ಗುರುವಾರ , ಜನವರಿ 23, 2020
22 °C
ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯ: ಕೊನೆಯ ದಿನ ಸೋಲು ತಪ್ಪಿಸಿಕೊಳ್ಳುವ ಸವಾಲು

ಉನದ್ಕತ್‌ ದಾಳಿಗೆ ಕುಸಿದ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜಕೋಟ್‌: ಅನುಭವಿ ಬೌಲರ್‌ ಜಯದೇವ ಉನದ್ಕತ್‌ ಅವರ ವೇಗದ ದಾಳಿಯನ್ನು (49ಕ್ಕೆ5) ಎದುರಿಸಿ ನಿಲ್ಲುವಲ್ಲಿ ಕರ್ನಾಟಕದ ಅನನುಭವಿ ಬ್ಯಾಟಿಂಗ್‌ ಕ್ರಮಾಂಕ ಎಡವಿತು. ಈಗ ಸೌರಾಷ್ಟ್ರ ವಿರುದ್ಧ ‘ಬಿ’ ಗುಂಪಿನ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಲು ಅಂತಿಮ ದಿನವಾದ ಮಂಗಳವಾರ ಭಗೀರಥ ಪ್ರಯತ್ನವನ್ನೇ ನಡೆಸಬೇಕಾಗಿದೆ.

ಈ ಋತುವಿನಲ್ಲಿ 336 ರನ್‌ಗಳೇ ಕರ್ನಾಟಕದ ಗರಿಷ್ಠ ಮೊತ್ತವಾಗಿದ್ದು, ಆಟಗಾರರಿಂದ ಒಂದೂ ಶತಕ
ದಾಖಲಾಗಿರಲಿಲ್ಲ.

ಇಂಥ ಸ್ಥಿತಿಯಲ್ಲಿ ಮಾಧವರಾವ್‌ ಸಿಂಧಿಯಾ ಮೈದಾನದಲ್ಲಿ ಆತಿಥೇಯರ 581 (7 ವಿಕೆಟ್‌ಗೆ ಡಿಕ್ಲೇರ್ಡ್‌) ರನ್‌ಗಳ ದೊಡ್ಡ ಮೊತ್ತ ಕರ್ನಾಟಕಕ್ಕೆ ಪರ್ವತದಂತೆ ಕಂಡರೆ ಅಚ್ಚರಿಯಿರಲಿಲ್ಲ. ಸೋಮವಾರ ಈ ಮೊತ್ತಕ್ಕೆ ಉತ್ತರವಾಗಿ ಕರ್ನಾಟಕ ತಂಡ 171 ರನ್‌ಗಳಿಗೆ ಆಲೌಟ್‌ ಆಯಿತು.

ಫಾಲೊ ಆನ್‌ಗೆ ಒಳಗಾಗಿ ಎರಡನೇ ಇನಿಂಗ್ಸ್‌ ಆರಂಭಿಸಿರುವ ಕರ್ನಾಟಕ ವಿಕೆಟ್‌ ನಷ್ಟವಿಲ್ಲದೇ 30 ರನ್‌ ಗಳಿಸಿ ಮೂರನೇ ದಿನದಾಟ ಮುಗಿಸಿತು.

ಅಂತಿಮ ದಿನ ಒತ್ತಡ ಹೇರಿ, ಸೌರಾಷ್ಟ್ರ ಈ ಋತುವಿನ ಮೂರನೇ ಗೆಲುವಿಗೆ ಯತ್ನಿಸುವುದು ಖಚಿತ. ಇನ್ನೊಂದೆಡೆ ದಿಟ್ಟಿಸುತ್ತಿರುವ ಸೋಲು ತಪ್ಪಿಸಲು ಆಲೌಟ್‌ ಆಗದಂತೆ ಆಡ ಬೇಕಾದ ಅನಿವಾರ್ಯತೆಯಲ್ಲಿ ಕರ್ನಾಟಕವಿದೆ.

ಮೂರು ಪಂದ್ಯಗಳಲ್ಲಿ ಎರಡು ಬಾರಿ ಆರು ವಿಕೆಟ್‌ಗಳ ಗೊಂಚಲು ಪಡೆದು ಈ ಋತುವಿನಲ್ಲಿ ಉತ್ತಮ ಲಯದಲ್ಲಿರುವ ಉನದ್ಕತ್‌ ಭಾನು ವಾರವೇ ಪ್ರಮುಖ ಆಟಗಾರ ದೇವದತ್ತ ಪಡಿಕ್ಕಲ್‌ ಅವರ ವಿಕೆಟ್‌ ಪಡೆದಿದ್ದರು. ಇಂದೂ 28 ವರ್ಷದ ಈ ಬೌಲರ್‌
‘ಸ್ಪೆಲ್‌’ಗಳಲ್ಲಿ ಅತ್ಯುತ್ತಮ ದಾಳಿ
ಪ್ರದರ್ಶಿಸಿದರು.

ಮೂರನೇ ದಿನ ಮಾಮೂಲಿ ಲಯಕ್ಕೆ ಬರಲು ಉನದ್ಕತ್‌ ಸಮಯ ತೆಗೆದುಕೊಂಡರು. ಮೂರು ಓವರುಗಳ ಎರಡು  ಸ್ಪೆಲ್‌ಗಳಲ್ಲಿ ಯಶಸ್ಸು ಸಿಗಲಿಲ್ಲ. ಆರಂಭ ಆಟಗಾರ ರವಿಕುಮಾರ್‌ ಸಮರ್ಥ್‌ ಮತ್ತು ರೋಹನ್‌ ಕದಂ 45 ನಿಮಿಷ ದಾಳಿಯನ್ನು ತಾಳಿಕೊಂಡರು. ಆದರೆ ಮೂರನೇ ಬಾರಿ ದಾಳಿಗಿಳಿದಾಗ ಪರಿಣಾಮಕಾರಿಯಾದ ಉನದ್ಕತ್‌ ಕರ್ನಾಟಕ ಕುಸಿತಕ್ಕೆ  ನಾಂದಿ ಹಾಡಿದರು.

ವಿಕೆಟ್‌ನ ಎರಡೂ ಕಡೆ ಚೆಂಡನ್ನು ಹೊರಳಿಸುತ್ತ ಬ್ಯಾಟ್ಸಮನ್ನರನ್ನು ಪ‍ರೀಕ್ಷೆಗೊಡ್ಡಿದರು. ವೇಗಕ್ಕಿಂತ ಕರಾರುವಾಕ್‌ ಆಗಿ ಬೌಲಿಂಗ್‌ ಮಾಡುವುದಕ್ಕೆ ಯತ್ನಿಸಿದರು. ಸಮರ್ಥ್‌ (63, 174 ಎಸೆತ, 8 ಬೌಂ.) ಬಿಟ್ಟರೆ ಉಳಿದವರು ಅವರಿಗೆ ಪ್ರತಿರೋಧ ತೋರಲು ಅಸಮರ್ಥರಾದರು.

ಎಡಗೈ ಆಟಗಾರ ಕದಂ, ಅವರ ಎಸೆತದಲ್ಲಿ ವಿಕೆಟ್‌ ಕೀಪರ್‌ ಸ್ನೆಲ್‌ಗೆ ಕ್ಯಾಚ್‌ ಕೊಟ್ಟು ನಿರ್ಗಮಿಸಿದರು. ಗಾಯದಿಂದ ಚೇತರಿಸಿಕೊಂಡು ಮರಳಿದ ಕೆ.ವಿ.ಸಿದ್ಧಾರ್ಥ್‌ ಕೇವಲ 11 ಎಸೆತಗಳನ್ನು ಆಡಿ ಪೆವಿಲಿಯನ್‌ಗೆ ಮರಳಿದಾಗ ಕರ್ನಾಟಕ 3 ವಿಕೆಟ್‌ಗೆ 44. ಪವನ್‌ ದೇಶಪಾಂಡೆ ಮತ್ತು ಶ್ರೇಯಸ್‌ ಗೋಪಾಲ್‌ ಕೆಲಕಾಲ ಕ್ರೀಸ್‌ನಲ್ಲಿದ್ದರೂ ಲಯದಲ್ಲಿದ್ದಂತೆ ಕಾಣಲಿಲ್ಲ.

ಉನದ್ಕತ್‌ಗೆ, ಸ್ಪಿನ್ನರ್‌ಗಳಾದ ಕಮಲೇಶ್‌ ಮಕ್ವಾನಾ (27ಕ್ಕೆ3) ಮತ್ತು ಧರ್ಮೇಂದ್ರಸಿಂಹ ಜಡೇಜ (51ಕ್ಕೆ1) ಸೂಕ್ತ ಬೆಂಬಲ ನೀಡಿ, ಪ್ರವಾಸಿಗರ ಒತ್ತಡ ಹೆಚ್ಚಿಸಿದರು.

ಒಂದು ಹಂತದಲ್ಲಿ ಕರ್ನಾಟಕ 93 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದ್ದಾಗ, ಇನಿಂಗ್ಸ್‌ ಬೇಗ ಮುಗಿಯುವಂತೆ ಕಂಡಿತ್ತು. ಆದರೆ ಸಮರ್ಥ್‌ ಜೊತೆಯಾದ ಪ್ರವೀಣ್‌ ದುಬೆ (106 ಎಸೆತಗಳಲ್ಲಿ 46) ಏಳನೇ ವಿಕೆಟ್‌ಗೆ 39 ರನ್‌ ಸೇರಿಸಿ ಕುಸಿತ ತಡೆದರು. ಈ ಹಂತದಲ್ಲಿ ಮರಳಿದ ಉನದ್ಕತ್‌, ಸಮರ್ಥ್‌ ಮತ್ತು ಸುಚಿತ್‌ ಅವರ ವಿಕೆಟ್‌ ಪಡೆದು ವಿಜೃಂಭಿಸಿದರು.

ಎರಡನೇ ಇನಿಂಗ್ಸ್‌ನಲ್ಲಿ ಕೆಚ್ಚಿನಿಂದ ಆಟವಾಡಿದ ಕರ್ನಾಟಕ ಆರಂಭ ಆಟಗಾರರು ಮತ್ತಷ್ಟು ಹಾನಿಯಾಗದಂತೆ ನೋಡಿಕೊಂಡರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು