ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯ: ಕರ್ನಾಟಕದ ಕೈಜಾರಿದ ಗೆಲುವು

ಮೂರು ಪಾಯಿಂಟ್ಸ್‌ಗೆ ಸಮಾಧಾನಪಟ್ಟ ವಿನಯ್‌ ಬಳಗ; ಮಯಂಕ್‌ ಅರ್ಧಶತಕ
Last Updated 17 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಸೂರತ್‌: ರೋನಿತ್‌ ಮೋರೆ (61ಕ್ಕೆ4) ಮತ್ತು ಕೃಷ್ಣಪ್ಪ ಗೌತಮ್‌ (80ಕ್ಕೆ4) ಪರಿಣಾಮಕಾರಿ ಬೌಲಿಂಗ್‌ ಮಾಡಿದರೂ ಕರ್ನಾಟಕ ತಂಡಕ್ಕೆ ಗೆಲುವು ಕೈಗೆಟುಕಲಿಲ್ಲ.

ಇಲ್ಲಿನ ಲಾಲಾಭಾಯಿ ಕಾಂಟ್ರಾಕ್ಟರ್‌ ಮೈದಾನದಲ್ಲಿ ಸೋಮವಾರ ನಡೆದ ಗುಜರಾತ್‌ ಎದುರಿನ ರಣಜಿ ಟ್ರೋಫಿ ಎಲಿಟ್‌ ‘ಎ’ ಗುಂಪಿನ ಕ್ರಿಕೆಟ್‌ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಇನಿಂಗ್ಸ್‌ ಮುನ್ನಡೆ ಪಡೆದ ಆರ್‌.ವಿನಯ್‌ ಕುಮಾರ್‌ ಬಳಗ ಮೂರು ಪಾಯಿಂಟ್ಸ್‌ಗಳಿಗೆ ಸಮಾಧಾನಪಟ್ಟುಕೊಂಡಿತು.

ಮೂರು ವಿಕೆಟ್‌ಗೆ 187ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿದ ಗುಜರಾತ್‌, ದ್ವಿತೀಯ ಇನಿಂಗ್ಸ್‌ನಲ್ಲಿ 124.5 ಓವರ್‌ಗಳಲ್ಲಿ 345ರನ್‌ ದಾಖಲಿಸಿತು. 173ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಕರ್ನಾಟಕ 27 ಓವರ್‌ಗಳಲ್ಲಿ 4 ವಿಕೆಟ್‌ಗೆ 107ರನ್‌ ಗಳಿಸಿದ್ದ ವೇಳೆ ಉಭಯ ತಂಡಗಳ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ಗುರಿ ಬೆನ್ನಟ್ಟಿದ ವಿನಯ್‌ ಬಳಗ ಆರಂಭದಲ್ಲೇ ದೇವದತ್‌ ಪಡಿಕ್ಕಲ್‌ ವಿಕೆಟ್‌ ಕಳೆದುಕೊಂಡಿತು. ಅಕ್ಷರ್‌ ಪಟೇಲ್‌ ಬೌಲ್‌ ಮಾಡಿದ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ದೇವದತ್‌ ಬೌಲ್ಡ್‌ ಆದರು. ಐದು ಎಸೆತಗಳನ್ನು ಎದುರಿಸಿದರೂ ಅವರು ಖಾತೆ ತೆರೆಯಲಿಲ್ಲ.

ನಂತರ ಮಯಂಕ್‌ ಅಗರವಾಲ್‌ ಮತ್ತು ಆರ್‌.ಸಮರ್ಥ್‌ ವೇಗದ ಆಟಕ್ಕೆ ಮುಂದಾದರು. ಈ ಜೋಡಿ ಎರಡನೇ ವಿಕೆಟ್‌ಗೆ 69 ರನ್‌ ಸೇರಿಸಿದಾಗ ಪ್ರವಾಸಿ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆದಿತ್ತು.

ಏಕದಿನ ಮಾದರಿ ನೆನಪಿಸುವಂತೆ ಬ್ಯಾಟ್‌ ಬೀಸಿದ ಮಯಂಕ್‌, ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿದರು. 57 ಎಸೆತಗಳನ್ನು ಆಡಿದ ಅವರು ಅರ್ಧಶತಕದ (53) ಸಂಭ್ರಮ ಆಚರಿಸಿದರು. ಇದರಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದ್ದವು.

18ನೇ ಓವರ್‌ನಲ್ಲಿ ಅಕ್ಷರ್‌ ಪಟೇಲ್‌, ಮಯಂಕ್‌ ಅಬ್ಬರಕ್ಕೆ ಕಡಿವಾಣ ಹಾಕಿದರು. ಇದರ ಬೆನ್ನಲ್ಲೇ ಸಮರ್ಥ್ ಕೂಡಾ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. 58 ಎಸೆತಗಳನ್ನು ಆಡಿದ ಅವರು ಎರಡು ಬೌಂಡರಿ ಸಹಿತ 33 ರನ್‌ ಬಾರಿಸಿ ಅಕ್ಷರ್‌ಗೆ ವಿಕೆಟ್‌ ಒಪ್ಪಿಸಿದರು. ಶ್ರೇಯಸ್‌ ಗೋಪಾಲ್‌ ಕೂಡಾ (3; 4ಎ) ಬೇಗನೆ ಔಟಾಗಿದ್ದರಿಂದ ಕರ್ನಾಟಕ ತಂಡ ಗೆಲುವಿನ ಆಸೆ ಕೈಬಿಟ್ಟಿತು!

ಕೆ.ವಿ.ಸಿದ್ದಾರ್ಥ್‌ (ಔಟಾಗದೆ 10; 28ಎ) ಮತ್ತು ಡಿ.ನಿಶ್ಚಲ್‌ (1; 10ಎ) ತಾಳ್ಮೆಯ ಆಟಕ್ಕೆ ಒತ್ತು ನೀಡಿದ್ದು ಇದಕ್ಕೆ ಸಾಕ್ಷಿ.

ರುಜುಲ್‌–ಜುನೇಜಾ ಮೋಡಿ: ದಿನದ ಮೊದಲ ಅವಧಿಯಲ್ಲಿ ಗುಜರಾತ್‌ ತಂಡದ ರುಜುಲ್‌ ಭಟ್‌ (91; 255ಎ, 8ಬೌಂ) ಮತ್ತು ಮನ್‌ಪ್ರೀತ್‌ ಜುನೇಜಾ (98; 212ಎ, 9ಬೌಂ) ಅಮೋಘ ಆಟ ಆಡಿ ತವರಿನ ಅಭಿಮಾನಿಗಳನ್ನು ರಂಜಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ ಪಾಲುದಾರಿಕೆ ಯಲ್ಲಿ 74ರನ್‌ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು. 78ನೇ ಓವರ್‌ನಲ್ಲಿ ಕೃಷ್ಣಪ್ಪ ಗೌತಮ್‌, ರುಜುಲ್‌ಗೆ ಪೆವಿಲಿಯನ್‌ ದಾರಿ ತೋರಿಸಿದರು.

ಬಳಿಕ ಜುನೇಜಾ ಮತ್ತು ಧ್ರುವ ರಾವಲ್‌ (30; 67ಎ, 4ಬೌಂ) ತಂಡದ ಮೊತ್ತ ಹೆಚ್ಚಿಸಿದರು. ಇವರು ಐದನೇ ವಿಕೆಟ್‌ಗೆ 67ರನ್‌ ಸೇರಿಸಿದರು. ಕೃಷ್ಣಪ್ಪ ಗೌತಮ್‌ ಬೌಲ್‌ ಮಾಡಿದ 124ನೇ ಓವರ್‌ನ ಐದನೇ ಎಸೆತದಲ್ಲಿ ಬೌಲ್ಡ್‌ ಆದ ಜುನೇಜಾ ಶತಕ ವಂಚಿತರಾದರು.

125ನೇ ಓವರ್‌ನಲ್ಲಿ ದಾಳಿಗಿಳಿದ ರೋನಿತ್‌ ಮೋರೆ ಎರಡು ವಿಕೆಟ್‌ ಉರುಳಿಸಿ ಆತಿಥೇಯರ ಇನಿಂಗ್ಸ್‌ಗೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT