ಗುರುವಾರ , ಜೂನ್ 17, 2021
21 °C
ರಾಯಲ್ ಚಾಲೆಂಜರ್ಸ್ ಬೆಂಗಳೂರು–ಚೆನ್ನೈ ಸೂಪರ್ ಕಿಂಗ್ಸ್‌ ಮುಖಾಮುಖಿ ಇಂದು

RCB vs CSK: ವಿರಾಟ್ ಅಜೇಯ ಓಟಕ್ಕೆ ಧೋನಿ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಹಿಂದಿನ ಯಾವುದೇ ಐಪಿಎಲ್‌ ಟೂರ್ನಿಯಲ್ಲಿಯೂ ಮಾಡದಂತಹ ದಾಖಲೆಯನ್ನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಬಾರಿ ಮಾಡಿದೆ.

ಆರಂಭದ ನಾಲ್ಕು ಪಂದ್ಯಗಳನ್ನು ಜಯಿಸಿರುವ ತಂಡದ ಸಾಧನೆಯಿಂದಾಗಿ ಆರ್‌ಸಿಬಿಯ ಅಭಿಮಾನಿಗಳಲ್ಲಿ ‘ಕಪ್ ಜಯ‘ದ ಕನಸು ಗರಿಗೆದರಿದೆ. ಆದರೆ ಇದೀಗ ವಿರಾಟ್ ಕೊಹ್ಲಿ ಬಳಗದ ಮುಂದೆ ‘ಕ್ಯಾಪ್ಟನ್ ಕೂಲ್‘ ಮಹೇಂದ್ರಸಿಂಗ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್‌ ಸವಾಲು ಎದುರಾಗಿದೆ. ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ದಕ್ಷಿಣ ಭಾರತದ ಈ ಎರಡೂ ಮದ ಗಜಗಳು ಮುಖಾಮುಖಿಯಾಗಲಿವೆ.

ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಚೆನ್ನೈ ತಂಡವು ನಂತರ ಜಯದ ‘ಹ್ಯಾಟ್ರಿಕ್‘ ಸಾಧಿಸಿದೆ. ಭರ್ಜರಿಯಾಗಿ ಪುಟಿದೆದ್ದು ನಿಂತಿದೆ. ಹೋದ ವರ್ಷ ಪ್ಲೇ ಆಫ್‌ ತಲುಪುವಲ್ಲಿಯೂ ವಿಫಲವಾಗಿದ್ದ ತಂಡವು ಈ ಸಲ ಪ್ರಶಸ್ತಿ ಛಲದ ಆಟವಾಡುತ್ತಿದೆ. ಚೆನ್ನೈನ ಗೆಲುವುಗಳಲ್ಲಿ ಮಧ್ಯಮವೇಗಿ ದೀಪಕ್ ಚಾಹರ್ ಅವರ ಪಾತ್ರವೇ ದೊಡ್ಡದು.  ಆರಂಭಿಕ ಜೋಡಿ ಋತುರಾಜ್ ಗಾಯಕವಾಡ್ ಮತ್ತು ಫಫ್ ಡುಪ್ಲೆಸಿ ಲಯಕ್ಕೆ ಮರಳಿರುವುದು ತಂಡದ ಬಲ ಹೆಚ್ಚಿಸಿದೆ.

ಆರ್‌ಸಿಬಿ ಕೂಡ ಕಮ್ಮಿಯೇನಿಲ್ಲ. ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಮುರಿಯದ ಮೊದಲ ವಿಕೆಟ್‌ ಜೊತೆಯಾಟದಲ್ಲಿ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ 181 ರನ್‌ ಗಳಿಸಿದ್ದರು. ತಂಡವು 10 ವಿಕೆಟ್‌ಗಳಿಂದ ಗೆದ್ದಿತ್ತು. ದೇವದತ್ತ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದರು. ಅದಕ್ಕಿಂತ ಮುಂಚಿನ ಮೂರು ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್‌ ವೆಲ್ ಅವರ ಬ್ಯಾಟಿಂಗ್ ರಂಗೇರಿತ್ತು. ಈ ನಾಲ್ವರನ್ನು ಕಟ್ಟಿಹಾಕುವುದೇ ಚೆನ್ನೈನ ದೀಪಕ್, ಲುಂಗಿ ಗಿಡಿ, ರವೀಂದ್ರ ಜಡೇಜ ಮತ್ತು ಸ್ಯಾಮ್ ಕರನ್ ಮುಂದಿರುವ ಪ್ರಮುಖ ಸವಾಲು.

ಆರ್‌ಸಿಬಿ ಬೌಲಿಂಗ್ ಕೂಡ ಬಲಿಷ್ಠವಾಗಿದೆ. ಪರ್ಪಲ್ ಕ್ಯಾಪ್ ಪಡೆದಿರುವ ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ‘ಲಂಬೂಜಿ‘ ಕೈಲ್ ಜೆಮಿಸನ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಎದುರಿಸುವಲ್ಲಿ ಚೆನ್ನೈ ಬ್ಯಾಟಿಂಗ್ ಪಡೆ ಸಫಲವಾದರೆ ಪಂದ್ಯ ರೋಚಕವಾಗಬಹುದು.  ಟಾಸ್ ಗೆದ್ದ ನಾಯಕ ತೆಗೆದುಕೊಳ್ಳುವ ನಿರ್ಧಾರವೂ ಪಂದ್ಯದ ಫಲಿತಾಂಶಕ್ಕೆ ದಿಕ್ಸೂಚಿಯೂ ಆಗಬಲ್ಲದು. ಬ್ಯಾಟ್ಸ್‌ಮನ್‌ಗಳಿಗೆ ನೆರ ವಾಗುವ ಪಿಚ್‌ನಲ್ಲಿ ರನ್‌ಗಳ ಹೊಳೆ ಹರಿದರೂ ಅಚ್ಚರಿಯೇನಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು