ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2024ರ ಟಿ20 ವಿಶ್ವಕಪ್‌ಗೆ ಭಾರತ ಸವಾಲಿನ ತಂಡವಾಗಿದೆ: ರವಿ ಶಾಸ್ತ್ರಿ

Published 27 ನವೆಂಬರ್ 2023, 9:48 IST
Last Updated 27 ನವೆಂಬರ್ 2023, 9:48 IST
ಅಕ್ಷರ ಗಾತ್ರ

ಮುಂಬೈ: ಮುಂದಿನ ವರ್ಷ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಗಂಭೀರ ಸವಾಲಿನ ತಂಡವಾಗಿದೆ ಎಂದು ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಆದರೆ, ಪ್ರಬಲ ತಂಡವು ಕೊನೆಯ ಎರಡು ನಾಕೌಟ್ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತವನ್ನು ಸೋಲಿಸಿ ಕಪ್ ಎತ್ತಿಹಿಡಿದಿತ್ತು. ಆ ಸೋಲಿನ ಆಘಾತದಿಂದ ಕ್ರಿಕೆಟ್ ಅಭಿಮಾನಿಗಳು ಇನ್ನೂ ಹೊರಬಂದಿಲ್ಲ.

‘ಯಾವುದೂ ಸುಲಭವಾಗಿ ಸಿಗುವುದಿಲ್ಲ. ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಸಹ ಟ್ರೋಫಿ ಎತ್ತಿಹಿಡಿಯಲು 6 ವಿಶ್ವಕಪ್ ಕಾಯಬೇಕಾಯಿತು. ಸುಲಭವಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ಫೈನಲ್ ದಿನ ಅತ್ಯುತ್ತಮವಾಗಿ ಆಡಬೇಕು’ ಎಂದು ಶಾಸ್ತ್ರಿ ಹೇಳಿದ್ದಾರೆ.

‘ನೀವು ಸರಣಿಯುದ್ದಕ್ಕೂ ಹೇಗೆ ಆಡಿದ್ದೀರಿ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಬಿಗ್‌ ಡೇ ಹೇಗೆ ಆಡುತ್ತೀರಿ ಎಂಬುದೇ ಮುಖ್ಯ. ಸರಣಿ ಆರಂಭಕ್ಕೂ ಮುನ್ನ ಆಟಗಾರರಿಗೆ ಅದು ತಿಳಿದೇ ಇರುತ್ತದೆ. ಸರಣಿಯ ಆರಂಭಿಕ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಸೋತಿತ್ತು. ಆದರೆ, ಪ್ರಮುಖ ಪಂದ್ಯದಲ್ಲಿ ಗೆದ್ದು ಕಪ್ ಎತ್ತಿಹಿಡಿಯಿತು’ಎಂದು ಹೇಳಿದರು.

ಮುಂದಿನ ವರ್ಷ ಜೂನ್ 4ರಿಂದ ಟಿ–20 ವಿಶ್ವಕಪ್ ಸರಣಿ ಅಮೆರಿಕ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ಆರಂಭವಾಗಲಿದ್ದು, ಭಾರತ ತಂಡದಲ್ಲಿ ಅತ್ಯುತ್ತಮ ಯುವ ಆಟಗಾರರಿದ್ದಾರೆ. ಏಕದಿನ ವಿಶ್ವಕಪ್ ಫೈನಲ್‌ನ ಸೋಲು ಆಘಾತಕಾರಿ. ಆದರೆ, ಆಟಗಾರರು ಅದರಿಂದ ಬಹಳ ಕಲಿತಿದ್ದಾರೆ. ತಪ್ಪು ತಿದ್ದಿಕೊಂಡು ಮುಂದುವರಿಯುತ್ತಾರೆ. ಶೀಘ್ರದಲ್ಲೇ ಭಾರತ ವಿಶ್ವಕಪ್ ಗೆಲ್ಲುವುದನ್ನು ನಾವು ನೋಡಬಹುದು ಎಂದಿದ್ದಾರೆ.

‘ಬಲಿಷ್ಠ ತಂಡವಾಗಿ ನಾವು ವಿಶ್ವಕಪ್ ಗೆಲ್ಲದಿರುವುದು, ಫೈನಲ್‌ನಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಆಡದಿರುವುದು ಈಗಲೂ ನೋವುಂಟುಮಾಡುತ್ತದೆ’ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT