ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶ್ಚಲ್‌ ಛಲದ ಬಲ

Last Updated 30 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಒಂದು ಬದಿಯಲ್ಲಿ ವಿಕೆಟ್‌ ಉರುಳುತ್ತಿದ್ದರೂ, ಒತ್ತಡಕ್ಕೆ ಒಳಗಾಗದೆ ತಂಡದ ಇನಿಂಗ್ಸ್‌ಗೆ ಬಲ ತುಂಬುವ ಕಲೆಯನ್ನು ಮೈಗೂಡಿಸಿಕೊಂಡಿರುವ ಡೇಗಾ ನಿಶ್ಚಲ್‌ ಈ ಬಾರಿಯ ರಣಜಿ ಕ್ರಿಕೆಟ್‌ ಟೂರ್ನಿಯಲ್ಲಿ ಮಿಂಚು ಹರಿಸುತ್ತಿದ್ದಾರೆ.

ಕರ್ನಾಟಕ ತಂಡ ಋತುವಿನಲ್ಲಿ ಇದುವರೆಗೆ ಆರು ಪಂದ್ಯಗಳನ್ನು ಆಡಿದೆ. ಆರೂ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ನಿಶ್ಚಲ್ 12 ಇನಿಂಗ್ಸ್‌ಗಳಿಂದ 44.09 ಸರಾಸರಿಯಲ್ಲಿ 485 ರನ್‌ ಗಳಿಸಿದ್ದಾರೆ. ರಾಜ್ಯದ ಪರ ಈ ಬಾರಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಆರು ಪಂದ್ಯಗಳಿಂದ 477 ರನ್‌ ಕಲೆಹಾಕಿರುವ ಕೆ.ವಿ.ಸಿದ್ದಾರ್ಥ್‌ ಎರಡನೇ ಸ್ಥಾನದಲ್ಲಿದ್ದಾರೆ.

ಈ ಬಲಗೈ ಬ್ಯಾಟ್ಸ್‌ಮನ್‌ನಲ್ಲಿರುವ ಪ್ರತಿಭೆ ಕಳೆದ ವರ್ಷ ಕಾನ್ಪುರದಲ್ಲಿ ನಡೆದಿದ್ದ ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಅನಾವರಣಗೊಂಡಿತ್ತು. ತಮ್ಮ ಎರಡನೇ ಪ್ರಥಮ ದರ್ಜೆ ಪಂದ್ಯದಲ್ಲಿ ಸೊಗಸಾದ 195 ರನ್‌ ಗಳಿಸಿದ್ದರು. ಕೇವಲ ಐದು ರನ್‌ಗಳಿಂದ ದ್ವಿಶತಕ ತಪ್ಪಿಸಿಕೊಂಡಿದ್ದರು.

24ರ ಹರೆಯದ ಅವರು ಈ ಬಾರಿಯ ಟೂರ್ನಿಯಲ್ಲಿ ತಂಡದ ಬ್ಯಾಟಿಂಗ್‌ನ ಪ್ರಧಾನ ಶಕ್ತಿಯಾಗಿ ಬದಲಾಗಿದ್ದಾರೆ. ಶಿವಮೊಗ್ಗದಲ್ಲಿ ಕಳೆದ ವಾರ ರೈಲ್ವೇಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಅವರ ಬ್ಯಾಟಿಂಗ್‌ನಲ್ಲಿರುವ ಶಕ್ತಿ, ಛಲ ಏನೆಂಬುದು ಸಾಬೀತಾಗಿತ್ತು.

ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ ರೈಲ್ವೇಸ್‌ನ ಮಧ್ಯಮವೇಗದ ಬೌಲಿಂಗ್‌ ದಾಳಿಗೆ ತತ್ತರಿಸಿತ್ತು. ಆದರೆ ಅಪಾರ ತಾಳ್ಮೆ ವಹಿಸಿ ಆಡಿದ್ದ ನಿಶ್ಚಲ್ 52 ರನ್‌ ಗಳಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಅದಕ್ಕಿಂತಲೂ ಮಿಗಿಲಾದ ಪ್ರದರ್ಶನ ನೀಡಿ ಶತಕ (101) ಪೂರೈಸಿದ್ದರು.

ಈ ಪಂದ್ಯದಲ್ಲಿ ಕರ್ನಾಟಕ 176 ರನ್‌ಗಳ ಜಯ ಸಾಧಿಸಿತ್ತು. ಬ್ಯಾಟಿಂಗ್‌ ಕಷ್ಟಕರವಾಗಿದ್ದ ಪಿಚ್‌ನಲ್ಲಿ ನಿಶ್ಚಲ್ ಎರಡೂ ಇನಿಂಗ್ಸ್‌ಗಳಲ್ಲಿ ಸೇರಿ ಗಳಿಸಿದ್ದ 153 ರನ್‌ಗಳು ರಾಜ್ಯ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇನಿಂಗ್ಸ್‌ಗೆ ಬಲ ತುಂಬುವ ಕೌಶಲವನ್ನು ಈ ಯುವ ಬ್ಯಾಟ್ಸ್‌ಮನ್‌ ಬೆಳೆಸಿಕೊಂಡಿದ್ದಾರೆ.

‘ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವ ಜವಾಬ್ದಾರಿಯನ್ನು ತಂಡದ ಆಡಳಿತ ನನಗೆ ನೀಡಿದೆ. ಅದನ್ನು ನಿಭಾಯಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ನಿಶ್ಚಲ್‌ ತಮ್ಮ ಬ್ಯಾಟಿಂಗ್‌ ಬಗ್ಗೆ ಹೇಳುವರು.

ನಿಶ್ಚಲ್‌ ಈ ಬಾರಿ ಆಡಿರುವ ಆರು ಪಂದ್ಯಗಳಲ್ಲಿ ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ವಿದರ್ಭ ವಿರುದ್ಧ ನಾಗಪುರದಲ್ಲಿ ನಡೆದಿದ್ದ ಋತುವಿನ ಮೊದಲ ಪಂದ್ಯದಲ್ಲಿ113 ರನ್‌ ಗಳಿಸಿ ಸ್ಮರಣೀಯ ಆರಂಭ ಪಡೆದಿದ್ದರು. ಅದೇ ಫಾರ್ಮ್‌ಅನ್ನು ಇತರ ಪಂದ್ಯಗಳಿಗೂ ವಿಸ್ತರಿಸಿದ್ದಾರೆ.

ಮಹಾರಾಷ್ಟ್ರ ವಿರುದ್ಧ ಮೈಸೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 39 ಮತ್ತು 61 ರನ್‌ ಕಲೆಹಾಕಿದ್ದರು. ಗುಜರಾತ್‌ ಮತ್ತು ಮುಂಬೈ ವಿರುದ್ಧದ ಪಂದ್ಯಗಳನ್ನು ಹೊರತುಪಡಿಸಿ ಇತರ ಎಲ್ಲ ಪಂದ್ಯಗಳಲ್ಲೂ ಅವರ ಬ್ಯಾಟ್‌ನಿಂದ ರನ್‌ ಹರಿದುಬಂದಿದೆ.

ಈ ಬಾರಿಯ ರಣಜಿಯಲ್ಲಿ ಕರ್ನಾಟಕ ತಂಡದ ಒಟ್ಟಾರೆ ಬ್ಯಾಟಿಂಗ್‌ ಪ್ರದರ್ಶನವನ್ನು ಗಮನಿಸಿದರೆ ‘ರನ್‌ ಬರ’ ಎದುರಿಸುತ್ತಿರುವುದು ಸ್ಪಷ್ಟವಾಗುತ್ತದೆ. ಏಕೆಂದರೆ ರಾಜ್ಯ ತಂಡಕ್ಕೆ 500–600 ರನ್‌ಗಳನ್ನು ಕಲೆಹಾಕಲು ಸಾಧ್ಯವಾಗಿಲ್ಲ. ಇನಿಂಗ್ಸ್‌ವೊಂದರಲ್ಲಿ ಕರ್ನಾಟಕ ಪೇರಿಸಿದ ಅತಿಹೆಚ್ಚು ರನ್ 400 ರನ್‌. ಮುಂಬೈ ವಿರುದ್ಧ ಬೆಳಗಾವಿಯಲ್ಲಿ ನಡೆದಿದ್ದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಷ್ಟು ರನ್‌ ಪೇರಿಸಿತ್ತು.

ಆದ್ದರಿಂದ ತಂಡದ ಒಟ್ಟಾರೆ ಬ್ಯಾಟಿಂಗ್ ಗಮನಿಸಿದಾಗ ನಿಶ್ಚಲ್‌ ಅವರು ಕಲೆಹಾಕಿರುವ ರನ್‌ಗಳ ಮಹತ್ವ ಏನೆಂಬುದು ತಿಳಿಯಬಹುದು. ಕಳೆದ ಋತುವಿನಲ್ಲಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು ಇದುವರೆಗೆ 10 ಪಂದ್ಯಗಳಿಂದ ಒಟ್ಟು 752 ರನ್ ಕಲೆಹಾಕಿದ್ದಾರೆ. ಇದರಲ್ಲಿ ಮೂರು ಶತಕಗಳು ಸೇರಿವೆ.

ಕರ್ನಾಟಕದಲ್ಲಿ ಈಗ ಬ್ಯಾಟ್ಸ್‌ಮನ್‌ಗಳಿಗೆ ಕೊರತೆಯಿಲ್ಲ. ಇಲ್ಲಿ ಹಲವು ಪ್ರತಿಭೆಗಳು ಬರುತ್ತಿದ್ದಾರೆ. ಆದರೆ ಎಲ್ಲರಿಗೂ ಅವಕಾಶ ಸಿಗುತ್ತಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕಾದ ಸವಾಲು ಎಲ್ಲರ ಮುಂದಿದೆ. ಆ ಸವಾಲನ್ನು ನಿಭಾಯಿಸುವಲ್ಲಿ ನಿಶ್ಚಲ್ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT