ಸೋಮವಾರ, ಫೆಬ್ರವರಿ 17, 2020
17 °C
ರಣಜಿ ಕ್ರಿಕೆಟ್: ಡ್ರಾ ಪಂದ್ಯದಲ್ಲಿ ಮಧ್ಯಪ್ರದೇಶಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

ಕುಲದೀಪ್‌ ಜೊತೆ ಆದಿತ್ಯ ಆಟದ ಬೆರಗು

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಆದಿತ್ಯ ಶ್ರೀವಾಸ್ತವ ಡೀಪ್ ಮಿಡ್‌ವಿಕೆಟ್‌ನಲ್ಲಿ ನಿಂತಿದ್ದ ದೇವದತ್ತ ಪಡಿಕ್ಕಲ್ ಅವರಿಗೆ ಕ್ಯಾಚ್‌ ನೀಡಿ ತುಸು ಬೇಸರದಿಂದ ತಲೆತಗ್ಗಿಸಿ ಹೆಜ್ಜೆಹಾಕುವ ಹೊತ್ತಿಗೆ ಮಧ್ಯಪ್ರದೇಶ ನಿರಾಳವಾಗಿತ್ತು. ತಂಡಕ್ಕೆ ಇನಿಂಗ್ಸ್‌ ಮುನ್ನಡೆ ದಕ್ಕಿಸಿಕೊಟ್ಟ ಐದನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆದಿತ್ಯ ಕೊನೆಯವರಾಗಿ ಔಟಾದಾಗ ಕರ್ನಾಟಕದ ಆಟಗಾರರಲ್ಲಿ ಬೇಸರದ ನಿರಿಗೆ.

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ರಣಜಿ ಟ್ರೋಫಿ ಕ್ರಿಕೆಟ್‌ ‘ಬಿ’ ಗುಂಪಿನ ಪಂದ್ಯದ ಕೊನೆಯ ದಿನವಾದ ಶುಕ್ರವಾರ ಮೊದಲ ಅವಧಿಯ ಅಂತಿಮ 42 ನಿಮಿಷಗಳ ಆಟ ರೋಚಕವಾಗಿತ್ತು. ಆದಿತ್ಯ ಹಾಗೂ ಕೊನೆಯ ಆಟಗಾರ ಕುಲದೀಪ್ ಸೇನ್ ಜೊತೆಗೂಡಿ ಕರ್ನಾಟಕದ ಇನಿಂಗ್ಸ್‌ ಮುನ್ನಡೆಯ ಆಸೆ ಭಗ್ನಗೊಳಿಸಿದರು.

ಆದಿತ್ಯ (192 ರನ್, 342 ಎಸೆತ, 24 ಬೌಂಡರಿ, 2 ಸಿಕ್ಸರ್) ಹಾಗೂ ಕುಲದೀಪ್ (23 ರನ್, 19 ಎಸೆತ, 1 ಬೌಂಡರಿ, 3 ಸಿಕ್ಸರ್) ಕೊನೆಯ ವಿಕೆಟ್‌ ಜೊತೆಯಾಟದಲ್ಲಿ ಬರೀ 52 ಎಸೆತಗಳಲ್ಲಿ 50 ರನ್ ಕಲೆಹಾಕಿದರು. 381 ರನ್‌ ಆಗಿದ್ದಾಗ 9ನೇ ವಿಕೆಟ್ ಕಳೆದುಕೊಂಡು ಪ್ರವಾಸಿ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್‌ಗೆ ಬಂದ ಕುಲದೀಪ್ 149ನೇ ಓವರ್‌ನಲ್ಲಿ ಎದುರಿಸಿದ್ದು ಕೆ.ಗೌತಮ್ ಆಫ್‌ಸ್ಪಿನ್‌ ಎಸೆತಗಳನ್ನು. ಮಿಡ್‌ವಿಕೆಟ್‌ ದಿಕ್ಕನ್ನೇ ಗುರಿಯಾಗಿಸಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಹೊಡೆದು ಕರ್ನಾಟಕದ ಆಟಗಾರರನ್ನು ಕಂಗಾಲಾಗಿಸಿದರು.

ಗೌತಮ್ ಬದಲಿಗೆ ಶ್ರೇಯಸ್ ಗೋಪಾಲ್ ಅವರಿಗೆ ಬೌಲಿಂಗ್ ಕೊಟ್ಟ ನಿರ್ಣಯವೂ ಮುಳುವಾಯಿತು. ಆ ಓವರ್‌ನಲ್ಲಿ ಆದಿತ್ಯ ಸ್ಟ್ರೈಟ್‌ಡ್ರೈವ್‌ ಮೂಲಕ ಸಿಕ್ಸರ್‌ ಹೊಡೆದರೆ, ಕುಲದೀಪ್ ಮತ್ತೊಮ್ಮೆ ಮಿಡ್‌ವಿಕೆಟ್‌ ದಿಕ್ಕನ್ನು ಗುರಿಯಾಗಿಸಿ ಇನ್ನೊಂದು ಸಿಕ್ಸರ್ ಎತ್ತಿದರು. ಗೌತಮ್ ಹಾಗೂ ಶ್ರೇಯಸ್ ಇಬ್ಬರ ಈ ಎರಡು ಓವರ್‌ಗಳಲ್ಲಿ ಮಧ್ಯಪ್ರದೇಶ 30 ರನ್‌ಗಳನ್ನು ದೋಚಿತು. ಕವರ್ಸ್‌ ಕಡೆಗೆ ಕಟ್‌ ಮಾಡಿ ಆದಿತ್ಯ ಇನಿಂಗ್ಸ್‌ ಮುನ್ನಡೆ ದಕ್ಕಿಸಿಕೊಟ್ಟು, ಖುಷಿಯಿಂದ ಗಾಳಿಗೆ ಗುದ್ದಿದರು.

ಶುಕ್ರವಾರ ಮಧ್ಯಪ್ರದೇಶ ಕಲೆಹಾಕಿದ ಒಟ್ಟು 120 ರನ್‌ಗಳಲ್ಲಿ 83 ಆದಿತ್ಯ ಅವರದ್ದೇ ಆಗಿತ್ತು. ಒಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೂ ಇನ್ನೊಂದೆಡೆ ಅವರು ವೇಗವಾಗಿ ರನ್‌ ಗಳಿಸುತ್ತ ಹೋದರು.

ರೋನಿತ್ ಮೋರೆ ಎಸೆತವೊಂದನ್ನು ಫೈನ್‌ಲೆಗ್‌ ಸಿಕ್ಸರ್‌ಗೆ ಎತ್ತಿದ ಅವರು, ಗೌತಮ್‌ ಎಸೆತಗಳನ್ನು ದಂಡಿಸಲೂ ಅಳುಕಲಿಲ್ಲ. ಗ್ಲಾನ್ಸ್‌ಗಳು, ಸ್ವ್ಕೇರ್‌ಕಟ್‌ಗಳ ಮೂಲಕ ಬೌಂಡರಿಗಳನ್ನು ಗಿಟ್ಟಿಸಿದರು. ಶ್ರೇಯಸ್ ಗೋಪಾಲ್ ಎಸೆತವನ್ನು ಸ್ಟ್ರೇಟ್‌ಡ್ರೈವ್‌ ಮೂಲಕ ಸಿಕ್ಸರ್‌ಗೆ ಎತ್ತಿದ್ದಂತೂ ಮನಮೋಹಕವಾಗಿತ್ತು. ಎಂಟು ತಾಸು, 21 ನಿಮಿಷ ಆಡಿದ ಅವರು ದ್ವಿಶತಕವನ್ನು ಬರೀ 8 ರನ್‌ಗಳಿಂದ ತಪ್ಪಿಸಿಕೊಂಡರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರ ವೈಯಕ್ತಿಕ ಗರಿಷ್ಠ ಮೊತ್ತವೂ ಹೌದು.

ವೆಂಕಟೇಶ್ ಅಯ್ಯರ್ (86 ರನ್; 216 ಎಸೆತ, 10 ಬೌಂಡರಿ, ಒಂದು ಸಿಕ್ಸರ್) ಹಿಂದಿನ ದಿನದ ಮೊತ್ತಕ್ಕೆ ಕೇವಲ ಆರು ರನ್‌ ಸೇರಿಸಿ, ರೋನಿತ್‌ ಹಾಕಿದ ದಿನದ ಆರನೇ ಓವರ್‌ನಲ್ಲೇ ಎರಡನೇ ಸ್ಲಿಪ್‌ನಲ್ಲಿದ್ದ ಸಿದ್ಧಾರ್ಥ್ ಕೈಗೆ ಕ್ಯಾಚಿತ್ತರು. ಇದರೊಂದಿಗೆ ಐದನೇ ವಿಕೆಟ್‌ಗೆ ಆದಿತ್ಯ ಜೊತೆಗಿನ 200 ರನ್‌ಗಳ ಭರ್ಜರಿ ಜೊತೆಯಾಟಕ್ಕೂ ತೆರೆಬಿತ್ತು. ಅಭಿಮನ್ಯು ಮಿಥುನ್ ಅವರು ಕುಮಾರ್ ಕಾರ್ತಿಕೇಯ ಸಿಂಗ್ ಅವರನ್ನು ಬೌಲ್ಡ್‌ ಮಾಡಿ, ಮರು ಎಸೆತದಲ್ಲೇ ರವಿ ಯಾದವ್ ಅವ ರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿ, ಕರ್ನಾಟಕದ ಪಾಳಯದಲ್ಲಿ ಇನಿಂಗ್ಸ್‌ ಮುನ್ನಡೆಯ ಕನಸು ಬಿತ್ತಿದರು.

ಸ್ಟ್ರೈಕ್ ಉಳಿಸಿಕೊಳ್ಳುವ ಧಾವಂತ ದಲ್ಲಿ ಓವರ್‌ನ ಕೊನೆಯ ಎಸೆತದಲ್ಲಿ ರನ್ ಕದಿಯಲು ಆದಿತ್ಯ ಹೋದಾಗ, ಗೌರವ್ ಯಾದವ್ ರನ್‌ಔಟ್ ಆದರು. ಆದರೆ ಕೊನೆಯ ವಿಕೆಟ್‌ನ ನಾಟಕೀಯ ಜೊತೆಯಾಟದಿಂದ ಮಧ್ಯಪ್ರದೇಶ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು.

ಕರ್ನಾಟಕದ ಎರಡನೇ ಇನಿಂಗ್ಸ್‌ ನಲ್ಲಿ ಆರ್.ಸಮರ್ಥ್ ವಿಕೆಟ್‌ ಕಳೆದು ಕೊಂಡು 62 ರನ್‌ಗಳನ್ನು ಗಳಿಸಿತು. 15 ಓವರುಗಳ ಇನಿಂಗ್ಸ್‌ ನಂತರ ಕರ್ನಾಟಕ ಡಿಕ್ಲೇರ್ಡ್‌ ಮಾಡಿಕೊಂಡಿತು. ಉಭಯ ತಂಡಗಳ ನಾಯಕರೂ ಪಂದ್ಯ ನಿಲ್ಲಿಸಲು ಸಮ್ಮತಿಸಿದರು.

ಕರ್ನಾಟಕ ಈ ಪಂದ್ಯದಿಂದ ಒಂದು ಪಾಯಿಂಟ್ ಅಷ್ಟೇ ಪಡೆದದ್ದು, ಒಟ್ಟು 25 ಪಾಯಿಂಟ್‌ಗಳನ್ನು ಹೊಂದಿದೆ.

ನಾಕ್‌ಔಟ್ ಹಂತವನ್ನು ಪ್ರವೇಶಿ ಸಬೇಕಾದರೆ, ಫೆ. 12ರಿಂದ ಬರೋಡಾ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.‌

ಕರುಣ್ ನಾಯಕತ್ವಕ್ಕೆ ಟೀಕೆ

ಬೆಂಗಳೂರು: ಶಿವಮೊಗ್ಗದಲ್ಲಿ ಮಧ್ಯಪ್ರದೇಶ ಎದುರಿನ ರಣಜಿ ಪಂದ್ಯದಲ್ಲಿ ಕರ್ನಾಟಕವು ಮೊದಲ ಇನಿಂಗ್ಸ್‌ ಮುನ್ನಡೆಯನ್ನು ಸಾಧಿಸುವ ಅವಕಾಶವನ್ನು ಕೈಯಾರೆ ಕಳೆದುಕೊಂಡಿತು. ಅದಕ್ಕೆ ನಾಯಕ ಕರುಣ್ ನಾಯರ್ ಅವರ ಕೆಟ್ಟ ನಿರ್ಧಾರಗಳೇ ಕಾರಣ ಎಂದು ಟ್ವಿಟರ್‌ನಲ್ಲಿ ಕ್ರಿಕೆಟ್‌ ಅಭಿಮಾನಿಗಳು ಟೀಕೆಗಳ ಮಳೆಯನ್ನೇ ಸುರಿಸಿದ್ದಾರೆ.

‘ಗುಂಪಿನ ಕೊನೆಯ ಪಂದ್ಯದಲ್ಲಿ ಬರೋಡಾ ಎದುರು ಕರ್ನಾಟಕ ಗೆಲ್ಲದಿದ್ದರೆ ನಾಕೌಟ್ ಕನಸು ಭಗ್ನವಾಗಲಿದೆ. ಇದು ಕರುಣ್ ನಾಯಕತ್ವದ ಪರಿಣಾಮ’ ಎಂದು ಸೂರ್ಯ  ಎಂಬುವವರು ಬರೆದಿದ್ದಾರೆ.

‘ಇನಿಂಗ್ಸ್‌ನ ಕೊನೆಯ ಹಂತದಲ್ಲಿ ಶ್ರೇಯಸ್‌ಗೆ ಬೌಲಿಂಗ್‌ ಕೊಟ್ಟ ಕರುಣ್‌ ನಾಯಕತ್ವಕ್ಕೆ ಧನ್ಯವಾದಗಳು. ಮಧ್ಯಪ್ರದೇಶಕ್ಕೆ ಸುಲಭದ ಮುನ್ನಡೆ ದಕ್ಕಿಸಿಕೊಟ್ಟರು’ ಎಂದು ಸತ್ಯಾ ಎಂಬುವವರು ವ್ಯಂಗ್ಯವಾಡಿದ್ದಾರೆ. ಮನೀಷ್ ಪಾಂಡೆ  ಅವರ ಅನುಪಸ್ಥಿತಿಯಲ್ಲಿ ಕರುಣ್ ರಾಜ್ಯ ತಂಡದ ನಾಯಕತ್ವ ವಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು