ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Ranji Trophy: ಮಯಂಕ್ ಬಳಗಕ್ಕೆ ಜಯದ ಕನಸು

Published : 21 ಡಿಸೆಂಬರ್ 2022, 21:45 IST
ಫಾಲೋ ಮಾಡಿ
Comments

ಬೆಂಗಳೂರು: ಸತತ ಎರಡನೇ ಪಂದ್ಯದಲ್ಲಿ ಶತಕ ದಾಖಲಿಸಿದ ಆರ್. ಸಮರ್ಥ್ ಅವರಿಂದಾಗಿ ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕ ತಂಡದ ಮೊದಲ ಜಯದ ನಿರೀಕ್ಷೆ ಕುಡಿಯೊಡಿದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪುದುಚೇರಿ ತಂಡದ ಎದುರಿನ ಪಂದ್ಯದಲ್ಲಿ ಬುಧವಾರ ಆರಂಭಿಕ ಬ್ಯಾಟರ್ ಸಮರ್ಥ್ (137; 242ಎ, 4X17) ಅಮೋಘ ಶತಕದ ಬಲದಿಂದ ಆತಿಥೇಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 93.2 ಓವರ್‌ಗಳಲ್ಲಿ 304 ರನ್ ಗಳಿಸಿತು. ಇದರೊಂದಿಗೆ 134 ರನ್‌ಗಳ ಮುನ್ನಡೆ ಸಾಧಿಸಿತು.

ಚಹಾ ವಿರಾಮದ ನಂತರ ಎರಡನೇ ಇನಿಂಗ್ಸ್‌ ಆರಂಭಿಸಿದ ಪುದುಚೇರಿಗೆ ಕರ್ನಾಟಕದ ಬೌಲರ್‌ಗಳು ಆಘಾತ ನೀಡಿದರು. ಎರಡನೇ ದಿನದಾಟದ ಕೊನೆಗೆ 27 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 58 ರನ್ ಗಳಿಸಿದೆ. ಜಯ್ ಪಾಂಡೆ (ಬ್ಯಾಟಿಂಗ್ 25) ಮತ್ತು ಎಸ್. ಅಶ್ವಥ್ (ಬ್ಯಾಟಿಂಗ್ 3) ಕ್ರೀಸ್‌ನಲ್ಲಿದ್ದಾರೆ.

ರೋನಿತ್ ಹಾಕಿದ ನಾಲ್ಕನೇ ಓವರ್‌ನಲ್ಲಿ ಪ್ರವಾಸಿ ತಂಡದ ಆರಂಭಿಕ ಬ್ಯಾಟರ್ ಅರವಿಂದ್ ಹೊಡೆದ ಚೆಂಡನ್ನು ಸ್ಕ್ವೇರ್‌ ಲೆಗ್‌ನಲ್ಲಿ ಶ್ರೇಯಸ್ ಗೋಪಾಲ್ ಕ್ಯಾಚ್ ಮಾಡಿದ ರೀತಿ ಆಕರ್ಷಕವಾಗಿತ್ತು.

ನಯನ್ ಕಾಂಗಿಯನ್ 18ನೇ ಓವರ್‌ನಲ್ಲಿ ವೈಶಾಖ ಎಸೆತವನ್ನು ಕೆಣಕಿದರು. ಡೈವ್ ಮಾಡಿದ ವಿಕೆಟ್‌ ಕೀಪರ್ ಶರತ್ ಕ್ಯಾಚ್ ಪಡೆದರು. ಪರಸ್ ಡೋಗ್ರಾ ಅವರನ್ನು ಆಫ್‌ಸ್ಪಿನ್ನರ್ ಗೌತಮ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಕರ್ನಾಟಕದ ಮುನ್ನಡೆಯ ಮೊತ್ತವನ್ನು ಚುಕ್ತಾ ಮಾಡಲು ಪುದುಚೇರಿಗೆ 76 ರನ್‌ಗಳ ಅವಶ್ಯಕತೆ ಇದೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿಯಿದೆ.ಗುರುವಾರ ಬೆಳಗಿನ ಅವಧಿಯಲ್ಲಿ ವಿಕೆಟ್‌ಗಳನ್ನು ಉಳಿಸಿಕೊಂಡು ಕರ್ನಾಟಕಕ್ಕೆ ಕಠಿಣ ಸವಾಲೊಡ್ಡುವ ಒತ್ತಡ ದಾಮೋದರನ್ ರೋಹಿತ್ ಬಳಗಕ್ಕೆ ಇದೆ.

ಸಮರ್ಥ್–ಅಂಕಿತ್ ಜಿದ್ದಾಜಿದ್ದಿ

ಪಂದ್ಯದ ಮೊದಲ ದಿನವಾದ ಮಂಗಳವಾರ ಚಹಾ ವಿರಾಮಕ್ಕೆ ಪುದುಚೇರಿ ತಂಡವು 170 ರನ್‌ ಗಳಿಸಿ ಆಲೌಟ್ ಆಗಿತ್ತು. ದಿನದಾಟದ ಕೊನೆಗೆ ಕರ್ನಾಟಕವು111 ರನ್ ಗಳಿಸಿತ್ತು. ಅರ್ಧಶತಕ ಮಾಡಿದ್ದ ಮಯಂಕ್ ಅಗರವಾಲ್ ಔಟಾಗಿದ್ದರು. ಕ್ರೀಸ್‌ನಲ್ಲಿ ಉಳಿದಿದ್ದ ಬಲಗೈ ಬ್ಯಾಟರ್ ಸಮರ್ಥ್ ಎರಡನೇ ದಿನದಾಟದಲ್ಲಿ ಇನಿಂಗ್ಸ್ ಕಟ್ಟಿದರು.

ಆದರೆ ಇನ್ನೊಂದೆಡೆಪುದುಚೇರಿಯ ಸ್ಪಿನ್ನರ್ ಅಂಕಿತ್ ಶರ್ಮಾ (22–5–60–6) ಆತಿಥೇಯ ಬ್ಯಾಟರ್‌ಗಳು ದೊಡ್ಡ ಜೊತೆಯಾಟ ಬೆಳೆಸದಂತೆ ತಡೆಯೊಡ್ಡಿದರು.

ಇದರಿಂದಾಗಿ ಈ ಇನಿಂಗ್ಸ್‌ ಸಮರ್ಥ್ ಮತ್ತು ಅಂಕಿತ್ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಯಿತು. ಒಂದು ಕಡೆ ಬಲಗೈ ಬ್ಯಾಟರ್ ರನ್‌ ಸೇರಿಸುವಲ್ಲಿ ನಿರತರಾಗಿದ್ದರೆ, ಇನ್ನೊಂದೆಡೆ ಎಡಗೈ ಸ್ಪಿನ್ನರ್ ವಿಕೆಟ್ ಕಬಳಿಸುವತ್ತ ಚಿತ್ತ ನೆಟ್ಟರು. ಈ ನಡುವೆ ಸಮರ್ಥ್ ಎರಡು ಮಹತ್ವದ ಜೊತೆಯಾಟಗಳಲ್ಲಿ ಭಾಗಿಯಾದರು.

ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ನಿಕಿನ್ ಜೋಸ್ ಜೊತೆಗೆ 63 ರನ್ ಸೇರಿಸಿದರು.ಇದರಿಂದಾಗಿ ಊಟದ ವಿರಾಮಕ್ಕೆ ತಂಡವು 200 ಗಡಿ ದಾಟಿತು.

ಆರನೇ ವಿಕೆಟ್‌ ಜೊತೆಯಾಟದಲ್ಲಿ ಸಮರ್ಥ್, ಅನುಭವಿ ಮನೀಷ್ ಪಾಂಡೆ ಯೊಂದಿಗೆ 55 ರನ್ ಸೇರಿಸಿದರು.

ಸಮರ್ಥ್ ನೂರರ ಗಡಿ ತಲುಪಲು 162 ಎಸೆತಗಳನ್ನು ಆಡಿದರು. ಅದರಲ್ಲಿ 15 ಬೌಂಡರಿಗಳಿದ್ದವು. 82ನೇ ಓವರ್‌ನಲ್ಲಿ ಅವರು ಡೋಗ್ರಾ ಬೌಲಿಂಗ್‌ನಲ್ಲಿ ರೋಹಿತ್‌ಗೆ ಕ್ಯಾಚಿತ್ತರು. ಮೊದಲ ಪಂದ್ಯದಲ್ಲಿ ಸರ್ವಿಸಸ್ ಎದುರು ಸಮರ್ಥ್ ಶತಕ ಗಳಿಸಿದ್ದರು.ಸಮರ್ಥ್ ಔಟಾದ ನಂತರ 55 ರನ್‌ಗಳು ತಂಡದ ಖಾತೆ ಸೇರುವಷ್ಟರಲ್ಲಿ ಐವರು ಬ್ಯಾಟರ್‌ಗಳು ಔಟಾದರು.

12 ವಿಕೆಟ್

ಪಂದ್ಯದ ಮೊದಲ ದಿನ ಈ ಪಿಚ್‌ನಲ್ಲಿ 11 ವಿಕೆಟ್‌ಗಳು ಪತನವಾಗಿದ್ದವು. ಎರಡನೇ ದಿನವೂ ಬೌಲರ್‌ಗಳು ಮಿಂಚಿದರು. ಒಂದೇ ದಿನ 12 ವಿಕೆಟ್‌ಗಳು ಉರುಳಿದವು.

ಸ್ಕೋರ್‌ ಕಾರ್ಡ್‌
ಮೊದಲ ಇನಿಂಗ್ಸ್: ಪುದುಚೇರಿ 170 (54 ಓವರ್‌)

ಕರ್ನಾಟಕ 304 (93.2 ಓವರ್‌)

(ಮಂಗಳವಾರ:32 ಓವರ್‌ಗಳಲ್ಲಿ 1 ವಿಕೆಟ್‌ಗೆ 111))

ಸಮರ್ಥ್ ಸಿ ರೋಹಿತ್ ಬಿ ಡೋಗ್ರಾ 137 (242ಎ, 4X17), ರೋನಿತ್ ಎಲ್‌ಬಿಡಬ್ಲ್ಯು ಅಂಕಿತ್ 0 (7ಎ), ವಿಶಾಲ್ ಸ್ಟಂಪ್ಡ್‌ ಅರುಣ್ ಬಿ ಅಂಕಿತ್ 4 (21ಎ, 4X1), ನಿಕಿನ್ ಸಿ ಡೋಗ್ರಾ ಬಿ ಅಂಕಿತ್ 30 (67ಎ, 4X4), ಮನೀಷ್ ಎಲ್‌ಬಿಡಬ್ಲ್ಯು ಬಿ ವಿಘ್ನೇಷ್ 45 (78ಎ, 4X4, 6X1), ಶ್ರೇಯಸ್ ಎಲ್‌ಬಿಡಬ್ಲ್ಯು ವಿಘ್ನೇಷ್ 12 (28ಎ, 4X2), ಶರತ್ ಸಿ ಅರವಿಂದ್ ಬಿ ಅಂಕಿತ್ 9 (12ಎ, 4X2), ಗೌತಮ್ ಎಲ್‌ಬಿಡಬ್ಲ್ಯು ಬಿ ಅಂಕಿತ್ 10 (13ಎ, 4X1), ವೈಶಾಖ ಬಿ ಸಾಗರ್ 1 (4ಎ), ವಿದ್ವತ್ ಔಟಾಗದೆ 0 (0ಎ)

ಇತರೆ 5 (ಬೈ 1, ವೈಡ್ 1, ನೋಬಾಲ್ 3)

ವಿಕೆಟ್ ಪತನ: 2–111 (ರೋನಿತ್ ಮೋರೆ;33.2), 3–131 (ವಿಶಾಲ್ ಓಣತ್; 39.5), 4–194 (ನಿಕಿನ್ ಜೋಸ್;58.5), 5–249 (ಸಮರ್ಥ್; 81.3), 6–280 (ಮನೀಷ್ ಪಾಂಡೆ;87.2), 7–285 (ಶ್ರೇಯಸ್ ಗೋಪಾಲ್; 89.2), 8–303 (ಬಿ.ಆರ್. ಶರತ್; 92.3) 9–304 (ಕೆ. ಗೌತಮ್; 92.6), 10–304 (ವೈಶಾಖ ವಿಜಯಕುಮಾರ್; 93.2)

ಬೌಲಿಂಗ್‌: ಎಸ್. ಅಶ್ವಥ್ 16–3–54–0, ಅಬಿನ್ ಮ್ಯಾಥ್ಯೂ 16.3–4–56–0, ಸಾಗರ್ ಪಿ ಉದೇಶಿ 23.2–2–80–1, ಎಂ. ವಿಘ್ನೇಷ್ 6–1–32–2, ಅಂಕಿತ್ ಶರ್ಮಾ 22–5–60–6, ಪಾರಸ್ ಡೋಗ್ರಾ 9.3–1–21–1

ಎರಡನೇ ಇನಿಂಗ್ಸ್: ಪುದುಚೇರಿ 3ಕ್ಕೆ58 (27 ಓವರ್‌)

ನಯನ್ ಸಿ ಶರತ್ ಬಿ ವೈಶಾಖ 24 (55ಎ, 4X5), ಅರವಿಂದ್ ಸಿ ಶ್ರೇಯಸ್ ಬಿ ರೋನಿತ್ 1 (7ಎ), ಜಯ್ ಪಾಂಡೆ ಬ್ಯಾಟಿಂಗ್ 25 (65ಎ, 4X4), ಡೋಗ್ರಾ ಎಲ್‌ಬಿಡಬ್ಲ್ಯು ಬಿ ಗೌತಮ್ 3 (8ಎ), ಎಸ್. ಅಶ್ವಥ್ ಬ್ಯಾಟಿಂಗ್ 3 (27ಎ)

ಇತರೆ 2 (ಲೆಗ್‌ಬೈ 2)

ವಿಕೆಟ್ ಪತನ: 1–6 (ಅರವಿಂದ್; 3.2), 2–41 (ನಯನ್ ಕಂಗಯನ್; 17.1), 3–48 (ಪಾರಸ್ ಡೋಗ್ರಾ; 20.2)

ಬೌಲಿಂಗ್‌: ವಿದ್ವತ್ ಕಾವೇರಪ್ಪ 8–6–13–0, ರೋನಿತ್ ಮೋರೆ 6–3–9–1, ವೈಶಾಖ ವಿಜಯಕುಮಾರ್ 7–2–13–1, ಕೆ. ಗೌತಮ್ 6–1–21–1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT