ಬೆಂಗಳೂರು: ಉದಯೋನ್ಮುಖ ಆಟಗಾರರಲ್ಲಿ ಉತ್ತಮ ಕೌಶಲ ಬೆಳೆಯಲು ಕ್ರಿಕೆಟ್ ಕ್ಲಬ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಹೇಳಿದರು.
ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ಸುವರ್ಣಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ದ್ರಾವಿಡ್ ಮಾತನಾಡಿದರು.
‘ಕ್ಲಬ್ ಕ್ರಿಕೆಟ್ ಸಶಕ್ತವಾದಷ್ಟೂ ಕರ್ನಾಟಕದ ಕ್ರಿಕೆಟ್ ಬಲಾಢ್ಯವಾಗುತ್ತದೆ. ಇವತ್ತು ಭಾರತದಲ್ಲಿ ಕ್ರಿಕೆಟ್ ಈ ಮಟ್ಟಕ್ಕೆ ಬಲಾಢ್ಯವಾಗಿ ಬೆಳೆಯಲು ಪ್ರತಿಭಾನ್ವಿತರು ಎಲ್ಲ ಊರುಗಳಿಂದ ಬರುತ್ತಿದ್ದಾರೆ. ಜಿ.ಆರ್. ವಿಶ್ವನಾಥ್ ಅವರ ಕಾಲಘಟ್ಟದಲ್ಲಿ ಮತ್ತು ನಾನು ಆಡುವಾಗಿನ ಸಂದರ್ಭದಲ್ಲಿ ಪ್ರತಿಭೆಗಳು ದೊಡ್ಡ ನಗರಗಳಿಂದ ಮಾತ್ರ ಬರುತ್ತಿದ್ದರು. ಆದರೆ ಇವತ್ತು ಹಾಗಿಲ್ಲ. ಬೇರೆ ಬೇರೆ ಸ್ಥಳಗಳಿಂದಲೂ ಆಟಗಾರರು ಬೆಳೆದು ಬರುತ್ತಿದ್ದಾರೆ’ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.
‘ಕ್ಲಬ್‌ಗಳು ಉತ್ತಮ ಸಾಮರ್ಥ್ಯದೊಂದಿಗೆ ಬೆಳೆಯಬೇಕು. ಕ್ರಿಕೆಟ್ ಕ್ಷೇತ್ರವು ಕೆಲವೇ ಕೆಲವರ ನಿಯಂತ್ರಣಕ್ಕೊಳಗಾಗಬಾರದು. ಕ್ರಿಕೆಟ್ ಸರ್ವವ್ಯಾಪಿಯಾಗಬೇಕು. ಸೌಲಭ್ಯಗಳು ವಿಕೇಂದ್ರಿಕೃತವಾಗಬೇಕು. ಒಂದು ಅಥವಾ ಎರಡು ಸ್ಥಳಗಳಿಗೆ ಮಾತ್ರ ಸೌಲಭ್ಯಗಳು ಸೀಮಿತವಾಗಬಾರದು. ಬಾಲಕ ಮತ್ತು ಬಾಲಕಿಯರಿಗೆ ನಿರಂತರವಾಗಿ ಉತ್ತಮ ಸೌಲಭ್ಯಗಳು ದೊರೆಯಬೇಕು. ಪ್ರತಿಭಾವಂತರನ್ನು ಗುರುತಿಸುವ ಕಾರ್ಯಕ್ಕೆ ಇದು ಅವಶ್ಯಕ‘ ಎಂದರು.
ಮೌಂಟ್ ಜಾಯ್ ಕ್ಲಬ್ ಕ್ರಿಕೆಟಿಗರಾದ ಪ್ರಸಿದ್ಧ ಕೃಷ್ಣ, ಬಿ.ಆರ್. ಶರತ್, ರಾಜೇಶ್ ಕಾಮತ್, ರಂಗರಾವ್ ಅನಂತ್, ಯರೇಗೌಡ, ಆನಂದ ಕಟ್ಟಿ, ಸಿ. ರಘು, ಜಿ.ಕೆ. ಅನಿಲ್‌ಕುಮಾರ್, ವಿ. ಚೆಲುವರಾಜ್, ಆರ್. ಕೃಷ್ಣಪ್ಪ ಮತ್ತು ಆದಿತ್ಯ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು.
ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿ ಅವರು ಐವರು ಕ್ರಿಕೆಟಿಗರಿಗೆ ಶಿಕ್ಷಣ ಮತ್ತು ಕ್ರೀಡೆಯ ಸೌಲಭ್ಯವನ್ನು ಒದಗಿಸುವ ಯೋಜನೆಯನ್ನು ಘೋಷಿಸಿದರು.