ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ | ಕರ್ನಾಟಕದ ಫೈನಲ್ ಕನಸು ಭಗ್ನ

13 ವರ್ಷಗಳ ನಂತರ ಫೈನಲ್‌ಗೆ ಲಗ್ಗೆಯಿಟ್ಟ ಬಂಗಾಳ: ಮುಕೇಶ್ ಕುಮಾರ್ ಉತ್ತಮ ಬೌಲಿಂಗ್
Last Updated 3 ಮಾರ್ಚ್ 2020, 20:02 IST
ಅಕ್ಷರ ಗಾತ್ರ

ಕೋಲ್ಕತ್ತ: ರಣಜಿ ಟ್ರೋಫಿ ಸೆಮಿಫೈನಲ್‌ ನಲ್ಲಿ ಕರ್ನಾಟಕ ತಂಡವು ಸೋಲಿನ ‘ಹ್ಯಾಟ್ರಿಕ್’ ಮಾಡಿತು.

ಮಂಗಳವಾರ ಈಡನ್ ಗಾರ್ಡನ್‌ ಕ್ರೀಡಾಂಗಣದಲ್ಲಿ ಆತಿಥೇಯ ಬಂಗಾಳ ತಂಡವು 174 ರನ್‌ಗಳಿಂದ ಕರ್ನಾಟಕದ ವಿರುದ್ಧ ಗೆದ್ದಿತು. ತಂಡವು 13 ವರ್ಷಗಳ ನಂತರ ಫೈನಲ್‌ಗೆ ಲಗ್ಗೆ ಇಟ್ಟಿತು. ಕೆ.ಎಲ್. ರಾಹುಲ್, ಕರುಣ್ ನಾಯರ್ ಮತ್ತು ಮನೀಷ್ ಪಾಂಡೆ ಅವ ರಂತಹ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿದ್ದ ಕರ್ನಾಟಕ ತಂಡವು 352 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿತು.

ಆದರೆ, 55.3 ಓವರ್‌ಗಳಲ್ಲಿ 177 ರನ್‌ಗಳನ್ನು ಮಾತ್ರ ಗಳಿಸಿತು. ಇದರೊಂದಿಗೆ ಸತತ ಮೂರನೇ ವರ್ಷ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತು.

ಈ ಪಂದ್ಯದುದ್ದಕ್ಕೂ ಛಲದ ಆಟ ವಾಡಿದ ಅಭಿಮನ್ಯು ಮಿಥುನ್ (38; 30ಎಸೆತ, 5 ಬೌಂಡರಿ, 2ಸಿಕ್ಸರ್) ಮತ್ತು ಕೃಷ್ಣಪ್ಪ ಗೌತಮ್ (22; 23ಎ, 4ಬೌಂ) ಈ ಇನಿಂಗ್ಸ್‌ನಲ್ಲಿಯೂ ಹೋರಾಟ ಮಾಡಿದರು. ಬೆಳಿಗ್ಗೆ 11.07ಕ್ಕೆ ಬೌಲರ್ ಆಕಾಶ್‌ದೀಪ್ ಎಸೆತದಲ್ಲಿ ಮಿಥುನ್ ಕ್ಲೀನ್‌ಬೌಲ್ಡ್‌ ಆಗುವುದರೊಂದಿಗೆ ಬಂಗಾಳದ ಅಂಗಳದಲ್ಲಿ ಸಂಭ್ರಮ ಮುಗಿಲುಮುಟ್ಟಿತು.

ಯುವ ಬೌಲರ್ ಇಶಾನ್ ಪೊರೆಲ್ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿ ಕರ್ನಾಟಕಕ್ಕೆ ಬಿಸಿ ಮುಟ್ಟಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಮುಕೇಶ್ ಕುಮಾರ್ (61ಕ್ಕೆ6) ದುಃಸ್ವಪ್ನರಾದರು. ಒಂದೇ ಸ್ಪೆಲ್‌ನಲ್ಲಿ (9–4–28–5) ಕರ್ನಾಟಕದ ಪ್ರಮುಖ ಬ್ಯಾಟ್ಸ್‌ಮನ್‌ಗಳ ಹೆಡೆಮುರಿ ಕಟ್ಟಿದರು.

ಈ ಸಲದ ದೇಶಿ ಋತುವಿನಲ್ಲಿ ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಯನ್ನು ಕರ್ನಾಟಕ ಗೆದ್ದಿತ್ತು. ರಣಜಿ ಟ್ರೋಫಿಯ ಲೀಗ್ ಹಂತದ ಕೆಲವು ಪಂದ್ಯಗಳಲ್ಲಿ ಮೂರು ಪಾಯಿಂಟ್‌ ಪಡೆಯಲೂ ಪರದಾಡಿತ್ತು.

ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗುವ ಪಿಚ್‌ನಲ್ಲಿ ಗಟ್ಟಿಯಾಗಿ ನಿಂತು ಆಡುವಲ್ಲಿ ವಿಫಲರಾಗಿದ್ದರು. ಅದು ಸೆಮಿಫೈನಲ್‌ ನಲ್ಲಿಯೂ ಮುಂದುವರಿಯಿತು. ಗುಂಪು ಹಂತದಲ್ಲಿ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಅವರು ತಂಡ ದಲ್ಲಿ ಇರಲಿಲ್ಲ. ಭಾರತ ತಂಡದಲ್ಲಿ ಆಡಲು ತೆರಳಿದ್ದರು. ಆ ಸಂದರ್ಭದಲ್ಲಿ ದೇವದತ್ತ ಪಡಿಕ್ಕಲ್ ಚೆನ್ನಾಗಿ ಆಡಿದ್ದರು. ಆರಂಭದಲ್ಲಿ ವೈಫಲ್ಯ ಅನುಭವಿಸಿದರೂ ನಂತರ ಮಿಂಚಿದ ಆರ್‌. ಸಮರ್ಥ್ ಟೂರ್ನಿಯಲ್ಲಿ 534 ರನ್‌ ಗಳಿಸಿದರು. ಈ ಬಾರಿ ಶತಕ ಬಾರಿಸಿದ ಕರ್ನಾ ಟಕದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಕೆ.ವಿ. ಸಿದ್ಧಾರ್ಥ್ ಗಾಯದಿಂದ ಚೇತರಿಸಿ ಕೊಂಡು ಮರಳಿದ ನಂತರ ಆಡಿದ ಆರು ಪಂದ್ಯಗಳಲ್ಲಿ 331 ರನ್‌ ಗಳಿಸಿದರು.

ಆದರೆ, ನಾಯಕ ಕರುಣ್ ನಾಯರ್ ಅವರು ಅಸ್ಥಿರ ಬ್ಯಾಟಿಂಗ್ ಫಾರ್ಮ್‌ ತಂಡಕ್ಕೆ ದುಬಾರಿಯಾಯಿತು. ಅವರು ಒಂಬತ್ತು ಪಂದ್ಯಗಳಲ್ಲಿ 26.14ರ ಸರಾಸರಿಯಲ್ಲಿ 366 ಕಲೆಹಾಕಿದ್ದಾರೆ. ಬೆಂಚ್‌ನಲ್ಲಿದ್ದ ಕೆಲವು ಆಟಗಾರರ ಪ್ರದರ್ಶನ ಕರುಣ್‌ಗಿಂತಲೂ ಚೆನ್ನಾಗಿತ್ತು.

ಆದರೆ ಕರುಣ್ ಸತತ ವೈಫಲ್ಯ ಅನುಭವಿಸಿದಾಗಲೂ ತಂಡದಲ್ಲಿ ಸ್ಥಾನ ನೀಡಿದ್ದರೆ ಬಗ್ಗೆ ಸಂಬಂಧಿತರಿಂದ ಲಭಿ ಸುವ ಉತ್ತರವು ಅಚ್ಚರಿ ಮೂಡಿಸುತ್ತದೆ.

‘ಅವರು ಚೆನ್ನಾಗಿ ಬ್ಯಾಟ್‌ ಮಾಡುತ್ತಿದ್ದಾರೆ. ಆದರೆ ರನ್‌ ಗಳು ಬರುತ್ತಿಲ್ಲ’ ಎಂಬ ಉತ್ತರ ಬಂದಿತ್ತು.

ಪಂದ್ಯದ ನಂತರ ಮಾತನಾಡಿದ ಕೋಚ್ ಯರೇಗೌಡ, ‘ಗುಂಪು ಹಂತದಲ್ಲಿ 18 ತಂಡಗಳಲ್ಲಿ ಐದು ಮಾತ್ರ ನಾಕೌಟ್‌ಗೆ ತೆರಳುವುದು ಕಠಿಣ ಸವಾಲು. ಸತತ ಮೂರು ವರ್ಷ ಸೆಮಿಫೈನಲ್‌ ಪ್ರವೇಶಿಸಿರುವುದು ಸಣ್ಣ ಸಂಗತಿಯಲ್ಲ. ನಮ್ಮಿಂದ ಆಗಿರುವ ಕೆಲವು ಲೋಪಗಳನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ’ ಎಂದರು.

ಬೌಲಿಂಗ್‌ನಲ್ಲಿ ಕೆಲವು ಲೋಪಗ ಳಾದವು. ಪ್ರಮುಖ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮತ್ತು ಎಡಗೈ ಸ್ಪಿನ್ನರ್ ಜೆ. ಸುಚಿತ್ ಅವರು ಸ್ಥಿರ ಪ್ರದರ್ಶನ ನೀಡಲಿಲ್ಲ. ಆದರೆ, ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಮತ್ತು ಮಧ್ಯಮವೇಗಿ ಮಿಥುನ್, ರೋನಿತ್ ಮೋರೆ ಅವರು ಉತ್ತಮವಾಗಿ ಆಡಿ ದರು. ಫೀಲ್ಡಿಂಗ್ ಕೂಡ ಉತ್ಕೃಷ್ಠ ಮಟ್ಟದಲ್ಲಿರಲಿಲ್ಲ.

ಋತುವಿನಲ್ಲಿ ಎರಡು ಪ್ರಶಸ್ತಿ ಜಯಿಸಿರುವುದು ಸಣ್ಣ ಮಾತಲ್ಲ. ಆದರೆ ಪ್ರತಿಷ್ಠಿತ ರಣಜಿ ಟ್ರೋಫಿ ಗೆಲ್ಲದಿದ್ದರೆ ಈ ಋತು ಪರಿಪೂರ್ಣವಲ್ಲ ಎಂದು ತಂಡದ ಕೆಲವು ಆಟಗಾರರೇ ಅಭಿಪ್ರಾಯಪಡುತ್ತಾರೆ.

ಸೌರಾಷ್ಟ್ರ ತಂಡದ ಬಿಗಿ ಹಿಡಿತ
ರಾಜ್‌ಕೋಟ್: ಅರ್ಪಿತ್ ವಾಸ್ವಡ (139; 230ಎ, 16ಬೌಂ, 1ಸಿ) ಅಮೋಘ ಬ್ಯಾಟಿಂಗ್ ಬಲದಿಂದ ಸೌರಾಷ್ಟ್ರ ತಂಡವು ಗುಜರಾತ್ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸಿದೆ.

ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಸೌರಾಷ್ಟ್ರ ತಂಡವು ಎದುರಾಳಿ ಬಳಗಕ್ಕೆ 327 ರನ್‌ಗಳ ಗುರಿ ನೀಡಿತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಗುಜರಾತ್ ದಿನದಾಟದ ಅಂತ್ಯಕ್ಕೆ 9 ಓವರ್‌ಗಳಲ್ಲಿ 1 ವಿಕೆಟ್‌ಗೆ 7 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್
ಸೌರಾಷ್ಟ್ರ:
304, ಗುಜರಾತ್: 252

ಎರಡನೇ ಇನಿಂಗ್ಸ್
ಸೌರಾಷ್ಟ್ರ:
98.4 ಓವರ್‌ಗಳಲ್ಲಿ 274 (ಅರ್ಪಿತ್ ವಾಸ್ವಡ 139, ಚಿರಾಗ್ ಜಾನಿ 51, ಧರ್ಮೇಂದ್ರಸಿಂಹ ಜಡೇಜ 21, ಚಿಂತನ್ ಗಜ 71ಕ್ಕೆ7, ಅರ್ಜನ್ ನಾಗಸ್ವಲ್ಲಾ 75ಕ್ಕೆ2)
ಗುಜರಾತ್: 9 ಓವರ್‌ಗಳಲ್ಲಿ 1 ವಿಕೆಟ್‌ಗೆ 7 (ಸಮಿತ್ ಗೋಯಲ್ ಬ್ಯಾಟಿಂಗ್ 5, ಭಾರ್ಗವ್ ಮೆರೈ ಬ್ಯಾಟಿಂಗ್ 1, ಜಯದೇವ್ ಉನದ್ಕತ್ 6ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT