ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿ: ಕರ್ನಾಟಕದ ಮುಂದಿದೆ ಕಠಿಣ ಗುರಿ

ದೇವದತ್ತ ಅಜೇಯ ಅರ್ಧ ಶತಕ
Last Updated 2 ಮಾರ್ಚ್ 2020, 17:30 IST
ಅಕ್ಷರ ಗಾತ್ರ
ADVERTISEMENT
""

ಕೋಲ್ಕತ್ತ: ಹಿನ್ನಡೆಯಲ್ಲಿರುವ ಕರ್ನಾಟಕ ತಂಡ, ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಬಂಗಾಳದ ಉರಿ ವೇಗದ ದಾಳಿಯನ್ನು ಸಹಿಸಿಕೊಂಡು ಹೋರಾಟವನ್ನು ಮತ್ತೊಂದು ದಿನಕ್ಕೆ ಮುಂದೂಡಿದೆ.

ಈಡನ್‌ ಗಾರ್ಡನ್‌ನಲ್ಲಿ ಸೋಮವಾರದ ಕುತೂಹಲಕಾರಿ ಆಟದ ನಂತರ ಫೈನಲ್‌ ತಲುಪಬೇಕಾದರೆ ಕರುಣ್‌ ನಾಯರ್‌ ಪಡೆ ಮಂಗಳವಾರ ಭಗೀರಥ ಪ್ರಯತ್ನವನ್ನೇ ಮಾಡಬೇಕಾಗಿದೆ.

ಈ ಋತುವಿನ ಬಹುತೇಕ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಪರದಾಡಿದ ಕರ್ನಾಟಕಕ್ಕೆ ಗೆಲ್ಲಲು 352 ರನ್‌ಗಳ ಸವಾಲು ಎದುರಾಗಿದೆ. ಆಂಧ್ರ ವಿರುದ್ಧ 2005ರಲ್ಲಿ ಯಶಸ್ವಿಯಾಗಿ ಬೆನ್ನತ್ತಿದ 265/5 ಮೊತ್ತಕ್ಕಿಂತ ಈ ಗುರಿ 87 ರನ್‌ ಅಧಿಕವಾಗಿದೆ.

ಸೋಮವಾರ ಬಂಗಾಳ ತಂಡವನ್ನು ಲಂಚ್‌ ನಂತರ ಎರಡನೇ ಇನಿಂಗ್ಸ್‌ನಲ್ಲಿ 161 ರನ್‌ಗಳಿಗೆ ಆಲೌಟ್‌ ಮಾಡಿತು.‌ಕರ್ನಾಟಕ ಮೂರನೇ ದಿನದಾಟ ಮುಗಿದಾಗ 3 ವಿಕೆಟ್‌ ನಷ್ಟಕ್ಕೆ 98 ರನ್ ಗಳಿಸಿದೆ. ಗುರಿ ಇನ್ನೂ 254 ರನ್‌ ದೂರವಿದೆ. ಪಿಚ್‌ನಲ್ಲಿ ಬೌಲರ್‌ಗಳಿಗೂ ನೆರವು ಇರುವ ಕಾರಣ ಕರುಣ್‌ ಪಡೆಯ ಹಾದಿ ಕಠಿಣವಾದಂತೆ ಕಾಣುತ್ತಿದೆ.

ದೇವದತ್ತ ಪಡಿಕ್ಕಲ್‌ ಅಜೇಯ 50 ರನ್‌ ಗಳಿಸಿದ್ದಾರೆ. ಅವರೊಡನೆ ಅನುಭವಿ ಮನೀಷ್‌ ಪಾಂಡೆ (ಬ್ಯಾಟಿಂಗ್ 11) ಕ್ರೀಸ್‌ನಲ್ಲಿದ್ದಾರೆ. ‘ತಾರಾ ಆಟಗಾರ’ ಕೆ.ಎಲ್‌.ರಾಹುಲ್‌ ಇನಿಂಗ್ಸ್‌ನ ಎರಡನೇ ಎಸೆತದಲ್ಲೇ, ಇಶಾನ್‌ ಪೊರೆಲ್‌ ಅವರ ಇನ್‌ಸ್ಟಿಂಗರ್‌ನಲ್ಲಿ ಎಲ್‌ಬಿಡಬ್ಲ್ಯು ಆಗಿ ಮರಳಿದ್ದರು. ಆಗ ಬಂಗಾಳ ಸಂಭ್ರಮದಲ್ಲಿದ್ದರೆ, ಕರ್ನಾಟಕ ತಳಮಳಗೊಂಡಿತ್ತು.

ಈ ಹಂತದಲ್ಲಿ ಪಡಿಕ್ಕಲ್‌ ಮತ್ತು ಸಮರ್ಥ್‌ (27, 69 ಎ) ಎರಡನೇ ವಿಕೆಟ್‌ಗೆ 57 ರನ್‌ ಸೇರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದ ಇವರಿಬ್ಬರು ಎಚ್ಚರಿಕೆ ಮತ್ತು ಶಿಸ್ತಿನ ಆಟವಾಡಿದರು. ಪೊರೆಲ್‌, ಮುಕೇಶ್‌ ಕುಮಾರ್‌ ಮತ್ತು ಆಕಾಶ್‌ ದೀಪ್‌ ಅವರ ಕರಾರುವಾಕ್‌ ವೇಗದ ದಾಳಿಯ ಮೂಲಕ ಪರೀಕ್ಷಿಸಿದರೂ ಇಬ್ಬರೂ ತಾಳ್ಮೆಯಿಂದಲೇ ಸವಾಲನ್ನು ಎದುರಿಸಿದರು.

ಈ ಜೋಡಿ ಬೇರೂರುವಂತೆ ಕಾಣುವಾಗಲೇ ಸಮರ್ಥ್‌, ಆಕಾಶ್‌ ದೀಪ್‌ ಬೌಲಿಂಗ್‌ನಲ್ಲಿ ತಡವಾಗಿ ಸ್ವಿಂಗ್‌ ಆದ ಚೆಂಡಿಗೆ ಎಲ್‌ಬಿಡಬ್ಲ್ಯು ಆದರು. ಈ ಋತುವಿನಲ್ಲಿ ರನ್‌ ಬರ ಎದುರಿಸುತ್ತಿರುವ ನಾಯರ್‌ ಮತ್ತೊಮ್ಮೆ ಪರದಾಡಿ, ಮುಕೇಶ್‌ ಇನ್‌ಸ್ವಿಂಗರ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಅವರ ಕಳಪೆ ಫಾರ್ಮ್‌ ಮುಂದುವರಿದಿದ್ದು, 9 ಪಂದ್ಯಗಳಿಂದ 366 ರನ್‌ ಗಳಿಸಿದ್ದಾರೆ. ಈ ಹಂತದಲ್ಲಿ ಕರ್ನಾಟದ ಮೊತ್ತ 3 ವಿಕೆಟ್‌ಗೆ 76.

ಪಡಿಕ್ಕಲ್‌ ಮತ್ತು ಪಾಂಡೆ ಕೊನೆಯ ಒಂದು ಗಂಟೆಯ ಆಟವನ್ನು ಯಶಸ್ವಿಯಾಗಿ ನಿಭಾಯಿಸಿ ಮತ್ತಷ್ಟು ಅಪಾಯ ತಪ್ಪಿಸಿದರು. ಕೊನೆಯ ದಿನ ಕರ್ನಾಟಕ ಗುರಿ ತಲುಪಿದರೆ, ಅದು ರಣಜಿ ಟ್ರೋಫಿ ಇತಿಹಾಸದಲ್ಲೇ ಅತ್ಯಮೋಘ ಚೇತರಿಕೆಯಾಗಲಿದೆ. ಈಡನ್‌ ಗಾರ್ಡನ್‌ನಲ್ಲಿ ನಸುಕಿನ ಇಬ್ಬನಿಯಿಂದಾಗಿ ಬೆಳಗಿನ ಅವಧಿಯಲ್ಲಿ ಆಡುವುದು ದೊಡ್ಡ ಸವಾಲು. ಬಂಗಾಳ ಕೂಡ ಇಂಥ ಸಂದರ್ಭದಲ್ಲಿ ಮೇಲುಗೈ ಬಿಟ್ಟುಕೊಡುವುದು ಕಷ್ಟ.

ಸೌರಾಷ್ಟ್ರ ಮೇಲೆ ‘ಗಜ’ ದಾಳಿ
ರಾಜಕೋಟ್‌:
ಚಿಂತನ್‌ ಗಜ ಅವರ ಅಮೋಘ ಆಲ್‌ರೌಂಡ್‌ ಆಟದ (61 ಮತ್ತು 15ಕ್ಕೆ5) ನೆರವಿನಿಂದ ಗುಜರಾತ್‌ ತಂಡ, ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಪ್ರತಿ ಹೋರಾಟ ಪ್ರದರ್ಶಿಸಿದೆ.

ಸೋಮವಾರ, ಮೂರನೇ ದಿನದಾಟದ ಕೊನೆಗೆ ಸೌರಾಷ್ಟ್ರ ಒಟ್ಟಾರೆ 118 ರನ್‌ ಮುಂದಿದ್ದು, ಐದು ವಿಕೆಟ್‌ಗಳನ್ನು ಹೊಂದಿದೆ.52 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿದ್ದ ಸೌರಾಷ್ಟ್ರ 2ನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 66 ರನ್‌ ಗಳಿಸಿ ಕುಂಟುತ್ತಿದೆ. ಒಂದು ಹಂತದಲ್ಲಿ ಗಜ ದಾಳಿಗೆ ತತ್ತರಿಸಿದ ಸೌರಾಷ್ಟ್ರ 15 ರನ್ನಿಗೆ 5 ವಿಕೆಟ್‌ ಕಳೆದುಕೊಂಡಿತ್ತು.

ಸೌರಾಷ್ಟ್ರ:1ನೇ ಇನಿಂಗ್ಸ್‌: 304 ಮತ್ತು 2ನೇ ಇನಿಂಗ್ಸ್‌: 29 ಓವರುಗಳಲ್ಲಿ 5ಕ್ಕೆ 66 (ಸಿ. ಸಕಾರಿಯಾ ಬ್ಯಾಟಿಂಗ್ 32, ಅರ್ಪಿತ್‌ ವಸವಾಡ ಬ್ಯಾಟಿಂಗ್ 23; ಗಜ 15ಕ್ಕೆ5)

ಗುಜರಾತ್‌: 1ನೇ ಇನಿಂಗ್ಸ್‌: 87.3 ಓವರುಗಳಲ್ಲಿ 252 (ರುಜುಲ್‌ ಭಟ್‌ 71, ಚಿಂತನ್‌ ಗಜ 61;ಜೈದೇವ್‌ ಉನದ್ಕತ್‌ 86ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT