ಶನಿವಾರ, ಅಕ್ಟೋಬರ್ 31, 2020
19 °C
ಎರಡು ಕ್ಯಾಚ್ ಕೈಚೆಲ್ಲಿದ ವಿರಾಟ್; 13ನೇ ಆವೃತ್ತಿಯ ಐಪಿಎಲ್‌ನ ಮೊದಲ ಮೂರಂಕಿ ಮೊತ್ತ

IPL-2020 | ರಾಹುಲ್ ಅಬ್ಬರಕ್ಕೆ ಆರ್‌ಸಿಬಿ ಶರಣು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಕನ್ನಡಿಗ ಕೆ.ಎಲ್. ರಾಹುಲ್ ಅವರ ಎರಡು ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದ ವಿರಾಟ್ ಕೊಹ್ಲಿಯಿಂದಾಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಜಯವೂ ಕೈತಪ್ಪಿತು. ಗುರುವಾರ ಅಬ್ಬರಿಸಿದ ರಾಹುಲ್ (ಔಟಾಗದೆ 132; 69 ಎಸೆತ, 14 ಬೌಂಡರಿ, 7ಸಿಕ್ಸರ್) ಅಬ್ಬರದ ಶತಕದ ಬಲದಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು 97 ರನ್‌ಗಳಿಂದ ಜಯಭೇರಿ ಬಾರಿಸಿತು.

ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್  20 ಓವರ್‌ಗಳಲ್ಲಿ 3ಕ್ಕೆ 206 ರನ್‌ ಗಳಿಸಿತು. ಅದಕ್ಕುತ್ತರವಾಗಿ ಆರ್‌ಸಿಬಿ ತಂಡಕ್ಕೆ 17 ಓವರ್‌ಗಳಲ್ಲಿ 109 ರನ್ ಗಳಿಸಲು ಮಾತ್ರ ಸಾಧ್ಯ ವಾಯಿತು.

ಆರ್‌ಸಿಬಿಯ ಈ ಸೋಲಿನಲ್ಲಿ ನಾಯಕ ವಿರಾಟ್ ಅವರ ಕೆಟ್ಟ ಫೀಲ್ಡಿಂಗ್ ಪ್ರಮುಖ ಕಾರಣವಾಯಿತು. ರಾಹುಲ್ 83 ಮತ್ತು 89 ರನ್‌ ಗಳಿಸಿದ್ದಾಗ ಕೊಹ್ಲಿ ಕ್ಯಾಚ್‌ಗಳನ್ನು  ಕೈಚೆಲ್ಲಿದರು. ಇದರಿಂದಾಗಿ ರಾಹುಲ್ ತಮ್ಮ ತಂಡದ ಮೊತ್ತಕ್ಕೆ 42 ರನ್‌ಗಳನ್ನು ಸೇರಿಸಿದರು.

ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದರು. ಕೊನೆಯ ನಾಲ್ಕು ಓವರ್‌ಗಳಲ್ಲಿ 74 ರನ್‌ಗಳು ಹರಿದುಬಂದವು.

ಇದೇ ಮೊದಲ ಸಲ ಐಪಿಎಲ್‌ ನಲ್ಲಿ ನಾಯಕತ್ವ ವಹಿಸಿರುವ ರಾಹುಲ್,  ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಬೇಗ ಔಟಾಗಿದ್ದರು. ಆ ಪಂದ್ಯದಲ್ಲಿ ತಂಡವು ಸೂಪರ್‌ ಓವರ್‌ನಲ್ಲಿ ಸೋತಿತ್ತು. ಇಲ್ಲಿ ಆ ಲೋಪಗಳನ್ನು ಅವರು ತಿದ್ದಿಕೊಂಡರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ  ಆರ್‌ಸಿಬಿ ನಾಯಕ ಕೊಹ್ಲಿ ಯೋಜನೆ ಕೈಗೂಡಲಿಲ್ಲ.

ಕನ್ನಡದ ಜೋಡಿ ರಾಹುಲ್ ಮತ್ತು ಮಯಂಕ್ ಅಗರವಾಲ್ (25; 20ಎ, 4ಬೌಂ) ಮೊದಲ ವಿಕೆಟ್‌ಗೆ 57 ರನ್‌ ಸೇರಿಸಿ ಉತ್ತಮ ಆರಂಭ ಮಾಡಿದರು. ಏಳನೇ ಓವರ್‌ನಲ್ಲಿ ಯಜುವೇಂದ್ರ ಚಾಹಲ್ ಹಾಕಿದ ಗೂಗ್ಲಿಯಲ್ಲಿ ಮಯಂಕ್  ಕ್ಲೀನ್‌ಬೌಲ್ಡ್ ಆದರು. ಕ್ರೀಸ್‌ಗೆ ಬಂದ ನಿಕೊಲಸ್ ಪೂರನ್ ಲಯ ಕಂಡುಕೊಳ್ಳಲು ಪರದಾಡಿದರು. ಆದರೆ ಇನ್ನೊಂದು ಬದಿಯಲ್ಲಿ ರಾಹುಲ್ ತಮ್ಮ ಬೀಸಾಟ ಮುಂದುವರಿಸಿದರು. 36 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಎರಡನೇ ವಿಕೆಟ್ ಜೊತೆಯಾಟದಲ್ಲಿ 57 ರನ್‌ಗಳು ಸೇರಿದವು. ಅದರಲ್ಲಿ 17 ಮಾತ್ರ ಪೂರನ್‌ ಕಾಣಿಕೆ. ಶಿವಂ ದುಬೆ ಹಾಕಿದ 14ನೇ ಓವರ್‌ನಲ್ಲಿ ಪೂರನ್ ಔಟಾದ ನಂತರ ರಾಹುಲ್ ಮತ್ತಷ್ಟು ವೇಗವಾಗಿ ಬ್ಯಾಟ್‌ ಬೀಸತೊಡಗಿದರು. ಸ್ಪೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಐದು ರನ್‌ ಗಳಿಸಿ ಶಿವಂ ದುಬೆಗೆ ವಿಕೆಟ್  ಒಪ್ಪಿಸಿದರು.

ಕ್ರೀಸ್‌ಗೆ ಬಂದ ‘ಗೆಳೆಯ’ ಕರುಣ್ ನಾಯರ್ ಜೊತೆಗೂಡಿದ ರಾಹುಲ್ ತಂಡದ ಮೊತ್ತವನ್ನು ‘ದ್ವಿಶತಕ’ದ ಗಡಿ ದಾಟಿಸುವತ್ತ ಚಿತ್ತ ನೆಟ್ಟರು. ತಾವೆದುರಿಸಿದ 62ನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟಿದ ರಾಹುಲ್, ಈ ಬಾರಿಯ ಐಪಿಎಲ್‌ನ ಮೊಟ್ಟಮೊದಲ ಶತಕ ದಾಖಲಿಸಿದರು. ಪೆವಿಲಿಯನ್‌ನಲ್ಲಿ ಕ್ರಿಸ್‌ ಗೇಲ್, ಕೋಚ್ ಅನಿಲ್‌ ಕುಂಬ್ಳೆ ಎದ್ದುನಿಂತು  ಚಪ್ಪಾಳೆ ತಟ್ಟಿದರು.

ಆದರೆ, ಕೊಹ್ಲಿ ಬಳಗವು ಈ ಮೊತ್ತವನ್ನು ಬೆನ್ನತ್ತಿ ಗೆಲ್ಲುವ ಸಾಮರ್ಥ್ಯವಿದ್ದರೂ ಸುಲಭವಾಗಿ ಶರಣಾಯಿತು. ಹೋದ ಪಂದ್ಯದಲ್ಲಿ ಮಿಂಚಿದ್ದ ದೇವದತ್ತ ಪಡಿಕ್ಕಲ್ ಮತ್ತು ಕೊಹ್ಲಿ ತಲಾ ಒಂದು ರನ್ ಹೊಡೆದು ಔಟಾದರು. ಆ್ಯರನ್ ಫಿಂಚ್, ಎಬಿ ಡಿವಿಲಿಯರ್ಸ್, ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಅವರಷ್ಟೇ ಎರಡಂಕಿ ದಾಖಲಿಸಿದರು. ಆದರೆ ತಂಡದ ಗೆಲುವಿಗೆ ಬೇಕಾದ ಆಟ ಅವರಿಂದ ಹೊರಹೊಮ್ಮಲಿಲ್ಲ. ಕಿಂಗ್ಸ್‌ ಸ್ಪಿನ್ನರ್‌ಗಳಾದ ರವಿ ಬಿಷ್ಣೋಯ್ ಮತ್ತು ಮರುಗನ್ ಅಶ್ವಿನ್ ತಲಾ ಮೂರು ವಿಕೆಟ್ ಗಳಿಸಿದರು. ಶೇಲ್ಡನ್ ಕಾಟ್ರೆಲ್ ಎರಡು ವಿಕೆಟ್ ಕಬಳಿಸಿದರು.

ರಾಹುಲ್ 2000 ರನ್
ಐಪಿಎಲ್‌ನಲ್ಲಿ 2000 ರನ್‌ ಗಳಿಸಿದ ಆಟಗಾರರ ಸಾಲಿಗೆ ಕೆ.ಎಲ್. ರಾಹುಲ್ ಗುರುವಾರ ಸೇರ್ಪಡೆಯಾದರು. ಅವರು ಈ ಪಂದ್ಯದಲ್ಲಿ ಒಂದು ರನ್ ಗಳಿಸಿದಾಗ ಈ ಗೌರವಕ್ಕೆ ಪಾತ್ರರಾದರು.

ಈ ಟೂರ್ನಿಯಲ್ಲಿ ಸದ್ಯ ಅವರು ಅತಿ ಹೆಚ್ಚು ರನ್‌ ಗಳಿಸಿರುವ ಬ್ಯಾಟ್ಸ್‌ಮನ್ ಕೂಡ ಆಗಿದ್ದು. ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು