ರಾಜ್‌ಕೋಟ್ (ಪಿಟಿಐ): ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ರೋಹಿತ್ ಶರ್ಮಾ ಅವರೇ ನಾಯಕರಾಗಿರುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಜೂನ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿಯು ನಡೆಯಲಿದೆ.
‘ಅಹಮದಾಬಾದಿನಲ್ಲಿ ನಡೆದಿದ್ದ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ನಮ್ಮ ತಂಡವು ಸೋತಿತ್ತು. ಟೂರ್ನಿಯಲ್ಲಿ ಎಲ್ಲ ಹತ್ತು ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದ್ದೆವು. ಕಪ್ ಗೆಲ್ಲದಿದ್ದರೂ ನಮ್ಮ ತಂಡವು ಅಭಿಮಾನಿಗಳ ಹೃದಯ ಜಯಿಸಿತ್ತು. 2024ರ ಟಿ20 ವಿಶ್ವಕಪ್ ಫೈನಲ್ ನಡೆಯಲಿರುವ ಬಾರ್ಬಡೋಸ್‌ನಲ್ಲಿ ನಾವು ಭಾರತದ ಕೀರ್ತಿಪತಾಕೆಯನ್ನು ಹಾರಿಸುತ್ತೇವೆಂದು ನಾನು ಇವತ್ತು ವಾಗ್ದಾನ ಮಾಡುತ್ತೇನೆ’ ಎಂದು ಶಾ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಬುಧವಾರ ಸೌರಾಷ್ಟ್ರ ಕ್ರ್ರಿಕೆಟ್ ಕ್ರೀಡಾಂಗಣಕ್ಕೆ ನಿರಂಜನ್ ಶಾ ಅವರ ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಜಯ್ ಶಾ ಮಾತನಾಡಿದರು.
ಈ ಸಂದರ್ಭದಲ್ಲಿ ಭಾರತದ ಕ್ರಿಕೆಟ್ ದಿಗ್ಗಜರಾದ ಸುನಿಲ್ ಗಾವಸ್ಕರ್, ಅನಿಲ್ ಕುಂಬ್ಳೆ, ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಆಗರಕರ್, ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ರೋಹಿತ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಹಾಜರಿದ್ದರು.
ಈ ಹಿಂದೆ ಟಿ20 ಕ್ರಿಕೆಟ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿತ್ತು.