ಶುಕ್ರವಾರ, ಫೆಬ್ರವರಿ 28, 2020
19 °C

ಕ್ಯಾನ್ಸರ್ ಕಾಳಜಿ | ಆಫ್ರಿಕನ್ನರ ಜೊತೆ ಪಿಂಕ್ ಜೆರ್ಸಿಯಲ್ಲಿ ಆಡಲಿದ್ದಾರೆ ಆಂಗ್ಲರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್‌: ಸ್ತನ ಕ್ಯಾನ್ಸರ್‌ ಜಾಗೃತಿ ಹಾಗೂ ಹಣ ಸಂಗ್ರಹಿಸುವ ಸಲುವಾಗಿ ದಕ್ಷಿಣ ಆಫ್ರಿಕಾ ತಂಡದೊಂದಿಗೆ ಕೈ ಜೋಡಿಸಲಿರುವ ಇಂಗ್ಲೆಂಡ್‌ ತಂಡ, ಏಕದಿನ ಸರಣಿಯ ಮೂರನೇ ಪಂದ್ಯದ ವೇಳೆ ಪಿಂಕ್‌ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಈ ಪಂದ್ಯವು ಭಾನುವಾರ ಇಲ್ಲಿನ ವಾಂಡೆರರ್ಸ್‌ ಮೈದಾನದಲ್ಲಿ ನಡೆಯಲಿದೆ.

ಆಫ್ರಿಕಾ ತಂಡ ತವರಿನಲ್ಲಿ ನಡೆಯುವ ಸರಣಿ ವೇಳೆ ಧತ್ತಿ ಹಣ ಸಂಗ್ರಹಿಸುವ ಸಲುವಾಗಿ ಇದುವರೆಗೆ ಎಂಟು ಬಾರಿ ಪಿಂಕ್‌ ಜೆರ್ಸಿ ತೊಟ್ಟು ಕಣಕ್ಕಿಳಿದಿದೆ. ಭಾನುವಾರ 9ನೇ ಸಲ ‘ಪಿಂಕ್‌ ಪಂದ್ಯ’ ಆಡಲಿದೆ. ಆದರೆ, ಎದುರಾಳಿ ತಂಡದ ಆಟಗಾರರು ಪಿಂಕ್‌ ಧರಿಸುತ್ತಿರುವುದು ಇದೇ ಮೊದಲು.

ಇದರಿಂದ ಬರುವ ಹಣವನ್ನು ಇಲ್ಲಿನ ಚಾರ್ಲೆಟ್‌ ಮ್ಯಾಕ್ಸೆಕೆ ಅಕಾಡೆಮಿ ಆಸ್ಪತ್ರೆಯ ಕ್ಯಾನ್ಸರ್‌ ಚಿಕಿತ್ಸಾ ಘಟಕಕ್ಕೆ ನೀಡಲಾಗುತ್ತದೆ.

‘ಕಳೆದ ನಾಲ್ಕು ವರ್ಷಗಳಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಪಿಂಕ್‌ ಕಿಟ್‌ ಹಾಗೂ ಜೆರ್ಸಿಗಳನ್ನು ಸರಬರಾಜು ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ. ಇದೇ ಮೊದಲ ಬಾರಿಗೆ ಎರಡೂ ತಂಡಕ್ಕೆ ಜೆರ್ಸಿ ಕಳುಹಿಸಿಕೊಡುತ್ತಿರುವುದು ವಿಶೇಷ ಎನಿಸುತ್ತಿದೆ’ ಎಂದು ನ್ಯೂ ಬ್ಯಾಲೆನ್ಸ್‌ ಸಂಸ್ಥೆಯ ಮುಖ್ಯಸ್ಥ ಲಿಯಾಮ್‌ ಬರ್ನ್‌ ಹೇಳಿದ್ದಾರೆ.

ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿಯ ಮಳಿಗೆಗಳಲ್ಲಿ ನಾಳೆಯಿಂದ ಪಿಂಕ್‌ ಕಿಟ್‌ಗಳು ಲಭ್ಯವಿರಲಿದ್ದು, ಅಭಿಮಾನಿಗಳು ಖರೀದಿಸಬಹುದಾಗಿದೆ.

ಮೂರು ಪಂದ್ಯಗಳ ಸರಣಿಯಲ್ಲಿ ಸದ್ಯ ಆಫ್ರಿಕಾ 1–0 ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯವು ಡರ್ಬನ್‌ನ ಕಿಂಗ್ಸ್‌ಮೇಡ್‌ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು