ಸೋಮವಾರ, ಆಗಸ್ಟ್ 2, 2021
28 °C

ಪಾಕ್‌ ಕ್ರಿಕೆಟ್ ಬಿಕ್ಕಟ್ಟು | ಪಿಎಸ್‌ಎಲ್ ಮಾಲೀಕರಿಂದ ತಂಡ ಮಾರುವ ಯೋಜನೆ: ಅಖ್ತರ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್)‌ ಇರುವಂತೆ ಪಾಕಿಸ್ತಾನದಲ್ಲಿರುವ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಕೋವಿಡ್–19ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೆಲ ಮಾಲೀಕರು ತಮ್ಮ ತಂಡಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಆ ದೇಶದ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಹೇಳಿದ್ದಾರೆ.

ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಮುಂದಿನ 16 ಅಥವಾ 18 ತಿಂಗಳ ವರೆಗೆ ಪಿಎಸ್‌ಎಲ್‌ ನಡೆಯುವ ಸಾಧ್ಯತೆಯೂ ಕಡಿಮೆ ಎಂದು ತಿಳಿಸಿದ್ದಾರೆ.

‘ಕೆಲವರು ಇದನ್ನು ಹೇಳಲು ಬಯಸುವುದಿಲ್ಲ ಎಂದು ನನಗೆ ಗೊತ್ತು. ಆದರೆ, ಕೆಲವು ಮಾಲೀಕರು ತಮ್ಮ ಪ್ರಾಂಚೈಸ್‌ಗಳನ್ನು ಮಾರಲು ನೋಡುತ್ತಿದ್ದಾರೆ. ಈ ಲೀಗ್‌ ಅನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಲು ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡಲು ಹರ್ಷಿಸುತ್ತೇನೆ’ ಎಂದಿದ್ದಾರೆ.

ಸೆಮಿಫೈನಲ್ ಹಂತಕ್ಕೆ ತಲುಪಿದ್ದ ಪಿಎಸ್‌ಎಲ್‌ 5ನೇ ಆವೃತ್ತಿಯನ್ನು ಕೋವಿಡ್–19 ಭೀತಿಯಿಂದಾಗಿ ಮಾರ್ಚ್‌ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು.

2016ರ ನಂತರ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೊದಲ ಪ್ರಮುಖ ಟೂರ್ನಿ ಇದಾಗಿರುವುದರಿಂದ ಲಾಹೋರ್ ಮತ್ತು ಕರಾಚಿಯಲ್ಲಿ ಕೆಲವು ಪಂದ್ಯಗಳನ್ನು ಖಾಲಿ ಕ್ರೀಡಾಂಗಣಗಳಲ್ಲೇ ಆಯೋಜಿಸಲಾಗಿತ್ತು.

‘ನನಗನಿಸುತ್ತದೆ ಒಂದು ವೇಳೆ ನಾವು ಪಂದ್ಯಗಳನ್ನು ಆಯೋಜಿಸಬೇಕು ಎಂದುಕೊಂಡರೂ, ಇನ್ನು 16 ರಿಂದ 18 ತಿಂಗಳವರೆಗೆ ಸಾಧ್ಯವಾಗುವುದಿಲ್ಲ. ಕೊರೊನಾ ಸಂಕಷ್ಟ ಪರಿಹಾರವಾಗಿ ಪರಿಸ್ಥಿತಿ ಸುಧಾರಿಸಿ, ಆ ನಂತರ ವಿಶ್ವಕಪ್ (ಟಿ20) ಆಯೋಜಿಸುವುದಕ್ಕೂ 8 ತಿಂಗಳು ಬೇಕಾಗಬಹುದು’ ಎಂದಿದ್ದಾರೆ.

‘ವಿಷಯ ಏನೆಂದರೆ, ಒಂದುವೇಳೆ ಸೆಪ್ಟೆಂಬರ್‌ವರೆಗೆ ಸರಿಯಾಗಿ ಕ್ರಿಕೆಟ್ ಆಡಲು ಆಗದಿದ್ದರೆ, ಮುಂದಿನ ನಾಲ್ಕು ತಿಂಗಳಲ್ಲಿ ಪಿಎಸ್‌ಎಲ್‌ ಆಯೋಜಿಸುವುದಾದರೂ ಹೇಗೆ? ಇಂತಹ ಸ್ಥಿತಿಯಲ್ಲಿ ಮಂಡಳಿಯು ಪ್ರಾಂಚೈಸ್‌ಗಳಿಂದ ಹಣ ಕೇಳಬಲ್ಲದು ಎಂದು ನನಗನಿಸುತ್ತಿಲ್ಲ. ನನಗೆ ಗೊತ್ತಿರುವಂತೆ ಕೆಲವು ಪ್ರಾಂಚೈಸ್‌ಗಳು ಈಗಾಗಲೇ ತಮ್ಮ ಬ್ರಾಂಡ್‌ಗಳನ್ನು ಮಾರಾಟ ಮಾಡಲು ಸಜ್ಜಾಗಿವೆ. ಅವರ ಬಳಿ ಆಯ್ಕೆಗಳಿವೆ’ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಈ ವರ್ಷ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ ಆಯೋಜನೆಯಾಗುವುದು ಇನ್ನೂ ಖಚಿತವಾಗಿಲ್ಲ. ಒಂದುವೇಳೆ ವಿಶ್ವಕಪ್ ನಡೆಯದಿದ್ದರೆ ಭಾರತದಲ್ಲಿ ಐಪಿಎಲ್‌ ನಡೆಸುವ ಕುರಿತು ಮಾತುಕತೆ ನಡೆಯುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು