ಭಾನುವಾರ, ಅಕ್ಟೋಬರ್ 25, 2020
22 °C
ಸ್ಮಿತ್ ಹೋರಾಟ ವ್ಯರ್ಥ

RCB vs RR: ಆರ್‌ಸಿಬಿಗೆ 6ನೇ ಜಯ; ಎಬಿ ಡಿವಿಲಿಯರ್ಸ್ ‘ಸಿಕ್ಸರ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಅರ್ಧ ಡಜನ್ ಸಿಕ್ಸರ್‌ಗಳನ್ನು ಸಿಡಿಸಿದ ಎಬಿ ಡಿವಿಲಿಯರ್ಸ್‌ ರಾಯಲ್ಸ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಡಿಲಿಗೆ ಆರನೇ ಜಯದ ಕಾಣಿಕೆ ನೀಡಿದರು. 

ಶನಿವಾರ ಮಧ್ಯಾಹ್ನ ರಾಜಸ್ಥಾನ ರಾಯಲ್ಸ್‌ ಎದುರು ನಡೆದ ಪಂದ್ಯದಲ್ಲಿ ‘ಮಿಸ್ಟರ್ 360‍’  ಡಿಗ್ರಿ ಎಬಿಡಿ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಜೊತೆಗೆ 7 ವಿಕೆಟ್‌ಗಳ ಜಯಕ್ಕೂ ಕಾರಣರಾದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ತಂಡವು ಸ್ಟೀವನ್ ಸ್ಮಿತ್ (57; 36ಎ) ಮತ್ತು ರಾಬಿನ್ ಉತ್ತಪ್ಪ (41; 22ಎ) ಅವರ ಬ್ಯಾಟಿಂಗ್‌ನ ಬಲದಿಂದ 20 ಓವರ್‌ಗಳಲ್ಲಿ 6ಕ್ಕೆ177 ರನ್‌ ಗಳಿಸಿತು. ಆರ್‌ಸಿಬಿಯ ಕ್ರಿಸ್ ಮೊರಿಸ್ ನಾಲ್ಕು ವಿಕೆಟ್ ಗಳಿಸಿದರು.

ಇದು ದುಬೈ ಅಂಗಳದಲ್ಲಿ ಬೆನ್ನತ್ತಿ ಗೆಲ್ಲುವ ಸುಲಭದ ಮೊತ್ತವಾಗಿರಲಿಲ್ಲ. ಆದರೆ ಎಬಿಡಿ (ಅಜೇಯ 55; 22ಎ, 1ಬೌಂ, 6ಸಿ) ಅಬ್ಬರದಿಂದಾಗಿ ಪಂದ್ಯದಲ್ಲಿ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಆರ್‌ಸಿಬಿಯು 3 ವಿಕೆಟ್‌ಗಳ ನಷ್ಟಕ್ಕೆ 179 ರನ್‌ ಗಳಿಸಿತು. ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್‌ಮನ್‌ಗಳು  ತಾಳ್ಮೆಯಿಂದ ಬ್ಯಾಟಿಂಗ್‌ ಮಾಡಿದರು.  ನಾಲ್ಕನೇ ಓವರ್‌ನಲ್ಲಿ ಆ್ಯರನ್ ಫಿಂಚ್ ಔಟಾದ ನಂತರ, ದೇವದತ್ತ (35;37ಎ) ಮತ್ತು ವಿರಾಟ್ ಕೊಹ್ಲಿ (43; 32ಎ, 1ಬೌಂ, 2ಸಿ)ತಾಳ್ಮೆಯಿಂದ ಆಡಿದರು. ಎರಡನೇ ವಿಕೆಟ್‌ಗೆ 79 ರನ್‌ ಸೇರಿಸಿದರು. ದೇವದತ್ತ 13ನೇ ಓವರ್‌ನಲ್ಲಿ ಔಟಾದರು.

ನಂತರದ ಓವರ್‌ನಲ್ಲಿ ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಬೌಂಡರಿಲೈನ್ ನಲ್ಲಿ  ‘ಸರ್ಕಸ್‌ ಕ್ಯಾಚ್‌’ ಪಡೆದ ತೆವಾಟಿಯಾ, ವಿರಾಟ್ ಕೊಹ್ಲಿ (43; 32ಎ) ಔಟಾಗಲು ಕಾರಣರಾಗಿದ್ದರು.  ಆಗ ಬೆಂಗಳೂರಿಗೆ 41 ಎಸೆತಗಳಲ್ಲಿ 75 ರನ್‌ಗಳ ಅಗತ್ಯವಿತ್ತು. 

ಕ್ರೀಸ್‌ನಲ್ಲಿದ್ದ ಎಬಿ ಡಿವಿಲಿಯರ್ಸ್‌ ಇನಿಂಗ್ಸ್‌ನ ಸಂಪೂರ್ಣ ಹೊಣೆಯನ್ನು ತಮ್ಮ ಮೇಲೆ ಎಳೆದುಕೊಂಡರು. ಗುರುಕೀರತ್ ಸಿಂಗ್ ಮಾನ್ (ಔಟಾಗದೇ 19; 17ಎ) ಜೊತೆಗೆ ಒಂದೆರಡು ಓವರ್‌ ತುಸು ನಿಧಾನವಾಗಿಯೇ ಇನಿಂಗ್ಸ್‌ ಕಟ್ಟಿದರು.  ಆದರೆ ರನ್‌ಗಳ ಹರಿವು ಇರುವಂತೆ ನೋಡಿಕೊಂಡರು. ಕೊನೆಯ ಎರಡು ಓವರ್‌ಗಳಲ್ಲಿ 35 ರನ್‌ಗಳ ಅವಶ್ಯವಿದ್ದಾಗ ಎಬಿಡಿ ಭುಜಬಲ ಮೆರೆದರು.

ಎಡಗೈ ಮಧ್ಯಮವೇಗಿ ಜಯದೇವ್ ಉನದ್ಕತ್ ಹಾಕಿದ 19ನೇ ಓವರ್‌ನಲ್ಲಿ ‘ಸಿಕ್ಸರ್‌ಗಳ ಹ್ಯಾಟ್ರಿಕ್’ ಸಾಧಿಸಿದ ಎಬಿಡಿ ಮಿಂಚಿದರು. ಅದೊಂದೇ ಓವರ್‌ನಲ್ಲಿ 25 ರನ್‌ಗಳು ಸೇರಿದವು. ಅದರಲ್ಲಿ ಗುರುಕೀರತ್ ಸಿಂಗ್ ಹೊಡೆದ ಬೌಂಡರಿಯೂ ಸೇರಿತ್ತು. ಕೊನೆಯ ಓವರ್‌ನಲ್ಲಿ ಜೋಫ್ರಾ ಆರ್ಚರ್ ‘ಜಾದೂ’ ನಡೆಯಲಿಲ್ಲ. ಗುರುಕೀರತ್ ಮೊದಲ ಎಸೆತದಲ್ಲಿ ಎರಡು ಮತ್ತು ಎರಡನೇ ಎಸೆತದಲ್ಲಿ ಒಂದು ರನ್ ಹೊಡೆದರು. ಎಬಿಡಿಯನ್ನು ಕಟ್ಟಿಹಾಕುವ ಜೋಫ್ರಾ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಯಾರ್ಕರ್‌ ಎಸೆತವನ್ನು ಲಾಂಗ್‌ ಆನ್‌ಗೆ ಹೊಡೆದು ಎರಡು ರನ್‌ ಪಡೆದ ಎಬಿಡಿ ನಾಲ್ಕನೇ ಎಸೆತವನ್ನು  ಡೀಪ್ ಮಿಡ್‌ವಿಕೆಟ್‌ನ ಖಾಲಿ ಗ್ಯಾಲರಿಗೆ ಸಿಕ್ಸರ್ ಎತ್ತಿದರು. ಜೋಫ್ರಾ ಹಾಕಿದ ವೇಗದ ಎಸೆತಗಳಿಗಿಂತಲೂ ಎಬಿಡಿ ಪಾದಚಲನೆ ಚುರುಕಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು