ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಮಯಂಕ್‌ಗೆ ವಿಶ್ರಾಂತಿ, ಸಮರ್ಥ್‌ಗೆ ಅವಕಾಶ

ಮುಂಬೈ ಎದುರಿನ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ
Last Updated 31 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಮಯಂಕ್‌ ಅಗರವಾಲ್‌ ಅವರು ಇದೇ ತಿಂಗಳ 3ರಿಂದ 6ರವರೆಗೆ ಬಾಂದ್ರಾ ಕುರ್ಲಾ ಕ್ರೀಡಾ ಸಂಕೀರ್ಣದ ಮೈದಾನದಲ್ಲಿ ನಡೆಯುವ ಮುಂಬೈ ಎದುರಿನ ರಣಜಿ ಟ್ರೋಫಿ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

‘ಮಯಂಕ್‌ ಅವರಿಗೆ ವಿಶ್ರಾಂತಿ ನೀಡುವಂತೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮನವಿ ಮಾಡಿಕೊಂಡಿದೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಯಂಕ್‌ ಅವರು ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜನವರಿ 10ರಂದು ತಂಡವು ಆಕ್ಲೆಂಡ್‌ಗೆ ತೆರಳಲಿದೆ.

ಮಯಂಕ್‌ ಬದಲಿಗೆ ಆರ್‌.ಸಮರ್ಥ್‌ಗೆ ಅವಕಾಶ ನೀಡಲಾಗಿದೆ. ಸತತ ವೈಫಲ್ಯದ ಕಾರಣ ಸಮರ್ಥ್‌ ಅವರನ್ನು ಸೋಮವಾರ ಪ್ರಕಟಿಸಲಾಗಿದ್ದ ತಂಡದಿಂದ ಕೈಬಿಡಲಾಗಿತ್ತು. ಅವರ ಬದಲು ಅಭಿಷೇಕ್‌ ರೆಡ್ಡಿಗೆ ಸ್ಥಾನ ನೀಡಲಾಗಿತ್ತು.

ಕರುಣ್‌ ನಾಯರ್‌ ಅವರು ತಂಡವನ್ನು ಮುನ್ನಡೆಸಲಿದ್ದು, ಶ್ರೇಯಸ್‌ ಗೋಪಾಲ್‌ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಕರ್ನಾಟಕ ತಂಡವು ‘ಬಿ’ ಗುಂಪಿನಲ್ಲಿ ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದಿದ್ದು, ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಕರುಣ್‌ ಪಡೆಯ ಖಾತೆಯಲ್ಲಿ 10 ಪಾಯಿಂಟ್ಸ್‌ ಇದ್ದು ಎಲೀಟ್‌ ತಂಡಗಳ ಪಾಯಿಂಟ್ಸ್‌ ಪಟ್ಟಿಯಲ್ಲಿ ಆರನೇ ಸ್ಥಾನ ಹೊಂದಿದೆ.

ತಮಿಳುನಾಡಿಗೆವಿಜಯಶಂಕರ್‌ ಬಲ
ಚೆನ್ನೈ:
ಕಳೆದ ಪ್ರದರ್ಶನದಿಂದ ಮುಖಭಂಗ ಅನುಭವಿಸುತ್ತಿರುವತಮಿಳುನಾಡು ಕ್ರಿಕೆಟ್‌ ತಂಡಕ್ಕೆ ಕೊನೆಗೂ ಸಮಾಧಾನದ ಸುದ್ದಿಯೊಂದು ಬಂದಿದೆ. ಗಾಯದಿಂದ ಚೇತರಿಸಿಕೊಂಡಿರುವ ಆಲ್‌ರೌಂಡರ್‌ ವಿಜಯಶಂಕರ್‌ ಅವರಿಗೆ ರಣಜಿ ಟ್ರೋಫಿಯಲ್ಲಿ ತಮಿಳುನಾಡು ತಂಡದ ಮುಂದಿನ ಪಂದ್ಯದಲ್ಲಿ ಆಡಲು ಅನುಮತಿ ನೀಡಲಾಗಿದೆ.

ತಮಿಳುನಾಡು ತಂಡ ಮುಂದಿನ ಪಂದ್ಯದಲ್ಲಿ ಉತ್ತರಪ್ರದೇಶ ತಂಡವನ್ನು ಎದುರಿಸಲಿದೆ. ಉತ್ತರಪ್ರದೇಶ ತನ್ನ ಕೊನೆಯ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌ ಅಪ್ ಸೌರಾಷ್ಟ್ರ ವಿರುದ್ಧ ಬೋನಸ್‌ ಪಾಯಿಂಟ್‌ ಸಹಿತ ಜಯಗಳಿಸಿತ್ತು.

ಅವರು ಮಣಿಗಂಟಿನ ನೋವಿನಿಂದ ಬಳಲುತ್ತಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ವೈದ್ಯರ ತಪಾಸಣೆಯ ನಂತರ ಆಡುವುದಕ್ಕೆ ಹಸಿರುನಿಶಾನೆ ನೀಡಲಾಯಿತು. ಆಡಿದ ಎರಡೂ ಪಂದ್ಯಗಳಲ್ಲಿ ವಿಕೆಟ್‌ ಗಳಿಸಲು ವಿಫಲರಾದ ಜೆ.ಕೌಶಿಕ್‌ ಅವರನ್ನು ಕೈಬಿಟ್ಟು ವಿಜಯಶಂಕರ್‌ ತಂಡ ಸೇರಿಕೊಳ್ಳಲಿದ್ದಾರೆ– ಅದೂ ನಾಯಕನಾಗಿ. ಉಳಿದಂತೆ ತಮಿಳುನಾಡು ತಂಡದಲ್ಲಿ ಬದಲಾವಣೆ ಇಲ್ಲ.’

ಈ ಬಾರಿ ತಮಿಳುನಾಡು ಆಡಿದ ಮೂರು ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್‌ ಸಂಗ್ರಹಿಸಿದೆ. ಮಧ್ಯಪ್ರದೇಶ ವಿರುದ್ಧ ಡ್ರಾದಿಂದ ಆ ಪಾಯಿಂಟ್‌ ಬಂದಿತ್ತು. ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಎದುರು ತಮಿಳುನಾಡು ತಂಡ ಸೋಲನುಭವಿಸಿತ್ತು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT