ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ | ಜಾಕ್ಸನ್–ಅರ್ಪಿತ್ ಶತಕದ ಆರ್ಭಟ: ಹಿನ್ನಡೆಯ ಭೀತಿಯಲ್ಲಿ ಆತಿಥೇಯರು

ಕೈಚೆಲ್ಲಿದ ಕ್ಯಾಚ್‌ಗಳು ದುಬಾರಿಯಾಗುವ ಆತಂಕ?
Last Updated 11 ಫೆಬ್ರುವರಿ 2023, 4:31 IST
ಅಕ್ಷರ ಗಾತ್ರ

ಬೆಂಗಳೂರು: ಇಬ್ಬರು ಅನುಭವಿ ಫೀಲ್ಡರ್‌ಗಳು ಕೈಚೆಲ್ಲಿದ ಕ್ಯಾಚ್‌ಗಳು ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡ ತುಟ್ಟಿಯಾಗುವ ಆತಂಕ ಮೂಡಿಸಿವೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಸೌರಾಷ್ಟ್ರ ತಂಡವು ಮೊದಲ ಇನಿಂಗ್ಸ್ ಮುನ್ನಡೆಯ ಹೊಸ್ತಿಲಲ್ಲಿದೆ. ಇದಕ್ಕೆ ಕಾರಣವಾಗಿದ್ದು ಅನುಭವಿ ಬ್ಯಾಟರ್ ಶೆಲ್ಡನ್ ಜಾಕ್ಸನ್ (160; 245ಎ, 4X23, 6X2) ಮತ್ತು ನಾಯಕ ಅರ್ಪಿತ್ ವಾಸವದ (ಬ್ಯಾಟಿಂಗ್ 112; 219ಎ) ಅವರ ಶತಕಗಳು. ಇವರಿಬ್ಬರೂ ತಮಗೆ ಸಿಕ್ಕ ತಲಾ ಒಂದು ಜೀವದಾನವನ್ನು ಶತಕದಲ್ಲಿ ಪರಿವರ್ತಿಸಿಕೊಂಡರು. ಅಲ್ಲದೇ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 232 ರನ್‌ ಪೇರಿಸಿದರು.

ಇದರಿಂದಾಗಿ ಸೌರಾಷ್ಟ್ರವು ಶುಕ್ರವಾರ ದಿನದಾಟದ ಕೊನೆಗೆ 112 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 364 ರನ್ ಗಳಿಸಿದೆ. ಆತಿಥೇಯ ತಂಡವು ಮಯಂಕ್ ದ್ವಿಶತಕದ ಬಲದಿಂದ ಪೇರಿಸಿದ 407 ರನ್‌ಗಳನ್ನು ಚುಕ್ತಾ ಮಾಡಲು ಇನ್ನೂ 43 ರನ್‌ಗಳಷ್ಟೇ ಬೇಕು.

ಗುರುವಾರ ಸಂಜೆಯ ಸಮರ್ಥ್ ಬಿಟ್ಟ ಕ್ಯಾಚ್‌ನಿಂದಾಗಿ ಶೆಲ್ಡನ್‌ ಈ ಋತುವಿನ ಮೊದಲ ಶತಕ ದಾಖಲಿಸಿದರು. 36 ವರ್ಷದ ಶೆಲ್ಡನ್‌ಗೆ ಕರ್ನಾಟಕದ ಎದುರು ನಾಲ್ಕನೇಯದ್ದು. ವೈಶಾಖ ಎಸೆತವನ್ನು ಪುಲ್‌ ಮಾಡಿ ಸಿಕ್ಸರ್‌ಗೂ ಎತ್ತಿದ ಅವರ ಹೊಡೆತಕ್ಕೆ ಚೆಂಡು ಖಾಲಿ ಗ್ಯಾಲರಿಗೆ ಹೋಗಿಬಿತ್ತು. ಅವರ ಆರ್ಭಟ ಮತ್ತು ನಿಖರ ಪದಚಲನೆಯ ಆಟದಿಂದಾಗಿ ಫೀಲ್ಡಿಂಗ್‌ ನಿಯೋಜನೆಗಳ ಪ್ರಯೋಗಗಳು ವಿಫಲವಾದವು.

ಮೂರನೇ ದಿನದಾಟದಲ್ಲಿ ಮೂರು ರನ್‌ ಗಳಿಸಿದ್ದ ಅರ್ಪಿತ್ ಕ್ಯಾಚ್ ಅನ್ನು ಮನೀಷ್ ಪಾಂಡೆ ಕೈಬಿಟ್ಟರು. ಬಿರುಸಿನ ಹೊಡೆತಗಳ ಆಟಗಾರ ಶೆಲ್ಡನ್ ಅವರ ಬ್ಯಾಟಿಂಗ್ ಮುಂದೆ ಕರ್ನಾಟಕದ ಬೌಲರ್‌ಗಳು ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಳ್ಳಲು ಕಷ್ಟಪಟ್ಟರು. ಸ್ಪಿನ್ನರ್‌ಗಳಂತೂ ದುಬಾರಿಯಾದರು. ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಕೇವಲ ಹತ್ತು ಓವರ್‌ಗಳಲ್ಲಿ 58 ರನ್‌ ಕೊಟ್ಟರು.

ಇಡೀ ದಿನದಲ್ಲಿ ಕರ್ನಾಟಕದ ಬೌಲರ್‌ಗಳಿಗೆ ಸಿಕ್ಕಿದ್ದು ಎರಡು ವಿಕೆಟ್ ಮಾತ್ರ. ಬೆಳಗಿನ ಅವಧಿಯಲ್ಲಿ ಹರ್ವಿಕ್ ದೇಸಾಯಿ ಅವರನ್ನು ಎಲ್‌ಬಿ ಡಬ್ಲ್ಯು ಬಲೆಗೆ ಕೌಶಿಕ್ ಬೀಳಿಸಿದರು. ಮಧ್ಯಾಹ್ನ ಶೆಲ್ಡನ್ ಅವನ್ನು ಗೌತಮ್ ಎಲ್‌ಬಿ ಬಲೆಗೆ ಕೆಡವಿ ನಿಟ್ಟುಸಿರುಬಿಟ್ಟರು. ಆದರೆ, ಗೌತಮ್ ಬೌಲಿಂಗ್‌ನಲ್ಲಿ ಅರ್ಪಿತ್ ಆರು ಬೌಂಡರಿಗಳನ್ನು ಬಾರಿಸಿದರು.

ಆತಿಥೇಯರಿಗೆ ಫೈನಲ್ ಹಾದಿ ಕಠಿಣ
ಪಂದ್ಯದಲ್ಲಿ ಇನ್ನೆರಡು ದಿನಗಳ ಆಟ ಬಾಕಿಯಿದೆ. ಆತಿಥೇಯ ತಂಡಕ್ಕೆ ಫೈನಲ್ ಪ್ರವೇಶಿಸಲು ಎರಡು ಕಠಿಣ ಹಾದಿಗಳಿವೆ. ಮೊದಲನೆಯದ್ದು; ಕರ್ನಾಟಕ ತಂಡವು ನಾಲ್ಕನೇ ದಿನದಾಟವಾದ ಶನಿವಾರ ಬೆಳಿಗ್ಗೆ ಸೌರಾಷ್ಟ್ರದ ಆರು ವಿಕೆಟ್‌ಗಳನ್ನು ಬೇಗನೆ ಉರುಳಿಸಿ ಹಿನ್ನಡೆ ತಪ್ಪಿಸಿಕೊಳ್ಳಬೇಕು. ನಂತರದ ಅವಧಿಯಲ್ಲಿ ದೊಡ್ಡ ಮೊತ್ತವನ್ನು ಪೇರಿಸಿ ನೌರಾಷ್ಟ್ರಕ್ಕೆ ಎರಡನೇ ಇನಿಂಗ್ಸ್‌ ಆಡಲು ಅವಕಾಶ ನೀಡಬೇಕು. ಆಗ ಪಂದ್ಯ ಡ್ರಾ ಆದರೂ ಕರ್ನಾಟಕ ಫೈನಲ್ ಪ್ರವೇಶಿಸುತ್ತದೆ.

ಎರಡನೇಯದಾಗಿ; ಒಂದೊಮ್ಮೆ ಸೌರಾಷ್ಟ್ರವೇ ಇನಿಂಗ್ಸ್ ಮುನ್ನಡೆ ಪಡೆದರೆ, ಕರ್ನಾಟಕವು ಪಂದ್ಯ ಜಯಿಸಿದರೆ ಮಾತ್ರ ಫೈನಲ್‌ಗೆ ಸಾಗಬಹುದು. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪಂಜಾಬ್ ಎದುರು ಇನಿಂಗ್ಸ್‌ ಹಿನ್ನಡೆ ಅನುಭವಿಸಿದ ನಂತರ ಗೆದ್ದು ಬಂದಿರುವ ಸೌರಾಷ್ಟ್ರದ ಮಾದರಿಯಲ್ಲಿ ಕರ್ನಾಟಕವು ಆಡಬೇಕಾಗಬಹುದು. ಆದರೆ ಮೂರನೇ ದಿನದಾಟವನ್ನು ಅವಲೋಕಿಸಿದರೆ ಕರ್ನಾಟಕ ತಂಡದ ಹಾದಿಯೇ ಹೆಚ್ಚು ಕಠಿಣವಾಗಿದೆ. ಟೂರ್ನಿಯುದ್ದಕ್ಕೂ ತಂಡದ ಅಜೇಯ ಓಟಕ್ಕೆ ಪ್ರಮುಖ ಕಾರಣರಾದ ಮಧ್ಯಮವೇಗದ ಬೌಲರ್‌ಗಳಿಗೆ ಸೌರಾಷ್ಟ್ರ ಬ್ಯಾಟರ್‌ಗಳು ದಿಟ್ಟ ಉತ್ತರ ನೀಡುತ್ತಿದ್ದಾರೆ.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್: ಕರ್ನಾಟಕ 407 (133.3 ಓವರ್‌)

ಸೌರಾಷ್ಟ್ರ 4ಕ್ಕೆ364 (112 ಓವರ್‌)

(ಗುರುವಾರ 30 ಓವರ್‌ಗಳಲ್ಲಿ 2ಕ್ಕೆ 75)

ದೇಸಾಯಿ ಎಲ್‌ಬಿಡಬ್ಲ್ಯು ಬಿ ಕೌಶಿಕ್ 33 (106ಎ, 4X4), ಶೆಲ್ಡನ್ ಎಲ್‌ಬಿಡಬ್ಲ್ಯು ಬಿ ಗೌತಮ್ 160 (245ಎ, 4X23, 6X2), ಅರ್ಪಿತ್ ಬ್ಯಾಟಿಂಗ್ 112 (219ಎ, 4X15), ಚಿರಾಗ್ ಬ್ಯಾಟಿಂಗ್ 19 (42ಎ, 4X2)

ಇತರೆ: 18 (ಬೈ 8, ಲೆಗ್‌ಬೈ 8, ವೈಡ್ 2)

ವಿಕೆಟ್ ಪತನ: 3–92 (ಹರ್ವಿಕ್ ದೇಸಾಯಿ; 34.6), 4–324 (ಶೆಲ್ಡನ್ ಜಾಕ್ಸನ್; 97.6)

ಬೌಲಿಂಗ್‌: ವಿದ್ವತ್ ಕಾವೇರಪ್ಪ 28–5–64–2, ವಿ. ಕೌಶಿಕ್ 28–8–70–1, ವೈಶಾಖ ವಿಜಯಕುಮಾರ್ 22–4–82–0, ಕೆ. ಗೌತಮ್ 22–1–68–1, ಶ್ರೇಯಸ್ ಗೋಪಾಲ್ 11–1–58–0, ಆರ್. ಸಮರ್ಥ್ 1–0–6–0


*
ಸೆಮಿಫೈನಲ್ ಘಟ್ಟವು ಪ್ರಮುಖವಾದದ್ದು. ಆದ್ದರಿಂದ ಕರ್ನಾಟಕ ತಂಡವು ಜಯಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಬ್ಯಾಟರ್‌ಗಳ ಚಿತ್ತ ಕಲಕುವ ಪ್ರಯತ್ನ ಮಾಡಿದ್ದಾರೆ. ಇದೆಲ್ಲ ಆಟದಲ್ಲಿ ಸಹಜ. ಇದನ್ನೇ ಟೆಸ್ಟ್ ಕ್ರಿಕೆಟ್ ಎನ್ನುವುದು. ನಾವೂ ನಮ್ಮ ಪ್ರಯತ್ನ ಮಾಡುತ್ತೇವೆ.
–ಶೆಲ್ಡನ್ ಜಾಕ್ಸನ್, ಸೌರಾಷ್ಟ್ರ ಬ್ಯಾಟರ್

’ರಣಜಿ ಸೆಮಿಫೈನಲ್ ಬಹಳ ಮುಖ್ಯವಾದ ಘಟ್ಟ. ಇದರಲ್ಲಿ ಜಯ ಸಾಧಿಸಲು ಕರ್ನಾಟಕದವರು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ನಾವೂ ಅದೇ ರೀತಿ ಮಾಡುತ್ತಿದ್ದೇವೆ. ಅವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT