ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್ ಪ್ರಶಸ್ತಿ ಅಭಿಯಾನದತ್ತ ಕರ್ನಾಟಕ ಚಿತ್ತ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ: ಕೊರೊನಾ ಕಾಲದಲ್ಲಿ ದೇಶಿ ಸೊಗಡು
Last Updated 9 ಜನವರಿ 2021, 20:35 IST
ಅಕ್ಷರ ಗಾತ್ರ

ಆಲೂರು (ಬೆಂಗಳೂರು): ಕೊರೊನಾ ಕಾಲದ ಸವಾಲುಗಳನ್ನು ಮಧ್ಯೆ ಈ ಬಾರಿಯ ದೇಶಿ ಋತುವಿನ ಮುನ್ನುಡಿಯಾಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯು ಭಾನುವಾರ ಆರಂಭವಾಗಲಿದೆ.

ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಎ ಗುಂಪಿನ ಹಣಾಹಣಿಯಲ್ಲಿ ಆತಿಥೇಯ ಕರ್ನಾಟಕವು ಜಮ್ಮು–ಕಾಶ್ಮೀರ ತಂಡವನ್ನು ಎದುರಿಸಲಿದೆ. ಕರ್ನಾಟಕ ತಂಡವು ಹ್ಯಾಟ್ರಿಕ್ ಪ್ರಶಸ್ತಿ ಜಯದ ನಿರೀಕ್ಷೆಯಲ್ಲಿದೆ. ಕಳೆದೆರಡು ವರ್ಷಗಳಲ್ಲಿ ಅಮೋಘ ಆಟವಾಡಿ ಪ್ರಶಸ್ತಿ ಗೆದ್ದಿರುವ ತಂಡವು ಈಗ ಕರುಣ್ ನಾಯರ್ ನಾಯಕತ್ವದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ.

ಕೊರೊನಾ ವೈರಸ್ ತಂದೊಡ್ಡಿದ ಸಂಕಷ್ಟದಿಂದಾಗಿ ಈ ಬಾರಿಯ ದೇಶಿ ಋತು ವಿಳಂಬವಾಗಿ ಆರಂಭವಾಗುತ್ತಿದೆ. ಅಲ್ಲದೇ ಮುಂದಿನ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಹರಾಜು ಪ್ರಕ್ರಿಯೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಈ ಚುಟುಕು ಟೂರ್ನಿ ಮಹತ್ವ ಪಡೆದುಕೊಂಡಿದೆ.

ಕರ್ನಾಟಕ ತಂಡಕ್ಕೆ ಪ್ರಮುಖ ಆಟಗಾರರಾದ ಮನೀಷ್ ಪಾಂಡೆ, ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಲಭ್ಯವಿಲ್ಲ. ಮನೀಷ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಇದ್ದಾರೆ. ಅಲ್ಲಿ ಅಭ್ಯಾಸದ ಸಂದರ್ಭದಲ್ಲಿ ಕೆ.ಎಲ್. ರಾಹುಲ್ ಗಾಯಗೊಂಡು ಹೊರಬಿದ್ದಿದ್ದಾರೆ.

ಯುಎಇಯಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಪದಾರ್ಪಣೆ ಮಾಡಿದ್ದ ದೇವದತ್ತ ಪಡಿಕ್ಕಲ್ ಮಿಂಚಿದ್ದರು. ಹೋದ ವರ್ಷದ ದೇಶಿ ಋತುವಿನಲ್ಲಿಯೂ ರನ್‌ಗಳ ರಾಶಿ ಹಾಕಿದ್ದ ಎಡಗೈ ಬ್ಯಾಟ್ಸ್‌ಮನ್ ಈ ಸಲವೂ ಮಿಂಚುವ ಆತ್ಮವಿಶ್ವಾಸದಲ್ಲಿದ್ದಾರೆ. ರೋಹನ್ ಕದಂ, ಕೆ.ವಿ. ಸಿದ್ಧಾರ್ಥ್, ಪವನ್ ದೇಶಪಾಂಡೆ ಅವರ ಮೇಲೆ ದೊಡ್ಡ ನಿರೀಕ್ಷೆ ಇದೆ. ಐಪಿಎಲ್‌ನಲ್ಲಿ ಆಡಿ ಬಂದಿರುವ ಕರುಣ್ ನಾಯರ್, ಕೃಷ್ಣಪ್ಪ ಗೌತಮ್, ಜೆ.ಸುಚಿತ್, ಶ್ರೇಯಸ್ ಗೋಪಾಲ್ ಮತ್ತು ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಿದ್ಧರಾಗಿದ್ದಾರೆ.

ಅನುಭವಿ ಆಲ್‌ರೌಂಡರ್ ಪರ್ವೇಜ್ ರಸೂಲ್ ನಾಯಕತ್ವದ ಜಮ್ಮು–ಕಾಶ್ಮೀರ ತಂಡವೂ ಸಮತೋಲನವಾಗಿದೆ. ಆದರೆ, ಕರ್ನಾಟಕ ತಂಡದ ಎದುರು ಗೆಲ್ಲಬೇಕಾದರೆ ಯೋಜನಾಬದ್ಧವಾಗಿ ಕಣಕ್ಕಿಳಿಯುವ ಸವಾಲು ತಂಡಕ್ಕೆ ಇದೆ. ಕೊರೊನಾ ಕಾಲದಲ್ಲಿ ಹೆಚ್ಚು ಸಮಯ ಅಭ್ಯಾಸ ಮಾಡಲು ಸಾಧ್ಯವಾಗದ ಕೊರತೆ ತಂಡವನ್ನು ಕಾಡಬಹುದು. ಆದರೂ ಐಪಿಎಲ್‌ ಫ್ರ್ಯಾಂಚೈಸ್‌ಗಳ ಗಮನ ಸೆಳೆಯಲು ಈ ಟೂರ್ನಿಯನ್ನು ವೇದಿಕೆಯಾಗಿ ಬಳಸಿಕೊಳ್ಳುವ ಛಲ ತಂಡದ ಆಟಗಾರರಲ್ಲಿದೆ.

ತಂಡಗಳು: ಕರ್ನಾಟಕ: ಕರುಣ್ ನಾಯರ್ (ನಾಯಕ), ದೇವದತ್ತ ಪಡಿಕ್ಕಲ್, ರೋಹನ್ ಕದಂ, ಕೆ.ವಿ. ಸಿದ್ಧಾರ್ಥ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಮನೋಜ್ ಬಾಂಢಗೆ, ಪ್ರಸಿದ್ಧಕೃಷ್ಣ, ಪ್ರವೀಣ್ ದುಬೆ, ಅಭಿಮನ್ಯು ಮಿಥುನ್, ಪವನ್ ದೇಶಪಾಂಡೆ (ಉಪನಾಯಕ), ವಿ. ಕೌಶಿಕ್, ರೋನಿತ್ ಮೋರೆ, ಅನಿರುದ್ಧ ಜೋಶಿ, ಜೆ. ಸುಚಿತ್, ಪ್ರತೀಕ್ ಜೈನ್, ಎಂ.ಬಿ. ದರ್ಶನ್, ಕೆ.ಎಲ್. ಶ್ರೀಜಿತ್, ಶುಭಾಂಗ್ ಹೆಗಡೆ.

ಜಮ್ನು ಮತ್ತು ಕಾಶ್ಮೀರ: ಪರ್ವೇಜ್ ರಸೂಲ್ (ನಾಯಕ), ಶುಭಮ್ ಖಜೂರಿಯಾ, ಅಬ್ದುಲ್ ಸಮದ್, ಅಹಮದ್ ಬಂಡ್ಯಾ, ಹೆನನ್ ಮಲಿಕ್, ಸೂರ್ಯಾಂಶ್ ರೈನಾ (ವಿಕೆಟ್‌ಕೀಪರ್), ಕಮ್ರನ್ ಇಕ್ಬಾಲ್, ಅಮೀರ್ ಅಜೀಜ್ ಸೋಫಿ. ರಾಮ್ ದಯಾಳ್, ಉಮರ್ ನಜೀರ್ ಮೀರ್, ಶುಭಂ ಪಂಡೀರ್, ಪುನೀತ್ ಕುಮಾರ್, ಅಕೀಬ್ ನಬಿ, ಮಜ್ತಾಬಾ ಯೂಸುಫ್, ನವಾಜುಲ್ ಮುನೀರ್, ಅಬಿದ್ ಮುಷ್ತಾಕ್, ಜಿಯಾದ್ ಮಾಗ್ರೆ, ಉಸ್ಮಾನ್ ಪಂಡಿತ್

ಪಂದ್ಯ ಆರಂಭ: ಮಧ್ಯಾಹ್ನ 12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT