ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಪಂದ್ಯ: ವೆಸ್ಟ್‌ ಇಂಡೀಸ್‌ಗೆ ಮಣಿದ ಆಸ್ಟ್ರೇಲಿಯಾ

ರಸೆಲ್– ರುದರ್‌ಫೋರ್ಡ್‌ ಮಿಂಚಿನಾಟ
Published 13 ಫೆಬ್ರುವರಿ 2024, 14:11 IST
Last Updated 13 ಫೆಬ್ರುವರಿ 2024, 14:11 IST
ಅಕ್ಷರ ಗಾತ್ರ

ಪರ್ತ್‌: ಆಂಡ್ರೆ ರಸೆಲ್ (71, 29 ಎಸೆತ, 4x4, 6x7) ಮತ್ತು ಶೆರ್ಫೇನ್ ರುದರ್‌ಫೋರ್ಡ್‌ (ಔಟಾಗದೇ 67, 40 ಎಸೆತ, 4x5, 6x5) ಅವರ ನಡುವೆ ಆರನೇ ವಿಕೆಟ್‌ಗೆ ದಾಖಲೆಯ ಜೊತೆಯಾಟದ ನೆರವಿನಿಂದ ವೆಸ್ಟ್ ಇಂಡೀಸ್‌ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಂಗಳವಾರ 37 ರನ್‌ಗಳಿಂದ ಸೋಲಿಸಿತು.

ಇವರಿಬ್ಬರ ಬಿರುಗಾಳಿ ಬ್ಯಾಟಿಂಗ್‌ನಿಂದ ವೆಸ್ಟ್‌ ಇಂಡೀಸ್‌ 6 ವಿಕೆಟ್‌ಗೆ 220 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಉತ್ತರವಾಗಿ ಆಸ್ಟ್ರೇಲಿಯಾ 5 ವಿಕೆಟ್‌ಗೆ 183 ರನ್ ಗಳಿಸಲಷ್ಟೇ ಶಕ್ತವಾಯಿತು. ತವರಿನಲ್ಲಿ ಕೊನೆಯ ಟಿ20 ಪಂದ್ಯ ಆಡಿದ ಡೇವಿಡ್‌ ವಾರ್ನರ್‌ ಸರ್ವಾಧಿಕ 81 (49ಎ, 4x9, 6x3) ರನ್ ಗಳಿಸಿದರು. ರಸೆಲ್ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು. ಸರಣಿ 2–1ರಲ್ಲಿ ಆಸ್ಟ್ರೇಲಿಯಾ ಪಾಲಾಯಿತು.

ಟಾಸ್‌ ಗೆದ್ದ ಪ್ರವಾಸಿ ತಂಡ ಆರಂಭದಲ್ಲೇ ಆಘಾತ ಎದುರಿಸಿತ್ತು. 3 ಓವರುಗಳಲ್ಲಿ 3 ವಿಕೆಟ್‌ಗಳು 17 ರನ್ನಿಗೆ ಉರುಳಿದ್ದವು. ಮೊತ್ತ 70 ಆಗುವುದರೊಳಗೆ ಅರ್ಧದಷ್ಟು ಮಂದಿ ಪೆವಿಲಿಯನ್‌ಗೆ ಮರಳಿದ್ದರು. ಈ ಹಂತದಲ್ಲಿ ರಸೆಲ್ ಮತ್ತು ರುದರ್‌ರ್ಫೋರ್ಡ್‌ ಇಬ್ಬರೂ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದರಲ್ಲದೇ, 139 ರನ್ ಸೇರಿಸಿ ತಂಡ ಉತ್ತಮ ಮೊತ್ತ ಪೇರಿಸಲು ನೆರವಾದರು.

ಕಳೆದ ಪಂದ್ಯದಲ್ಲಿ ಯಶಸ್ವಿ ಬೌಲರ್ ಎನಿಸಿದ್ದ ಜಂಪಾ ಇಲ್ಲಿ ಅತಿ ಹೆಚ್ಚು ರನ್ (65ಕ್ಕೆ1) ನೀಡಿದರು.

ಆಸ್ಟ್ರೇಲಿಯಾ ಬಿರುಸಿನ ಆರಂಭ ಮಾಡಿತು. ಆರನೇ ಓವರ್‌ ಪವರ್‌ಪ್ಲೇ ಮುಗಿಯುವಷ್ಟರಲ್ಲಿ ತಂಡ ವಿಕೆಟ್‌ ನಷ್ಟವಿಲ್ಲದೇ 61 ರನ್ ಗಳಿಸಿತ್ತು. ವಾರ್ನರ್‌ ಅರ್ಧ ಶತಕದ ಹಾದಿಯಲ್ಲಿ ಟಿ20ಯಲ್ಲಿ 3000 ರನ್ ಪೂರೈಸಿದರು. ಹತ್ತು ಓವರ್‌ಗಳಲ್ಲಿ ತಂಡ 1 ವಿಕೆಟ್‌ಗೆ 98 ರನ್ ಹೊಡೆಯಿತು. ಆದರೆ ಆರೋನ್ ಹಾರ್ಡಿ, ವಾರ್ನರ್ ಮತ್ತು ಜೋಸ್ ಇಂಗ್ಲಿಸ್ ಮೂರು ರನ್‌ಗಳ ಅಂತರದಲ್ಲಿ ನಿರ್ಗಮಿಸಿದ್ದರಿಂದ ವೆಸ್ಟ್‌ ಇಂಡೀಸ್ ಮೇಲುಗೈ ಸಾಧಿಸಿತು. ಇವರಲ್ಲಿ ಎರಡು ವಿಕೆಟ್‌ ರೋಸ್ಟನ್ ಚೇಸ್ ಪಾಲಾಯಿತು.

ಸ್ಕೋರುಗಳು: ವೆಸ್ಟ್‌ ಇಂಡೀಸ್‌: 20 ಓವರುಗಳಲ್ಲಿ 6 ವಿಕೆಟ್‌ಗೆ 220 (ರೋಸ್ಟನ್‌ ಚೇಸ್ 37, ಶೆರ್ಫೇನ್ ರುದರ್‌ಫೋರ್ಡ್‌ 67, ಆ್ಯಂಡ್ರೆ ರಸೆಲ್ 71; ಕ್ಸೇವಿಯರ್ ಬಾರ್ಟ್ಲೆಟ್‌ 37ಕ್ಕೆ2); ಆಸ್ಟ್ರೇಲಿಯಾ: 20 ಓವರುಗಳಲ್ಲಿ 5 ವಿಕೆಟ್‌ಗೆ 183 (ಡೇವಿಡ್‌ ವಾರ್ನರ್ 81, ಟಿಮ್‌ ಡೇವಿಡ್‌ ಔಟಾಗದೇ 41; ರೊಮಾರಿಯೊ ಶೆಫರ್ಡ್ 31ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT