ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಷಭ್ ಪಂತ್‌ಗೆ ಕೊರೊನಾ ಸೋಂಕು ದೃಢ; ಡೆಲ್ಟಾ ವೈರಾಣು ತಗುಲಿರುವ ಶಂಕೆ!

Last Updated 15 ಜುಲೈ 2021, 9:36 IST
ಅಕ್ಷರ ಗಾತ್ರ

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೋವಿಡ್‌–19ರ ಡೆಲ್ಟಾ ರೂಪಾಂತರ ತಳಿಯು ಪಂತ್‌ಗೆ ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಇದರೊಂದಿಗೆ ಭಾರತ ಹಾಗೂ ಇಂಗ್ಲೆಂಡ್ ನಡುವಣ ಬಹುನಿರೀಕ್ಷಿತ ಟೆಸ್ಟ್ ಸರಣಿಗೂ ಮುನ್ನ ಕೋವಿಡ್ ಕರಿನೆರಳು ಆವರಿಸಿದೆ.

ರಿಷಭ್ ಪಂತ್ ಅವರು ಕಳೆದ ಎಂಟು ದಿನಗಳಿಂದ ಪ್ರತ್ಯೇಕವಾಸದಲ್ಲಿದ್ದು, ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಲ್ಲ. ಅವರು ಟೀಮ್ ಇಂಡಿಯಾ ಜೊತೆ ಡರ್ಹ್ಯಾಮ್‌‌ಗೆ ಪ್ರಯಾಣಿಸುತ್ತಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಮುಂದಿನೆರಡು ದಿನಗಳಲ್ಲಿ ರಿಷಭ್ ಪಂತ್‌ಗೆ ಕೋವಿಡ್-19 ಪರೀಕ್ಷೆ ನಡೆಸಲಾಗುವುದು.

ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, 'ಹೌದು, ತಂಡದ ಓರ್ವ ಆಟಗಾರನಿಗೆ ಕೊರೊನಾ ಸೋಂಕು ದೃಢಗೊಂಡಿದೆ. ಆತ ಕಳೆದ ಎಂಟು ದಿನಗಳಿಂದ ಪ್ರತ್ಯೇಕವಾಸದಲ್ಲಿದ್ದಾನೆ. ಅಲ್ಲದೆ ತಂಡದ ಯಾವುದೇ ಆಟಗಾರನ ಜೊತೆಗೆ ಸಂಪರ್ಕದಲ್ಲಿಲ್ಲ. ಇತರೆ ಯಾವ ಆಟಗಾರನಲ್ಲೂ ಸೋಂಕು ಕಾಣಿಸಿಕೊಂಡಿಲ್ಲ' ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾಕ್ಕೆ ಇ-ಮೇಲ್ ಸಂದೇಶವನ್ನು ಬರೆದಿರುವ ರಾಜೀವ್ ಶುಕ್ಲಾ, ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಜನನಿಬಿಡ ಪ್ರದೇಶಗಳಿಗೆ ತೆರಳದಂತೆ ಸಲಹೆ ಮಾಡಿದ್ದಾರೆ.

ಇಂಗ್ಲೆಂಡ್‌ನಲ್ಲಿ ಡೆಲ್ಟಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಪಂತ್ ಅವರಿಗೆ ಡೆಲ್ಟಾವೈರಾಣುತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಟೀಮ್ ಇಂಡಿಯಾ ಆಟಗಾರರೀಗಸುದೀರ್ಘ ವಿಶ್ರಾಂತಿಯಲ್ಲಿದ್ದಾರೆ. ಈ ನಡುವೆ ಇಂಗ್ಲೆಂಡ್‌ನಲ್ಲಿ ನಡೆದ ಯುರೊ ಕಪ್ ಫುಟ್ಬಾಲ್ ಟೂರ್ನಿ ವೀಕ್ಷಿಸಲು ಪಂತ್ ತೆರಳಿದ್ದರು. ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರವನ್ನು ಹಂಚಿದ್ದರು.

ಏತನ್ಮಧ್ಯೆ ಗಾಯದಿಂದ ಬಯೋಬಬಲ್ ತೊರೆದಿರುವ ಶುಭಮನ್ ಗಿಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದು ವರದಿಯಾಗಿದೆ. ಅಂದ ಹಾಗೆ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 4ರಂದು ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT