ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೋಡಾ ವಿರುದ್ಧ ರಣಜಿ ಪಂದ್ಯ: ಸ್ವಲ್ಪ ಹಿಡಿತ ಪಡೆದ ಕರ್ನಾಟಕ

ಅಭಿಮನ್ಯು ಮಿಥುನ್‌, ಗೌತಮ್‌ ಮಿಂಚು; ಮೊದಲ ದಿನವೇ 17 ವಿಕೆಟ್‌ ಪತನ!
Last Updated 12 ಫೆಬ್ರುವರಿ 2020, 19:20 IST
ಅಕ್ಷರ ಗಾತ್ರ

ಬೆಂಗಳೂರು: ಒಟ್ಟು 17 ವಿಕೆಟ್‌ಗಳ ಪತನ ಕಂಡ ಮೊದಲ ದಿನದಾಟದಲ್ಲಿ ಕರ್ನಾಟಕ ತಂಡ ಸ್ವಲ್ಪ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಬುಧವಾರ ಆರಂಭವಾದ ರಣಜಿ ಟ್ರೋಫಿ ‘ಬಿ’ ಗುಂಪಿನ ಈ ಪಂದ್ಯದಲ್ಲಿ ಬರೋಡಾ ತಂಡವನ್ನು 85 ರನ್ನಿಗೆ ಉರುಳಿಸಿದ ಆತಿಥೇಯ ತಂಡ ದಿನದ ಕೊನೆಗೆ ಏಳು ವಿಕೆಟ್‌ ಕಳೆದುಕೊಂಡು 165 ರನ್ ಗಳಿಸಿದೆ.

ಕರ್ನಾಟಕ ತಂಡ, ನಾಕೌಟ್‌ ದೃಷ್ಟಿಯಿಂದ ಮಹತ್ವದ್ದಾಗಿರುವ ಈ ಪಂದ್ಯದಲ್ಲಿ ಸದ್ಯ 80 ರನ್‌ಗಳ ಮುನ್ನಡೆ ಹೊಂದಿದೆ. ಮೂರು ವಿಕೆಟ್‌ಗಳಿಂದ ಬರುವ ರನ್‌ಗಳು ಕರ್ನಾಟಕ ಪಾಲಿಗೆ ಉಪಯುಕ್ತವಾಗಲಿವೆ. ಒಂದು ಹಂತದಲ್ಲಿ ಕರ್ನಾಟಕದ ಆರು ವಿಕೆಟ್‌ಗಳು 110 ರನ್‌ಗಳಿಗೆ ಉರುಳಿದ್ದವು. ಈ ಹಿಂದಿನ ಪಂದ್ಯದ ರೀತಿ ಕೆ. ಗೌತಮ್‌ (27, 16 ಎಸೆತ, 3 ಬೌಂ, 2 ಸಿ) ಆಕ್ರಮಣಕಾರಿಯಾಗಿ ಆಡಿ ತಂಡ ಸಮಾಧಾನಕರ ಲೀಡ್‌ ಪಡೆಯಲು ನೆರವಾದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಾಳಿಯನ್ನು ಆಡಲು ಇಳಿಸಿದ ಕರುಣ್‌ ನಾಯರ್‌ ತೀರ್ಮಾನ ಕೈಕೊಡಲಿಲ್ಲ. ಈ ಸಾಲಿನಲ್ಲಿ ಮೊದಲ ರಣಜಿ ಪಂದ್ಯ ಆಡಿದ ಪ್ರಸಿದ್ಧ ಕೃಷ್ಣ (7ಕ್ಕೆ2) ತಂಡಕ್ಕೆ ಆರಂಭದಲ್ಲೇ ಪೆಟ್ಟುಕೊಟ್ಟ ಮೇಲೆ, ಹಿರಿಯ ಬೌಲರ್‌ ಅಭಿಮನ್ಯು ಮಿಥುನ್‌ ‌(26ಕ್ಕೆ3) ಬರೋಡಾದ ಮಧ್ಯಮ ಕ್ರಮಾಂಕ ಧ್ವಂಸ ಮಾಡಿದರು. ಸ್ಪಿನ್ನರ್‌ ಕೆ.ಗೌತಮ್‌ (25ಕ್ಕೆ3) ಕೂಡ ಪರಿಣಾಮಕಾರಿಯಾದರು. ಮಿಥುನ್‌ ಪಂದ್ಯದ 20ನೇ ಓವರ್‌ನಲ್ಲಿ ಹ್ಯಾಟ್ರಿಕ್‌ ತಪ್ಪಿಸಿಕೊಂಡರೆ, ಬರೋಡಾದ ಕಡೆ ಸೊಯೆಬ್‌ ಸೊಪಾರಿಯಾ ಕೂಡ ಈ ಗೌರವ ಕಳೆದುಕೊಂಡರು.

ಆರಂಭದಲ್ಲಿ ಯಶಸ್ಸು: ಪ್ರಸಿದ್ಧ ಕೃಷ್ಣ ಮತ್ತು ಮಿಥುನ್‌ ಬಿಗುವಾಗಿ ಬೌಲ್‌ ಮಾಡಿದರು. ಆರಂಭ ಆಟಗಾರ ಕೇದಾರ ದೇವಧರ್‌ ಪರದಾಟದ ನಂತರ ಪ್ರಸಿದ್ಧ ಕೃಷ್ಣ ಬೌಲಿಂಗ್‌ನಲ್ಲಿ ಸ್ವಲ್ಪ ಮೇಲೆಗರಿದ ಚೆಂಡನ್ನು ಮೂರನೇ ಸ್ಲಿಪ್‌ನಲ್ಲಿದ್ದ ಸಮರ್ಥ್‌ಗೆ ಆಡಿದರು. ವಿಷ್ಣು ಸೋಳಂಕಿ ಕೂಡ ಇದೇ ರೀತಿ ಔಟಾದರು.

ಎಡಗೈ ಆರಂಭ ಆಟಗಾರ ಅಹಮದ್‌ ನೂರ್‌ ಪಠಾಣ್‌ ಮತ್ತು ದೀಪಕ್‌ ಹೂಡಾ (20) ಕುಸಿತ ತಡೆಗಟ್ಟುವಂತೆ ಕಂಡಾಗ ಮಿಥುನ್‌ ಪೆಟ್ಟುಕೊಟ್ಟರು. ಆಫ್‌ ಸ್ಟಂಪ್‌ ಆಸುಪಾಸಿನಲ್ಲಿ ಬೌಲ್‌ ಮಾಡುತ್ತಿದ್ದ ಮಿಥುನ್‌ ತಮ್ಮ ಎಂಟನೇ ಓವರ್‌ನಲ್ಲಿ ಕೊನೆಗೂ ಪ್ರತಿಫಲ ಪಡೆದರು. ಹೂಡಾ ಆಡುವ ಪ್ರಲೋಭನೆಗೆ ಒಳಗಾಗಿ ಮೊದಲ ಸ್ಪಿಪ್‌ನಲ್ಲಿ ಕ್ಯಾಚಿತ್ತರು.

ನಾಯಕ ಕೃಣಾಲ್‌ ಪಾಂಡ್ಯ ಬಂದ ಹಾಗೇ ವಾಪಸಾದರು. ಪುಟಿದೆದ್ದ ಚೆಂಡನ್ನು ಅರೆಮನಸ್ಸಿನಿಂದ ‘ಪುಲ್‌’ ಮಾಡಲು ಹೋಗಿ ಸ್ವೇರ್‌ಲೆಗ್‌ನಲ್ಲಿದ್ದ ಸಬ್‌ಸ್ಟಿಟ್ಯೂಟ್‌ ಪ್ರವೀಣ್‌ ದುಬೆ ಅವರಿಗೆ ಕ್ಯಾಚಿತ್ತರು. ಮುಂದಿನ ಎಸೆತ ಆಫ್‌ ಸ್ಟಂಪ್‌ನಿಂದಾಚೆ ಹೋಗಿ ಹ್ಯಾಟ್ರಿಕ್‌ ತಪ್ಪಿತು. ಆದರೆ ಮರು ಎಸೆತದಲ್ಲೇ ಅಭಿಮನ್ಯು ಸಿಂಗ್‌ ರಜಪೂತ್‌, ಆಫ್‌ ಸ್ಟಂಪ್‌ ಆಚೆಯಿದ್ದ ಎಸೆತವನ್ನು ಕೆಣಕಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರು. 38 ರನ್‌ಗಳಾಗುವಷ್ಟರಲ್ಲಿ ತಂಡದ ಅರ್ಧದಷ್ಟು ಮಂದಿ ಪೆವಿಲಿಯನ್‌ಗೆ ಮರಳಿದ್ದರು.ಒಳ್ಳೆಯ ಬೌಲಿಂಗ್‌, ಕೆಟ್ಟ ಹೊಡೆತಗಳಿಗೆ ಆಟಗಾರರು ಮರಳಿದ್ದು ಸಾಲದಂತೆ, ಭಾರ್ಗವ್‌ ಭಟ್‌ ರನ್‌ಔಟ್‌ ಆದ ರೀತಿ ಬರೋಡಾ ಮನಃಸ್ಥಿತಿಯನ್ನು ಸೂಚಿಸುವಂತಿತ್ತು.

ಇದೆಲ್ಲದರ ಜೊತೆಗೆ ಎಡಗೈ ಆರಂಭ ಆಟಗಾರ ಅಹಮದ್‌ನೂರ್‌ ಪಠಾಣ್‌ (45, 108 ನಿ., 83 ಎ.), ಸಂಯಮದ ಜೊತೆಗೆ ಎಂಟು ಆಕರ್ಷಕ ಬೌಂಡರಿಗಳನ್ನೂ ಬಾರಿಸಿ ಈ ಪಿಚ್‌ನಲ್ಲಿ ಬ್ಯಾಟಿಂಗ್ ಕೂಡ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು. ಆವರು ಪವನ್‌ ದೇಶಪಾಂಡೆ ಲಾಂಗ್‌ಆನ್‌ನಲ್ಲಿ ತೋರಿದ ಸಮಯಪ್ರಜ್ಞೆಯ ಕ್ಯಾಚಿನಿಂದಾಗಿ ಒಂಬತ್ತನೆಯವರಾಗಿ ನಿರ್ಗಮಿಸಬೇಕಾಯಿತು. ಬರೋಡಾದ ಇನಿಂಗ್ಸ್‌ 34ನೇ ಓವರ್‌ನಲ್ಲೇ (161 ನಿಮಿಷ) ಅಂತ್ಯಗೊಂಡಿತ್ತು.

ಲಂಚ್‌ ವಿರಾಮದ ನಂತರ ಇನಿಂಗ್ಸ್‌ ಆರಂಭಿಸಿದ ಕರ್ನಾಟಕದ ಆರಂಭವೂ ಉತ್ತಮವಾಗಿರಲಿಲ್ಲ.

27 ರನ್‌ಗಳಾಗುವಷ್ಟರಲ್ಲಿ ಆರಂಭ ಆಟಗಾರರಿಬ್ಬರೂ ನಿರ್ಗ ಮಿಸಿದ್ದರು.ಪಡಿಕ್ಕಲ್‌ (6) ಮತ್ತೊಮ್ಮೆ ವಿಫಲರಾದರು. ಈ ವಿಕೆಟ್‌ ಪಡೆದ ರಜಪೂತ್‌ ಅವರು ಸಮರ್ಥ್‌ ವಿಕೆಟ್ ಕೂಡ ಪಡೆದರು.

ಬೌಲಿಂಗ್‌ ಆರಂಭಿಸಿದ್ದ ಬಾಬಾಸಫಿ ಪಠಾಣ್‌ ನಾಲ್ಕನೇ ಓವರ್‌ನ ಮೊದಲ ಎಸೆತದ ವೇಳೆ ಸ್ನಾಯುಸೆಳೆತದಿಂದ ಪೆವಿಲಿಯನ್‌ಗೆ ಮರಳಿದರು. ಒಬ್ಬ ಬೌಲರ್‌ ಕೊರತೆಯ ನಡುವೆಯೂ ಪ್ರವಾಸಿ ತಂಡ, ಕರ್ನಾಟಕದ ಧಾವಂತಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು.

ಕರುಣ್‌ ಮತ್ತು ಸಿದ್ಧಾರ್ಥ್ ಜೋಡಿ ಕುಸಿತ ತಡೆಯಿತಲ್ಲದೇ, ಮೂರನೇ ವಿಕೆಟ್‌ಗೆ 72 ನಿಮಿಷಗಳಲ್ಲಿ 61 ರನ್‌ ಸೇರಿಸಿ ತಂಡಕ್ಕೆ ಮುನ್ನಡೆಯನ್ನೂ ಒದಗಿಸಿತು. ಎಡಗೈ ಸ್ಪಿನ್ನರ್‌ ಭಾರ್ಗವ್‌ ಭಟ್‌ ಬೌಲಿಂಗ್‌ನಲ್ಲಿ ಲಾಂಗ್‌ ಆಫ್‌ಗೆ ಸಿಕ್ಸರ್‌ ಎತ್ತಿದ್ದ ಸಿದ್ಧಾರ್ಥ್‌, ಕೊನೆಗೆ ಅವರದ್ದೇ ಬೌಲಿಂಗ್‌ನಲ್ಲಿ ಮತ್ತೊಂದು ಭರ್ಜರಿ ಹೊಡೆತಕ್ಕೆ ಹೋಗಿ ದಂಡ ತೆತ್ತರು. ಪಾರ್ಥ್‌ ಕೊಹ್ಲಿ ಮಿಡ್‌ವಿಕೆಟ್‌ನಿಂದ ಹಿಂದಕ್ಕೆ ಓಡಿ ಕ್ಯಾಚ್‌ ಹಿಡಿದರು.

ದೊಡ್ಡ ಇನಿಂಗ್ಸ್‌ ಆಡುವಂತೆ ಕಂಡಾಗಲೇ ಕರುಣ್‌ (46, 75 ಎ, 4 ಬೌಂಡರಿ) ಕೂಡ ವಾಪಸಾದರು. ಲೆಗ್‌ ಸ್ಟಂಪ್‌ ಆಚೆಯಿಂದ ಒಳಕ್ಕೆ ತಿರುಗಿದ ಚೆಂಡನ್ನು ಆಡಲು ವಿಫಲರಾದರು. ಪವನ್‌ ದೇಶಪಾಂಡೆ ಮತ್ತು ಶ್ರೇಯಸ್‌ ಗೋಪಾಲ್ ಇಬ್ಬರೂ ವೇಗದ ಬೌಲರ್‌ ಸೊಪಾರಿಯಾ ಬೌಲಿಂಗ್‌ನಲ್ಲಿ ಸತತ ಎಸೆತಗಳಲ್ಲಿ ಔಟಾದರು. ಈ ಹಂತದಲ್ಲಿ ಶರತ್‌ ಶ್ರೀನಿವಾಸ್‌ ಜೊತೆಗೂಡಿದ ಗೌತಮ್‌ ಆಕ್ರಮಣಕಾರಿಯಾಗಿ ಆಡಿದರು. ಆದರೆ ಬಿಡಬಹುದಾಗಿದ್ದ ಎಸೆತ ಕೆಣಕಲು ಹೋದ ಗೌತಮ್‌ ಗಲ್ಲಿಯಲ್ಲಿ ಸುಲಭ ಕ್ಯಾಚ್‌ ನೀಡಿ ವಿಕೆಟ್‌ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT