ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್‌ | ಗೆಲುವಿನ ‘ದ್ವಿಶತಕ’ ಗಳಿಸಿದ ಕರ್ನಾಟಕ: ಮುಗ್ಗರಿಸಿದ ಮುಂಬೈ

ದೇವದತ್ತ ಪಡಿಕ್ಕಲ್ ಅರ್ಧಶತಕ; ಆರ್. ಸಮರ್ಥ್ ಪಂದ್ಯಶ್ರೇಷ್ಠ; ಪ್ರತೀಕ್‌ಗೆ ನಾಲ್ಕು ವಿಕೆಟ್‌
Last Updated 6 ಜನವರಿ 2020, 7:47 IST
ಅಕ್ಷರ ಗಾತ್ರ
ADVERTISEMENT
""
""

ಮುಂಬೈ: ಕರ್ನಾಟಕ ತಂಡವು ದೇಶಿ ಕ್ರಿಕೆಟ್‌ನ ತನ್ನ ಬದ್ಧ ಎದುರಾಳಿ ಮುಂಬೈ ತಂಡವನ್ನು ಭಾನುವಾರ ಅದರ ನೆಲದಲ್ಲಿಯೇ 5 ವಿಕೆಟ್‌ಗಳಿಂದ ಮಣಿಸಿತು.

ಶರದ್‌ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಎಡಗೈ ಮಧ್ಯಮವೇಗಿ ಪ್ರತೀಕ್ ಜೈನ್ (9–3–11–4) ಅವರ ಮಿಂಚಿನ ದಾಳಿ ಮತ್ತು ದೇವದತ್ತ ಪಡಿಕ್ಕಲ್ (50; 46ಎಸೆತ, 5ಬೌಂಡರಿ, 2ಸಿಕ್ಸರ್) ಅವರ ಚುರುಕಿನ ಅರ್ಧಶತಕದ ಬಲದಿಂದ ಕರ್ನಾಟಕ ತಂಡವು 5 ವಿಕೆಟ್‌ಗಳಿಂದ ಗೆದ್ದಿತು. 41 ಬಾರಿ ರಣಜಿ ಚಾಂಪಿಯನ್ ಆಗಿರುವ ಮುಂಬೈ ತಂಡವು ಹೋದ ವಾರ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ರೈಲ್ವೆಸ್‌ ವಿರುದ್ಧ ಸೋತಿತ್ತು. 2013–14ರಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಕರ್ನಾಟಕವು ಮುಂಬೈ ವಿರುದ್ಧ ಔಟ್‌ರೈಟ್ ಜಯ ಗಳಿಸಿದ ದಾಖಲೆಯನ್ನೂ ಬರೆಯಿತು.

ಪಂದ್ಯದ ಮೂರನೇ ದಿನದ ಆರಂಭದಲ್ಲಿಯೇ ಯುವಪ್ರತಿಭೆ ಪ್ರತೀಕ್ ಜೈನ್ ಅವರು ಮುಂಬೈನ ನಾಲ್ಕು ವಿಕೆಟ್‌ಗಳನ್ನೂ ಕಿತ್ತು ತಮ್ಮ ಬುಟ್ಟಿಗೆ ಹಾಕಿಕೊಂಡರು. ಅದರೊಂದಿಗೆ ಆತಿಥೇಯರ ಆಟಕ್ಕೆ ತೆರೆ ಎಳೆದರು. ಜಯಕ್ಕಾಗಿ 126 ರನ್‌ಗಳ ಗುರಿ ಬೆನ್ನತ್ತಿದ ಕರುಣ್ ನಾಯರ್ ಬಳಗವು 24.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 129 ರನ್ ಗಳಿಸಿ ಗೆದ್ದಿತು. ಈ ಋತುವಿನಲ್ಲಿ ಎರಡನೇ ಜಯ ದಾಖಲಿಸಿತು. ದಿಂಡಿಗಲ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ತಮಿಳುನಾಡುವ ವಿರುದ್ಧ ಗೆದ್ದಿತ್ತು. ಇನ್ನುಳಿದ ಎರಡು ಪಂದ್ಯಗಳಲ್ಲಿ ಡ್ರಾ
ಮಾಡಿಕೊಂಡಿತ್ತು.

ಶನಿವಾರ ಸಂಜೆ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದ ಸರ್ಫರಾಜ್ ಖಾನ್ (71; 140ಎಸೆತ, 8ಬೌಂಡರಿ, 2ಸಿಕ್ಸರ್) ತಂಡದ ಮೊತ್ತಕ್ಕೆ ಮತ್ತಷ್ಟು ರನ್‌ ಸೇರಿಸುವ ಪ್ರಯತ್ನ ಮಾಡಿದರು. ಅದರಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ 50 ಓವರ್‌ಗಳಲ್ಲಿ 9ಕ್ಕೆ 149 ರನ್ ಗಳಿಸಿತು. ಎರಡನೇ ದಿನ 109 ರನ್ ಗಳಿಸಿದ್ದ ತಂಡವು ಅದಕ್ಕೆ 40 ರನ್‌ಗಳನ್ನು ಸೇರಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಎಲ್ಲ ವಿಕೆಟ್‌ಗಳನ್ನು ಜೈನ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಮೂರನೇ ಪಂದ್ಯ ಆಡುತ್ತಿರುವ ಅವರ ಶ್ರೇಷ್ಠ ಸಾಧನೆಯೂ ಇದಾಗಿದೆ. ಪೃಥ್ವಿಶಾ ಗಾಯಗೊಂಡಿದ್ದರಿಂದ ಬ್ಯಾಟಿಂಗ್‌ ಮಾಡಲಿಲ್ಲ.

ದೇವದತ್ತ ಮಿಂಚಿನ ಅರ್ಧಶತಕ: ಚಿಕ್ಕ ಗುರಿಯಾದರೂ ಬೌಲರ್‌ಗಳಿಗೆ ಹೆಚ್ಚು ನೆರವು ನೀಡಿದ ಪಿಚ್‌ನಲ್ಲಿ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಆದರೆ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಬೀಸಾಟವಾಡಿದರು. ಕೇವಲ 46 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಮೊದಲ ವಿಕೆಟ್‌ಗೆ ದೇವದತ್ತ ಮತ್ತು ಸಮರ್ಥ್ 76 ರನ್ (14 ಓವರ್‌ಗಳಲ್ಲಿ) ಗಳಿಸಿದರು.

ಈ ಜೊತೆಯಾಟ ಮುರಿದ ಶಶಾಂಕ್, 16ನೇ ಓವರ್‌ನಲ್ಲಿ ಅಭಿಷೇಕ್ ರೆಡ್ಡಿಗೂ ಪೆವಿಲಿಯನ್ ದಾರಿ ತೋರಿಸಿದರು. ಆರ್. ಸಮರ್ಥ್ (34) ಅವರನ್ನು ಶಮ್ಸ್‌ ಮಲಾನಿ ಕ್ಲೀನ್‌ ಬೌಲ್ಡ್ ಮಾಡಿದರು. ಆಗಿನ್ನೂ ತಂಡವು ನೂರರ ಗಡಿ ದಾಟಿರಲಿಲ್ಲ.

ಪದಾರ್ಪಣೆ ಪಂದ್ಯ ಆಡಿದ ರೋಹನ್ ಕದಂ (21 ರನ್) ಮತ್ತು ಕರುಣ್ ನಾಯರ್ (10 ರನ್) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 27 ರನ್‌ ಸೇರಿಸಿದರು. ಜಯಕ್ಕೆ ಒಂಬತ್ತು ರನ್‌ಗಳ ಅಗತ್ಯವಿದ್ದಾಗ ರೋಹನ್ ಕದಂ ವಿಕೆಟ್ ಗಳಿಸಿದ ಶಶಾಂಕ್, ತಮ್ಮ ಅದೇ ಓವರ್‌ನಲ್ಲಿ ನಾಯಕ ಕರುಣ್ ವಿಕೆಟ್ ಉರುಳಿಸಿದರು.

ಶ್ರೇಯಸ್ ಗೋಪಾಲ್ ಮತ್ತು ಬಿ.ಆರ್. ಶರತ್ ತಂಡವನ್ನು ಜಯದ ಗೆರೆ ಮುಟ್ಟಿಸಿದರು. ಮೊದಲ ಇನಿಂಗ್ಸ್‌ನಲ್ಲಿ ತಂಡವು 24 ರನ್‌ಗಳ ಮಹತ್ವದ ಮುನ್ನಡೆ ಸಾಧಿಸಲು, ಅರ್ಧಶತಕದ ಕಾಣಿಕೆ ನೀಡಿದ್ದ ಸಮರ್ಥ್ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.

ರಣಜಿಯಲ್ಲಿ ಉಭಯ ತಂಡಗಳ ಸಾಧನೆ

ತಂಡ ಮುಂಬೈ ಕರ್ನಾಟಕ
ಪಂದ್ಯ 514 443
ಜಯ 241 200
ಸೋಲು 29 66
ಡ್ರಾ 244 177

ಮುಂಬೈ ಎದುರು ಕರ್ನಾಟಕದ ಸಾಧನೆ

ಪಂದ್ಯ 27
ಜಯ 4
ಸೋಲು 10
ಡ್ರಾ 13

ಅಂಕಿ–ಸಂಖ್ಯೆ: ಚನ್ನಗಿರಿ ಕೇಶವಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT