ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Quarter Final: ಕರ್ನಾಟಕಕ್ಕೆ ಸಡ್ಡು ಹೊಡೆದ ಕರುಣ್

Published 24 ಫೆಬ್ರುವರಿ 2024, 10:06 IST
Last Updated 24 ಫೆಬ್ರುವರಿ 2024, 10:06 IST
ಅಕ್ಷರ ಗಾತ್ರ

ನಾಗ್ಪುರ: ಈ ಬಾರಿಯ ರಣಜಿ ಋತುವಿನಲ್ಲಿ ವಿದರ್ಭ ತಂಡದಲ್ಲಿ ಆಡುತ್ತಿರುವ ಬೆಂಗಳೂರಿನ ಕರುಣ್ ನಾಯರ್ ಶನಿವಾರ ಕರ್ನಾಟಕಕ್ಕೆ ಕಠಿಣ ಪೈಪೋಟಿಯೊಡ್ಡಿದರು.

ಇಲ್ಲಿ ನಡೆಯುತ್ತಿರುವ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಹತ್ತು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡ ಕರುಣ್ (90;178ಎ, 4X16, 6X1) ವಿದರ್ಭ ತಂಡವು ಮೊದಲ ಇನಿಂಗ್ಸ್‌ನಲ್ಲಿ 460 ರನ್‌ಗಳ ದೊಡ್ಡ ಮೊತ್ತ ಗಳಿಸಲು ಮಹತ್ವದ ಕಾಣಿಕೆ ನೀಡಿದರು.

ಇದಕ್ಕುತ್ತರವಾಗಿ ಕರ್ನಾಟಕವು ಎರಡನೇ ದಿನದಾಟದ ಕೊನೆಗೆ 24 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 98 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಆರ್. ಸಮರ್ಥ್ (ಬ್ಯಾಟಿಂಗ್ 43) ಹಾಗೂ ನಿಕಿನ್ ಜೋಸ್ (ಬ್ಯಾಟಿಂಗ್ 20) ಕ್ರೀಸ್‌ನಲ್ಲಿದ್ದಾರೆ.

ಸೆಮಿಫೈನಲ್ ಪ್ರವೇಶಿಸಲು ಕಠಿಣ ಹಾದಿ ಸವೆಸಬೇಕಿರುವ ಕರ್ನಾಟಕ ತಂಡವು ಈಗಾಗಲೇ ಮಯಂಕ್ ಅಗರವಾಲ್ ಮತ್ತು ಕೆ.ವಿ. ಅನೀಶ್ (34; 48ಎ, 4X6) ಅವರ ವಿಕೆಟ್ ಕಳೆದುಕೊಂಡಿದೆ. ಮಯಂಕ್ ಸೊನ್ನೆ ಸುತ್ತಿದರು.

ಒಂದೊಮ್ಮೆ ಪಂದ್ಯ ಡ್ರಾ ಆದರೂ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸುವ ತಂಡವು ನಾಲ್ಕರ ಘಟ್ಟ ಪ್ರವೇಶಿಸಲಿದೆ. ಆದ್ದರಿಂದ ಉಭಯ ತಂಡಗಳೂ ಇನಿಂಗ್ಸ್‌ ಮುನ್ನಡೆಗೆ ತುರುಸಿನ ಪೈಪೋಟಿ ನಡೆಸುವ ನಿರೀಕ್ಷೆ ಇದೆ. ಪಂದ್ಯದಲ್ಲಿ ಇನ್ನೂ ಮೂರು ದಿನಗಳ  ಆಟ ಬಾಕಿಯಿದೆ.

ಮುನ್ನಡೆಗಾಗಿ ಕರ್ನಾಟಕ ತಂಡಕ್ಕೆ ಇನ್ನೂ 362 ರನ್‌ ಅಗತ್ಯವಿದೆ. ಇಡೀ ಋತುವಿನಲ್ಲಿ ಹೆಚ್ಚು ವೈಫಲ್ಯವನ್ನೇ ಕಂಡಿರುವ ಸಮರ್ಥ್ ಇಲ್ಲಿ 68 ಎಸೆತ ಎದುರಿಸಿದ್ದಾರೆ.

ಐದು ಬೌಂಡರಿ ಕೂಡ ಬಾರಿಸಿದ್ದಾರೆ. ನಿಕಿನ್ 26 ಎಸೆತಗಳನ್ನು ಆಡಿದ್ದಾರೆ.  ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಇಬ್ಬರಿಗೂ ಇದು ಒಳ್ಳೆಯ ಅವಕಾಶವಾಗಿದೆ. 

ಕರುಣ್ ಬ್ಯಾಟಿಂಗ್: ಮೊದಲ ದಿನದಾಟದಲ್ಲಿ ಅಥರ್ವ ತೈಡೆ ಶತಕ ಮತ್ತು ಯಶ್ ರಾಥೋಡ್ ಅವರ(93 ರನ್) ಅವರ ಅಮೋಘ ಬ್ಯಾಟಿಂಗ್‌ನಿಂದ ವಿದರ್ಭ ತಂಡವು 86 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 261 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಕರುಣ್ ಶನಿವಾರ ಮಿಂಚಿದರು.

ತಮ್ಮ ತವರು ರಾಜ್ಯದ ‘ಸ್ನೇಹಿತ‘ರನ್ನು ಕಾಡಿದರು. ವಿದ್ವತ್ ಕಾವೇರಪ್ಪ (99ಕ್ಕೆ4) ಸೇರಿದಂತೆ ಮೂವರು ಮಧ್ಯಮವೇಗಿಗಳು ಪರಿಣಾಮಕಾರಿಯಾಗಿದ್ದರು. ಆದರೂ ಅವರ ಎಸೆತಗಳನ್ನು ಕರುಣ್ ಆತ್ಮವಿಶ್ವಾಸದಿಂದ ಎದುರಿಸಿದರು.

ಶತಕದತ್ತ ಹೆಜ್ಜೆ ಇಟ್ಟಿದ ಕರುಣ್ ಅವರ ವಿಕೆಟ್ ಕಬಳಿಸಿದ ವಿದ್ವತ್ ಸಂಭ್ರಮಿಸಿದರು. ಆದರೆ ಕೆಳಕ್ರಮಾಂಕದ ಬ್ಯಾಟರ್‌ಗಳೂ ಒಂದಷ್ಟು ರನ್‌ಗಳ ಕಾಣಿಕೆ ನೀಡಿದ್ದರಿಂದ ಆತಿಥೇಯ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವಿದರ್ಭ: 143.1 ಓವರ್‌ಗಳಲ್ಲಿ 460 (ಕರುಣ್ ನಾಯರ್ 90, ಆದಿತ್ಯ ಸರವಟೆ 26, ಹರ್ಷ ದುಬೆ 20, ಯಶ್ ಠಾಕೂರ್ 31, ಉಮೇಶ್ ಯಾದವ್ ಔಟಾಗದೆ 21, ವಿದ್ವತ್ ಕಾವೇರಪ್ಪ 99ಕ್ಕೆ4, ಹಾರ್ದಿಕ್ ರಾಜ್ 89ಕ್ಕೆ2) ಕರ್ನಾಟಕ: 24 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 98 (ಆರ್. ಸಮರ್ಥ್ ಬ್ಯಾಟಿಂಗ್ 43, ಕೆ.ವಿ. ಅನೀಶ್ 34, ನಿಕಿನ್ ಜೋಸ್ ಬ್ಯಾಟಿಂಗ್ 20, ಆದಿತ್ಯ ಠಾಕ್ರೆ 29ಕ್ಕೆ1, ಯಶ್ ಠಾಕೂರ್ 22ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT