ್ದವೇ ರೋಮಾಂಚನ. ‘ರನ್ ಮಷಿನ್’ ಎಂಬ ಗುಣವಿಶೇಷಣದ ಮೇಲೆ ದೂಳು ಮೆತ್ತಿಕೊಂಡಿರುವ ಈ ಹೊತ್ತಿನಲ್ಲಿ ಅವರ ಐಬುಗಳ ಮೇಲೂ ಮಸೂರ ಹಾಕಬೇಕಾಗುತ್ತದೆ. ಖುದ್ದು ಅವರೂ ತಾವು ಜಾರುತ್ತಿರುವ ಹಳ್ಳಕ್ಕೆ ಮಣ್ಣುಹಾಕುವ ಕೆಲಸದಲ್ಲಿ ತೊಡಗಿರಬಹುದು.

***

ಚೆಂದದ ಕವರ್‌ಡ್ರೈವ್ ಮಾಡಿದ ವಿರಾಟ್‌ ಕೊಹ್ಲಿ ‘ಈ ಸಲ ಕಪ್ ನಮ್ದೇ’ ಎನ್ನುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಹಳೆಯ ನುಡಿಗಟ್ಟನ್ನು ಉಜ್ಜುವಹಾಗೆ ಮಾಡುವರೇನೋ ಎಂದುಕೊಳ್ಳುತ್ತಿರುವಾಗಲೇ ಮುಂದಿನ ಎಸೆತದ ದಿಕ್ಕನ್ನು ತಪ್ಪಾಗಿ ಅಂದಾಜಿಸಿದರು. ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಪ್ರಸಿದ್ಧ ಕೃಷ್ಣ ಹಾಕಿದ ಎಸೆತ ಹಿಂದಿನದಕ್ಕಿಂತ ಬೇರೆಯದೇ ಲೈನ್‌ನಲ್ಲಿ ಇದ್ದದ್ದು ಕೊಹ್ಲಿಗೆ ಗೊತ್ತಾಗುವಷ್ಟರಲ್ಲಿ ಅವರು ಎಲ್‌ಬಿ ಬಲೆಗೆ ಬಿದ್ದು ಆಗಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್) ಕ್ರಿಕೆಟ್‌ನ ಈ ಋತುವಿನ ಪಂದ್ಯಗಳು ಸೆಪ್ಟಂಬರ್ 20ರಿಂದ ಮುಂದುವರಿಯತೊಡಗಿದ್ದೇ ಕೊಹ್ಲಿಯತ್ತ ನೆಟ್ಟ ಕಣ್ಣುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಆ ಕಣ್ಣುಗಳುಳ್ಳವರ ಬಾಯಿಗಳೂ ಆಮೇಲೆ ಸುಮ್ಮನಿರಲಾದೀತೆ?

ವಿಂಡೀಸ್‌ನ ದೈತ್ಯ ಆಟಗಾರ ಎನಿಸಿಕೊಂಡಿದ್ದ ಬ್ರಯಾನ್ ಲಾರಾ, ‘ಆಫ್‌ಸೈಡ್‌ನ ದಿಕ್ಕಿನಲ್ಲಿ ಬರುವ ಚೆಂಡುಗಳನ್ನು ಆಡುವಾಗ ಕೊಂಚ ತಂತ್ರದಲ್ಲಿ ವಿರಾಟ್ ಕೊಹ್ಲಿ ಎಡವುತ್ತಿರುವುದರ ಸೂಚನೆ ಇದು’ ಎಂದು ಅಭಿಪ್ರಾಯ ತೇಲಿಬಿಟ್ಟರು. ಫ್ರಂಟ್‌ಫುಟ್‌ನಲ್ಲಿ ಆಡುವ ಪೂರ್ವನಿರ್ಧಾರವನ್ನು ಮೊದಲೇ ಮಾಡಿರುವುದನ್ನು ಬೌಲರ್ ಅಂದಾಜು ಮಾಡಿ ಬಲೆಯಲ್ಲಿ ಬೀಳಿಸಲು ಹೆಣೆಯುವ ತಂತ್ರಕ್ಕೆ ತನ್ನನ್ನು ತಾನೇ ಒಡ್ಡಿಕೊಂಡಂತೆ ಇದು ಎನ್ನುವುದು ಅವರ ವ್ಯಾಖ್ಯಾನ. ಲಾರಾ ಟೆಸ್ಟ್‌ ಕ್ರಿಕೆಟ್‌ನ ತಮ್ಮ ವೈಭವದ ದಿನಗಳಲ್ಲಿ ಫುಟ್‌ವರ್ಕ್‌ನಿಂದಲೇ ಘಟಾನುಘಟಿ ಬೌಲರ್‌ಗಳೂ ತಲೆಯನ್ನು ಪರಪರ ಕೆರೆದುಕೊಳ್ಳುವಂತೆ ಮಾಡುತ್ತಿದ್ದುದನ್ನು ನಾವು ಕಂಡಿದ್ದೇವೆ, ಹೀಗಾಗಿ ಅವರ ವಿಶ್ಲೇಷಣೆಯನ್ನು ತಳ್ಳಿಹಾಕುವಂತಿಲ್ಲ. ಸಚಿನ್ ತೆಂಡೂಲ್ಕರ್ ಕೂಡ ಇಂಥದ್ದೇ ಅಭಿಪ್ರಾಯವನ್ನು ಹೋಲುವ ವಾದವನ್ನು ಕೆಲವು ದಿನಗಳ ಹಿಂದೆಯಷ್ಟೇ ಮಂಡಿಸಿದ್ದರು.


-ವಿರಾಟ್ ಕೊಹ್ಲಿ

2011ರಲ್ಲಿ ಕೊಹ್ಲಿ ಟೆಸ್ಟ್‌ ಕ್ರಿಕೆಟ್ ಆಡಲು ಶುರುಮಾಡಿದಾಗ ಅವರ ಆ ವರ್ಷದ ಸರಾಸರಿ ಸ್ಕೋರ್ 22.4. ಆಮೇಲೆ 2020ರ ವರೆಗೆ ಯಾವ ವರ್ಷವೂ ಅವರ ರನ್‌ ಗಳಿಕೆಯ ಸರಾಸರಿ 40ಕ್ಕಿಂತ ಕೆಳಗೆ ಇಳಿದಿರಲಿಲ್ಲ. 2014, 16, 17, 19ರಲ್ಲಿ ಕ್ರಮವಾಗಿ 60.5, 60.4, 76.2, 62.9 ಸರಾಸರಿಯಲ್ಲಿ ಟೆಸ್ಟ್‌ ರನ್‌ಗಳನ್ನು ಕಲೆಹಾಕಿದ್ದರು. 2017 ಅವರಿಗೆ ಹೆಚ್ಚು ಸಿಹಿ ತಂದ ವರ್ಷ. 2020ರಲ್ಲಿ 6 ಇನಿಂಗ್ಸ್‌ಗಳಲ್ಲಿ ಕೇವಲ 116 ರನ್ (ಸರಾಸರಿ 19.3), ಈ ವರ್ಷ ಇದುವರೆಗೆ 15 ಇನಿಂಗ್ಸ್‌ಗಳಿಂದ 1,002 (29.8ರ ಸರಾಸರಿ) ರನ್ ಗಳಿಸಿರುವುದು ಅವರ ಮನೋಬಲ ಕಡಿಮೆಯಾಗಿರುವುದಕ್ಕೆ ಕನ್ನಡಿ ಹಿಡಿಯುವ ಅಂಕಿಅಂಶ. ಐದು ಅರ್ಧ ಶತಕಗಳಷ್ಟೇ ಎರಡು ವರ್ಷಗಳಲ್ಲಿ ಅವರಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಮ್ಮಿವೆ. ಒಂದೂ ಶತಕ ಗಳಿಸಲು ಆಗಿಲ್ಲ. ಈ ನಿಟ್ಟಿನಲ್ಲಿ ‘ರನ್ ಮಷಿನ್’ ಎಂದು ಅವರಿಗೆ ಕೊಟ್ಟಿರುವ ಗುಣವಿಶೇಷಣ ಮಂಕಾದಂತೆ ಕಾಣುತ್ತಿರುವುದು ಸಹಜವೇ.

ಏಕದಿನದ ಪಂದ್ಯಗಳಲ್ಲಿ ಇದೇ ಅವಧಿಯಲ್ಲಿ ಶತಕ ಗಳಿಸಲು ಆಗದೇ ಹೋದರೂ ಅವರ ರನ್ ಗಳಿಕೆಯ ಸರಾಸರಿ 2020ರಲ್ಲಿ 47.9 ಹಾಗೂ 2021ರಲ್ಲಿ ಇದುವರೆಗೆ 43.0 ಇದೆ. ಇದು ಸಮಾಧಾರನಕರ ವಿಷಯ. ಟ್ವೆಂಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2020ರಲ್ಲಿ 36.9 ಹಾಗೂ 2021ರಲ್ಲಿ ಇಲ್ಲಿಯವರೆಗೆ 115.5ರ ಸರಾಸರಿಯಲ್ಲಿ ರನ್ ಕಲೆಹಾಕಿರುವುದು ಎಲ್ಲ ಟೀಕೆಗಳ ನಡುವೆಯೂ ಅವರು ಪೂರ್ತಿ ಲಯವನ್ನು ಕಳೆದುಕೊಂಡಿಲ್ಲ ಎನ್ನುವುದಕ್ಕೆ ಸಾಕ್ಷಿ. 4 ಅರ್ಧ ಶತಕಗಳು ಬಂದಿವೆಯಾದರೂ ಅವರ ಗತವೈಭವ ಮರುಕಳಿಸಬೇಕಿದೆ. ಐಪಿಎಲ್‌ನಲ್ಲಿ ಈ ಋತುವಿನಲ್ಲಿ ಇದುವರೆಗಿನ ಸರಾಸರಿ 29. ಇದು ಕಳಪೆ ಅಲ್ಲವಾದರೂ ಅವರು ಪದೇಪದೇ ಬೌಲರ್‌ಗಳ ತಂತ್ರಕ್ಕೆ ನಿರುತ್ತರರಾಗುತ್ತಿರುವುದು ತಲೆಕೆಡಿಸಿಕೊಳ್ಳಬೇಕಾದ ವಿಷಯವಂತೂ ಹೌದು.

ಲೀಡ್ಸ್‌ನಲ್ಲಿ ಆಗಸ್ಟ್‌ 28ರಂದು ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಪಾದಚಲನೆಯ ಕಥನಗಳ ಸೂಕ್ಷ್ಮಗಳು ನೋಡಲು ಚೆನ್ನಾಗಿ ಸಿಕ್ಕವು. ಆ್ಯಂಡರ್‌ಸನ್ ಹಾಕಿದ ಚೆಂಡೊಂದನ್ನು ಅಟ್ಟಿಸಿಕೊಂಡು ಆಡುವಂತೆ ಆಫ್‌ಸ್ಟಂಪಿನ ಆಚೆಯತ್ತ ನಡೆಯುತ್ತಾ ಕೊಹ್ಲಿ ಬ್ಯಾಟ್ ಬೀಸಿದರು. ಏನೋ ಶಬ್ದ. ಜಾಸ್ ಬಟ್ಲರ್ ಕ್ಯಾಚ್ ಹಿಡಿದದ್ದೇ ಸುತ್ತಲಿದ್ದ ಎಲ್ಲರೂ ಅಪೀಲು ಮಾಡಿದರು. ಆ್ಯಂಡರ್‌ಸನ್ ಔಟ್ ಮಾಡಿದ್ದು ಖಚಿತ ಎನ್ನುವಷ್ಟು ವಿಶ್ವಾಸದಿಂದ ಮುಖ ಅರಳಿಸಿದರು. ನಾನ್‌ಸ್ಟ್ರೈಕರ್ ಆಗಿದ್ದ ಅಜಿಂಕ್ಯ ರಹಾನೆಗೆ ಬ್ಯಾಟ್‌ಗೂ ಚೆಂಡಿಗೂ ನಡುವೆ ಇದ್ದಿದ್ದ ಜಾಗದಿಂದ ಮೂಡಿದ ಬೆಳಕು ಕಂಡಿತ್ತು. ಅವರು ‘ರಿವ್ಯೂ’ ಕೇಳುವಂತೆ ಸಲಹೆಯಿತ್ತರು. ಅಜಿಂಕ್ಯ ಕಣ್ಣುಗಳು ಕಂಡಿದ್ದು ನಿಜ. ಕೊಹ್ಲಿ ಔಟಾಗದೇ ಉಳಿದರು. ಅರ್ಧಶತಕ ಕೂಡ ಗಳಿಸಿದರು. 125 ಎಸೆತಗಳನ್ನು ಎದುರಿಸಿಯೂ ಲಯ ಕಂಡುಕೊಳ್ಳಲು ಅವರು ಇನ್ನೂ ಹೆಣಗಾಡುತ್ತಿರುವುದಕ್ಕೆ ಉದಾಹರಣೆಗಳು ಸಿಗುತ್ತಲೇ ಇದ್ದವು. ಆ್ಯಂಡರ್‌ಸನ್ ತಮ್ಮ ಮನೋಬಲವನ್ನು ಹಿಂಡಿಹಾಕುವಂಥ ಲೈನ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದರೆ, ಆಲಿ ರಾಬಿನ್‌ಸನ್ ಕೆಣಕುವ ಯುವಕನಂತೆ ಕೊಹ್ಲಿ ಕಣ್ಣಿಗೆ ಕಾಣತೊಡಗಿದ್ದರು. 55 ರನ್‌ಗಳಾಗಿದ್ದಾಗ ನಾಯಕ ಜೋ ರೂಟ್‌ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ರಾಬಿನ್‌ಸನ್ ಕೆಣಕಿದ್ದು ಫಲ ನೀಡಿತ್ತು. 2017ರಿಂದ 2021ರ ಈ ಮೂರನೇ ಟೆಸ್ಟ್‌ವರೆಗೆ ಕೊಹ್ಲಿ ತಾವು ಔಟೆಂದು ಅಂಪೈರ್ ತೀರ್ಪು ನೀಡಿದ ಸಂದರ್ಭಗಳ ಪೈಕಿ 13 ಸಲ ‘ರಿವ್ಯೂ’ ಮೊರೆಹೋಗಿದ್ದರು. ತಾನು ಇನ್ನೂ ಆಡಬೇಕು, ಔಟಾಗಿರುವುದು ಅನುಮಾನ ಎಂಬ ಮನದೊಳಗಿನ ಹುಳು ಹೇಗೆ ಗುಂಯ್‌ಗುಡುತ್ತದೆ ಎನ್ನುವುದಕ್ಕೆ ಇದುವೇ ಉದಾಹರಣೆ.

ಕೊಹ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಲು ಪರದಾಡುತ್ತಿದ್ದಾಗ ಭಾರತ ಮಹಿಳಾ ಕ್ರಿಕೆಟ್‌ನಲ್ಲಿ ಹಿಂದೆ ಛಾಪು ಮೂಡಿಸಿದಂಥ ಅಂಜುಂ ಚೋಪ್ರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದು ಹೀಗಿತ್ತು: ‘ತಪ್ಪೇ ಎಸಗದಂತೆ ಆಡಬೇಕು ಎಂದು ಪ್ರಜ್ಞಾಪೂರ್ವಕವಾಗಿ ಹೊರಟಾಗ ಈ ರೀತಿ ಆಗುತ್ತದೆ. ವಿರಾಟ್ ಕೊಹ್ಲಿ ತಾಂತ್ರಿಕವಾಗಿ ಎಷ್ಟು ನಿಪುಣರು ಎನ್ನುವುದು ಗೊತ್ತಿದೆ. ಆದರೆ, ಮನಸ್ಸಿನ ತುಂಬಾ ತಪ್ಪು ಮಾಡಲೇಕೂಡದು ಎಂದುಕೊಂಡು ಆಡಲು ಇಳಿದರೆ, ಒಂದು ಕಡೆ ಆತ್ಮವಿಶ್ವಾಸ ಕೂಡ ಕೈಕೊಡುತ್ತದೆ. ಅವರ ವಿಷಯದಲ್ಲಿ ಅದೇ ಈಗ ಆಗುತ್ತಿರುವುದು. ಇಂಥ ದಿನಗಳನ್ನು ಅದೆಷ್ಟೋ ಕ್ರಿಕೆಟಿಗರು ಕಂಡುಂಡಿದ್ದಾರೆ.’


-ವಿರಾಟ್ ಕೊಹ್ಲಿ

ತಮ್ಮ ಅದ್ಭುತವಾದ ಡಿಫೆನ್ಸ್‌ಗೆ ಹೆಸರಾಗಿದ್ದ ರಾಹುಲ್ ದ್ರಾವಿಡ್ ಹಿಂದೊಮ್ಮೆ ಪಾಕಿಸ್ತಾನದ ಮೊಹಮ್ಮದ್ ಆಸಿಫ್, ಆಮೀರ್ ಅವರ ಒಳನುಗ್ಗುವ ಎಸೆತಗಳಿಗೆ ನಿರುತ್ತರರಾಗಿದ್ದನ್ನು ನಾವು ಕಂಡಿದ್ದೇವೆ. ಬ್ಯಾಟ್ಸ್‌ಮನ್‌ಗಳ ದಾಳಿಗೆ ಬೌಲರ್‌ಗಳೂ ಸದಾ ಕಾಲ ಪ್ರತಿತಂತ್ರ ರೂಪಿಸುತ್ತಿರುತ್ತಾರೆ. ಆ್ಯಂಡರ್‌ಸನ್ ತರಹದ ಅನುಭವಿಯ ಮನೋಬಲ ಕೊಹ್ಲಿ ಅವರದ್ದಕ್ಕಿಂತ ಈ ವರ್ಷದ ಟೆಸ್ಟ್‌ ಸರಣಿಯಲ್ಲಿ ಹೆಚ್ಚಾಗಿದ್ದದ್ದೇ ಅಂಥ ಪ್ರತಿತಂತ್ರದ ಕಾರಣಕ್ಕೆ.

2014ರಲ್ಲಿ ಇಂಗ್ಲೆಂಡ್ ಎದುರೇ ಕೊಹ್ಲಿಯ ಗರಿಷ್ಠ ಟೆಸ್ಟ್‌ ಇನಿಂಗ್ಸ್ ಮೊತ್ತ 36 ಆಗಿತ್ತು. 2018ರಲ್ಲಿ 149 ಹಾಗೂ 103 ರನ್‌ಗಳ ಎರಡು ಇನಿಂಗ್ಸ್‌ಗಳಲ್ಲದೆ ಮೂರು ಅರ್ಧ ಶತಕಗಳು ಹೊಮ್ಮಿದವು. ಅವುಗಳಲ್ಲಿ ಒಂದು 97 ರನ್‌ಗಳ ದೊಡ್ಡ ಮೊತ್ತ ಎನ್ನುವುದಕ್ಕೆ ಅಡಿಗೆರೆ ಎಳೆಯಬೇಕು. ಇಂಗ್ಲೆಂಡ್‌ನ ನೆಲದ ವರ್ತನೆ, ಆ್ಯಂಡರ್‌ಸನ್ ತಂತ್ರ ಆಗಲೂ ಇದ್ದವು. ಕೊಹ್ಲಿ ಅವನ್ನು ಹೇಗೆ ಪ್ರತಿದಾಳಿಯ ಮೂಲಕ ಎದುರಿಸಿದ್ದರೆನ್ನುವುದಕ್ಕೆ ಆ ಸ್ಕೋರ್‌ಗಳೇ ಸಾಕ್ಷಿ.

ಈ ವರ್ಷ ಅವರ ಆಟದಲ್ಲಿ ಬಹುತೇಕರು ಗುರುತಿಸಿರುವ ಲೋಪವೆಂದರೆ, ಆಫ್‌ ಸ್ಟಂಪ್‌ನ ಹೊರಗಿನ ಚೆಂಡನ್ನು ಕೆಣಕುವ ಪರಿಯಲ್ಲಿ ಆ್ಯಂಗಲ್ಡ್‌ ಆಗಿ ಬ್ಯಾಟನ್ನು ಆಡಿಸುತ್ತಿರುವ ಪರಿ. ಅವರ ಈ ಧೋರಣೆಯೇ ಅನೇಕ ಇನಿಂಗ್ಸ್‌ಗಳಲ್ಲಿ ಕೈಕೊಟ್ಟಿರುವುದನ್ನು ಉದಾಹರಣೆಗಳ ಸಮೇತ ಬಗೆದು ನೋಡಬಹುದು.

ಖುದ್ದು ಕೊಹ್ಲಿ ಅವರಿಗೇ ತಮ್ಮ ತಪ್ಪಿನ ಅರಿವು ಇಲ್ಲದಿರಲು ಸಾಧ್ಯವಿಲ್ಲ. ಎಲ್ಲ ಆಟಗಾರನಿಗೂ ಇಂತಹ ದಿನಗಳು ಎದುರಾಗುತ್ತಾ ಇರುತ್ತವೆ. ದಾಳಿಕೋರ ಮನಸ್ಥಿತಿಯ ನಾಯಕನಾಗಿ ಅವರಿಗೆ ಯಶಸ್ಸು ಸಲ್ಲುತ್ತಿರುವುದನ್ನು ನೋಡುತ್ತಿದ್ದೇವೆ. ಆಟಗಾರನಾಗಿ ಅವರು ಹಳೆಯ ಲಯವನ್ನು ಮರಳಿ ಪಡೆಯುವುದನ್ನು ನೋಡಲು ಬಹುತೇಕರು ಕಾತರರಾಗಿದ್ದಾರೆ.

‘ಕೊಹ್ಲಿಯಾಗಿ ಇರುವುದು ಸುಲಭವಲ್ಲ’ ಎಂದು ಇಂಗ್ಲೆಂಡ್‌ನ ಹಳೆಯ ಆಟಗಾರ ಕೆವಿನ್ ಪೀಟರ್‌ಸನ್ ತೂಕದ ನುಡಿಗಟ್ಟೊಂದನ್ನು ತೇಲಿಬಿಟ್ಟಿದ್ದರು. ನಿಜ, ತಾಂತ್ರಿಕವಾಗಿ ಅಷ್ಟು ಪಕ್ಕಾ ಎನ್ನುವಂತೆ ಆಡಿ ದೀರ್ಘ ಕಾಲ ರಸದೂಟ ಉಣಬಡಿಸಿರುವಂತಹ ಆಟಗಾರನಲ್ಲಿ ಅದೇ ಮೊನಚನ್ನು ಸದಾ ನೋಡಬಯಸುವ ಕಣ್ಣುಗಳಿಗೆ ಹಾಗೆಯೇ ಅನ್ನಿಸುವುದು. ಧೋನಿ ಹೆಲಿಕಾಪ್ಟರ್ ಶಾಟ್‌ಗಳನ್ನು ಕಂಡುಂಡವರಿಗೆ ಅವರ ದಣಿದ ಆಟ ನೋಡುವುದು ಎಷ್ಟು ಕಷ್ಟವೋ, ಹಾಗೆಯೇ ಕೊಹ್ಲಿ ಆಫ್‌ಸ್ಟಂಪಿನಾಚೆಯ ಚೆಂಡನ್ನು ಕೆಣಕುವುದನ್ನು ಕಾಣುವುದೂ ಕಷ್ಟ. ಈ ಬೇಲಿಯನ್ನು ಅವರೆಂದು ದಾಟುವರೋ, ನೋಡೋಣ.


ಲಂಡನ್‌ನಲ್ಲಿ ರಾಬಿನ್‌ಸನ್ ಎಸೆತದಲ್ಲಿ ಕೊಹ್ಲಿ ಔಟಾದ ಗಳಿಗೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು