ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL: ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ರೋಹಿತ್ ವಿರುದ್ಧ ನೆಟ್ಟಿಗರು ಕಿಡಿ

Last Updated 5 ಮಾರ್ಚ್ 2022, 14:50 IST
ಅಕ್ಷರ ಗಾತ್ರ

ಮೊಹಾಲಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ, ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ಕಳೆದುಕೊಂಡು 567 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಆದರೆ, ರವೀಂದ್ರ ಜಡೇಜ ಅವರು ಅಮೋಘ ಶತಕ ಬಾರಿಸಿ ದ್ವಿಶತಕದತ್ತ ಹೆಜ್ಜೆ ಹಾಕುತ್ತಿದ್ದಾಗ ಇನಿಂಗ್ಸ್ ಡಿಕ್ಲೇರ್ ಘೋಷಿಸಿರುವುದಕ್ಕೆ ನಾಯಕ ರೋಹಿತ್ ಶರ್ಮಾ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಭಾರತ ತಂಡ 5 ವಿಕೆಟ್‌ ಕಳೆದುಕೊಂಡು228 ರನ್ ಗಳಿಸಿದ್ದಾಗ ಕ್ರೀಸ್‌ಗೆ ಬಂದ ಜಡೇಜ, ನಾಲ್ವರು ಬ್ಯಾಟರ್‌ಗಳೊಂದಿಗೆ ಶತಕದ ಜೊತೆಯಾಟವಾಡಿದ್ದರು.

ವಿಕೆಟ್‌ ಕೀಪರ್‌–ಬ್ಯಾಟರ್‌ ರಿಷಭ್‌ ಪಂತ್‌ ಜೊತೆ 6ನೇ ವಿಕೆಟ್‌ಗೆ 104ರನ್‌, ಆರ್‌.ಅಶ್ವಿನ್‌ ಜೊತೆ 7ನೇ ವಿಕೆಟ್‌ಗೆ 130 ರನ್‌ ಮತ್ತು ಜಯಂತ್‌ ಯಾದವ್‌ ಜೊತೆಗೂಡಿ 8ನೇ ವಿಕೆಟ್‌ಗೆ 109 ರನ್‌ ಸೇರಿಸಿದ್ದರು.

ಅಂತಿಮವಾಗಿ ರೋಹಿತ್‌ ಇನಿಂಗ್ಸ್ ಡಿಕ್ಲೇರ್ ಘೋಷಿಸುವ ಮುನ್ನ, ಕೆಳ ಕ್ರಮಾಂಕದ ಬ್ಯಾಟರ್‌ ಮೊಹಮ್ಮದ್ ಶಮಿ ಜೊತೆಗೆ 9ನೇ ವಿಕೆಟ್‌ ಪಾಲುದಾರಿಕೆಯಲ್ಲಿ ಅಜೇಯ 103 ರನ್‌ ಕೂಡಿಸಿದ್ದರು.

ಒಟ್ಟಾರೆ 228 ಎಸೆತಗಳನ್ನು ಎದುರಿಸಿದ್ದ ಜಡೇಜ, 17 ಬೌಂಡರಿಮತ್ತು 3 ಸಿಕ್ಸರ್ ಸಹಿತ 175 ರನ್‌ ಗಳಿಸಿದ್ದರು.

ರೋಹಿತ್ ಕ್ರಮಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ. ದ್ವಿಶತಕ ಸಿಡಿಸುವ ಅವಕಾಶವನ್ನುಜಡೇಜ ಅವರಿಂದ ಕಸಿದುಕೊಂಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ರೋಹಿತ್ ನಡೆಯಿಂದ ರಾಹುಲ್‌ ಪ್ರಸಂಗ ನೆನಪು
2004ರ ಮಾರ್ಚ್‌ನಲ್ಲಿ ನಡೆದಮುಲ್ತಾನ್‌ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನಮತ್ತು ಭಾರತ ಸೆಣಸಾಟ ನಡೆಸಿದ್ದವು. ಮಾರ್ಚ್‌ 28ರಂದು ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವೀರೇಂದ್ರ ಸೆಹ್ವಾಗ್ ಗಳಿಸಿದ (309) ತ್ರಿಶತಕದ ನೆರವಿನಿಂದ ಭಾರತ ತಂಡ ಕೇವಲ 5 ವಿಕೆಟ್‌ ಕಳೆದುಕೊಂಡು 675 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು.

194 ರನ್‌ ಗಳಿಸಿ ದ್ವಿಶತಕದತ್ತ ದಾಪುಗಾಲಿಟ್ಟಿದ್ದಬ್ಯಾಟಿಂಗ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಆಲ್‌ರೌಂಡರ್‌ ಯುವರಾಜ್‌ ಸಿಂಗ್ (59) ಕ್ರೀಸ್‌ನಲ್ಲಿದ್ದರು.

ಆದರೆ,ಆಗ ತಂಡದ ನಾಯಕರಾಗಿದ್ದ ರಾಹುಲ್ ದ್ರಾವಿಡ್‌, ಸಚಿನ್ ಅವರಿಗೆ ದ್ವಿಶತಕ ಸಿಡಿಸುವ ಅವಕಾಶವಿದೆ ಎಂಬುದನ್ನು ಲೆಕ್ಕಿಸದೆ, ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದ್ದರು.‌ ಆ ಸಂದರ್ಭದಲ್ಲಿ ರಾಹುಲ್‌ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ರಾಹುಲ್‌ ದ್ರಾವಿಡ್ ಸದ್ಯ ಭಾರತ ತಂಡದ ಮುಖ್ಯ ಕೋಚ್‌ ಆಗಿದ್ದಾರೆ.

ಇದೀಗ ಆ ಪ್ರಸಂಗವನ್ನು ನೆನಪು ಮಾಡಿಕೊಂಡಿರುವ ನೆಟ್ಟಿಗರು, ಕೋಚ್ ರಾಹುಲ್ ಅವರಂತೆಯೇ ನಾಯಕರೋಹಿತ್‌ ಶರ್ಮಾ ಅವರು, ರವೀಂದ್ರ ಜಡೇಜರ ಅವಕಾಶವನ್ನು ಕಿತ್ತುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT