ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಿಢೀರ್ ನಿವೃತ್ತಿ ಘೋಷಣೆ; ಬೌಲಿಂಗ್ ಮೇಧಾವಿ ಅಶ್ವಿನ್ ಯುಗಾಂತ್ಯ

ಫ್ರ್ಯಾಂಚೈಸಿ ಕ್ರಿಕೆಟ್‌ನಲ್ಲಿ ಮುಂದುವರಿಯುವ ಇಂಗಿತ
Published : 18 ಡಿಸೆಂಬರ್ 2024, 22:30 IST
Last Updated : 18 ಡಿಸೆಂಬರ್ 2024, 22:30 IST
ಫಾಲೋ ಮಾಡಿ
Comments
ತವರಿನಂಗಳದಲ್ಲಿ ಅಶ್ವಿನ್ ಮಹತ್ವ
ಕಳೆದ 12 ವರ್ಷಗಳಲ್ಲಿ ಭಾರತ ತಂಡವು ತವರಿನಲ್ಲಿ ಕೇವಲ ಎರಡು ಸರಣಿ ಸೋತಿದೆ. ಉಳಿದಂತೆ  ಸತತ 18 ಸರಣಿಗಳಲ್ಲಿ ಭಾರತ ಜಯಿಸಿತ್ತು. ಆ ಜಯಗಳಲ್ಲಿ ಅಶ್ವಿನ್ ಪಾತ್ರವೇ ಮಹತ್ವದ್ದಾಗಿತ್ತು. ಆದರೆ 2012ರಲ್ಲಿ ಇಂಗ್ಲೆಂಡ್ ಮತ್ತು ಈಚೆಗೆ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಭಾರತವು ಸೋತಾಗ ಅಶ್ವಿನ್ ಉತ್ತಮ ಸಾಧನೆ ಮಾಡಿರಲಿಲ್ಲ. ಅದರ ಪರಿಣಾಮ ಸೋಲು ಎಂದು ವಿಶ್ಲೇಷಿಸಲಾಗಿತ್ತು. 
ಅಶ್ವಿನ್–ಜಡೇಜ ಜೊತೆಯಾಟ
ಅಶ್ವಿನ್ ಮತ್ತು ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ ಅವರಿಬ್ಬರ ಬೌಲಿಂಗ್ ಜೊತೆಯಾಟದಿಂದ ಭಾರತ ಬಹಳಷ್ಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಬ್ಯಾಟಿಂಗ್‌ನಲ್ಲಿಯೂ ಇವರ ಜೊತೆಯಾಟಗಳು ಇವೆ. ಈಚೆಗೆ ಚೆನ್ನೈನಲ್ಲಿ  ಬಾಂಗ್ಲಾ ವಿರುದ್ಧ ನಡೆದಿದ್ದ ಟೆಸ್ಟ್‌ನಲ್ಲಿ ಅವರ ಜೊತೆಯಾಟದಲ್ಲಿ 199 ರನ್‌ ಸೇರಿಸಿದ್ದರು. ಇದರಿಂದಾಗಿ ಭಾರತ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿತ್ತು.
ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಆರ್‌. ಅಶ್ವಿನ್‌

ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಆರ್‌. ಅಶ್ವಿನ್‌

–ಪ್ರಜಾವಾಣಿ ಸಂಗ್ರಹ ಚಿತ್ರ: ಎಸ್‌.ಕೆ. ದಿನೇಶ್‌

‘ಕುಟ್ಟಿ ಸ್ಟೋರೀಸ್’ ಯೂಟ್ಯೂಬ್ ವಾಹಿನಿ
ಅಶ್ವಿನ್ ಕ್ರಿಕೆಟ್ ಅಂಗಳದ ಹೊರಗೂ ತಮ್ಮ ಛಾಪು ಮೂಡಿಸಿದವರು. ಅದರಲ್ಲೂ ಅವರ ಯೂಟ್ಯೂಬ್ ವಾಹಿನಿ ‘ಕುಟ್ಟಿ ಸ್ಟೋರೀಸ್’ ಬಹಳ ಜನಪ್ರಿಯವಾಗಿದೆ. ಮಾಜಿ ಮತ್ತು ಹಾಲಿ ಕ್ರಿಕೆಟಿಗರೊಂದಿಗೆ ಅವರು ಈ ವಾಹಿನಿಯಲ್ಲಿ ನಡೆಸುವ ಸಂವಾದಗಳು ಮಾಹಿತಿಪೂರ್ಣವಾಗಿರುತ್ತವೆ. ಪಾಡ್‌ಕಾಸ್ಟ್‌ ಮೂಲಕವೂ ಅವರು ಕ್ರಿಕೆಟ್‌ ಲೋಕದ ಅಪರೂಪದ ಸಂಗತಿಗಳ ಕುರಿತು ಚರ್ಚೆ ನಡೆಸುತ್ತಾರೆ.
ಅಶ್ವಿನ್‌ಗೆ ಸಿಗದ ನಾಯಕತ್ವ
ತಮಿಳುನಾಡಿನ ಅಶ್ವಿನ್ ಅವರು ಕ್ರಿಕೆಟ್‌ ನಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಜೊತೆಗೆ ಕ್ರಿಕೆಟ್ ಆಟವನ್ನು ಸೂಕ್ಷ್ಮವಾಗಿ ಮತ್ತು ಆಳವಾಗಿ ಅರಿಯುವ ಕಲೆ ಗೊತ್ತಿತ್ತು. ತಾವು ಆಡುವ ಪಂದ್ಯಗಳಲ್ಲಿ ನಾಯಕರಿಗೆ ಉಪಯುಕ್ತ ಸಲಹೆಗಳನ್ನು ಕೊಡುವ ಚಾಕಚಾಕ್ಯತೆ ಅವರಲ್ಲಿತ್ತು. ಒತ್ತಡ ಸಂದರ್ಭದಲ್ಲಿ ಪಂದ್ಯಗಳನ್ನು ತಮ್ಮ ಬೌಲಿಂಗ್ ಅಥವಾ ಬ್ಯಾಟಿಂಗ್ ಮೂಲಕ ಗೆಲ್ಲಿಸಿಕೊಟ್ಟ ಉದಾಹರಣೆಗಳು ಹಲವಾರಿವೆ. ಆದರೂ ಅವರಿಗೆ ಭಾರತ ತಂಡದ ನಾಯಕತ್ವ ಒಲಿಯಲಿಲ್ಲ. ಹಿರಿತನ, ಪ್ರತಿಭೆ ಮತ್ತು ನಾಯಕತ್ವ ಗುಣಗಳಿದ್ದರೂ ತಂಡವನ್ನು ಮುನ್ನಡೆಸುವ ಅವಕಾಶ ಅವರಿಗೆ ದೊರೆಯಲಿಲ್ಲ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅಶ್ವಿನ್‌ ಹೇಳಿದ್ದು...
'ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ನನ್ನ ಕೊನೆಯ ದಿನ. ಕ್ರಿಕೆಟ್ ಅನ್ನು ತುಂಬಾ ಆನಂದಿಸಿದ್ದೇನೆ. ರೋಹಿತ್ ಶರ್ಮಾ ಮತ್ತು ತಂಡದ ಸಹ ಆಟಗಾರರೊಂದಿಗೆ ಹಲವಾರು ಸ್ಮರಣೀಯ ನೆನಪುಗಳಿವೆ. ವೃತ್ತಿ ಜೀವನದಲ್ಲಿ ನೆರವಾದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಬಿಸಿಸಿಐ, ನನ್ನ ತಂಡ, ನನ್ನ ಕೋಚ್ ಬಳಗ ಎಲ್ಲರೂ ಈ ಪಯಣದ ಭಾಗವಾಗಿದ್ದಾರೆ. ಮುಖ್ಯವಾಗಿಯೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ವಿಕೆಟ್ ಹಿಂದೆ ನಿಂತು ಕ್ಯಾಚ್‌ಗಳನ್ನು ಹಿಡಿದು ನನಗೆ ವಿಕೆಟ್ ಗಳಿಸುವಲ್ಲಿ ನೆರವಾಗಿದ್ದಾರೆ'
ಅಶ್ವಿನ್‌ ನಿವೃತ್ತಿ ಕುರಿತು ಯಾರು ಏನಂದರು?
ನಾನು ನಿಮ್ಮೊಂದಿಗೆ 14 ವರ್ಷಗಳ ಕಾಲ ಆಡಿದ್ದೇನೆ. ಇಂದು ನೀವು ನಿವೃತ್ತಿ ಘೋಷಿಸಿದಾಗ ತುಸು ಭಾವುಕನಾದೆ. ನಿಮ್ಮೊಂದಿಗೆ ಆಟದಲ್ಲಿ ಕಳೆದ ಕ್ಷಣಗಳು ಸ್ಮೃತಿಪಟಲದ ಮುಂದೆ ಹಾದುಹೋದವು.  
–ವಿರಾಟ್ ಕೊಹ್ಲಿ, ಭಾರತ ತಂಡದ ಆಟಗಾರ
ಪ್ರಯೋಗ ಮತ್ತು ವಿಕಸನಕ್ಕೆ ಎಂದಿಗೂ ಭಯಪಡದಿರುವುದು ನಿಜವಾದ ಶ್ರೇಷ್ಠತೆ ಎಂದು ನಿಮ್ಮ ಪ್ರಯಾಣವು ತೋರಿಸುತ್ತದೆ. ನಿಮ್ಮ ಪರಂಪರೆಯು ಎಲ್ಲರಿಗೂ ಸ್ಫೂರ್ತಿಯಾಗಿದೆ.  
–ಸಚಿನ್‌ ತೆಂಡೂಲ್ಕರ್‌, ಕ್ರಿಕೆಟ್‌ ದಿಗ್ಗಜ
ಯುವ ಬೌಲರ್‌ ಆಗಿ ಕ್ರಿಕೆಟ್ ಜೀವನ ಆರಂಭಿಸಿದ ಅಶ್ವಿನ್ ಅವರು ಆಧುನಿಕ ಕ್ರಿಕೆಟ್‌ವರೆಗೂ ದಿಗ್ಗಜರಾಗಿ ಬೆಳೆದ ಹಾದಿಯನ್ನು ಗಮನಿಸಿದರೆ ವರ್ಣನಾತೀತ.
–ಗೌತಮ್ ಗಂಭೀರ್, ಭಾರತ ತಂಡದ ಮುಖ್ಯ ಕೋಚ್‌
ಭಾರತ ಕ್ರಿಕೆಟ್‌ನ ಅತ್ಯದ್ಭುತ ಮ್ಯಾಚ್‌ ವಿನ್ನರ್‌, ಚೆಂಡಿನ ಮಾಂತ್ರಿಕ ಹಾಗೂ ಆಟದ ಕುರಿತು ಚಾಣಾಕ್ಷ ಚಿಂತಕ ಅಶ್ವಿನ್. ಅವರ ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನದ ಕುರಿತು ಹೆಮ್ಮೆ ಇದೆ‌.
–ಜಯ್‌ ಶಾ, ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT