ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ನಂತರ ಕಾಡುತ್ತಿರುವ ಪ್ರಶ್ನೆಗಳು

ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಮೂಡಿದ ಗೊಂದಲಗಳು
Last Updated 14 ಮಾರ್ಚ್ 2019, 20:02 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ವಿಶ್ವಕಪ್‌ ಹಿನ್ನೆಲೆಯಲ್ಲಿ ಮಹತ್ವದ್ದಾಗಿತ್ತು. ಸರಣಿಯಲ್ಲಿ ತಂಡ ಒಂದಷ್ಟು ಯಶಸ್ಸು ಕಂಡಿದ್ದರೂ ಅನೇಕ ಗೊಂದಲಗಳು ಪರಿಹಾರ ಕಾಣದೇ ಉಳಿದುಕೊಂಡಿವೆ.

ನಾಲ್ಕನೇ ಕ್ರಮಾಂಕದಲ್ಲಿ ಆಡುವ ಬ್ಯಾಟ್ಸ್‌ಮನ್ ಯಾರು? ಶಿಖರ್‌ ಧವನ್‌ ವೈಫಲ್ಯ ಹೀಗೆಯೇ ಮುಂದುವರಿದರೆ ಅವರ ಬದಲಿಗೆ ಕಣಕ್ಕೆ ಇಳಿಯುವ ಆರಂಭಿಕ ಬ್ಯಾಟ್ಸ್‌ಮನ್ ಯಾರು? ಭಾರತ ತಂಡದಲ್ಲಿ ನಾಲ್ಕನೇ ವೇಗಿಯೊಬ್ಬನಿಗೆ ಅವಕಾಶ ಸಿಗುವ ಸಾಧ್ಯತೆ ಇದೆಯೇ? ಅಗತ್ಯ ಇದ್ದರೆ ಎರಡನೇ ವಿಕೆಟ್ ಕೀಪರ್ ಯಾರು? ರವೀಂದ್ರ ಜಡೇಜ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದಾರೆಯೇ...?

ಮುಂತಾದ ಪ್ರಶ್ನೆಗಳು ಆಸ್ಟ್ರೇಲಿಯಾ ಎದುರಿನ ಸರಣಿ ಮುಕ್ತಾಯಗೊಂಡಾಗ ಭಾರತದ ಕ್ರಿಕೆಟ್ ತಜ್ಞರಲ್ಲಿ ಎದ್ದು ನಿಂತಿವೆ. ವಿಶ್ವಕಪ್‌ ಟೂರ್ನಿಗೆ ಮುನ್ನ ಇವುಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಸವಾಲು ತಂಡದ ಮುಂದೆ ಇದೆ. ವಿಶ್ವಕಪ್‌ ಟೂರ್ನಿ ರೌಂಡ್‌ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು ಒಂಬತ್ತು ಪಂದ್ಯಗಳ ಪೈಕಿ ಕನಿಷ್ಠ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸದಿದ್ದರೆ ಸೆಮಿಫೈನಲ್ ಪ್ರವೇಶದ ಹಾದಿ ಕಠಿಣವಾಗಲಿದೆ.

ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿದರೆ ಇತರ ಯಾರಿಗೂ ನಿರೀಕ್ಷೆಗೆ ತಕ್ಕಂತೆ ಆಡಲು ಆಗಲಿಲ್ಲ. ಶಿಖರ್‌ ಧವನ್‌, ಕೇದಾರ್ ಜಾಧವ್‌ ಮತ್ತು ವಿಜಯಶಂಕರ್‌ ಸತತ ವೈಫಲ್ಯ ಕಂಡಿದ್ದರು. ಮೊದಲ ಮೂರು ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪಿಂಗ್‌ನಲ್ಲಿ ಮಿಂಚಿದ್ದರು. ಆದರೆ ಕೊನೆಯ ಎರಡು ಪಂದ್ಯಗಳಲ್ಲಿ ರಿಷಭ್ ಪಂತ್ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಲಿಲ್ಲ.

ಬೌಲಿಂಗ್‌ನಲ್ಲಿ ಕುಲದೀಪ್ ಯಾದವ್‌ ವಿಕೆಟ್‌ಗಳನ್ನು ಕಬಳಿಸಿದರೂ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದಾರೆ. ಹಸ್‌ಪ್ರೀತ್ ಬೂಮ್ರಾ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದಾರೆ. ನಾಲ್ಕು ಪಂದ್ಯಗಳಿಂದ ಮೂರು ವಿಕೆಟ್ ಪಡೆದಿರುವ ರವೀಂದ್ರ ಜಡೇಜ ತಮ್ಮ ವೈಫಲ್ಯಕ್ಕೆ ಕಾರಣ ಹುಡುಕುತ್ತಿದ್ದಾರೆ.

‘ಒತ್ತಡ ನಿರ್ವಹಿಸಲು ಕಲಿಯಿರಿ’
ವಿಶ್ವಕಪ್‌ಗೆ ಸಿದ್ಧಗೊಳ್ಳಲು ಎಲ್ಲ ಆಟಗಾರರೂ ಬದ್ಧ. ಆದ್ದರಿಂದ ಐಪಿಎಲ್ ಸಂದರ್ಭದಲ್ಲಿ ಪ್ರತಿಯೊಬ್ಬರೂ ಒತ್ತಡವನ್ನು ನಿರ್ವಹಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ವಿಶ್ವಕಪ್ ಹಿನ್ನೆಲೆಯಲ್ಲಿ ಕೆಲವು ದೇಶಗಳ ಕ್ರಿಕೆಟ್ ಸಂಸ್ಥೆಗಳು ಐಪಿಎಲ್‌ಗೆ ಆಟಗಾರರನ್ನು ಕಳುಹಿಸಲು ಹಿಂದೇಟು ಹಾಕಿವೆ. ಈ ಕುರಿತು ಮಾತನಾಡಿದ ಕೊಹ್ಲಿ ‘ಐಪಿಎಲ್‌ನಲ್ಲಿ ಆಡಬಾರದು ಎಂದು ಹೇಳುವುದಿಲ್ಲ. ಆದರೆ ಈ ಟೂರ್ನಿಯಿಂದಾಗಿ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಿಶ್ವಕಪ್‌ ಗೆಲ್ಲುವ ಭರವಸೆ
ಭಾರತದ ವಿರುದ್ಧ 3–2ರಿಂದ ಸರಣಿ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್‌ ಈ ಬಾರಿಯ ವಿಶ್ವಕಪ್ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಅಮಾನತುಗೊಂಡಿರುವ ಸ್ಟೀವ್ ಸ್ಮಿತ್ ಮತ್ತು ಡೇವಿಡ್‌ ವಾರ್ನರ್‌ ಅನುಪಸ್ಥಿತಿಯಲ್ಲೂ ಉತ್ತಮ ಸಾಧನೆ ಮಾಡಿರುವುದು ಫಿಂಚ್‌ ಅವರ ವಿಶ್ವಾಸವನ್ನು ಹೆಚ್ಚಿಸಿದೆ. ಭಾರತದಲ್ಲಿ ಆಸ್ಟ್ರೇಲಿಯಾ ಸರಣಿ ಗೆದ್ದು ಒಂದು ದಶಕವಾಗಿತ್ತು. 2009ರಲ್ಲಿ ರಿಕಿ ಪಾಂಟಿಂಗ್ ನಾಯಕತ್ವದ ತಂಡ 7 ಪಂದ್ಯಗಳ ಸರಣಿಯಲ್ಲಿ 4–2ರ ಜಯ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT