ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರೂ ತಲೆಯಲ್ಲಿರುವ ಕೂದಲಿಗಿಂತಲೂ ಹೆಚ್ಚು ಸಂಪತ್ತು ನನ್ನ ಬಳಿ ಇದೆ: ಶೋಯಬ್ ಅಖ್ತರ್

ವಿರೋಧಿಗಳ ವಿರುದ್ಧ ಕಿಡಿ ಕಾರಿದ ಪಾಕಿಸ್ತಾನದ ಮಾಜಿ ವೇಗಿ
Last Updated 23 ಜನವರಿ 2020, 12:28 IST
ಅಕ್ಷರ ಗಾತ್ರ

ನವದೆಹಲಿ: ಹಣ ಗಳಿಸುವ ಸಲುವಾಗಿ ಮತ್ತು ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ತಮ್ಮ ಯುಟ್ಯೂಬ್‌ ಚಾನಲ್‌ನಲ್ಲಿ ಭಾರತ ಕ್ರಿಕೆಟ್‌ ಬಗ್ಗೆ ಮಾತನಾಡುತ್ತಾರೆ ಎನ್ನುವವರ ವಿರುದ್ಧ ಪಾಕಿಸ್ತಾನ ಮಾಜಿ ವೇಗಿ ಶೋಯಬ್‌ ಅಖ್ತರ್‌ ಹರಿಹಾಯ್ದಿದ್ದಾರೆ. ತಮ್ಮ ಯುಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿರುವ ಅವರು, ತಾವು ನಿಷ್ಪಕ್ಷಪಾತವಾಗಿ ಆಟದ ವಿಶ್ಲೇಷಣೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

‘ಭಾರತ ತಂಡ ಚೆನ್ನಾಗಿ ಆಡುವಾಗ ನಾವು ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿಲ್ಲ ಎಂದು ಯಾರಾದರೂ ಒಬ್ಬರು ಪಾಕಿಸ್ತಾನಿ ಯುಟ್ಯೂಬ್‌ ಚಾನಲ್‌ನವರು ಹೇಳಲಿ. ರಮೀಜ್‌ ರಾಜಾ, ವಾಸಿಂ ಅಕ್ರಂ,ಶಾಹಿದ್‌ ಅಫ್ರಿದಿ ಎಲ್ಲರೂ ಭಾರತ ತಂಡವು ಚೆನ್ನಾಗಿ ಆಡುವಾಗ ಹೊಗಳಿದ್ದಾರೆ. ನನಗೆ ಒಂದು ವಿಷಯ ಸ್ಪಷ್ಟಪಡಿಸಿ, ‘ಮೆನ್‌ ಇನ್‌ ಬ್ಲೂ’ (ಭಾರತ ತಂಡ) ವಿಶ್ವದ ನಂ.1 ತಂಡ ಹೌದೋ ಅಲ್ಲವೋ? ವಿರಾಟ್‌ ಕೊಹ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಹೌದೋ ಅಲ್ಲವೋ?’ ಎಂದು ಪ್ರಶ್ನಿಸಿದ್ದಾರೆ.

‘ನಾನು 15 ವರ್ಷಗಳ ಕಾಲ ಪಾಕಿಸ್ತಾನಕ್ಕಾಗಿ ಆಡಿದ್ದೇನೆ ಮತ್ತು ಅದರಿಂದಾಗಿ ನಾನು ಸಾಕಷ್ಟು ಜನಪ್ರಿಯತೆ ಗಳಿಸಿದ್ದೇನೆ. ಕೇವಲ ಯುಟ್ಯೂಬ್‌ ನನಗೆ ಜನಪ್ರಿಯತೆ ತಂದು ಕೊಟ್ಟಿಲ್ಲ. ಶೋಯಬ್‌ ಅಖ್ತರ್‌ ವಿಶ್ವದ ಅತ್ಯಂತ ವೇಗದ ಬೌಲರ್‌ ಎನಿಸಿದ್ದವ. ಜನರು ನನ್ನನ್ನು ಪ್ರೀತಿಸುವುದು ಅದೇ ಕಾರಣಕ್ಕೆ. ಭಾರತ ಮಾತ್ರವಲ್ಲ ನನ್ನ ಅಭಿಮಾನಿಗಳು ಬಾಂಗ್ಲದೇಶದಲ್ಲಿಯೂ ಇದ್ದಾರೆ. ಆಸ್ಟ್ರೇಲಿಯಾದಲ್ಲಿಯೂ ಇದ್ದಾರೆ’ ಎಂದಿದ್ದಾರೆ.

ಅಖ್ತರ್‌ ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಅವರ ಬಗ್ಗೆಯೂ ಮಾತನಾಡಿದ್ದಾರೆ. ‘ಹಳೆಯದೊಂದು ವಿಡಿಯೊ ವೈರಲ್‌ ಆಗಿತ್ತು. ಅದು ನನ್ನ ಹಳೆಯ ಸ್ನೇಹಿತ ವೀರೇಂದ್ರ ಸೆಹ್ವಾಗ್‌ ಅವರದ್ದು. ಇರಲಿ, ಸೆಹ್ವಾಗ್‌ ಸಹಜ ಸ್ವಭಾವದವ. ಅವರು ಮಾತನಾಡಿದ್ದು ತುಂಬಾ ಗಂಭೀರವೇನಲ್ಲ. ವಿಡಿಯೊದಲ್ಲಿ ಸೆಹ್ವಾಗ್, ‘ಅಖ್ತರ್‌ ಭಾರತ ಕ್ರಿಕೆಟ್‌ ಬಗ್ಗೆ ಮಾತನಾಡುತ್ತಾರೆ. ಏಕೆಂದರೆ ಅವರಿಗೆ ಇದರಿಂದ ಹಣ ಬರುತ್ತದೆ ಎಂಬುದುಗೊತ್ತು’ ಎಂದಿದ್ದರು. ನಾನು ಒಂದು ವಿಚಾರ ಹೇಳಲು ಬಯಸುತ್ತೇನೆ. ಅವರ (ಸೆಹ್ಚಾಗ್) ತಲೆಯಲ್ಲಿ ಇರುವ ಕೂದಲಿಗಿಂತಲೂ ಹೆಚ್ಚು ಸಂಪತ್ತು ನನ್ನ ಬಳಿ ಇದೆ. ನಾನು ವಿನೋದಕ್ಕಾಗಿ ಹೇಳುತ್ತಿದ್ದೇನೆ ಅಷ್ಟೇ. ಇದನ್ನು ಒಂದು ಹಾಸ್ಯವಾಗಿ ಪರಿಗಣಿಸು ವೀರೂ’ ಎಂದು ಹೇಳಿದ್ದಾರೆ.

‘ಕ್ರಿಕೆಟ್‌ ಸಂಬಂಧಿಸಿದ ವಿಚಾರಗಳ ಬಗ್ಗೆ ನಾನು ನನ್ನ ಅಭಿಪ್ರಾಯಗಳನ್ನು ಹೊರಹಾಕಿದರೆ ಜನರಿಗೇನು ಸಮಸ್ಯೆ ಎಂಬುದು ಅರ್ಥವಾಗುತ್ತಿಲ್ಲ. ನಾನು ಪಾಕಿಸ್ತಾನಕ್ಕಾಗಿ 15 ವರ್ಷ ಕ್ರಿಕೆಟ್‌ ಆಡಿದ್ದೇನೆ. ನಾನು ಯುಟ್ಯೂಬ್‌ ಚಾನಲ್‌ ಮಾಡಿದ್ದಕ್ಕಾಗಿ ಜನಪ್ರಿಯನಾದವನಲ್ಲ. ನಾನು ವಿಶ್ವದ ಅತ್ಯಂತ ವೇಗದ ಬೌಲರ್‌ ಆಗಿದ್ದವನು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT