ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಿ–ವಾರ್ನರ್ ಭುಜಬಲ ಪರಾಕ್ರಮ: ವಿರಾಟ್ ಬಳಗಕ್ಕೆ ಸತತ ಮೂರನೇ ಸೋಲು

ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಭಾರಿ ಗೆಲುವು
Last Updated 31 ಮಾರ್ಚ್ 2019, 18:33 IST
ಅಕ್ಷರ ಗಾತ್ರ

ಹೈದರಾಬಾದ್: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಭಾನುವಾರ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದೇ ತಡ, ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣವೆಲ್ಲ ಕೇಸರಿಮಯವಾಯಿತು!

ಹೌದು; ಮೊದಲ ಓವರ್‌ನಿಂದಲೇ ಆರ್ಭಟಿಸಿದ ಜಾನಿ ಬೇಸ್ಟೊ ಮತ್ತು ಡೇವಿಡ್ ವಾರ್ನರ್ ಅವರ ಭುಜಬಲ ಪರಾಕ್ರಮಕ್ಕೆ ಆರ್‌ಸಿಬಿಯ ಬಾವುಟಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಹೆಚ್ಚು ಕಾಣಿಸಲೇ ಇಲ್ಲ. ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಕೇಸರಿ ಬಾವುಟಗಳು ಮಾತ್ರ ರಾರಾಜಿಸಿದವು.

ಇದೇ ವಾತಾವರಣ ಬಹುತೇಕ ಇಡೀ ಪಂದ್ಯದುದ್ದಕ್ಕೂ ಇತ್ತು. ವಿರಾಟ್ ಕೊಹ್ಲಿ ಬಳಗವು 118 ರನ್‌ಗಳ ಹೀನಾಯ ಸೋಲು ಅನುಭವಿಸಿತು.

ಇಂಗ್ಲೆಂಡ್‌ನ ಜಾನಿ ಮತ್ತು ಆಸ್ಟ್ರೇಲಿಯಾದ ವಾರ್ನರ್ ಇಬ್ಬರೂ ಹೊಡೆದ ಶತಕಗಳ ಬಲದಿಂದ ಸನ್‌ರೈಸರ್ಸ್‌ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 231 ರನ್‌ಗಳನ್ನು ಗಳಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿಯು ಕನಿಷ್ಠ ಹೋರಾಟವನ್ನೂ ತೋರಲಿಲ್ಲ. ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಇದರಿಂದಾಗಿ ಆರ್‌ಸಿಬಿಯು 19.5 ಓವರ್‌ಗಳಲ್ಲಿ 113 ರನ್‌ ಗಳಿಸಿ ಸೋತಿತು.

ಬೃಹತ್ ಮೊತ್ತದ ಗುರಿ ಬೆನ್ನಟ್ಟಲು ಹೊಸ ಪ್ರಯೋಗ ಮಾಡಿದ ಆರ್‌ಸಿಬಿ ಸಫಲವಾಗಲಿಲ್ಲ. ಪಾರ್ಥಿವ್ ಪಟೇಲ್ ಜೊತೆಗೆ ಶಿಮ್ರೊನ್ ಹೆಟ್ಮೆಯರ್ ಅವರನ್ನು ಇನಿಂಗ್ಸ್‌ ಆರಂಭಿಸಲು ಕಣಕ್ಕಿಳಿಸಿತು. ಆದರೆ ವಿಂಡೀಸ್‌ ಆಟಗಾರ ಹೆಟ್ಮೆಯರ್ ವೈಫಲ್ಯ ಇಲ್ಲಿಯೂ ಮುಂದುವರಿಯಿತು. ಕೇವಲ ಒಂಬತ್ತು ರನ್‌ ಗಳಿಸಿದರು.

ಪಾರ್ಥಿವ್ ಪಟೇಲ್ ಅವರ ಅನುಭವವೂ ಇಲ್ಲಿ ಬಳಕೆಯಾಗಲಿಲ್ಲ. ಅವರೂ ಎರಡನೇ ಓವರ್‌ನಲ್ಲಿ ಔಟಾದರು. ನಾಯಕ, ‘ರನ್‌ ಯಂತ್ರ’ ವಿರಾಟ್ ಕೊಹ್ಲಿ, ಹೋದ ಪಂದ್ಯದಲ್ಲಿ 70 ರನ್ ಗಳಿಸಿದ್ದ ಎಬಿ ಡಿವಿಲಿಯರ್ಸ್‌, ಮೋಯಿನ್ ಅಲಿ, ಶಿವಂ ದುಬೆ ಒಂದಂಕಿ ಮೊತ್ತ ದಾಟಲಿಲ್ಲ. ಇದರಿಂದಾಗಿ ತಂಡವು 7.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 35 ರನ್‌ ಗಳಿಸಿತ್ತು.

ಈ ಹಂತದಲ್ಲಿ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಮತ್ತು ಪದಾರ್ಪಣೆ (37 ರನ್) ಪಂದ್ಯವಾಡಿದ ಪ್ರಯಾಸ್ ಬರ್ಮನ್ (19 ರನ್) ತುಸು ಹೋರಾಟ ಮಾಡಿದ್ದರಿಂದ ತಂಡವು 100ರ ಗಡಿ ದಾಟಿತು.

ಆದರೆ ಪರಿಸ್ಥಿತಿ ಕೈಮೀರಿತ್ತು. 16ನೇ ಓವರ್‌ನಲ್ಲಿ ಪ್ರಯಾಸ್ ಔಟಾದ ನಂತರ ಉಮೇಶ್ ಯಾದವ್ 14 ರನ್‌ಗಳ ಕಾಣಿಕೆ ನೀಡಿದರು. ಸಿರಾಜ್ ಮತ್ತು ಯಜುವೇಂದ್ರ ಚಾಹಲ್ ಕೂಡ ಒಂದಂಕಿಗೆ ವಿಕೆಟ್ ಚೆಲ್ಲಿದರು. ಸನ್‌ರೈಸರ್ಸ್ ತಂಡದ ಮೊಹಮ್ಮದ್ ನಬಿ ನಾಲ್ಕು ಮತ್ತು ಸಂದೀಪ್ ಶರ್ಮಾ ಮೂರು ವಿಕೆಟ್‌ಗಳನ್ನು ಪಡೆದರು.

ಜಾನಿ–ವಾರ್ನರ್‌ ದಾಖಲೆ: ಮೊದಲ ವಿಕೆಟ್ ಜೊತೆ ಯಾಟದಲ್ಲಿ 185 ರನ್‌ಗಳನ್ನು ಕಲೆಹಾಕಿದ ಜಾನಿ ಬೆಸ್ಟೋ ಮತ್ತು ಡೇವಿಡ್ ವಾರ್ನರ್ ಅವರು ದಾಖಲೆ ಬರೆದರು. ಐಪಿಎಲ್‌ನಲ್ಲಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಪೇರಿಸಿದ ಶ್ರೇಷ್ಠ ಮೊತ್ತ ಇದು.

ಆಸ್ಟ್ರೇಲಿಯಾದ ವಾರ್ನರ್ ಹೋದ ವರ್ಷ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿದರು.

ಹೋದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ಎದುರೂ ಅವರು ಅರ್ಧಶತಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇಂಗ್ಲೆಂಡ್‌ನ ಜಾನಿ ಬೆಸ್ಟೋ ಐಪಿಎಲ್‌ನಲ್ಲಿ ಹೊಡೆದ ಮೊದಲ ಶತಕ ಇದು. ಆರ್‌ಸಿಬಿಯ ಬೌಲರ್‌ಗಳ ಎಸೆತಗಳನ್ನು ಬೌಂಡರಿ, ಸಿಕ್ಸರ್‌ಗಳಿಗೆ ಎತ್ತಿದ ಅವರು ಪ್ರೇಕ್ಷಕರನ್ನು ಸಂತಸದಲ್ಲಿ ತೇಲಿಸಿದರು.

ಸನ್‌ರೈಸರ್ಸ್‌ ತಂಡವು 17 ಬೌಂಡರಿ, 13 ಸಿಕ್ಸರ್‌ಗಳನ್ನು ದಾಖಲಿಸಿತು. ಆರ್‌ಸಿಬಿಯ ಇನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳಿದ್ದವು.

ಎಸ್‌. ರವಿ ಅಂಪೈರಿಂಗ್
ಬೆಂಗಳೂರಿನಲ್ಲಿ ಈಚೆಗೆ ನಡೆದಿದ್ದ ಮುಂಬೈ ಇಂಡಿಯನ್ಸ್‌ ಮತ್ತು ಆರ್‌ಸಿಬಿ ನಡುವಣ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ನೋಬಾಲ್ ನೀಡದೇ ವಿವಾದಕ್ಕೆ ಗುರಿಯಾಗಿದ್ದ ಅಂಪೈರ್ ಸುಂದರಂ ರವಿ ಅವರು ಇಲ್ಲಿ ಕಾರ್ಯನಿರ್ವಹಿಸಿದರು.

ಮುಂಬೈ ಎದುರಿನ ಪಂದ್ಯದಲ್ಲಿ 187 ರನ್‌ಗಳ ಗುರಿ ಬೆನ್ನಟ್ಟಿದ್ದ ಆರ್‌ಸಿಬಿಗೆ ಗೆಲುವಿಗಾಗಿ ಕೊನೆಯ ಒಂದು ಎಸೆತದಲ್ಲಿ ಏಳು ರನ್‌ಗಳು ಬೇಕಾಗಿದ್ದವು. ಆದರೆ, ಲಸಿತ್ ಮಾಲಿಂಗ ಹಾಕಿದ ಎಸೆತವು ನೋಬಾಲ್ ಆಗಿತ್ತು. ಅದನ್ನು ಅಂಪೈರ್ ರವಿ ನೋಬಾಲ್‌ ನೀಡಿರಲಿಲ್ಲ. ಅದರಿಂದಾಗಿ ಮುಂಬೈ ತಂಡವು 6 ರನ್‌ಗಳಿಂದ ಗೆದ್ದಿತ್ತು. ನಂತರ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ಅಂಪೈರಿಂಗ್ ಅನ್ನು ಟೀಕಿಸಿದ್ದರು.

ಪ್ರಮುಖ ಅಂಶಗಳು
02:
ಟ್ವೆಂಟಿ–20 ಕ್ರಿಕೆಟ್‌ ಮಾದರಿಯ ಪಂದ್ಯವೊಂದರ ಇನಿಂಗ್ಸ್‌ನಲ್ಲಿ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳು ಶತಕ ಹೊಡೆದ ಎರಡನೇ ಜೋಡಿ ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೊ. ಭಾನುವಾರ ಐಪಿಎಲ್‌ನಲ್ಲಿ ಆರ್‌ಸಿಬಿ ಎದುರು ಅವರು ಈ ಸಾಧನೆ ಮಾಡಿದರು. 2011ರಲ್ಲಿ ನಡೆದಿದ್ದ ಕ್ಲಬ್‌ ಕ್ರಿಕೆಟ್‌ ಟೂರ್ನಿಯಲ್ಲಿ ಗ್ಲೌಸೆಸ್ಟರ್‌ಶೈರ್‌ ಕ್ಲಬ್‌ನ ಕೆವಿನ್ ಒಬ್ರೇನ್ ಮತ್ತು ಹಮೀಶ್ ಮಾರ್ಷಲ್ ಮೊದಲ ಶತಕ ಬಾರಿಸಿದ ಆರಂಭಿಕ ಜೋಡಿಯಾಗಿದೆ.

02: ಐಪಿಎಲ್‌ನಲ್ಲಿ ಒಂದು ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಇಬ್ಬರು ಶತಕ ಬಾರಿಸಿದ್ದು ಇದು ಎರಡನೇ ಸಲ. 2016ರಲ್ಲಿ ಬೆಂಗಳೂರಿನಲ್ಲಿ ಗುಜರಾತ್ ಲಯನ್ಸ್‌ ತಂಡದ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಇಬ್ಬರೂ ಒಂದೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರು.

185: ಜಾನಿ ಬೆಸ್ಟೊ ಮತ್ತು ಡೇವಿಡ್ ವಾರ್ನರ್ ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ ಸೇರಿಸಿದ ಈ ಮೊತ್ತವು ಐಪಿಎಲ್ ಇತಿಹಾಸದಲ್ಲಿಯೇ ದೊಡ್ಡದು. 2017ರಲ್ಲಿ ಕೆಕೆಆರ್ ತಂಡದ ಗೌತಮ್ ಗಂಭೀರ್ ಮತ್ತು ಕ್ರಿಸ್ ಲಿನ್ ಗುಜರಾತ್ ಲಯನ್ಸ್‌ ವಿರುದ್ಧ 184 ರನ್‌ ಸೇರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

231: ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಐಪಿಎಲ್‌ನಲ್ಲಿ ದಾಖಲಿಸಿದ್ದ ಅತಿ ದೊಡ್ಡ ಮೊತ್ತ ಇದು.

04: ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಬಾರಿಸಿದ ಶತಕಗಳು. ವಿರಾಟ್ ಕೊಹ್ಲಿ (04) ಮತ್ತು ಶೇನ್ ವಾಟ್ಸನ್ (04) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕ್ರಿಸ್ ಗೇಲ್ (06) ಮೊದಲ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT