ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಇಂದು ಆರ್‌ಸಿಬಿ–ಕೋಲ್ಕತ್ತ ಮುಖಾಮುಖಿ; ಬೌಲರ್‌ಗಳಿಗೆ ರಸೆಲ್ ಸವಾಲು

Published 28 ಮಾರ್ಚ್ 2024, 21:11 IST
Last Updated 28 ಮಾರ್ಚ್ 2024, 21:11 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನನಗರಿಯ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ತಾರೆ ವಿರಾಟ್ ಕೊಹ್ಲಿ ಲಯಕ್ಕೆ ಮರಳಿದ್ದಾರೆ. ಅವರ ಆಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು  ಮೂರು ದಿನಗಳ ಹಿಂದೆ ತನ್ನ ಅಭಿಮಾನಿಗಳಿಗೆ ಗೆಲುವಿನ ಕಾಣಿಕೆಯನ್ನೂ ನೀಡಿತ್ತು. 

ಇದರಿಂದಾಗಿ ಹುರುಪುಗೊಂಡಿರುವ ಆರ್‌ಸಿಬಿ ಪ್ರೇಮಿಗಳು ಶುಕ್ರವಾರ ನಡೆಯಲಿರುವ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ‘ಗುಡ್‌ ಫ್ರೈಡೇ’ಯ ರಜಾದಿನದಂದು  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ಬೆಂಗಳೂರು ಬೌಲರ್‌ಗಳಿಗೆ ನಿಜವಾದ ಸತ್ವಪರೀಕ್ಷೆಯಾಗಬಹುದು. ಕೋಲ್ಕತ್ತ ತಂಡದ ಎಂಟು ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಅವರ ಮುಂದಿದೆ. 

ಕೋಲ್ಕತ್ತ ತಂಡವು ಇತ್ತೀಚೆಗೆ ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಜಯಿಸಿತ್ತು. ಅದರಲ್ಲಿ ಅದರಲ್ಲಿ  ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್‌ ಮತ್ತು ಎಂಟನೇ ಕ್ರಮಾಂಕದ ಬ್ಯಾಟರ್ ಆ್ಯಂಡ್ರೆ ರಸೆಲ್ ಅರ್ಧಶತಕಗಳನ್ನು ದಾಖಲಿಸಿದ್ದರು. ಅದರಲ್ಲೂ ರಸೆಲ್ ಅವರು 25 ಎಸೆತಗಳಲ್ಲಿ  ಅಜೇಯ 64 ರನ್‌ ಗಳಿಸಿದ್ದರು. ಏಳು ಸಿಕ್ಸರ್‌ ಸಿಡಿಸಿದ್ದರು. ಅಗ್ರ ಹಾಗೂ ಮಧ್ಯಮ ಕ್ರಮಾಂಕದ ನಾಲ್ವರು ಪ್ರಮುಖ ಬ್ಯಾಟರ್‌ಗಳು ಒಂದಂಕಿ ಗಳಿಸಿ ಔಟಾದ ಸಂದರ್ಭದಲ್ಲಿ ರಸೆಲ್ ಆಟದಿಂದಾಗಿ ತಂಡವು 200 ರನ್‌ಗಳ ಮೊತ್ತ ದಾಟಲು ಸಾಧ್ಯವಾಗಿತ್ತು.

ರಸೆಲ್ ಬೌಲಿಂಗ್‌ನಲ್ಲಿಯೂ ಮಿಂಚಿ ಎರಡು ವಿಕೆಟ್ ಗಳಿಸಿದ್ದರು. ತಂಡದ ಜಯದ ರೂವಾರಿಯಾಗಿದ್ದರು.  ರಿಂಕು ಸಿಂಗ್ ಮತ್ತು ರಮಣದೀಪ್ ಸಿಂಗ್ ಅವರೂ ಉತ್ತಮ ಲಯದಲ್ಲಿದ್ಧಾರೆ. ಅವರೊಂದಿಗೆ  ಕೋಲ್ಕತ್ತ ನಾಯಕ ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ಅವರು ಲಯಕ್ಕೆ ಮರಳಿದರೆ ಬೌಲರ್‌ಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗುವುದು ಖಚಿತ. 

ಮೊದಲ ಪಂದ್ಯದಲ್ಲಿ ಚೆನ್ನೈ ಎದುರು ಬೆಂಗಳೂರು ತಂಡ ಸೋತಿತ್ತು. ತನ್ನ ತವರಿನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ವಿರಾಟ್, ದಿನೇಶ್ ಕಾರ್ತಿಕ್ ಹಾಗೂ ಮಹಿಪಾಲ್ ಲೊಮ್ರೊರ್ ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಆರ್‌ಸಿಬಿ ಜಯಿಸಿತ್ತು. ಆದರೆ ಆ ಪಂದ್ಯದಲ್ಲಿ ಆರಂಭಿಕ ಹಂತದಲ್ಲಿ ಭರವಸೆದಾಯಕ ಬೌಲಿಂಗ್ ಮಾಡಿದ್ದ ಆರ್‌ಸಿಬಿ ಬೌಲರ್‌ಗಳು ಅಂತಿಮ ಹಂತದ (ಡೆತ್ ಓವರ್‌)ಲ್ಲಿ ಹೆಚ್ಚು ರನ್‌ ಕೊಟ್ಟಿದ್ದರು. ಕೊನೆಯ 8 ಓವರ್‌ಗಳಲ್ಲಿ 78 ರನ್‌ಗಳು ಹರಿದಿದ್ದವು. ಮೊಹಮ್ಮದ್ ಸಿರಾಜ್ ಹಾಗೂ ಯಶ್ ದಯಾಳ್ ಮಾತ್ರ ಸ್ವಲ್ಪ ಬಿಗಿ ದಾಳಿ ನಡೆಸಿದ್ದರು. ಗ್ಲೆನ್ ಮ್ಯಾಕ್ಸ್‌ವೆಲ್ ಎರಡು ವಿಕೆಟ್ ಗಳಿಸಿದ್ದರು. ಆದರೆ ಹೆಚ್ಚು ರನ್ ಕೊಟ್ಟಿದ್ದರು.

ಆ್ಯಂಡ್ರೆ ರಸೆಲ್ ತಾಲೀಮು  –ಪ್ರಜಾವಾಣಿ ಚಿತ್ರ/ ಪುಷ್ಕರ್ ವಿ. 
ಆ್ಯಂಡ್ರೆ ರಸೆಲ್ ತಾಲೀಮು  –ಪ್ರಜಾವಾಣಿ ಚಿತ್ರ/ ಪುಷ್ಕರ್ ವಿ. 
ಕೆಕೆಆರ್ ತಂಡದ ಮುಖ್ಯ ಕೋಚ್  ಚಂದ್ರಕಾಂತ್ ಪಂಡಿತ್‌ ಹಾಗೂ  ಫಿಲ್ ಸಾಲ್ಟ್ ಮಾತುಕತೆ  –ಪ್ರಜಾವಾಣಿ ಚಿತ್ರ
ಕೆಕೆಆರ್ ತಂಡದ ಮುಖ್ಯ ಕೋಚ್  ಚಂದ್ರಕಾಂತ್ ಪಂಡಿತ್‌ ಹಾಗೂ  ಫಿಲ್ ಸಾಲ್ಟ್ ಮಾತುಕತೆ  –ಪ್ರಜಾವಾಣಿ ಚಿತ್ರ

ಅಲ್ಝರಿ ಜೋಸೆಫ್ ಮತ್ತು ಮಯಂಕ್ ದಾಗರ್ ಅವರು ಪ್ರತಿ ಓವರ್‌ಗೆ 10ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್‌ ಕೊಟ್ಟು ದುಬಾರಿಯಾಗಿದ್ದರು. ಇದರಿಂದಾಗಿ ಬೌಲಿಂಗ್‌ ವಿಭಾಗದಲ್ಲಿ ಕೆಲವು ಬದಲಾವಣೆಗಳೊಂದಿಗೆ ಆರ್‌ಸಿಬಿ ಕಣಕ್ಕಿಳಿಯುವ ಸಾಧ್ಯತೆ ಇದೆ.  ಸ್ಥಳೀಯ ಹುಡುಗ ವೈಶಾಖ ವಿಜಯಕುಮಾರ್ ಅವರಿಗೆ ಅವಕಾಶ ಸಿಗಬಹುದು. ಹೋದ ವರ್ಷದ ಐಪಿಎಲ್‌ನಲ್ಲಿ ಅವರು ಚೇತೋಹಾರಿ ಪ್ರದರ್ಶನ ನೀಡಿದ್ದರು. ಈಚೆಗೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಲ್‌ರೌಂಡ್ ಆಟವಾಡಿದ್ದರು. ಆದರೆ ತಂಡದಲ್ಲಿರುವ ಕರ್ನಾಟಕದ ಇನ್ನೊಬ್ಬ ಆಲ್‌ರೌಂಡರ್ ಮನೋಜ್ ಬಾಂಢಗೆ ಅವರಿಗೆ ಪದಾರ್ಪಣೆಯ ಅವಕಾಶ ಸಿಗುವುದು ಖಚಿತವಿಲ್ಲ.  ಜೋಸೆಫ್ ಬದಲಿಗೆ  ಅನುಭವಿ ಬೌಲರ್ ಲಾಕಿ ಫರ್ಗ್ಯುಸನ್ ಅಥವಾ ಆಕಾಶ್ ದೀಪ್ ಅವರಲ್ಲಿ ಒಬ್ಬರಿಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. 

ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಫ್ ಡುಪ್ಲೆಸಿ (ನಾಯಕ) ಗ್ಲೆನ್ ಮ್ಯಾಕ್ಸ್‌ವೆಲ್ ವಿರಾಟ್ ಕೊಹ್ಲಿ ರಜತ್ ಪಾಟೀದಾರ್ ಅನುಜ್ ರಾವತ್ ದಿನೇಶ್ ಕಾರ್ತಿಕ್ ಸುಯಶ್ ಪ್ರಭುದೇಸಾಯಿ ವಿಲ್ ಜ್ಯಾಕ್ಸ್ ಮಹಿಪಾಲ್ ಲೊಮ್ರೊರ್ ಮೊಹಮ್ಮದ್ ಸಿರಾಜ್ ಹಿಮಾಂಶು ಶರ್ಮಾ ಕ್ಯಾಮರಾನ್ ಗ್ರೀನ್ ಅಲ್ಝರಿ ಜೋಸೆಫ್ ಯಶ್ ದಯಾಳ್ ಟಾಮ್ ಕರನ್ ಲಾಕಿ ಫರ್ಗ್ಯುಸನ್ ವೈಶಾಖ ವಿಜಯಕುಮಾರ್ ಆಕಾಶ್ ದೀಪ್ ವೈಶಾಖ ವಿಜಯಕುಮಾರ್ ಮನೋಜ್ ಬಾಂಢಗೆ.

ಕೋಲ್ಕತ್ತ ನೈಟ್‌ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ) ಕೆ.ಎಸ್. ಭರತ್ ರೆಹಮಾನುಲ್ಲಾ ಗುರ್ಬಾಜ್ ರಿಂಕು ಸಿಂಗ್ ಮನೀಷ್ ಪಾಂಡೆ ಆ್ಯಂಡ್ರೆ ರಸೆಲ್ ನಿತೀಶ್ ರಾಣಾ ವೆಂಕಟೇಶ್ ಅಯ್ಯರ್ ರಮಣದೀಪ್ ಸಿಂಗ್ ವರುಣ್ ಚಕ್ರವರ್ತಿ ಸುನೀಲ್ ನಾರಾಯಣ ಚೇತನ್ ಸಕಾರಿಯಾ ಹರ್ಷಿತ್ ರಾಣಾ ಸುಯಶ್ ಶರ್ಮಾ ಮುಜೀಬ್ ಉರ್ ರೆಹಮಾನ್.

ಪಂದ್ಯ ಆರಂಭ  ರಾತ್ರಿ 7.30 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ಜಿಯೊ ಸಿನಿಮಾ ಆ್ಯಪ್. 

ಪಿಚ್ ಹೇಗಿದೆ?

ಬೆಂಗಳೂರು ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳ ಸ್ನೇಹಿಯಾಗಿದೆ. ಉಭಯ ತಂಡಗಳಲ್ಲಿಯೂ ಬಿರುಸಿನ ಹೊಡೆತಗಳನ್ನು ಆಡುವ ಬ್ಯಾಟರ್‌ಗಳಿದ್ದಾರೆ. ಇದರಿಂದಾಗಿ ಯಥೇಚ್ಛವಾಗಿ ರನ್‌ಗಳು ಹರಿಯುವ ಸಾಧ್ಯತೆ ಇದೆ. ದುಬಾರಿ ಟಿಕೆಟ್ ಪಡೆದು ಬರುವ ಪ್ರೇಕ್ಷಕರಿಗೆ ರನ್‌ ಹೊಳೆಯಲ್ಲಿ ಈಜಾಡುವ ಅವಕಾಶ ಸಿಗುವ ನಿರೀಕ್ಷೆ ಇದೆ.  

ಪಂಡಿತ್ ಪರ ರಸೆಲ್ ಬ್ಯಾಟಿಂಗ್ 

ಬೆಂಗಳೂರು: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ 'ಉಗ್ರಗಾಮಿ ಧೋರಣೆ’ಯಿಂದ ಫ್ರ್ಯಾಂಚೈಸಿಯಲ್ಲಿರುವ ವಿದೇಶಿ ಆಟಗಾರರು ಬೇಸತ್ತಿದ್ದಾರೆ ಎಂದು ಕ್ರಿಕೆಟಿಗ ಡೇವಿಡ್ ವೀಸ್ ಮಾಡಿರುವ ಆರೋಪವನ್ನು ಆ್ಯಂಡ್ರೆ ರಸೆಲ್ ಅಲ್ಲಗಳೆದಿದ್ದಾರೆ.  ಕೆಕೆಆರ್ ತಂಡದ ಮಾಜಿ ಆಟಗಾರ ಡೇವಿಡ್ ಅವರು ಸದ್ಯ ನಮಿಬಿಯಾ ಲೀಗ್‌ನಲ್ಲಿದ್ದಾರೆ.  ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಸೆಲ್ ‘ಹೋದ ವರ್ಷದಿಂದಲೂ ಅವರೊಂದಿಗೆ (ಪಂಡಿತ್) ಕಾರ್ಯನಿರ್ವಹಿಸುತ್ತಿದ್ದೇವೆ. ಯಾರಾದರೂ ಹೊಸ ಕೋಚ್ ಜೊತೆಗೆ ಕಾರ್ಯನಿರ್ವಹಿಸುವಾಗ ಒಂದು ವಿಚಾರ ಸ್ಪಷ್ಟವಾಗಿರಬೇಕು. ಅವರ ನಿಯಮ ಮತ್ತು ಕೆಲವು ಪದ್ಧತಿಗಳಿಗೆ ನಾವೂ ಹೊಂದಿಕೊಳ್ಳಬೇಕು. ನಾವೆಲ್ಲರೂ ವೃತ್ತಿಪರರು.  ಸುಮ್ಮನೆ ದೂರುತ್ತ ಕೂರುವುದಲ್ಲ’ ಎಂದರು.  ‘ಈ ಫ್ರ್ಯಾಂಚೈಸಿಗೆ ಉತ್ತಮವಾಗಿರುವುದನ್ನು ಕೊಡುವುದು ನನ್ನ ಗುರಿ. ಅವರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವೂ ಲಯಕ್ಕೆ ಮರಳುತ್ತಿದ್ದೇವೆ’ ಎಂದರು.  ಕಡುಶಿಸ್ತಿಗೆ ಹೆಸರಾಗಿರುವ ಪಂಡಿತ್ ಅವರು 2022ರಲ್ಲಿ ಕೆಕೆಆರ್‌ ಕೋಚ್ ಆಗಿ ನೇಮಕವಾಗಿದ್ದಾರೆ. ಆ ವರ್ಷ ಬ್ರೆಂಡನ್ ಮೆಕ್ಲಮ್ ಅವರು ಇಂಗ್ಲೆಂಡ್‌ಗೆ ಕೋಚ್ ಆಗಿ ತೆರಳಿದ್ದರಿಂದ ಕೆಕೆಆರ್ ತರಬೇತುದಾರ ಹುದ್ದೆ ಖಾಲಿಯಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT