ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ | ಕರ್ನಾಟಕ ತಂಡಕ್ಕೆ ಉನದ್ಕಟ್‌ ಉಪಟಳ: ಸೋಲಿನ ಭೀತಿಯಲ್ಲಿ ಶ್ರೇಯಸ್ ಪಡೆ

ಕ್ರಿಕೆಟ್
Last Updated 13 ಜನವರಿ 2020, 10:21 IST
ಅಕ್ಷರ ಗಾತ್ರ

ರಾಜ್‌ಕೋಟ್:ಚೇತೇಶ್ವರ ಪೂಜಾರ ಹಾಗೂ ಶೇಲ್ಡನ್‌ ಜಾಕ್ಸನ್‌ ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಮೊದಲೆರಡು ದಿನ ಕಂಗೆಟ್ಟಿದ್ದಕರ್ನಾಟಕ ಪಡೆಗೆ ಮೂರನೇ ದಿನ ಜಯದೇವ್ಉನದ್ಕಟ್‌ ಉಪಟಳ ಕೊಟ್ಟರು. ಹೀಗಾಗಿ ಇಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಶ್ರೇಯಸ್‌ ಗೋಪಾಲ್‌ ಬಳಗಕ್ಕೆ ಸೋಲಿನ ಭೀತಿ ಎದುರಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ ನಷ್ಟಕ್ಕೆ 581ರನ್‌ ಕಲೆ ಹಾಕಿತ್ತು. ಅನುಭವಿ ಪೂಜಾರ ದ್ವಿಶತಕ (248) ಗಳಿಸಿದರೆ, ಶೇಲ್ಡನ್‌ ಜಾಕ್ಸನ್‌ ಶತಕ (161) ಸಿಡಿಸಿದರು.

ಈ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ ಒಂದು ರನ್‌ ಆಗಿದ್ದಾಗಲೇ ಭರವಸೆಯ ಆಟಗಾರ ದೇವದತ್ತ ಪಡಿಕಲ್‌ ಸೊನ್ನೆ ಸುತ್ತಿದರು. ಕೆ.ಸಿದ್ದಾರ್ಥ್‌ (0), ಪವನ್‌ ದೇಶಪಾಂಡೆ (8), ಶ್ರೇಯಸ್‌ ಗೋಪಾಲ್ (11), ಬಿ.ಆರ್‌. ಶರತ್‌ (2), ರೋಹನ್‌ ಕದಂ (29) ನಿರಾಸೆ ಮೂಡಿಸಿದರು.

ಆರಂಭಿಕ ಆರ್‌. ಸಮರ್ಥ್‌ ಹೊರತುಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ.ತಾಳ್ಮೆಯ ಆಟವಾಡಿದ ಸಮರ್ಥ್‌, 174 ಎಸೆತಗಳನ್ನು ಎದುರಿಸಿ 63 ರನ್‌ ಕಲೆ ಹಾಕಿದರು. ಇದರಿಂದಾಗಿ ತಂಡದ ಮೊತ್ತ ನೂರರ ಗಡಿ ದಾಟಲು ಸಾಧ್ಯವಾಯಿತು.

ಅಗ್ರ ಕ್ರಮಾಂಕದ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ ಎದುರಾಳಿ ತಂಡದ ನಾಯಕ ಜಯದೇವ್‌ ಉನದ್ಕಟ್‌, ಕೇವಲ 49 ರನ್‌ ನೀಡಿ ಒಟ್ಟು ಐದು ವಿಕೆಟ್‌ ಉರುಳಿಸಿದರು.

ಸದ್ಯ ಕರ್ನಾಟಕ ತಂಡ 8 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿಸಿದೆ. ಪ್ರವೀಣ್‌ ದುಬೆ (23) ಮತ್ತು ರೋನಿತ್‌ ಮೋರೆ (3) ಕ್ರಿಸ್‌ನಲ್ಲಿದ್ದಾರೆ. ಶ್ರೇಯಸ್‌ ಬಳಗ ಇನಿಂಗ್ಸ್‌ ಹಿನ್ನಡೆಯಿಂದ ಪಾರಾಗಲು ಉಳಿದಿರುವ ಎರಡು ವಿಕೆಟ್‌ಗಳಿಂದ ಇನ್ನೂ 434 ರನ್‌ ಗಳಿಸಬೇಕಿರುವುದರಿಂದ ಪವಾಡವೇ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT