ಮಂಗಳವಾರ, ಫೆಬ್ರವರಿ 25, 2020
19 °C
ಹತ್ತು ರನ್‌ಗಳಿಂದ ಶತಕ ಕಳೆದುಕೊಂಡ ನೂರ್ ಪಠಾಣ್‌

ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯ: ಬರೋಡಾಗೆ 2 ನೇ ದಿನ ‘ಜೀವದಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕ್ಯಾಚುಗಳನ್ನು ಕೈಚೆ ಲ್ಲಿದ ಕರ್ನಾಟಕ ತಂಡ, ಎರಡನೇ ದಿನವೇ ಬರೋಡಾ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸುವ ಸದವಕಾಶವನ್ನು ಕಳೆದುಕೊಂಡಿತು. ಇದ ರಿಂದ, ರಣಜಿ ಟ್ರೋಫಿ ಪಂದ್ಯದಲ್ಲಿ ಗುರುವಾರ ಬರೋಡಾ ತಂಡ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 208 ರನ್‌ ಗಳಿಸಿ ಹೋರಾಟ ಪ್ರದರ್ಶಿಸಲು ಅವ ಕಾಶವಾಯಿತು.

ಮೊದಲ ಇನಿಂಗ್ಸ್‌ನ 148 ರನ್‌ ಬಾಕಿ ತೀರಿಸಿರುವ ಪ್ರವಾಸಿ ತಂಡ 50 ರನ್‌ಗಳಿಂದ ಮುಂದಿದೆ. ಎರಡನೇ ದಿನದಾಟದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ಗೆ ಅಷ್ಟೇನೂ ತೊಡಕಾಗುವಂತೆ ಕಾಣಲಿಲ್ಲ. 

ಎರಡು ಜೀವದಾನಗಳನ್ನು ಪಡೆದ ಎಡಗೈ ಆರಂಭ ಆಟಗಾರ ಅಹಮದ್‌ ನೂರ್‌ ಪಠಾಣ್‌ (90, 252 ನಿಮಿಷ, 162 ಎಸೆತ) ಹತ್ತು ರನ್‌ಗಳಿಂದ ಶತಕ ಕಳೆದುಕೊಂಡರು. 55ರಲ್ಲಿದ್ದಾಗ ಆಫ್‌ ಸ್ಪಿನ್ನರ್‌ ಪವನ್‌ ದೇಶಪಾಂಡೆ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಕರುಣ್‌ ನಾಯರ್‌ ಜೀವದಾನ ನೀಡಿದರು. 90ರಲ್ಲಿದ್ದಾಗ ಪ್ರಸಿದ್ಧಕೃಷ್ಣ ಬೌಲಿಂಗ್‌ನಲ್ಲಿ ಜೀವದಾನ ನೀಡಿದ ವಿಕೆಟ್‌ ಕೀಪರ್‌ ಶರತ್‌ ಶ್ರೀನಿವಾಸ್‌, ಅದೇ ಓವರ್‌ನಲ್ಲಿ ಕ್ಯಾಚ್‌ ಪಡೆದು ತಪ್ಪು ತಿದ್ದಿಕೊಂಡರು.

ಕೊನೆಯಲ್ಲಿ ಏಕಾಗ್ರತೆ ಕಳೆದು ಕೊಳ್ಳುವ ಮೊದಲು ಪಠಾಣ್‌ ಸೊಗಸಾಗಿ ಆಡಿ ಎಂಟು ಬೌಂಡರಿ, ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಅವರು ಮೊದಲ ಇನಿಂಗ್ಸ್‌ನಲ್ಲೂ ಶಿಸ್ತಿನಿಂದ ಆಡಿ 46 ರನ್‌ ಗಳಿಸಿದ್ದರು.

27ರಲ್ಲಿದ್ದಾಗ ಗೌತಮ್‌ ಬೌಲಿಂಗ್‌ ನಲ್ಲಿ ಶಾರ್ಟ್‌ಲೆಗ್‌ನಲ್ಲಿದ್ದ ನಿಶ್ಚಲ್‌ ಅವರಿಂದ ಜೀವದಾನ ಪಡೆದ ದೀಪಕ್‌ ಹೂಡಾ (50, 71 ಎ, 3 ಬೌಂ, 2ಸಿ) ಬರೋಬರಿ ಅರ್ಧ ಶತಕ ದಾಖಲಿಸಿದರು. 5 ರನ್‌ ಗಳಿಸಿದ್ದಾಗ ಗೌತಮ್‌ ಬೌಲಿಂಗ್‌ನಲ್ಲೇ ಕರುಣ್‌ ನಾಯರ್‌ ಕೈಬಿಟ್ಟ ಕ್ಯಾಚ್‌ನಿಂದ ಬಚಾ ವಾದ ಅಭಿಮನ್ಯು ಸಿಂಗ್‌ ರಜಪೂತ್‌ 31 ರನ್‌ ಗಳಿಸಿ ಔಟಾಗದೇ ಉಳಿದಿದ್ದಾರೆ.

ಇದಕ್ಕೆ ಮೊದಲು, ಕರ್ನಾಟಕದ ಮೊದಲ ಇನಿಂಗ್ಸ್‌ (ಬುಧವಾರ: 7 ವಿಕೆಟ್‌ಗೆ 165) 20.2 ಓವರುಗಳ ಆಟದ ನಂತರ 233 ರನ್‌ಗಳಿಗೆ ಕೊನೆ ಗೊಂಡಿತು. ಅಭಿಮನ್ಯು ಮಿಥುನ್‌ 40 ರನ್‌ ಗಳಿಸಿದರು. ಮಧ್ಯಮ ವೇಗಿ ಸೊಯೆಬ್‌ ಸೊಪಾರಿಯಾ (83ಕ್ಕೆ5) ಯಶಸ್ವಿಯೆನಿಸಿದರು.

ಲಂಚ್‌ ವೇಳೆಗೆ ಬರೋಡಾ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟ ವಿಲ್ಲದೇ 27 ರನ್‌ (11 ಓವರ್‌) ರನ್ ಗಳಿಸಿತ್ತು. ಆದರೆ ಹತ್ತು ಓವರ್‌ಗಳ ನಂತರ ಮೊದಲ ಇನಿಂಗ್ಸ್‌ನಂತೆ ಪ್ರಸಿದ್ಧ ಕೃಷ್ಣ (29ಕ್ಕೆ2) ಕರ್ನಾಟಕಕ್ಕೆ ಮೊದಲ ಯಶಸ್ಸು ದೊರಕಿಸಿಕೊಟ್ಟರು. ಕೇದಾರ ದೇವಧರ್‌ ‘ಕಟ್‌’ಗೆ ಹೋಗಿ ಪಾಯಿಂಟ್‌ನಲ್ಲಿ ಕ್ಯಾಚಿತ್ತರು. ಮರು ಓವರ್‌ನಲ್ಲೇ ವಿಷ್ಣು ಸೋಳಂಕಿ, ಗೌತಮ್‌ ಎಸೆತವನ್ನು ಹಿಂದೆ ಸರಿದು ಆಡಲು ಹೋಗಿ ಎಲ್‌ಬಿ ಬಲೆಗೆ ಬಿದ್ದರು. ಕೇದಾರ್‌ 9 ರಲ್ಲಿದ್ದಾಗ ರಣಜಿ ಕ್ರಿಕೆಟ್‌ನಲ್ಲಿ 4,000 ರನ್‌ಗಳ ಮೈಲಿಗಲ್ಲು ದಾಟಿದ್ದರು. ಇದು ಅವರಿಗೆ 67ನೇ ಪಂದ್ಯ.

ಕುಸಿತದ ಲಕ್ಷಣಗಳು ಗೋಚರಿಸುತ್ತಿದ್ದಂತೆ, ನೂರ್‌ ಪಠಾಣ್‌ ಜೊತೆಗೂಡಿದ ದೀಪಕ್‌ ಹೂಡಾ ಸೊಗಸಾದ ಆಟವಾಡಿ ಮೂರನೇ ವಿಕೆಟ್‌ಗೆ 94 ರನ್‌ಗಳ ಜೊತೆಯಾಟವಾಡಿದರು. ಹೂಡಾ ಅವರಂತೂ ಗೌತಮ್‌ ಅವರ ಒಂದೇ ಓವರ್‌ನಲ್ಲಿ ಎರಡು ಭರ್ಜರಿ ಸಿಕ್ಸರ್‌ಗಳನ್ನು ಎತ್ತಿದ್ದರು.

ಚಹ ವಿರಾಮದ ನಂತರ ರೋನಿತ್‌ ಮೋರೆ (36ಕ್ಕೆ2) ತಮ್ಮ ಎರಡನೇ ಸ್ಪೆಲ್‌ನಲ್ಲಿ ಹೂಡಾ ಮತ್ತು ನಾಯಕ ಕೃಣಾಲ್‌ ಪಾಂಡ್ಯ ವಿಕೆಟ್‌ಗಳನ್ನು ಪಡೆದು ಕರ್ನಾಟಕಕ್ಕೆ ಮೇಲುಗೈ ಒದಗಿಸಿಕೊಟ್ಟರು. ಹೂಡಾ, ಡ್ರೈವ್‌ ಮಾಡುವ ಯತ್ನದಲ್ಲಿದ್ದಾಗ ಒಳಕ್ಕೆ ನುಗ್ಗಿದ ಚೆಂಡು  ಆಫ್‌ಸ್ಟಂಪ್‌ ಉರುಳಿಸಿತು. ಪಾಂಡ್ಯ, ಗಲ್ಲಿಯಲ್ಲಿದ್ದ ದೇವದತ್ತ ಪಡಿಕ್ಕಲ್‌ ಹಿಡಿದ ಕೆಳಮಟ್ಟದ ಕ್ಯಾಚ್‌ಗೆ ನಿರ್ಗಮಿಸಬೇಕಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು